ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಚೈನ್ ತುಂಡಾದ ಬೆನ್ನಲ್ಲಿಯೇ ಶಿವಮೊಗ್ಗ ಜಲಾಶಯದ ಕ್ರಸ್ಟ್ ಗೇಟಿನ ರೋಪ್ ಜಾಮ್ ಆಗಿರುವುದು ಬೆಳಕಿಗೆ ಬಂದಿದೆ. ಆದರೆ, ಮಲೆನಾಡಿದನ ಇಂಜಿನಿಯರ್‌ಗಳು ಜಾಣ್ಮೆ ಪ್ರದರ್ಶಿಸಿದ್ದಾರೆ.
ಶಿವಮೊಗ್ಗ (ಆ.12): ಶಿವಮೊಗ್ಗ ಜಿಲ್ಲೆಯ ತುಂಗಾ ಜಲಾಶಯದಲ್ಲಿಯೂ ಕ್ರಸ್ಟ್ ಗೇಟಿನ ರೋಪ್ ಜಾಮ್ ಆಗಿದ್ದು, ಅದನ್ನು ಬಲವಂತವಾಗಿ ಎತ್ತಲು ಮುಂದಾದರೆ ತುಂಡಾಗುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಕ್ರಸ್ಟ್ ಗೇಟ್ ತೆರಯದೇ ಬೇರೆ ಗೇಟುಗಳಿಂದ ಜಲಾಶಯ ನಿರ್ವಹಣೆ ಮಾಡಲಾಗುತ್ತಿದೆ. ಈ ಜಾಣ್ಮೆಯನ್ನು ತುಂಗಭದ್ರಾ ಜಲಾಶಯದ ಅಧಿಕಾರಿಗಳು ತೋರಿಸಿದ್ದರೆ, ಕ್ರಸ್ಟ್ ಗೇಟ್ ಚೈನ್ ಲಿಂಕ್ ಮುರುದು ಹೋಗುವುದು ತಪ್ಪುತ್ತಿತ್ತು.
ಶಿವಮೊಗ್ಗ ಜಿಲ್ಲೆಯ ತುಂಗಾ ಜಲಾಶಯದಲ್ಲಿ ಜಲ ಹಾನಿ ತಪ್ಪಿದೆ. ಜಲಾಶಯದ ಇಂಜಿನಿಯರ್ ಗಳು ಮತ್ತು ಸಿಬ್ಬಂದಿಗಳ ಜಾಣ್ಮೆಯಿಂದ ಜಲ ಹಾನಿ ತಪ್ಪಿಸಲು ಜಾಣ್ಮೆ ಪ್ರದರ್ಶನ ಮಾಡಿದ್ದಾರೆ. ರಾಜ್ಯದಲ್ಲಿ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ತುಂಗಾ ಜಲಾಶಯದಲ್ಲೂ ಒಂದು ಕ್ರಸ್ಟ್ ಗೇಟ್ ಕೆಲಸ ಮಾಡುವುದು ನಿಂತಿದೆ. ಅಂದತೆ, ತುಂಗಾ ಜಲಾಶಯದ 22 ರೇಡಿಯಲ್ ಗೇಟ್‌ಗಳ ಪೈಕಿ ಒಂದು ಕ್ರಸ್ಟ್ ಗೇಟ್ ಕೆಲಸ ಮಾಡುತ್ತಿಲ್ಲ ಎಂಬುದನ್ನು ಗಮನಿಸಿದ ಇಂಜಿನಿಯರ್‌ಗಳು ಆ ಗೇಟನ್ನು ತೆರೆಯುವುದನ್ನೇ ನಿಲ್ಲಿಸಿದ್ದಾರೆ. ಒಂದು ವೇಳೆ ರೋಪ್ ಜಾಮ್‌ನಿಂದ ಉಂಟಾಗಿರುವ ಕ್ರಸ್ಟ್ ಗೇಟನ್ನು ಬಲವಂತವಾಗಿ ತೆರೆಯಲು ಮುಂದಾದರೆ ಅದು ಮುರಿದು ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಈ ಗೇಟನ್ನು ಯಾವುದೇ ಕಾರಣಕ್ಕೂ ತೆರೆಯದಿರಲು ಸೂಚನೆ ನೀಡಿದ್ದಾರೆ. ಆದ್ದರಿಂದ ತುಂಗಾ ಜಲಾಶಯದ 22 ಗೇಟುಗಳ ಪೈಕಿ 8ನೇ ಕ್ರಸ್ಟ್ ಗೇಟು ಮಾತ್ರ ಕೆಲಸ ಮಾಡದೇ ಸ್ಥಗಿತಗೊಂಡಿದೆ.
undefined
ಶಿವಮೊಗ್ಗ ಜಿಲ್ಲೆ ಸೇರಿದಂತೆ ಮಲೆನಾಡಿನ ಜಲಾಶಯಗಳ ನೀರಿನ ಮಟ್ಟ
ತುಂಗಾ ಜಲಾಶಯಕ್ಕೆ ಜುಲೈನಲ್ಲಿ 85 ಸಾವಿರ ಕ್ಯೂಸೆಕ್‌ಗೂ ಅಧಿಕ ಒಳಹರಿವು ಇದ್ದಾಗ ಜಲಾಶಯದ ಎಲ್ಲ 22 ಗೇಟ್‌ಗಳನ್ನು ಓಪನ್ ಮಾಡಲೇಬೇಕಾಗುತ್ತದೆ. ಆದರೆ, ಈ ಬಾರಿ 8ನೇ ಗೇಟ್ ಅನ್ನು ಓಪನ್ ಮಾಡದೆ 21 ಗೇಟ್ ಮೂಲಕವೇ ಎಲ್ಲ ನೀರನ್ನು ಹೊರಬಿಟ್ಟಿದ್ದಾರೆ. 2019 ಮತ್ತು 20ರಲ್ಲಿ 1 ಲಕ್ಷ ಕ್ಯೂಸೆಕ್ಸ್ ಅಧಿಕ ನೀರು ಬಂದಿತ್ತು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಎಲ್ಲ ಗೇಟ್ ಓಪನ್ ಮಾಡುವುದು ಅನಿವಾರ್ಯವಾಗಿತ್ತು. ಈ ಬಾರಿ 85 ಸಾವಿರ ಕ್ಯೂಸೆಕ್ಸ್ ಒಳಹರಿವು ಇದ್ದ ಕಾರಣ ಎಂಜಿನಿಯರ್‌ಗಳು ಜಾಣ್ಮೆಯಿಂದ ಪರಿಸ್ಥಿತಿ ನಿಭಾಯಿಸಿದ್ದಾರೆ. ತುಂಗಾ ಜಲಾಶಯದ ಎಂಜಿನಿಯರ್, ಅಧಿಕಾರಿ, ಸಿಬ್ಬಂದಿ ಮುನ್ನೆಚ್ಚರಿಕೆ ಕ್ರಮವಾಗಿ ದೊಡ್ಡ ಪ್ರಮಾಣದ ಸಂಭಾವ್ಯ ದುರಂತ, ನಷ್ಟವೊಂದು ತಪ್ಪಿದೆ.
ಇನ್ನು ತುಂಗಾ ಜಲಾಶಯದಿಂದ ನದಿಗೆ ನೀರು ಹರಿಸಿದ್ದಲ್ಲದೇ ಅಚ್ಚುಕಟ್ಟು ಪ್ರದೇಶಕ್ಕೆ, ಕೆರೆ ತುಂಬಿಸುವ ಯೋಜನೆಗಳಿಗೂ ನೀರು ಹರಿಯುತ್ತಿದೆ. ತುಂಗಭದ್ರಾ ಜಲಾಶಯ ತುಂಬಲು ಪ್ರಮುಖ ಆಸರೆಯೇ ತುಂಗಾ ಜಲಾಶಯ. 3.5 ಟಿಎಂಸಿ ಸಾಮರ್ಥ್ಯದ ಜಲಾಶಯ ಒಂದು ದೊಡ್ಡ ಮಳೆಗೆ ಭರ್ತಿಯಾಗುತ್ತದೆ. ನಂತರ ಶಿವಮೊಗ್ಗ ನಗರಕ್ಕೆ ಕುಡಿವ ನೀರಿಗೆ, ತುಂಗಭದ್ರಾ ಜಲಾಶಯಕ್ಕೆ, ಶಿವಮೊಗ್ಗ, ನ್ಯಾಮತಿ, ಹೊನ್ನಾಳಿವರೆಗಿನ ಸಾವಿರಾರು ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ, ತುಂಗಾ ಏತ ನೀರಾವರಿ ಮೂಲಕ ಹತ್ತಾರು ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ. ಹೆಚ್ಚುವರಿ ನೀರನ್ನು ನದಿಗೆ ಹರಿಸುವ ಜತೆಗೆ ಅದೇ ಸಮಯದಲ್ಲಿ ಉಳಿದ ಕಡೆಯೂ ನೀರು ಹರಿಸಬೇಕಾದ ಅನಿವಾರ್ಯತೆ ಇರುತ್ತದೆ. ನದಿಗೆ ಒಳಹರಿವು ಇಳಿಮುಖವಾದಾಗ ಕ್ರಸ್ಟ್ ಗೇಟ್ ಮೂಲಕ ನೀರು ಹರಿಸುವುದನ್ನು ನಿಲ್ಲಿಸಲಾಗುತ್ತದೆ.
ತುಂಗಭದ್ರಾ ಜಲಾಶಯ ಚೈನ್‌ಲಿಂಕ್ ದುರಸ್ತಿಗೆ ಇನ್ನೂ 4-5 ದಿನಗಳು ಬೇಕು; ಡಿಸಿಎಂ ಡಿ.ಕೆ. ಶಿವಕುಮಾರ
ಇನ್ನು ತುಂಗಾ ಜಲಾಶಯದಲ್ಲಿ ನೀರನ್ನು ಉಳಿಸಿಕೊಳ್ಳುವುದು ಅಷ್ಟೇ ಅನಿವಾರ್ಯವಾಗಿರುತ್ತದೆ. ಜುಲೈ ತಿಂಗಳಲ್ಲಿ 85 ಸಾವಿರ ಕ್ಯೂಸೆಕ್‌ವರೆಗೂ ಒಳಹರಿವು ಬಂದಿತ್ತು. ಸತತ 20 ದಿನಗಳ ಮಳೆಯಿಂದ ಸಿಬ್ಬಂದಿ ಹಗಲು ರಾತ್ರಿ ಕೆಲಸ ಮಾಡಿದ್ದರು. ಒಳಹರಿವು ಏರಿದಂತೆ, ಇಳಿದಂತೆ ಗೇಟ್ ಎತ್ತರ ಇಳಿಸಿಬೇಕಾದ, ಏರಿಸಬೇಕಾದ ಅನಿವಾರ್ಯತೆ ಎದುರಾಗಿತ್ತು. ಇಂತಹ ಕಷ್ಟಕರ ಸಂದರ್ಭದಲ್ಲೂ ಒಂದು ಗೇಟ್ ಅನ್ನು ಓಪನ್ ಮಾಡದೆ ಪರಿಸ್ಥಿತಿ ನಿಭಾಯಿಸಿದ್ದಾರೆ. ಇದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ.