ಮೂಲ್ಕಿ ತಾಲೂಕಿನ ಕೆಮ್ರಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಂಜ ಕೊಯಿಕುಡೆ ಪ್ರದೇಶದಲ್ಲಿ ನಂದಿನಿ ನದಿಯಲ್ಲಿ ಉಪ್ಪು ನೀರು ಹರಿಯುವುದರಿಂದ ನದಿ ತೀರದ ಭಾಗದ ಕೃಷಿಕರು ಹಾಗೂ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಮೂಲ್ಕಿ (ಜೂ.25) ಮೂಲ್ಕಿ ತಾಲೂಕಿನ ಕೆಮ್ರಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಂಜ ಕೊಯಿಕುಡೆ ಪ್ರದೇಶದಲ್ಲಿ ನಂದಿನಿ ನದಿಯಲ್ಲಿ ಉಪ್ಪು ನೀರು ಹರಿಯುವುದರಿಂದ ನದಿ ತೀರದ ಭಾಗದ ಕೃಷಿಕರು ಹಾಗೂ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಈ ಭಾಗದ ನದಿ ತೀರದ ಸುಮಾರು 100 ಎಕರೆ ಭತ್ತದ ಕೃಷಿಗೆ ಉಪ್ಪು ನೀರಿನಿಂದ ಸಮಸ್ಯೆಯಾಗಿದೆ. ಮಳೆ ಇಲ್ಲದ ಕಾರಣ ನಂದಿನಿ ನದಿಯಲ್ಲಿ ನೀರು ಹರಿಯದೆ ಪಾವಂಜೆ ಮೂಲಕ ಸಸಿಹಿತ್ಲುವಿನಲ್ಲಿ ಪಡುಗಡಲನ್ನು ಸೇರುವ ನಂದಿನಿ ನದಿಯಲ್ಲಿ ಹಿಮ್ಮುಖವಾಗಿ ಸಮುದ್ರದ ನೀರು ಬರುತ್ತಿದ್ದು ಪಂಜ ಮೊಗಪಾಡಿವರೆಗೆ ಉಪ್ಪು ನೀರು ಹರಿಯುತ್ತಿದೆ. ಇದೀಗ ಮಳೆ ಬಂದು ನದಿಯಲ್ಲಿ ನೀರು ಹರಿದರೆ ನೀರಿನ ರಭಸಕ್ಕೆ ಗದ್ದೆಯಲ್ಲಿ ಗಟ್ಟಿಯಾಗಿ ನಿಂತ ಉಪ್ಪು ನೀರು ಹರಿಯುವುದಿಲ್ಲ. ಹೀಗಾಗಿ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ. ಮಾತ್ರವಲ್ಲದೇ ಪಕ್ಕದಲ್ಲೇ ಕೆಮ್ರಾಲ್ ಪಂಚಾಯಿಯಿತಿಯ ಕುಡಿಯುವ ನೀರಿನ ಬಾವಿ ಇದ್ದು ನೀರು ಸರಬರಾಜಿಗೂ ಸಮಸ್ಯೆಯಾಗಿದೆ.
ಶಹಾಪುರ ತಾಲೂಕಿನಾದ್ಯಂತ ಭಾರೀ ಮಳೆ: ಸಿಡಿಲು ಬಡಿದು 19 ಕುರಿಗಳು ಬಲಿ!
ಭತ್ತ ನಾಟಿಗೆ ಸಮಸ್ಯೆ: ಉಪ್ಪು ನೀರು ಹಿಮ್ಮುಖವಾಗಿ ಹರಿಯದಂತೆ ಚೇಳಾಯರಿನಲ್ಲಿ ಅಣೆಕಟ್ಟು ಇದ್ದು ಪ್ರತೀ ವರ್ಷ ಇದರ ಬಾಗಿಲನ್ನು ಜೂನ್ ಮೊದಲ ವಾರದಲ್ಲಿ ತೆಗೆಯಲಾಗುತ್ತದೆ. ಆದರೆ ಈ ಬಾರಿ ಮಳೆ ಇಲ್ಲದ ಕಾರಣ ಜೂನ್ 12ರ ವರೆಗೆ ಮಳೆಗಾಗಿ ಕಾದು ನಂತರ ಇದರ ಬಾಗಿಲನ್ನು ತೆಗೆಯಲಾಗಿತ್ತು. ಒಂದೇ ಬಾರಿ ಮಳೆ ಬಂದರೆ ಅಣೆಕಟ್ಟಿನ ಬಾಗಿಲು ತೆರೆಯುವುದು ಕಷ್ಟಎಂಬ ಕಾರಣಕ್ಕೆ ನದಿಯಲ್ಲಿ ನೀರು ಹರಿಯುವುದಕ್ಕೂ ಮೊದಲು ಇದರ ಬಾಗಿಲನ್ನು ತೆಗೆಯಲಾಗಿತ್ತು. ಇದೀಗ ಮಳೆ ಆರಂಭಗೊಂಡಿದ್ದು ಗದ್ದೆಯಲ್ಲಿ ಉಪ್ಪು ನೀರು ನಿಂತಿರುವುದರಿಂದ ನಾಟಿ ಕಾರ್ಯಕ್ಕೆ ಸಮಸ್ಯೆಯಾಗಿದೆ.
ಪಂಜ ಮೊಗಪಾಡಿ, ಕೊಯಿಕುಡೆ ಭಾಗದ ರೈತರು ಪ್ರತಿ ವರ್ಷ ಮೇ ತಿಂಗಳಲ್ಲಿ ಭತ್ತದ ಬಿತ್ತನೆ ಮಾಡುತ್ತಾರೆ. ಜೂನ್ ಪ್ರಥಮ ವಾರದಲ್ಲಿ ನಾಟಿ ಕಾರ್ಯ ಸಂಪೂರ್ಣ ಮುಗಿಯುತ್ತದೆ. ಭತ್ತದ ಸಸಿಗಳನ್ನು 30 ದಿನದ ಒಳಗೆ ನಾಟಿ ಮಾಡಬೇಕು. ಆದರೆ ಈ ಬಾರಿ ಮಳೆ ಕೊರತೆಯಿಂದಾಗಿ 40-50 ದಿನಗಳಾದರೂ ಇನ್ನೂ ನಾಟಿ ಕಾರ್ಯ ಆರಂಭವಾಗಿಲ್ಲ. ಒಂದೆಡೆ ಮಳೆ ಕೊರತೆಯಾದರೆ ಇನ್ನೊಂದಡೆ ಗದ್ದೆಯಲ್ಲಿ ನಿಂತಿರುವ ಉಪ್ಪು ನೀರಿನ ಸಮಸ್ಯೆ ಕೃಷಿಕರನ್ನು ಕಾಡುತ್ತಿದೆ ಎಂದು ಕೃಷಿಕ ಸತೀಶ್ ಶೆಟ್ಟಿಬೈಲಗುತ್ತು ಆತಂಕ ವ್ಯಕ್ತಪಡಿಸಿದ್ದರಾಎ.
ಕಳೆದ ಬಾರಿ ಅತಿವೃಷ್ಟಿ, ಈ ಬಾರಿ ಅನಾವೃಷ್ಟಿ, ಆತಂಕದಲ್ಲಿ ರೈತರು!