ಭಾರತದ ಇತಿಹಾಸಕ್ಕೆ ಶಿಲ್ಪಿಗಳ ಕೊಡುಗೆ ಅಪಾರ: ಗೃಹ ಸಚಿವ ಪರಮೇಶ್ವರ್

By Kannadaprabha News  |  First Published Nov 13, 2024, 11:42 PM IST

ವಿಶ್ವಕರ್ಮ ಸಮುದಾಯದವರ ಕಲಾ ಪರಂಪರೆಗೆ ಭವ್ಯವಾದ ಇತಿಹಾಸವಿದೆ. ಇವರ ವಿಗ್ರಹ ಕಲಾ ಪರಂಪರೆಯಿಂದ ನಮ್ಮ ಪ್ರಾಚೀನ ಇತಿಹಾಸ, ನಾಗರೀಕತೆಯನ್ನು ಗುರುತಿಸುವಂತಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. 


ತುಮಕೂರು (ನ.13): ವಿಶ್ವಕರ್ಮ ಸಮುದಾಯದವರ ಕಲಾ ಪರಂಪರೆಗೆ ಭವ್ಯವಾದ ಇತಿಹಾಸವಿದೆ. ಇವರ ವಿಗ್ರಹ ಕಲಾ ಪರಂಪರೆಯಿಂದ ನಮ್ಮ ಪ್ರಾಚೀನ ಇತಿಹಾಸ, ನಾಗರೀಕತೆಯನ್ನು ಗುರುತಿಸುವಂತಾಗಿದೆ. ಈ ಮೂಲಕ ಭಾರತದ ನಾಗರೀಕತೆ ಕಾಲದ ಬದಲಾವಣೆಯನ್ನು ವಿಶ್ವಕರ್ಮ ಸಮುದಾಯದ ಕಲಾಕೃತಿಗಳು ದಾಖಲಿಸುತ್ತಾ ಇತಿಹಾಸಕ್ಕೆ ದೊಡ್ಡ ಕೊಡುಗೆ ನೀಡಿವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ಚಿನ್ನ-ಬೆಳ್ಳಿ ಕೆಲಸಗಾರರ ಸಂಘ, ಗೋಲ್ಡ್ ಅಂಡ್ ಸಿಲ್ವರ್ ವಕರ್ಸ್ಜ ಅಸೋಸಿಯೇಷನ್ ಮಂಗಳವಾರ ನಗರದ ಡಾ.ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಏರ್ಪಡಿಸಿದ್ದ, ಸಂಘದ ರಜತ ಮಹೋತ್ಸವದ ಸಮ್ಮಿಲನ ಹಾಗೂ ಅಯೋಧ್ಯೆ ಶ್ರೀ ಬಾಲರಾಮನ ಮೂರ್ತಿಯ ಪ್ರಧಾನ ಶಿಲ್ಪಿ ಡಾ.ಅರುಣ್ ಯೋಗಿರಾಜ್ ಅವರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ದೇಶದ ವಿಶಿಷ್ಟ ಕಲೆ, ಪರಂಪರೆ, ಸಂಸ್ಕೃತಿಗೆ ವಿಶ್ವಕರ್ಮ ಸಮುದಾಯ ನೀಡಿದ ಕೊಡುಗೆ ಅಪಾರ ಎಂದು ಶ್ಲಾಘಿಸಿದರು. ಅಮರಶಿಲ್ಪಿ ಜಕಣಾಚಾರಿಯವರ ಕಲಾ ಕೆತ್ತನೆಯ ಬೇಲೂರು, ಹಳೆಬೀಡು ದೇವಾಲಯಗಳ ಕಲಾ ಕೃತಿಗಳು ವಿಶ್ವ ವಿಖ್ಯಾತಿಯಾಗಿವೆ. ಇಂತಹ ಕಲಾವೈಭವ ಕೊಡುಗೆ ನಾಡಿಗೆ ನೀಡಿದ ಅಮರ ಶಿಲ್ಪಿಯು ನಮ್ಮೆಲ್ಲರ ಹೆಮ್ಮೆ. ಈಗ ಅದೇ ಮಾದರಿಯಲ್ಲಿ ಅರುಣ್ ಯೋಗಿರಾಜ್ ಅವರು ಬಾಲರಾಮ ಮೂರ್ತಿ ನಿರ್ಮಿಸಿ ವಿಖ್ಯಾತರಾಗಿದ್ದಾರೆ. ಚಿನ್ನ ಬೆಳ್ಳಿ ಕೆಲಸಗಾರರಿಗೆ ಪೊಲೀಸರಿಂದ ಆಗುತ್ತಿದ್ದ ಕಿರುಕುಳ ತಪ್ಪಿಸಲಾಗಿದೆ. ತೊಂದರೆ ನೀಡದಂತೆ ಪೊಲೀಸರಿಗೆ ಸೂಚನೆ ನೀಡಿರುವುದಾಗಿ ಹೇಳಿದರು.

Latest Videos

ವಕ್ಫ್ ನೋಟಿಸ್‌ ಹಿಂಪಡೆವ ಆದೇಶ ಕಣ್ಣೊರೆಸುವ ತಂತ್ರ: ಪ್ರಲ್ಹಾದ್ ಜೋಶಿ ಆಕ್ರೋಶ

ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, ವಿಶ್ವಕರ್ಮ ಸಮಾಜದವರು ಸಂಘಟಿತರಾಗಬೇಕು, ಅಸೂಯೆಯಿಂದ ದೂರ ಉಳಿಯಬಾರದು, ರಾಜಕೀಯವಾಗಿ ಅಧಿಕಾರ ಪಡೆಯುವ ಹೋರಾಟವನ್ನೂ ರೂಢಿಸಿಕೊಳ್ಳಬೇಕು. ಕುಶಲಕರ್ಮಿಗಳಿಗೆ ಸರ್ಕಾರದಿಂದ ತರಬೇತಿ ಸಂಸ್ಥೆ ಆರಂಭಿಸಲು ತಾವು ಪ್ರಯತ್ನಿಸಿ, ಮುಂದಿನ ಬಜೆಟ್‌ನಲ್ಲಿ ಘೋಷಣೆ ಮಾಡಿಸುವ ಪ್ರಯತ್ನ ಮಾಡುವುದಾಗಿ ಹೇಳಿದರು.

ಸಮಾರಂಭದ ಸಾನಿಧ್ಯ ವಹಿಸಿದ್ದ ಅರಕಲಗೂಡು ಅರೇಮಾದನಹಳ್ಳಿ ಸುಜ್ಞಾನಪ್ರಭು ಪೀಠದ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಮಾತನಾಡಿ, ಶಿಲಾಯುಗದಿಂದ ಇಂದಿನವರೆಗೆ, ಅಂದಿನ ಜಕಣಾಚಾರಿಯಿಂದ ಇಂದಿನ ಅರುಣ್ ಯೋಗಿರಾಜ್‌ವರೆಗೆ ವಿಶ್ವಕರ್ಮ ಸಮಾಜದವರು ಈ ನೆಲದ ಸೇವೆ ಮಾಡುತ್ತಿದ್ದಾರೆ. ಎಲ್ಲಾ ಧರ್ಮಗಳ ಧಾರ್ಮಿಕ ಮಂದಿರ, ಮೂರ್ತಿಗಳ ನಿರ್ಮಾಣದಲ್ಲಿ ವಿಶ್ವಕರ್ಮ ಸಮಾಜ ನೆರವಾಗಿದೆ ಎಂಬುದು ಹೆಮ್ಮೆಯ ವಿಚಾರ. ಹಿಂದಿನ ರಾಜಮಹಾರಾಜರು ಶಿಲ್ಪಿಗಳಿಗೆ ಪ್ರೋತ್ಸಾಹ ನೀಡುತ್ತಿದ್ದಂತೆ ಈಗ ಸರ್ಕಾರಗಳು ಪ್ರೋತ್ಸಾಹ ನೀಡಬೇಕು. ಪಂಚಶಿಲ್ಪ ಸಂಬಂಧಿ ತರಬೇತಿ ಸಂಸ್ಥೆ ಸ್ಥಾಪನೆ ಮಾಡಬೇಕು. ಇದಕ್ಕಾಗಿ ಸರ್ಕಾರ 25 ಎಕರೆ ಜಾಗ ಹಾಗೂ ಅಗತ್ಯ ಸೌಲಭ್ಯ ಒದಗಿಸಬೇಕು. ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ 150 ಕೋಟಿ ರೂ.ಗಳ ಅನುದಾನ ನೀಡಬೇಕು ಎಂದು ಸ್ವಾಮೀಜಿ ಹೇಳಿದರು.

ಅಯೋಧ್ಯೆ ಬಾಲರಾಮ ಮೂರ್ತಿಯ ಪ್ರಧಾನ ಶಿಲ್ಪಿ ಡಾ.ಅರುಣ ಯೋಗಿರಾಜ್ ಅವರಿಗೆ ‘ಅಮರಶಿಲ್ಪಿ ಜಕಣಾಚಾರಿ’ ಬಿರುದು ನೀಡಿ ಸನ್ಮಾನಿಸಲಾಯಿತು. ನಂತರ ಮಾತನಾಡಿದ ಶಿಲ್ಪಿ ಡಾ.ಅರುಣ್, ಬಾಲರಾಮಮೂರ್ತಿ ನಿರ್ಮಾಣದಲ್ಲಿ ತಮಗೆ ಸಿಕ್ಕ ಅವಕಾಶವನ್ನು ಶ್ರದ್ಧೆಯಿಂದ ಮಾಡಿದೆ. ನಮ್ಮ ತಲೆಮಾರಿನಿಂದ ಮುಂದುವರೆದ 150 ವರ್ಷಗಳ ಮುಂದುವರೆದ ಜ್ಞಾನದಿಂದ ಈ ಕಾರ್ಯ ಸಾಧ್ಯವಾಯಿತು. ತಕ್ಕ ಪ್ರತಿಫಲವೂ ದೊರೆಯಿತು. ದೇವರ ಮೂರ್ತಿ ಕೆತ್ತನೆ ಮಾಡಿದ ಮಾತ್ರಕ್ಕೆ ನಾನು ದೇವಶಿಲ್ಪಿಯಾಗಲಾರೆ, ಸಾಮಾನ್ಯ ಶಿಲ್ಪಿಯಾಗಿ ನನ್ನ ಕೆಲಸ ಮುಂದುವರೆಸುತ್ತೇನೆ ಎಂದರು.

ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ರಾಮಕೃಷ್ಣ ವಿವೇಕಾನಂದ ಆಶ್ರಮದ ಡಾ. ಸ್ವಾಮಿ ವೀರೇಶಾನಂದ ಸರಸ್ವತಿ, ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಜಿಲ್ಲಾ ವಿಶ್ವಕರ್ಮ ಸೇವಾ ಸಮಿತಿ ಅಧ್ಯಕ್ಷ ಹೆಚ್.ಪಿ.ನಾಗರಾಜಾಚಾರ್, ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣ, ಶಿಲ್ಪಿ ಅರುಣ್ ಅವರ ತಾಯಿ ಸರಸ್ವತಿ, ವಿಶ್ವಕರ್ಮ ಸೇವಾ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಡಾ.ಎಂ.ಬಿ.ಉಮೇಶ್‌ಕುಮಾರ್, ಸೇರಿದಂತೆ ವಿವಿಧ ತಾಲ್ಲೂಕುಗಳ ಪದಾಧಿಕಾರಿಗಳು ಭಾಗವಹಿಸಿದ್ದರು. ವಿವಿಧ ಸಂಘಸಂಸ್ಥೆಗಳ ಮುಖಂಡರು ಶಿಲ್ಪಿ ಅರುಣ್ ಯೋಗಿರಾಜ್ ಅವರನ್ನು ಸನ್ಮಾನಿಸಿ ಗೌರವಿಸಿದರು. ಇದಕ್ಕೂ ಮೊದಲು ಚಿಕ್ಕಪೇಟೆಯ ಕಾಳಿಕಾಂಬ, ವಿಶ್ವಕರ್ಮ, ವೀರಬ್ರಹ್ಮೇಂದ್ರ ಸ್ವಾಮಿ, ಗಾಯತ್ರಿದೇವಿ ದೇವಾಲಯದಿಂದ ಡಾ.ಅರುಣ್ ಯೋಗಿರಾಜ್ ಅವರನ್ನು ಪೂರ್ಣಕುಂಭ ಕಳಸದೊಂದಿಗೆ, ಕಲಾ ಮೇಳಗಳ ಪ್ರದರ್ಶನದೊಂದಿಗೆ ಪ್ರಮುಖ ರಸ್ತೆಯಲ್ಲಿ ಮೆರವಣಿಗೆಯಲ್ಲಿ ಕರೆತರಲಾಯಿತು.

ಸೂಕ್ಷ್ಮ ಕಲಾ ಕೆತ್ತನೆಯ ಬೇಲೂರು, ಹಳೆಬೀಡು ದೇವಾಲಯಗಳ ಕಲಾ ಕೃತಿಗಳು ವಿಶ್ವ ವಿಖ್ಯಾತಿಯಾಗಿವೆ. ಅಮರಶಿಲ್ಪಿ ಜಕಣಾಚಾರಿಯವರು ಚೆನ್ನಕೇಶವ ಮೂರ್ತಿ ಕೆತ್ತನೆ ಮಾಡಿರುವ ನಗರ ಸಮೀಪದ ಕೈದಾಳ ದೇವಸ್ಥಾನವನ್ನು ಪ್ರವಾಸಿಕೇಂದ್ರವಾಗಿ ಅಭಿವೃದ್ಧಿ ಮಾಡಲಾಗುವುದು. 
-ಡಾ. ಜಿ. ಪರಮೇಶ್ವರ್‌, ಗೃಹ ಸಚಿವ.

ಜನವರಿಯೊಳಗೆ ಕಾಂಗ್ರೆಸ್ ಸರ್ಕಾರ ಪತನ: ಎಚ್.ಡಿ.ದೇವೇಗೌಡ

ಈಗಿನ ಯುವಜನ ಶಿಲ್ಪ ಕಲೆ ಬಗ್ಗೆ ಆಸಕ್ತಿ ತೋರುತ್ತಿಲ್ಲ, ನಮ್ಮ ಪರಂಪರೆಯನ್ನು ಉಳಿಸಿಬೆಳೆಸಲು ಕಲೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ಶಿಲ್ಪ ಕಲೆ ದೊಡ್ಡ ಗೌರವ ತಂದುಕೊಡುತ್ತದೆ. ಸತ್ತಮೇಲೂ ಬದುಕುವ ಅವಕಾಶ ಕಲ್ಪಿಸುತ್ತದೆ. ಈ ಕಲಾ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೂ ತೆಗೆದುಕೊಂಡುಹೋಗಬೇಕು ಎಂಬ ಆಶಯ ತಮಗಿದೆ.
- ಡಾ.ಅರುಣ ಯೋಗಿರಾಜ್, ಶಿಲ್ಪಿ.

click me!