ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಧ್ಯೆ ಮಂಗಳೂರು ಹಾಗೂ ಶಿವಮೊಗ್ಗದಲ್ಲಿ ವೀರ ಸಾವರ್ಕರ್ ಫೋಟೋ ಗಲಾಟೆ ತೀವ್ರ ಭುಗಿಲೆದ್ದಿದೆ.
ಮಂಗಳೂರು, (ಆಗಸ್ಟ್.15): ನಿನ್ನೆ(ಆ.14) ಶಿವಮೊಗ್ಗದಲ್ಲಿ ವೀರ ಸಾವರ್ಕರ್ ಫೋಟೋ ಗಲಾಟೆ ನಡೆದಿದೆ, ಇದರ ಬೆನ್ನಲ್ಲೇ ಇದೀಗ ಮಂಗಳೂರಿನಲ್ಲೂ ಸಹ ಸಾವರ್ಕರ್ ಫೋಟೋ ಸಂಬಂಧ ಗಲಾಟೆಯಾಗಿದೆ.
ಇಂದು ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಗುರುಪುರ ಗ್ರಾಮ ಪಂಚಾಯತ್‌ನಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಗುರುಪುರ ಬೆಥನಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳು ನೃತ್ಯ ಮಾಡಿದರು. ನೃತ್ಯದ ವೇಳೆ ವಿದ್ಯಾರ್ಥಿಗಳು ಸಾವರ್ಕರ್ ಫೋಟೋ ಹಿಡಿದು ನೃತ್ಯ ಮಾಡಿದ್ದಾರೆ. ಈ ವೇಳೆ SDPI ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ಕಿರಿಕ್ ಮಾಡಿದ್ದಾರೆ. ಗ್ರಾ.ಪಂ. ಸಿಬ್ಬಂದಿ ಜೊತೆ SDPI ಮುಖಂಡರು ವಾಗ್ವಾದ ನಡೆಸಿದ್ದಾರೆ. ತಕ್ಷಣ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಶಿವಮೊಗ್ಗದಲ್ಲಿ ಮತ್ತೆ ಫೋಟೋ ಗಲಾಟೆ, ಲಾಠಿ ಚಾರ್ಜ್, 144 ಸೆಕ್ಷನ್ ಜಾರಿ
ಶಿವಮೊಗ್ಗದಲ್ಲೂ ಫೋಟೋ ಗಲಾಟೆ
ಯೆಸ್...ಶಿವಮೊಗ್ಗದಲ್ಲೂ ವೀರ ಸಾವರ್ಕರ್ ಫೋಟೋ ವಿವಾದ ತಾರಕಕ್ಕೇರಿದೆ. 75ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆ ಶಿವಮೊಗ್ಗದಲ್ಲಿ ಸಾವರ್ಕರ್ ಬ್ಯಾನರ್ ಹಾಕಲಾಗಿತ್ತು. ಆದ್ರೆ ಕಿಡಿಗೇಡಿಗಳು ಸಾವರ್ಕರ್ ಬ್ಯಾನರ್ ತೆರವುಗೊಳಿಸಿದ್ದಾರೆ. ಶಿವಮೊಗ್ಗದ ಅಮೀರ್ ಅಹ್ಮದ್ ವೃತ್ತದಲ್ಲಿ ಬ್ಯಾನರ್ ತೆರವು ಖಂಡಿಸಿ ಹಿಂದೂ ಪರ ಸಂಘಟನೆಗಳು ಪ್ರತಿಭಟನೆಗಳಿದು ಪರಸ್ಪರ ಘೋಷಣೆ ಕೂಗಿದ್ದಾರೆ. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಈ ವೇಳೆ ಪೊಲೀಸರು ಫ್ಲೆಕ್ಸ್ ಹಾಕುವುದನ್ನು ತಡೆದಿದ್ದಾರೆ. ಕಾರ್ಯಕರ್ತರು-ಪೊಲೀಸರ ನಡುವೆ ಮಾತಿನ ಚಕಮಕಿ ಆಗಿದೆ. ಲಘು ಲಾಠಿ ಪ್ರಹಾರ ಕೂಡ ಆಗಿದೆ. ಫ್ಲೆಕ್ಸ್ ಹಾಕಲು ಬಂದ ಕೆಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಅಮೀರ್ ಅಹ್ಮದ್ ವೃತ್ತದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಸ್ಥಳಕ್ಕೆ ಎಸ್ಪಿ ಲಕ್ಷ್ಮಿ ಪ್ರಸಾದ್ ಭೇಟಿ ನೀಡಿದ್ದಾರೆ. ಅಲ್ಲದೇ ಶಿವಮೊಗ್ಗ ನಗರದಾದ್ಯಂತ 144 ಸೆಕ್ಷನ್ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.