
ಬೆಂಗಳೂರು (ಸೆ.30): ತ್ರಿವಿಧ ದಾಸೋಹಿ, ಪರಮಪೂಜ್ಯ ಡಾ. ಶಿವಕುಮಾರ ಮಹಾಸ್ವಾಮೀಜಿಗಳ ಕ್ರಿಯಾ ಸಮಾಧಿ ಹಾಗೂ ಅವರ ಕೊರಳಲ್ಲಿದ್ದ ಚಿನ್ನದ ಕರಡಿಗೆಗೆ ಸಂಬಂಧಿಸಿದಂತೆ ಉದ್ಯಮಿ, ಮಾಜಿ ಶಾಸಕ ಅಶೋಕ್ ಖೇಣಿ ನೀಡಿರುವ ಹೇಳಿಕೆಗಳನ್ನು ತುಮಕೂರಿನ ಐತಿಹಾಸಿಕ ಶ್ರೀ ಸಿದ್ದಗಂಗಾ ಮಠವು ತೀವ್ರವಾಗಿ ಖಂಡಿಸಿದೆ. ಖೇಣಿ ಅವರ ಮಾತುಗಳು "ಸತ್ಯಕ್ಕೆ ಸಂಪೂರ್ಣ ದೂರವಾದ, ಬಾಲಿಶ ಹಾಗೂ ಕಪೋಲಕಲ್ಪಿತ ಸುಳ್ಳುಗಳು" ಎಂದು ಮಠದ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ಖಾಸಗಿ ಸುದ್ದಿ ವಾಹಿನಿಯೊಂದರ ಸಂದರ್ಶನದಲ್ಲಿ "ಸಿದ್ದಗಂಗಾ ಶ್ರೀಗಳು ಲಿಂಗೈಕ್ಯರಾದಾಗ ಸಮಾಧಿಯಲ್ಲಿದ್ದು ಖೇಣಿ ಕೊಟ್ಟ ವಸ್ತು" ಎಂಬ ಶೀರ್ಷಿಕೆಯಡಿ ಅಶೋಕ್ ಖೇಣಿ ನೀಡಿದ್ದ ಹೇಳಿಕೆಗಳು ಭಕ್ತಾದಿಗಳಲ್ಲಿ ತೀವ್ರ ಗೊಂದಲ ಮೂಡಿಸಿದ್ದವು. ಈ ಹಿನ್ನೆಲೆಯಲ್ಲಿ ಮಠದ ಆಡಳಿತಾಧಿಕಾರಿ ಎಸ್. ವಿಶ್ವನಾಥಯ್ಯ ಅವರು ಸುದೀರ್ಘ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಖೇಣಿ ಅವರ ಪ್ರತಿಯೊಂದು ಆರೋಪವನ್ನೂ ಬಿಡಿಬಿಡಿಯಾಗಿ ವಿವರಿಸಿ ಸತ್ಯಾಂಶವನ್ನು ಜಗತ್ತಿನ ಮುಂದಿಟ್ಟಿದ್ದಾರೆ.
ಸಂದರ್ಶನದಲ್ಲಿ ಮಾತನಾಡಿದ್ದ ಖೇಣಿ, "ಮಠಕ್ಕೆ ಬರುವ ಚಿನ್ನವನ್ನು ಕರಗಿಸಿ ಅದನ್ನು ಮಾರಿ ಮಕ್ಕಳನ್ನು ಸಾಕಲು ಬಳಸಲಾಗುತ್ತದೆ ಎಂದು ಸಿದ್ದಲಿಂಗ ಸ್ವಾಮೀಜಿ ಹೇಳಿದ್ದರು" ಎಂದು ಹೇಳಿದ್ದರು. ಇದನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ಮಠ, "ಶ್ರೀ ಮಠಕ್ಕೆ ಚಿನ್ನ-ಬೆಳ್ಳಿ ಕಾಣಿಕೆಯಾಗಿ ಬರುವುದು ತೀರಾ ಅಪರೂಪ. ಒಂದು ವೇಳೆ ಯಾವುದೇ ಲೋಹ ಕಾಣಿಕೆಯಾಗಿ ಬಂದರೂ ಅದನ್ನು ಅಧಿಕೃತ 'ಇನ್ವೆಂಟರಿ ರಿಜಿಸ್ಟರ್'ನಲ್ಲಿ (Inventory Register) ತಕ್ಷಣವೇ ದಾಖಲಿಸಿ ಅತ್ಯಂತ ಪಾರದರ್ಶಕವಾಗಿ ನಿರ್ವಹಿಸಲಾಗುತ್ತಿದೆ" ಎಂದು ಸ್ಪಷ್ಟಪಡಿಸಿದೆ.
"ಖೇಣಿ ನೀಡಿದ ಚಿನ್ನವನ್ನೇ ಧರಿಸಿ ನಾನು ಲಿಂಗದಲ್ಲಿ ಲೀನವಾಗುತ್ತೇನೆ, ಖೇಣಿ ನನ್ನ ಮಗನಿದ್ದಂತೆ ಎಂದು ಶ್ರೀಗಳು ಹೇಳಿದ್ದರು" ಎಂಬ ಖೇಣಿ ಹೇಳಿಕೆಗೆ ಕೌಂಟರ್ ನೀಡಿರುವ ಮಠ, "ಪೂಜ್ಯ ಶಿವಕುಮಾರ ಮಹಾಸ್ವಾಮೀಜಿಗಳು ತಮ್ಮ ಜೀವಿತಾವಧಿಯಲ್ಲಿ ಇಂತಹ ಯಾವುದೇ ಮಾತನ್ನು ಆಡಿರಲಿಲ್ಲ. ಇದು ವಾಸ್ತವಕ್ಕೆ ಸಂಪೂರ್ಣ ವಿರುದ್ಧವಾದ ಸಂಗತಿ" ಎಂದಿದೆ.
ಶ್ರೀಗಳು ಲಿಂಗೈಕ್ಯರಾದಾಗ, "ಕುತ್ತಿಗೆಯಲ್ಲಿದ್ದ ಚಿನ್ನದ ಕರಡಿಗೆಯನ್ನು ಯಾರಾದರೂ ಕಳ್ಳತನ ಮಾಡಿದ್ದಾರಾ ಅಥವಾ ಬದಲಾಯಿಸಿದ್ದಾರಾ ಎಂದು ಪಕ್ಕದಲ್ಲಿದ್ದ ರುದ್ರೇಶ್ ಅವರಿಗೆ ಹೋಗಿ ನೋಡಿಕೊಂಡು ಬರಲು ಹೇಳಿದ್ದೆ" ಎಂದು ಖೇಣಿ ಹೇಳಿಕೊಂಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಠದ ಆಡಳಿತಾಧಿಕಾರಿಗಳು, "ಶ್ರೀಗಳ ಅಂತಿಮ ಸಂಸ್ಕಾರದ ಸಂದರ್ಭದಲ್ಲಿ ಅಶೋಕ್ ಖೇಣಿ ಮಠಕ್ಕೇ ಬಂದಿರಲಿಲ್ಲ! ಹೀಗಿರುವಾಗ ಅವರು ಎಂ. ರುದ್ರೇಶ್ ಅವರಿಗೆ ಹೋಗಿ ನೋಡಿಕೊಂಡು ಬರಲು ಹೇಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇದು ಅತ್ಯಂತ ಬಾಲಿಶ ಕಥೆ" ಎಂದು ತಿಳಿಸಿದ್ದಾರೆ.
ರುದ್ರೇಶ್ ಹೋಗಿ ನೋಡಿಬಂದು, "ಸ್ವಾಮೀಜಿಯವರ ಪಾರ್ಥಿವ ಶರೀರದ ಕತ್ತಿನಲ್ಲಿದ್ದ ಕರಡಿಗೆ ಮೇಲೆ ನಿಮ್ಮ ಹೆಸರೇ (ಅಶೋಕ್ ಖೇಣಿ) ಇದೆ ಎಂದು ತಿಳಿಸಿದರು" ಎಂದು ಖೇಣಿ ಹೇಳಿದ್ದರು. ಆದರೆ, ಶ್ರೀಗಳ ಕ್ರಿಯಾ ಸಮಾಧಿಯ ಸಮಯದಲ್ಲಾಗಲಿ ಅಥವಾ ಲಿಂಗೈಕ್ಯರಾದ ಸಂದರ್ಭದಲ್ಲಾಗಲಿ ಅಶೋಕ್ ಖೇಣಿ ಮಠಕ್ಕೆ ಆಗಮಿಸಿಯೇ ಇಲ್ಲ. ಕೆ.ಆರ್.ಐ.ಡಿ.ಎಲ್. ಮಾಜಿ ಅಧ್ಯಕ್ಷ ಎಂ. ರುದ್ರೇಶ್ ಅವರೊಂದಿಗೆ ಈ ವಿಷಯವಾಗಿ ಯಾವುದೇ ಸಂಭಾಷಣೆ ನಡೆದಿಲ್ಲ ಎಂದು ಮಠ ಸ್ಪಷ್ಟಪಡಿಸಿದೆ.
"ಶ್ರೀಗಳ ಸಮಾಧಿಯಲ್ಲಿ ನನ್ನ ಹೆಸರಿದೆ, ಇದಕ್ಕಿಂತ ದೊಡ್ಡ ಆಶೀರ್ವಾದ ಬೇಕೇ" ಎಂಬ ಖೇಣಿ ಅವರ ಮಾತುಗಳಿಗೆ ಉತ್ತರಿಸಿರುವ ಮಠ, "ಪೂಜ್ಯ ಶ್ರೀಗಳು ಅಶೋಕ್ ಖೇಣಿ ಅವರಿಂದ ಯಾವುದೇ ಚಿನ್ನದ ಕರಡಿಗೆಯನ್ನು ಮಾಡಿಸಿಕೊಂಡಿರಲಿಲ್ಲ ಮತ್ತು ಅಂತಹ ಯಾವುದೇ ಆಸೆಯನ್ನೂ ವ್ಯಕ್ತಪಡಿಸಿರಲಿಲ್ಲ. ಶ್ರೀಗಳ ಲಿಂಗೈಕ್ಯ ಸಮಯದಲ್ಲಿ ಅವರ ಕೊರಳಲ್ಲಿ ಖೇಣಿ ಹೆಸರಿದ್ದ ಕರಡಿಗೆ ಇತ್ತು ಎಂಬುದು ಹಾಗೂ ಸಮಾಧಿಯಲ್ಲಿ ಅವರ ಹೆಸರಿದೆ ಎಂಬುದು ಸಂಪೂರ್ಣ ನಿರಾಧಾರ" ಎಂದು ವಿವರಣೆ ನೀಡಿದೆ.
ಪೂಜ್ಯ ಡಾ. ಶಿವಕುಮಾರ ಮಹಾಸ್ವಾಮೀಜಿಗಳು ಜಾತಿ, ಮತ, ಪಂಥಗಳ ಭೇದವಿಲ್ಲದೆ ಸಮಾಜದ ಪ್ರತಿಯೊಬ್ಬರನ್ನೂ ಸಮಾನವಾಗಿ ಕಂಡು ಹಾರೈಸಿದ ಮಹಾಪುರುಷರು. ಅಶೋಕ್ ಖೇಣಿ ಅವರಿಗೆ ಶ್ರೀಗಳ ಬಗ್ಗೆ ವೈಯಕ್ತಿಕ ಭಕ್ತಿ ಇರಬಹುದು. ಆದರೆ, ಅವರು ಸಂದರ್ಶನದಲ್ಲಿ ಹೇಳಿರುವಂತೆ ಸಮಾಧಿ ಸಮಯದಲ್ಲಿ ಚಿನ್ನದ ಕರಡಿಗೆ ಧರಿಸಿದ್ದು, ಅಂತಿಮ ಸಂಸ್ಕಾರಕ್ಕೆ ಅವರು ಮಠಕ್ಕೆ ಬಂದಿದ್ದು ಹಾಗೂ ರುದ್ರೇಶ್ ಅವರೊಂದಿಗೆ ಮಾತನಾಡಿದ್ದು ಇವೆಲ್ಲವೂ ಸತ್ಯಕ್ಕೆ ದೂರವಾದ ಸಂಗತಿಗಳು ಎಂದು ಸಿದ್ದಗಂಗಾ ಮಠವು ತನ್ನ ಪ್ರಕಟಣೆಯಲ್ಲಿ ಅಂತಿಮವಾಗಿ ಸ್ಪಷ್ಟಪಡಿಸಿದೆ.