'ಶೃಂಗೇರಿ ಕ್ಷೇತ್ರದ ಮತ ಎಣಿಕೆಯ ವೀಡಿಯೋ ನಾಪತ್ತೆ' ಚುನಾವಣಾ ಆಯೋಗದ ಮಾತಿಗೆ ಸುಪ್ರೀಂ ಕೋರ್ಟ್‌ ತರಾಟೆ

Published : Oct 15, 2026, 01:06 PM IST
Sringeri Vote Counting Video

ಸಾರಾಂಶ

2023ರ ಶೃಂಗೇರಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆಯ ವಿಡಿಯೋ ದಾಖಲೆ ಕಳೆದುಹೋಗಿರುವ ಬಗ್ಗೆ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಮುಂದಿನ ವಿಚಾರಣೆಯೊಳಗೆ ದಾಖಲೆ ಒದಗಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

ನವದೆಹಲಿ (ಅ.15): ಕರ್ನಾಟಕದ ಶೃಂಗೇರಿ ವಿಧಾನಸಭಾ ಕ್ಷೇತ್ರದ 2023 ರ ಚುನಾವಣೆಯ ಮತ ಎಣಿಕೆಯ ವೀಡಿಯೋ ರೆಕಾರ್ಡಿಂಗ್ ಅನ್ನು ಪತ್ತೆಹಚ್ಚಲು ವಿಫಲವಾಗಿರುವ ಭಾರತೀಯ ಚುನಾವಣಾ ಆಯೋಗಕ್ಕೆ (ECI) ಸುಪ್ರೀಂ ಕೋರ್ಟ್ ಬುಧವಾರ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಮುಂದಿನ ವಿಚಾರಣೆಯ ವೇಳೆಗೆ ಲಭ್ಯವಿರುವ ಎಲ್ಲಾ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಕೋರ್ಟ್‌ ಆದೇಶಿಸಿದ್ದು, ಒಂದು ವೇಳೆ ದಾಖಲೆಗಳನ್ನು ಒದಗಿಸಲು ವಿಫಲವಾದರೆ ಆಯೋಗದ ವಿರುದ್ಧ 'ಕೆಟ್ಟ ತೀರ್ಮಾನ' (Adverse Inference) ಕೈಗೊಳ್ಳಲಾಗುವುದು ಎಂದು ಗಂಭೀರ ಎಚ್ಚರಿಕೆ ನೀಡಿದೆ. ಈ ಬೆಳವಣಿಗೆಯಿಂದಾಗಿ ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರಿಗೆ ಕಷ್ಟಗಳು ಹೆಚ್ಚಾಗುವ ಲಕ್ಷಣಗಳು ಕಂಡುಬರುತ್ತಿವೆ.

"ದಾಖಲೆ ಕಳೆದುಹೋಯಿತು ಎನ್ನಲು ಹೇಗೆ ಸಾಧ್ಯ?" - ಸುಪ್ರೀಂ ಕೋರ್ಟ್ ಪ್ರಹಾರ

ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಹಾಗೂ ಸಂಜೀವ್ ಸಚ್ದೇವ್ ಅವರನ್ನೊಳಗೊಂಡ ದ್ವಿ ಸದಸ್ಯ ಪೀಠವು ಶೃಂಗೇರಿ ಕ್ಷೇತ್ರದ ಮತ ಎಣಿಕೆ ವಿವಾದವನ್ನು ಆಯೋಗ ನಿರ್ವಹಿಸಿದ ರೀತಿಯನ್ನು ಕಟುವಾಗಿ ಪ್ರಶ್ನಿಸಿತು. "ಚುನಾವಣಾ ಆಯೋಗವೇ ತನ್ನ ಸ್ವಂತ ದಾಖಲೆಗಳನ್ನು ಕಳೆದುಕೊಂಡಿದೆ ಎಂದು ಹೇಗೆ ಹೇಳಲು ಸಾಧ್ಯ? ನಿಮ್ಮ ಇಡೀ ಸಂಸ್ಥೆಯ ಮೂಲ ಉದ್ದೇಶವೇ ನ್ಯಾಯಸಮ್ಮತವಾಗಿ ಚುನಾವಣೆ ನಡೆಸುವುದು. ಹಾಗಿರುವಾಗ ಪ್ರತಿಯೊಂದು ದಾಖಲೆಯೂ ನಿಮ್ಮ ಬಳಿ ಸುರಕ್ಷಿತವಾಗಿರಬೇಕಲ್ಲವೇ?" ಎಂದು ನ್ಯಾಯಪೀಠ ಪ್ರಶ್ನೆ ಮಾಡಿದೆ.

ಆಯೋಗದ ಪರ ವಕೀಲರು ವೀಡಿಯೋ ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ ಎಂದು ನೀಡಿದ ಸಮಜಾಯಿಷಿಯನ್ನು ಒಪ್ಪದ ಪೀಠವು, "ನಾವು ಪತ್ತೆಹಚ್ಚಲು ಯತ್ನಿಸುತ್ತಿದ್ದೇವೆ ಎಂಬಂತಹ ಸಬೂಬುಗಳನ್ನು ಸ್ವೀಕರಿಸುವುದಿಲ್ಲ. ನಿಮ್ಮ ಬಳಿ ಏನೇ ದಾಖಲೆಗಳಿದ್ದರೂ ಅದನ್ನು 2027 ರ ಫೆಬ್ರವರಿ 15 ರಂದು ನಡೆಯಲಿರುವ ಮುಂದಿನ ವಿಚಾರಣೆಯ ವೇಳೆ ಪೀಠದ ಮುಂದೆ ಹಾಜರುಪಡಿಸಬೇಕು. ಇಲ್ಲವಾದಲ್ಲಿ ನಿಮ್ಮ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ" ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿತು.

ಏನಿದು ಶೃಂಗೇರಿ ಕ್ಷೇತ್ರದ ಚುನಾವಣೆ ವಿವಾದ?

2023 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಶೃಂಗೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿಡಿ ರಾಜೇಗೌಡ ಅವರು ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ವಿರುದ್ಧ 201 ಮತಗಳ ಅಲ್ಪ ಅಂತರದಿಂದ ಜಯಗಳಿಸಿದ್ದರು. ಈ ಫಲಿತಾಂಶವನ್ನು ಪ್ರಶ್ನಿಸಿ ಜೀವರಾಜ್ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್ ಏಪ್ರಿಲ್ 6 ರಂದು ಅಂಚೆ ಮತಗಳ (Postal Ballots) ಮರುಎಣಿಕೆಗೆ ಆದೇಶಿಸಿತ್ತು. ತದನಂತರ ಮೇ 3, 2026 ರಂದು ನಡೆದ ಮರುಎಣಿಕೆಯ ಬಳಿಕ, ರಾಜೇಗೌಡ ಅವರ ಮತಗಳ ಪೈಕಿ 255 ಮತಗಳು ಕಡಿಮೆಯಾಗಿದ್ದವು. ಪರಿಣಾಮವಾಗಿ ಹೈಕೋರ್ಟ್ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರನ್ನು ವಿಜಯಿ ಎಂದು ಘೋಷಿಸಿತ್ತು.

ಹೈಕೋರ್ಟ್ ಆದೇಶ ಮೀರಿ ಮರುಎಣಿಕೆ ನಡೆದಿದೆ ಎಂದು ರಾಜೇಗೌಡ ಆರೋಪ

ಹೈಕೋರ್ಟ್‌ನ ಈ ಮರುಎಣಿಕೆ ಪ್ರಕ್ರಿಯೆಯನ್ನು ಪ್ರಶ್ನಿಸಿ ಟಿ.ಡಿ. ರಾಜೇಗೌಡ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಹೈಕೋರ್ಟ್ ಕೇವಲ ತಿರಸ್ಕೃತಗೊಂಡಿದ್ದ 279 ಅಂಚೆ ಮತಗಳ ಮರುಪರಿಶೀಲನೆಗೆ ಮಾತ್ರ ಆದೇಶಿಸಿತ್ತು, ಆದರೆ ಅಧಿಕಾರಿಗಳು ಅದನ್ನು ಮೀರಿ ಸ್ವೀಕೃತಗೊಂಡಿದ್ದ 562 ಅಂಚೆ ಮತಗಳನ್ನೂ ಮರುಪರಿಶೀಲಿಸಿದ್ದಾರೆ ಎಂದು ರಾಜೇಗೌಡ ಆಪಾದಿಸಿದ್ದಾರೆ.

ಈ ಹಿನ್ನೆಲೆಯಲ್ಲಿ 2023 ರ ಮೂಲ ಮತ ಎಣಿಕೆ ಹಾಗೂ ಮರುಎಣಿಕೆ ಪ್ರಕ್ರಿಯೆಯ ವೀಡಿಯೋ ತುಣುಕುಗಳು ಮತ್ತು ಚುನಾವಣಾ ವೀಕ್ಷಕರ ವರದಿಯನ್ನು ಒದಗಿಸುವಂತೆ ಅವರು ಮನವಿ ಮಾಡಿದ್ದರು. ಆದರೆ ಮೂಲ ಮತ ಎಣಿಕೆಯ ವೀಡಿಯೋ ಕಣ್ಮರೆಯಾಗಿದೆ ಎಂದು ಆಯೋಗ ನ್ಯಾಯಾಲಯಕ್ಕೆ ತಿಳಿಸಿದ್ದು ಸುಪ್ರೀಂ ಕೋರ್ಟ್‌ನ ತೀವ್ರ ಅಸಮಾಧಾನಕ್ಕೆ ಕಾರಣವಾಯಿತು. ಪ್ರಕರಣ ಅಂತಿಮವಾಗಿ ಇತ್ಯರ್ಥವಾಗುವವರೆಗೆ ಟಿ.ಡಿ. ರಾಜೇಗೌಡ ಅವರಿಗೆ ಶಾಸಕ ಸ್ಥಾನದಲ್ಲಿ ಮುಂದುವರಿಯಲು ಸುಪ್ರೀಂ ಕೋರ್ಟ್ ಈಗಾಗಲೇ ಮಧ್ಯಂತರ ಪರಿಹಾರ ನೀಡಿದೆ.

PREV
Read more Articles on
click me!

Recommended Stories

ಬಾಯ್‌ಫ್ರೆಂಡ್ ಜೊತೆ ಮದುವೆಗೆ ಸಿದ್ಧಳಾಗಿದ್ದ ಯುವತಿ; ತಾಯಿಯ ಒಂದೇ ಒಂದು ಮಾತಿನಿಂದ ಬದಲಾಯ್ತು ನಿರ್ಧಾರ!
ಎತ್ತಿನಹೊಳೆ ಯೋಜನೆ ವೆಚ್ಚ ಏರಿಕೆ 23 ಸಾವಿರ ಕೋಟಿಗೆ ಏರಿಕೆ; ವರ್ಷಾಂತ್ಯಕ್ಕೆ ತುಮಕೂರಿಗೆ ನೀರು, MC ಸುಧಾಕರ್ ಭರವಸೆ