:ಸಿದ್ದರಾಮಯ್ಯ ಅವರ ರಾಜಕೀಯ ಜೀವನ ಈ ಚುನಾವಣೆಯಲ್ಲೇ ಅಂತ್ಯವಾಗಲಿದೆ ಎಂದು ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣ ಸ್ವಾಮಿ ತಿಳಿಸಿದರು.
ಮೈಸೂರು :ಸಿದ್ದರಾಮಯ್ಯ ಅವರ ರಾಜಕೀಯ ಜೀವನ ಈ ಚುನಾವಣೆಯಲ್ಲೇ ಅಂತ್ಯವಾಗಲಿದೆ ಎಂದು ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣ ಸ್ವಾಮಿ ತಿಳಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದಾದರೂ ಒಂದು ಕ್ಷೇತ್ರದಲ್ಲಿ ನಿಲ್ಲುವವರನ್ನು ನಿಜವಾದ ನಾಯಕ ಎನ್ನುತ್ತಾರೆ. ಇಲ್ಲವಾದರೆ ದುರ್ಬಲ ನಾಯಕ ಎನ್ನುತ್ತಾರೆ. ತಮ್ಮದೇ ಸರ್ಕಾರ ಇದ್ದಾಗ ಸಿದ್ದಾರಾಮಯ್ಯ ಚಾಮುಂಡೇಶ್ವರಿಯಲ್ಲಿ ಸೋಲುವುದನ್ನು ಮನಗಂಡು ಬಾದಾಮಿಯಲ್ಲೂ ಸ್ಪರ್ಧಿಸಿದರು. ಈಗ ವರುಣ ಮತ್ತು ಕೋಲಾರದಲ್ಲೂ ಸ್ಪರ್ಧೆಗೆ ಮುಂದಾಗಿದ್ದಾರೆ ಎಂದರು.
undefined
ದೇಶದಲ್ಲಿ ಸುಭದ್ರ ಇದ್ದರೂ 40 ಪರ್ಸೆಂಟ್ ಕಮಿಷನ್ ಆರೋಪದ ಬಗ್ಗೆನ್ಯಾಯಾಲಯದ ಮೆಟ್ಟಿಲೇರಿಲ್ಲ. ಆದರೂ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ನೀತಿ ಸಂಹಿತೆ ಜಾರಿಯಲ್ಲಿದ್ದರೂ ಆಧಾರ ರಹಿತ ಆರೋಪ ಮಾಡುತ್ತಿರುವುದರಿಂದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ ಎಂದು ಅವರು ತಿಳಿಸಿದರು.
ಸಿದ್ದರಾಮಯ್ಯ ವಿರುದ್ಧ ಈಗಲೂ ಅರ್ಕಾವತಿ ಡಿನೋಟಿಫಿಕೇಷನ್ (ರೀಡೂ) ಪ್ರಕರಣ ಸಂಬಂಧ ಲೋಕಾಯುಕ್ತ ತನಿಖೆ ನಡೆಯುತ್ತಿದೆ. ಈ ಅಕ್ರಮದಲ್ಲಿ ಸುಮಾರು 8 ಸಾವಿರ ಕೋಟಿ ಲೂಟಿ ಮಾಡಿದ ಆರೋಪವಿದೆ. ಅವರು ಮುಖ್ಯಮಂತ್ರಿ ಆಗಿದ್ದಾಗ ಲೋಕಾಯುಕ್ತಕ್ಕೆ ಪೂರ್ಣ ಅಧಿಕಾರ ನೀಡಿದ್ದರೆ ಅಂದೇ ಜೈಲಿನಲ್ಲಿರುತ್ತಿದ್ದರು. ಇದನ್ನು ಮನಗಂಡು ಲೋಕಾಯುಕ್ತ ಮುಚ್ಚಿ ಎಸಿಬಿ ಆರಂಭಿಸಿ ಸಾವಿರಾರು ಕೋಟಿ ಲೂಟಿ ಮಾಡಿದ್ದಾಗಿ ಅವರು ಆರೋಪಿಸಿದರು.
ಬಾದಾಮಿ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಯನ್ನು ಮೈಸೂರು ಮೂಲದ ಗುತ್ತಿಗೆದಾರರಿಗೆ ಸಿದ್ದರಾಮಯ್ಯ ನೀಡಿ, 40 ಪರ್ಸೆಂಟ್ ಕಮಿಷನ್ ಪಡೆದಿದ್ದಾರೆ ಎಂದು ಬಾದಾಮಿ ಕ್ಷೇತ್ರದ ಗುತ್ತಿಗೆದಾರರ ಸಂಘದ ಪದಾಧಿಕಾರಿಯೊಬ್ಬರು ಆರೋಪಿಸಿದ್ದಾರೆ. ಹಾಗಾದರೆ ಇದನ್ನು ಏನೆಂದು ಹೇಳಬೇಕು?. ಕಾಂಗ್ರೆಸ್ ಕಳೆದ 70 ವರ್ಷಗಳಿಂದ ದಲಿತರನ್ನು ವೋಟ್ ಬ್ಯಾಂಕ್ ಆಗಿ ಮಾಡಿಕೊಂಡಿತ್ತು. ಆದರೆ ಇಂದು ಎಲ್ಲರೂ ಎಚ್ಚೆತ್ತುಕೊಂಡಿದ್ದಾರೆ. ಈ ಬಾರಿ ದಲಿತ ಸಮುದಾಯ ಬಿಜೆಪಿ ಪರ ನಿಲ್ಲಲಿದೆ ಎಂದರು.
ಬಿಜೆಪಿ 140ರಿಂದ 150 ಸ್ಥಾನ ಪಡೆದು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ. ಒಳ ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್, ಜೆಡಿಎಸ್ ಸೂಕ್ತ ನಿರ್ಧಾರ ಮಾಡುವಲ್ಲಿ ವಿಫಲವಾಗಿದ್ದವು. ಅವರು ಮಾಡಲಾಗದ ಕೆಲಸವನ್ನು ಬಿಜೆಪಿ ಸರ್ಕಾರ ಮಾಡಿತೋರಿಸಿದೆ. ಕಾಂಗ್ರೆಸ್ ಪ್ರಚೋದನೆಯಿಂದ ಕೆಲವರು ಒಳಮೀಸಲಾತಿ ವಿರೋಧಿಸುತ್ತಿದ್ದಾರೆ. ಕೊರಚ, ಕೊರಮ, ಬಂಜಾರ ಮತ್ತು ಬೋವಿ ಸಮುದಾಯಕ್ಕೆ ಶೇ.3ರಷ್ಟುಇದ್ದ ಮೀಸಲಾತಿ ಪ್ರಮಾಣವನ್ನು ಶೇ. 4.5ಕ್ಕೆ ಹೆಚ್ಚಿಸಲಾಗಿದೆ ಎಂದು ಅವರು ತಿಳಿಸಿದರು.
ಸಿದ್ದರಾಮಯ್ಯ ಅವರು ಹೊರಗೆ ಬಸಪ್ಪ, ಒಳಗೆ ವಿಷಪ್ಪ. ಅಹಿಂದ ಎನ್ನುತ್ತಾ ದಲಿತ ನಾಯರನ್ನು ಮುಗಿಸುತ್ತಾ ಬಂದಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಜಿ. ಪರಮೇಶ್ವರ್ ಮುಖ್ಯಮಂತ್ರಿಯಾಗುವುದನ್ನು ತಪ್ಪಿಸಿದರು. ಮುನಿಯಪ್ಪ ಸೋಲಿಗೆ ಕಾರಣರಾದರು. ಇಷ್ಟೇ ಅಲ್ಲದೇ ಮುಸ್ಲಿಂ ಸಮುದಾಯದ ನಾಯಕರಾದ ಇಬ್ರಾಹಿಂ, ರೋಷನ್ ಬೇಗ್ ಮುಂತಾದ ನಾಯಕರನ್ನು ಮೂಲೆಗುಂಪು ಮಾಡಿದರು. ಅವರ ಇಬ್ಬಗೆಯ ನೀತಿಗೆ ಬೇಸತ್ತ ಭೈರತಿ ಬಸವರಾಜ…, ಎಂಟಿಬಿ ನಾಗರಾಜ…, ವಿಶ್ವನಾಥ್ ಪಕ್ಷ ತೊರೆದರು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರಾಧಕ್ಷ ಟಿ.ಎಸ್. ಶ್ರೀವತ್ಸ, ಬಿಜೆಪಿ ಜಿಲ್ಲಾ ಉಪಾಧಕ್ಷೆ ಶಾಂತಮ್ಮ, ಪ್ರಧಾನ ಕಾರ್ಯದರ್ಶಿ ಸೋಮಸುಂದರ್, ಮುಖಂಡರಾದ ವಸಂತ್ ಕುಮಾರ್ ಇದ್ದರು.