ಬೆಂಗಳೂರಿನಿಂದ ತುಮಕೂರು ಕಡೆಗೆ ಹೋಗುವ ಪೀಣ್ಯ ಮೇಲ್ಸೇತುವೆ ರಾಕ್‌ಲೈನ್ ಮಾಲ್ ಸಮೀಪ ನಡೆದ ಸರಣಿ ಅಪಘಾತ
ಬೆಂಗಳೂರು(ಜು.27): ಪೀಣ್ಯ ಮೇಲ್ಸೇತುವೆ ಬಳಿ ಸಂಭವಿಸಿದ ಸರಣಿ ಅಪಘಾತದಲ್ಲಿ ಮೂರು ಕಾರು ಹಾಗೂ ಒಂದು ಸರಕು ಸಾಗಾಣೆ ಆಟೋ ಸೇರಿ ನಾಲ್ಕು ವಾಹನಗಳು ಹಾನಿಯಾಗಿರುವ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ. ಬೆಂಗಳೂರಿನಿಂದ ತುಮಕೂರು ಕಡೆಗೆ ಹೋಗುವ ಪೀಣ್ಯ ಮೇಲ್ಸೇತುವೆ ರಾಕ್‌ಲೈನ್ ಮಾಲ್ ಸಮೀಪ ಬೆಳಗ್ಗೆ 11.30ರ ಸುಮಾರಿಗೆ ಈ ಸರಣಿ ಅಪಘಾತ ನಡೆದಿದೆ. ಅವಘಡದಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮೂರು ಕಾರು ಹಾಗೂ ಒಂದು ಸರಕು ಸಾಗಣೆ ಆಟೋ ಹಿಂದಿನಿಂದ ಒಂದಕ್ಕೊಂದು ಡಿಕ್ಕಿ ಹೊಡೆದುಕೊಂಡು ಜಖಂಗೊಡಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಪೀಣ್ಯ ಮೇಲ್ಸೇತುವೆ ತಡೆಗೋಡೆಗೆ ಫ್ಲೆಕ್ಸ್ ಹಾಕಲಾಗಿತ್ತು. ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಗಸ್ತು ವಾಹನ ಸಿಬ್ಬಂದಿ ಮೇಲ್ಸೇತುವೆಯಲ್ಲಿ ಗಸ್ತು ವಾಹನ ನಿಲ್ಲಿಸಿಕೊಂಡು ಈ ಫ್ಲೆಕ್ಸ್‌ಗಳನ್ನು ತೆರೆವುಗೊಳಿಸುತ್ತಿದ್ದರು. ಈ ವೇಳೆ ಬೆಂಗಳೂರು ಕಡೆಯಿಂದ ತುಮಕೂರು ಕಡೆಗೆ ಬರುತ್ತಿದ್ದ ಕಾರೊಂದು ಎನ್‌ಎಚ್‌ಎಐ ಗಸ್ತು ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಭರದಲ್ಲಿ ರಸ್ತೆ ವಿಭಜಕಕ್ಕೆ ಗುದ್ದಿ ನಿಂತಿದೆ. ಹೀಗಾಗಿ ಹಿಂದೆ ಬರುತ್ತಿದ್ದ ಕಾರು, ಸರಕು ಸಾಗಣೆ ಆಟೋ ಹಾಗೂ ಕಾರು ಒಂದಕ್ಕೊಂದು ಗುದ್ದಿಕೊಂಡು ಸರಣಿ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರಲ್ಲಿ ಸರಣಿ ಅಪಘಾತ: ಎರಡು ಟ್ರಕ್ಕರ್- ಟಿಟಿ ನಡುವೆ ಡಿಕ್ಕಿ: ಫುಲ್ ಟ್ರಾಫಿಕ್ ಜಾಮ್
ಹಾನಿಯಾದ ಕಾರುಗಳ ಚಾಲಕರು ಘಟನೆ ಸಂಬಂಧ ಯಾವುದೇ ದೂರು ನೀಡಿಲ್ಲ. ವಿಮೆ ಕ್ಲೈಂ ಮಾಡುವುದಾಗಿ ತಮ್ಮ ವಾಹನಗಳನ್ನು ತೆಗೆದುಕೊಂಡು ತೆರಳಿದರು. ಈವರೆಗೂ ಅಪಘಾತ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ ಎಂದು ಪೀಣ್ಯ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಕೆಲ ಕಾಲ ಟ್ರಾಫಿಕ್ ಜಾಮ್:
ಸರಣಿ ಅಪಘಾತ ಸಂಭವಿಸಿ ವಾಹನಗಳು ರಸ್ತೆಯಲ್ಲೇ ನಿಂತ ಪರಿಣಾಮ ಪೀಣ್ಯ ಮೇಲ್ಸೇತುವೆ ಬಳಿ ಕೆಲ ಕಾಲ ವಾಹನ ಸಂಚಾರ ದಟ್ಟಣೆ ಉಂಟಾಯಿತು. ಹಾನಿಯಾದ ವಾಹನಗಳ ಚಾಲಕರು ಎನ್‌ಎಚ್‌ಎಐ ಗಸ್ತು ವಾಹನ ಸಿಬ್ಬಂದಿ ಜತೆಗೆ ಕೆಲ ಕಾಲ ವಾಗ್ವಾದ ನಡೆಸಿದರು. ಬಳಿಕ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಹಾನಿಯಾದ ವಾಹನಗಳ ತೆರವುಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.