ಭರತ ಹುಣ್ಣಿಮ ನಿಮಿತ್ತ ಸವದತ್ತಿಯ ರೇಣುಕಾ ಯಲ್ಲಮ್ಮ ದೇವಿ ಜಾತ್ರೆಗೆ ಹೋಗಿ ಆಗಮಿಸುತ್ತಿದ್ದ 35ಕ್ಕೂ ಅಧಿಕ ಯಾತ್ರಾರ್ಥಿಗಳು ವಿಷಾಹಾರ ಸೇವಿಸಿ ಅಸ್ವಸ್ಥರಾಗಿರುವ ಘಟನೆ ನಡೆದಿದೆ.
ಬೆಳಗಾವಿ (ಫೆ.06): ಭರತ ಹುಣ್ಣಿಮ ನಿಮಿತ್ತ ಸವದತ್ತಿಯ ರೇಣುಕಾ ಯಲ್ಲಮ್ಮ ದೇವಿ ಜಾತ್ರೆಗೆ ಹೋಗಿ ಆಗಮಿಸುತ್ತಿದ್ದ 35ಕ್ಕೂ ಅಧಿಕ ಯಾತ್ರಾರ್ಥಿಗಳು ವಿಷಾಹಾರ ಸೇವಿಸಿ ಅಸ್ವಸ್ಥರಾಗಿರುವ ಘಟನೆ ನಡೆದಿದೆ.
ಈ ಎಲ್ಲ ಯಾತ್ರಾರ್ಥಿಗಳನ್ನು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಮೊದೆಕೊಪ್ಪ ಗ್ರಾಮದವರು ಆಗಿದ್ದಾರೆ. ಸವದತ್ತಿಯ ರೇಣುಕಾ ಯಲ್ಲಮ್ಮದೇವಿ ಜಾತ್ರೆಯಿಂದ ಆಗಮಿಸುತ್ತಿದ್ದರು. ಒಂದೇ ವಾಹನದಲ್ಲಿ ಜಾತ್ರೆಗೆ ಹೋಗಿ, ಎರಡು ದಿನ ಜಾತ್ರೆಯನ್ನು ಮುಗಿಸಿಕೊಮಡು ಬರುವಾಗ ಯಾತ್ರಾರ್ಥಿಗಳಲ್ಲಿ ವಾಂತಿ ಬೇಧಿ ಕಾಣಿಸಿಕೊಂಡಿದೆ. ತಕ್ಷಣವೇ ಎಲ್ಲ ಅಸ್ವಸ್ಥರನ್ನು ಖಾನಾಪುರ ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನು ಘಟನೆಯ ಬಗ್ಗೆ ಮಾಹಿತಿ ತಿಳಿದ ತಕ್ಷಣವೇ ಶಾಸಕಿ ಅಂಜಲಿ ನಿಂಬಾಳ್ಕರ್ ಖಾನಾಪುರ ಆಸ್ಪತ್ರೆಗೆ ಭೇಟಿ ನೀಡಿ ಯಾತ್ರಾರ್ಥಿಗಳ ಆರೋಗ್ಯ ವಿಚಾರಣೆ ಮಾಡಿದ್ದಾರೆ. ಈ ವೇಳೆ ಎಲ್ಲರ ಆರೋಗ್ಯವೂ ಸುಧಾರಿಸುತ್ತಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಸಂಜೀವ್ ನಾಂದ್ರೆ ಮಾಹಿತಿ ನೀಡಿದ್ದಾರೆ.
ವಿಷಾಹಾರ ಸೇವನೆ: ವಾಂತಿ ಬೇಧಿಯಿಂದಾಗಿ ಆಸ್ಪತ್ರೆ ಸೇರಿದ ಹಾಸ್ಟೆಲ್ ವಿದ್ಯಾರ್ಥಿಗಳು
ಮೂರ್ನಾಲ್ಕು ಜನರಿಗೆ ಹೆಚ್ಚಿನ ಅಸ್ವಸ್ಥತೆ: ಇನ್ನು ಜಾತ್ರೆಗೆ ಹೋಗಿ ಬರುತ್ತಿದ್ದ ಯಾತ್ರಾರ್ಥಿಗಳು ಅಸ್ವಸ್ಥಗೊಳ್ಳುತ್ತಿದ್ದಂತೆ ಒಬ್ಬೊಬ್ಬರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಂತರ, ತಾಲೂಕು ವೈದ್ಯಾಧಿಕಾರಿಗಳು ಅಸ್ವಸ್ಥಗೊಂಡ ಹಾಗೂ ವಿಷಾಹಾರ ಸೇವನೆ ಮಾಡಿದ ಎಲ್ಲ ಭಕ್ತರನ್ನು ಕೂಡ ತಪಾಸಣೆಗೆ ಒಳಪಡಿಸಿದ್ದಾರೆ. ರಾತ್ರಿ ವೇಳೆ ಆಸ್ಪತ್ರೆಗೆ ದಾಖಲಾದ ಎಲ್ಲ ಯಾತ್ರಾರ್ಥಿಗಳು ಕೂಡ ಇಂದು ಮಧ್ಯಾಹ್ನದ ವೇಳೆ ಚೇತರಿಕೆ ಆಗಿದ್ದಾರೆ. ಈಗಾಗಲೇ ಬಹುತೇಕರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಇನ್ನು ಮೂರ್ನಾಲ್ಕು ಜನರಿಗೆ ಹೆಚ್ಚಿನ ಅಸ್ವಸ್ಥತೆ ಕಂಡುಬಂದಿದ್ದು, ಅವರನ್ನು ಆಸ್ಪತ್ರೆಯಲ್ಲಿ ಇರಿಸಿಕೊಂಡು ಚಿಕಿತ್ಸೆ ಮುಂದುವರೆಸಲಾಗಿದ್ದು, ಅವರ ಮೇಲೆ ನಿಗಾವಹಿಸಲಾಗಿದೆ. ಆದರೆ, ಇವರ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.