ಗೃಹ ಜ್ಯೋತಿ ಯೋಜನೆಯ ಲಾಭ ಪಡೆಯಬೇಕೆಂದರೆ ಸಾರ್ವಜನಿಕರು ಸೇವಾ ಸಿಂಧು ಪೋರ್ಟಲ್ ಮೂಲಕ ನೋಂದಣಿ ಮಾಡಿಸಿಕೊಳ್ಳಬೇಕು. ಸೇವಾ ಸಿಂಧು ವೆಬ್‌ಸೈಟ್ ಮೂಲಕ ಮೊಬೈಲ್, ಕಂಪ್ಯೂಟರ್, ಲ್ಯಾಪ್‌ಟ್ಯಾಪ್‌ನಲ್ಲೂ ಅರ್ಜಿ ಸಲ್ಲಿಸಬಹುದಾಗಿದೆ.
ಹುಬ್ಬಳ್ಳಿ(ಜೂ.22): ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಗೃಹಜ್ಯೋತಿ ಗ್ಯಾರಂಟಿ ಯೋಜನೆಗೆ ಇದೀಗ ಸರ್ವರ್ ಕಾಟ ಶುರುವಾಗಿದೆ. ಇದು ಜನರು, ಸಿಬ್ಬಂದಿಯನ್ನು ಹೈರಾಣು ಮಾಡಿದೆ. ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್ ಪೂರೈಕೆಯ ಗೃಹ ಜ್ಯೋತಿ ಯೋಜನೆಗೆ ಸೇವಾಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಗುಜರಾಯಿಸಬೇಕು. ಜನರು ಅರ್ಜಿ ಹಾಕಲು, ಕರ್ನಾಟಕ ಒನ್, ಹೆಸ್ಕಾಂ ಕಚೇರಿ, ಗ್ರಾಮ ಒನ್ ಹೀಗೆ ಅಲೆದಾಡುತ್ತಿದ್ದಾರೆ. ಆದರೆ ಸರ್ವರ್ ಸ್ಲೋ ಇದೆ. ತಾಂತ್ರಿಕ ಸಮಸ್ಯೆಯಿದೆ ಎಂದು ಅರ್ಜಿ ಹಾಕಲು ಬಂದ ಜನರನ್ನು ಸಿಬ್ಬಂದಿ ಮರಳಿ ಮನೆ ಕಳುಹಿಸುತ್ತಿದ್ದಾರೆ.
ಕಳೆದ ಮೂರು ದಿನಗಳಿಂದ ಗೃಹಜ್ಯೋತಿ ಯೋಜನೆಗೆ ಅರ್ಜಿ ಅಪ್ಲೋಡ್ ಮಾಡಿಸಲು ಜನರು ಅಲೆದಾಡಿ ಹೈರಾಣಾಗಿದ್ದಾರೆ. ವೃದ್ಧರು, ಮಹಿಳೆಯರು, ತಮ್ಮ ಕೆಲಸ ಕಾರ್ಯಗಳನ್ನೆಲ್ಲ ಬಿಟ್ಟು ಸರ್ವರ್‌ಗಾಗಿ ಕಾದು ಕಾದು ಸುಸ್ತಾಗುತ್ತಿದ್ದಾರೆ. ಸರ್ಕಾರದ ಈ ಯೋಜನೆ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಬಹಳಷ್ಟುಜನರು ನಾಳೆ ಬಂದರಾಯ್ತು ಎಂದು ಮನೆಗಳಿಗೆ ತೆರಳಿದರೆ, ಮನೆ ಕೆಲಸ ಬಿಟ್ಟು ಮತ್ತೆಲ್ಲಿ ನಾಳೆ ಬರುವುದು ಎಂದು ಸಂಜೆವರೆಗೂ ಕಾಯುತ್ತಾ ಸರತಿ ಸಾಲಿನಲ್ಲೇ ನಿಲ್ಲುತ್ತಿದ್ದಾರೆ.
ಶಾಸಕ ವಿನಯ್ ಕುಲಕರ್ಣಿಗೆ ಮತ್ತೆ ಶಾಕ್ ಕೊಟ್ಟ ಕೋರ್ಟ್!
ಸರ್ವರ್ ಸಮಸ್ಯೆ ಕೇವಲ ಜನರನ್ನಷ್ಟೇ ಹೈರಾಣು ಮಾಡಿಲ್ಲ. ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯೂ ಕಂಗಾಲಾಗಿದೆ. ಸರ್ವರ್ ಸಮಸ್ಯೆಯಿಂದಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಸಾಕಷ್ಟು ಜನರು ಬರುತ್ತಾರೆ. ಆದರೆ ಸರ್ವರ್ ಮಾತ್ರ ಕೆಲಸ ಮಾಡುತ್ತಿಲ್ಲ. ಹೀಗಾಗಿ ಸಮಸ್ಯೆ ಬಗೆಹರಿಸುವಂತೆ ಸಂಬಂಧಪಟ್ಟ ಅಧಿಕಾರಿ ವರ್ಗಕ್ಕೆ ಸಿಬ್ಬಂದಿ ಹೇಳುತ್ತಿರುವುದು ಮಾಮೂಲಿಯಾದಂತಾಗಿದೆ.
ಏನು ನಿಯಮ?
ಗೃಹ ಜ್ಯೋತಿ ಯೋಜನೆಯ ಲಾಭ ಪಡೆಯಬೇಕೆಂದರೆ ಸಾರ್ವಜನಿಕರು ಸೇವಾ ಸಿಂಧು ಪೋರ್ಟಲ್ ಮೂಲಕ ನೋಂದಣಿ ಮಾಡಿಸಿಕೊಳ್ಳಬೇಕು. ಸೇವಾ ಸಿಂಧು ವೆಬ್‌ಸೈಟ್ ಮೂಲಕ ಮೊಬೈಲ್, ಕಂಪ್ಯೂಟರ್, ಲ್ಯಾಪ್‌ಟ್ಯಾಪ್‌ನಲ್ಲೂ ಅರ್ಜಿ ಸಲ್ಲಿಸಬಹುದಾಗಿದೆ. ಜತೆಗೆ ಕರ್ನಾಟಕ ಒನ್, ಹುಬ್ಬಳ್ಳಿ-ಧಾರವಾಡ ಒನ್, ಗ್ರಾಮ ಒನ್, ನಾಡಕಚೇರಿ, ಗ್ರಾಪಂ ಕಚೇರಿ, ಹೆಸ್ಕಾಂ ಕಚೇರಿಗಳಲ್ಲೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, ಆರ್‌ಆರ್ ನಂಬರ್, ಮೊಬೈಲ್ ನಂಬರ್ ಕಡ್ಡಾಯ,. ಇನ್ನು ಬಾಡಿಗೆದಾರರಿದ್ದರೆ ಮನೆ ಬಾಡಿಗೆ ಕರಾರು ಪತ್ರ, ಆಧಾರ್ ಕಾರ್ಡ್ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ಸಮಸ್ಯೆ ಇದ್ದರೆ ಮಾಹಿತಿಗಾಗಿ 1912 ಸಹಾಯವಾಣಿ ಸಂಖ್ಯೆಗೆ ಕಾಲ್ ಮಾಡಿ ಮಾಹಿತಿ ಪಡೆಯಬಹುದು ಎಂದು ಅಧಿಕಾರಿ ವರ್ಗ ತಿಳಿಸಿದೆ.