ಸಾಮಾಜಿಕ ನ್ಯಾಯದ ರಥವನ್ನು ಹಿಂದಕ್ಕೆ ಎಳೆಯಬಾರದು: ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

Published : Apr 15, 2026, 06:05 PM IST
Siddaramaiah

ಸಾರಾಂಶ

ಸಮಾಜದಲ್ಲಿನ ಜಡತ್ವ ಬಲಪಡಿಸುವ ಕೆಲಸದಲ್ಲಿ ತೊಡಗಿವೆ. ಹೀಗಾಗಿ ನಾವು ಸಂವಿಧಾನದಿಂದ ಸಾಮಾಜಿಕ ನ್ಯಾಯದ ರಥವನ್ನು ಮುಂದಕ್ಕೆ ಕೊಂಡೊಯ್ಯಬೇಕೆ ಹೊರತು ಹಿಂದಕ್ಕೆ ಎಳೆಯಬಾರದು’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರು (ಏ.15): ‘ಕೆಲ ಪಟ್ಟಭದ್ರ ಶಕ್ತಿಗಳು ಸಮಾಜದಲ್ಲಿನ ಜಡತ್ವ ಬಲಪಡಿಸುವ ಕೆಲಸದಲ್ಲಿ ತೊಡಗಿವೆ. ಹೀಗಾಗಿ ನಾವು ಸಂವಿಧಾನದಿಂದ ಸಾಮಾಜಿಕ ನ್ಯಾಯದ ರಥವನ್ನು ಮುಂದಕ್ಕೆ ಕೊಂಡೊಯ್ಯಬೇಕೆ ಹೊರತು ಹಿಂದಕ್ಕೆ ಎಳೆಯಬಾರದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಕೆಪಿಸಿಸಿ ವತಿಯಿಂದ ಆಯೋಜಿಸಲಾಗಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆಯ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ಶಿಕ್ಷಣ, ಸಂಘಟನೆ ಮತ್ತು ಹೋರಾಟಗಳಿಂದ ಸಂವಿಧಾನ ನೀಡಿದ ನ್ಯಾಯಬದ್ಧ ಹಕ್ಕುಗಳನ್ನು ಪಡೆಯಲು ಸಾಧ್ಯ. ಶಿಕ್ಷಣದಿಂದ ಎಲ್ಲ ಸಂಕೋಲೆಗಳಿಂದ ಬಿಡುಗಡೆಗೊಳ್ಳಲು ಸಾಧ್ಯವಿದೆ. ಜತೆಗೆ ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯ ಲಭಿಸಿದಾಗ ಮಾತ್ರ ರಾಜಕೀಯ ಸ್ವಾತಂತ್ರ್ಯ ಫಲಿಸುತ್ತದೆ ಎಂದು ಅಂಬೇಡ್ಕರ್‌ ಅವರು ನಂಬಿದ್ದರು. ಹೀಗಾಗಿ ನಾವು ಅಂಬೇಡ್ಕರ್ ಅವರ ಸಿದ್ಧಾಂತಗಳಂತೆ ನಡೆದು ಅಂಬೇಡ್ಕರ್ ಕನಸಿನ ಭಾರತ ಕಟ್ಟಲು ಶ್ರಮಿಸಬೇಕು ಎಂದು ಕರೆ ನೀಡಿದರು.

ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮಾತನಾಡಿ, ಅಂಬೇಡ್ಕರ್‌ ಅವರ ಮುಂದಾಳತ್ವದಲ್ಲಿ ರಚನೆಯಾದ ಸಂವಿಧಾನವೇ ನಮ್ಮ ದೇಶದ ಭಗವದ್ಗೀತೆ, ಕುರಾನ್‌, ಬೈಬಲ್‌. ಅದನ್ನೇ ನಾವು ಪೂಜಿಸಿ ಬದುಕುತ್ತಿದ್ದೇವೆ. ಸಂವಿಧಾನವೇ ನಮ್ಮ ಈ ಪ್ರಜಾಪ್ರಭುತ್ವ ದೇಶಕ್ಕೆ ನೀಡಿರುವ ಬೆಳಕು. ಕಾಂಗ್ರೆಸ್‌ ಭಿನ್ನ ರಾಜಕೀಯ ನಿಲುವುಗಳನ್ನು ಹೊಂದಿದ್ದರೂ ಅಂಬೇಡ್ಕರ್‌ ಅವರಿಗೆ ಮಹೋನ್ನತ ಜವಾಬ್ದಾರಿ ನೀಡಿತ್ತು. ಸಂವಿಧಾನದ ಕಾರಣಕ್ಕೆ ಅನೇಕ ಶೋಷಿತ ವರ್ಗಗಳು ಮೀಸಲಾತಿ ಪಡೆದಿವೆ. ಅಂಬೇಡ್ಕರ್‌ ಅವರು ಎಡ, ಬಲ, ಲಂಬಾಣಿ, ಕೊರಮ, ಕೊರಚ ಸಮುದಾಯದವರ ಆಸ್ತಿಯಲ್ಲ. ಇವರು ಇಡೀ ದೇಶದ ಸರ್ವ ಜನಾಂಗದ ಆಸ್ತಿ. ಎಲ್ಲಾ ವರ್ಗದ ಜನರಿಗೆ ದನಿ ಕೊಟ್ಟ ಧೀಮಂತರು ಎಂದರು ಹೇಳಿದರು.

ಸಚಿವ ಕೆ.ಎಚ್. ಮುನಿಯಪ್ಪ, ವಿಧಾನಪರಿಷತ್‌ನ ಸರ್ಕಾರದ ಮುಖ್ಯಸಚೇತಕ ಸಲೀಂ ಅಹ್ಮದ್, ಮಾಜಿ ಸಚಿವ ಎಚ್. ಆಂಜನೇಯ, ಶಾಸಕ ರಿಜ್ವಾನ್‌ ಅರ್ಷದ್‌, ಮಾಜಿ ಸಚಿವರಾದ ಬಿ.ಟಿ. ಲಲಿತಾ ನಾಯ್ಕ್ ಸೇರಿದಂತೆ ಹಲವರು ಹಾಜರಿದ್ದರು.

ಸಂವಿಧಾನದ ಶಕ್ತಿಯಿಂದಲೇ ಸಿಎಂ ಆಗಿದ್ದೇನೆ: ಸಿದ್ದರಾಮಯ್ಯ

ಸಂವಿಧಾನದ ಶಕ್ತಿಯಿಂದಲೇ ಇಂದು ನಾನು ಮುಖ್ಯಮಂತ್ರಿ ಆಗಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು. ಭಾರತದ ಅಭಿವೃದ್ಧಿಯಲ್ಲಿ ಆರ್‌ಎಸ್‌ಎಸ್‌, ಬಿಜೆಪಿ ಕೊಡುಗೆಯಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಲಭಿಸುವ ಮುಂಚಿತವಾಗಿ ಮನುಸ್ಮೃತಿ ಜಾರಿಯಲ್ಲಿತ್ತು. ಚತುವರ್ಣ ವ್ಯವಸ್ಥೆ ವಿರುದ್ಧ ಅಂಬೇಡ್ಕರ್‌ ಹೋರಾಡಿದ್ದರು. ಅಸ್ಪೃಷ್ಯತೆ ವಿರುದ್ಧ ಹೋರಾಡಿದ ಅವರು ಎಲ್ಲ ಶೋಷಿತ ವರ್ಗದವರಿಗೂ ಸಮಾನ ಶಿಕ್ಷಣದ ಹಕ್ಕನ್ನು ಸಂವಿಧಾನದ ಮೂಲಕ ನೀಡಿದರು. ಆ ಸಂವಿಧಾನದ ಶಕ್ತಿಯಿಂದಲೇ ನಾನು ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುವ ಅವಕಾಶ ದೊರೆತಿದೆ ಎಂದರು.

ಅಂಬೇಡ್ಕರ್ ಅವರು ಕೇವಲ ದಲಿತರಿಗೆ ಮಾತ್ರವಲ್ಲದೇ, ಇಡೀ ಜಗತ್ತಿನ ನಾಯಕರಾಗಿದ್ದರು. ಅಂದು ಆರ್‌ಎಸ್‌ಎಸ್‌ನ ಮುಖವಾಣಿಯಾಗಿದ್ದ ಆರ್ಗನೈಸರ್ ಪತ್ರಿಕೆಯಲ್ಲಿ ಸಂವಿಧಾನವನ್ನು ವಿರೋಧಿಸಿದ್ದರು. ಆದರೆ, ಈಗ ಆರ್‌ಎಸ್ಎಸ್–ಬಿಜೆಪಿಯವರು ಅಂಬೇಡ್ಕರ್ ಅವರನ್ನು ಹೊಗಳುತ್ತಿದ್ದಾರೆ. ಅಂಬೇಡ್ಕರ್‌ ಸೋಲಿಗೆ ಕಮ್ಯುನಿಷ್ಟ್ ಪಕ್ಷದ ಎಸ್.ಎ.ಡಾಂಗೆ ಮತ್ತು ಹಿಂದುತ್ವ ನಾಯಕ ವಿ.ಡಿ.ಸಾರ್ವರ್ಕರ್ ಅವರು ಕಾರಣರಾಗಿದ್ದರು ಎಂದು ಅಂಬೇಡ್ಕರ್ ಅವರು ಬರೆದುಕೊಂಡಿದ್ದಾರೆ. ಆದರೆ ಚುನಾವಣೆಯಲ್ಲಿ ಅಂಬೇಡ್ಕರ್ ಅವರ ಸೋಲಿಗೆ ಕಾಂಗ್ರೆಸ್ ಪಕ್ಷವೇ ಕಾರಣ ಎಂದು ಬಿಜೆಪಿಯವರು ಸುಳ್ಳು ಹೇಳುತ್ತಾರೆ ಎಂದು ಟೀಕಿಸಿದರು.

PREV
Read more Articles on
click me!

Recommended Stories

ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿ ದೋಷಿ, ಕೋರ್ಟ್ ಬಿಗ್ ತೀರ್ಪು
ಪ್ರೀತಿಗಾಗಿ ಪ್ರಾಣ ಬಿಟ್ಟ ಸತ್ಯವ್ವ: 12ನೇ ವಯಸ್ಸಿನಲ್ಲೇ ಮದುವೆ ಫಿಕ್ಸ್ ಮಾಡಿ ಮಗಳ ಬದುಕನ್ನೇ ಕಸಿದುಕೊಂಡ ಪೋಷಕರು