SIR ಮೂಲಕ ಮತದಾರರ ಹಕ್ಕು ಕಸಿಯಲು ಅವಕಾಶ ನೀಡಲ್ಲ: ಸಲೀಂ ಅಹ್ಮದ್ ಎಚ್ಚರಿಕೆ

Published : Jun 14, 2026, 10:48 PM IST
Saleem Ahmed

ಸಾರಾಂಶ

SIR: ಚುನಾವಣಾ ಆಯೋಗವು ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕುವ ಮೂಲಕ ಜನರ ಮೂಲಭೂತ ಹಕ್ಕು ಕಸಿಯುವ ಯಾವುದೇ ಪ್ರಯತ್ನವನ್ನು ಕಾಂಗ್ರೆಸ್ ಪಕ್ಷ ಸಹಿಸುವುದಿಲ್ಲ ಎಂದು ಸಲೀಂ ಅಹ್ಮದ್ ಎಚ್ಚರಿಕೆ ನೀಡಿದರು.

ಹಾವೇರಿ (ಜೂ.14): ಚುನಾವಣಾ ಆಯೋಗವು ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕುವ ಮೂಲಕ ಜನರ ಮೂಲಭೂತ ಹಕ್ಕು ಕಸಿಯುವ ಯಾವುದೇ ಪ್ರಯತ್ನವನ್ನು ಕಾಂಗ್ರೆಸ್ ಪಕ್ಷ ಸಹಿಸುವುದಿಲ್ಲ. ಅಗತ್ಯವಿದ್ದರೆ ಬೀದಿಗಿಳಿದು ಹೋರಾಟ ನಡೆಸಲು ಸಿದ್ಧವಿದ್ದೇವೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಎಚ್ಚರಿಕೆ ನೀಡಿದರು. ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಆಯೋಗವು ಮತದಾರರನ್ನು ಸೇರಿಸುವುದನ್ನು ಬಿಟ್ಟು ತೆಗೆಯುವ ಕೆಲಸ ಮಾಡುತ್ತಿದೆ. ಚುನಾವಣಾ ಆಯೋಗವು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದೆ ಎಂದು ಆರೋಪಿಸಿದರು.

ಈ ಹಿಂದೆ ಚುನಾವಣಾ ಆಯೋಗ ಮತದಾರರ ಪಟ್ಟಿಗೆ ಹೊಸ ಮತದಾರರನ್ನು ಸೇರ್ಪಡೆ ಮಾಡುವ ಕೆಲಸ ಮಾಡುತ್ತಿತ್ತು. ಆದರೆ ಈಗ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವ ಕೆಲಸ ನಡೆಯುತ್ತಿದ್ದು, ಕೇಂದ್ರ ಸರ್ಕಾರದ ಒತ್ತಡದಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಬಿಹಾರ ಹಾಗೂ ಪಶ್ಚಿಮ ಬಂಗಾಳ ಚುನಾವಣೆ ವೇಳೆ ಅನುಸರಿಸಿದ ಮಾದರಿಯನ್ನು ಕರ್ನಾಟಕದಲ್ಲೂ ಜಾರಿಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ ಕಾಂಗ್ರೆಸ್‌ನ ಬಿಎಲ್‌ಎಗಳು ಮತ್ತು ಕಾರ್ಯಕರ್ತರು ಅದಕ್ಕೆ ಅವಕಾಶ ನೀಡುವುದಿಲ್ಲ. ಬಿಹಾರ, ಪಶ್ಚಿಮ ಬಂಗಾಳದಂತೆ ಆಗಲು ಬಿಡುವುದಿಲ್ಲ ಎಂದು ಹೇಳಿದರು.

ಹಿಂದುಳಿದವರು, ಅಲ್ಪಸಂಖ್ಯಾತರು, ಎಸ್‌ಸಿ-ಎಸ್‌ಟಿಗಳ ಮತದಾನದ ಹಕ್ಕನ್ನು ಮೊಟಕುಗೊಳಿಸುವ ಪ್ರಯತ್ನ ಎಸ್‌ಐಆರ್‌ ಮೂಲಕ ನಡೆಯುತ್ತಿದೆ. ಮೋದಿ, ಅಮಿತ್ ಶಾ ಅವರ ನೇರ ಮಾರ್ಗದರ್ಶನದಲ್ಲಿ ಆಯೋಗ ಈ ರೀತಿಯ ಕೆಲಸ ಮಾಡುತ್ತಿದೆ. ಆದರೆ ಈ ಷಡ್ಯಂತ್ರ ರಾಜ್ಯದಲ್ಲಿ ನಡೆಯಲು ನಾವು ಬಿಡುವುದಿಲ್ಲ. ನಾವು ಈಗಾಗಲೇ ಎಚ್ಚೆತ್ತುಕೊಂಡಿದ್ದೇವೆ ಎಂದು ಹೇಳಿದರು.

ಯುವಕರ ಕಲ್ಯಾಣಕ್ಕೆ ರಾಜ್ಯ ಸರ್ಕಾರ ವಿಶೇಷ ಆದ್ಯತೆ ನೀಡಿದ್ದು, ಡಿ.ಕೆ. ಶಿವಕುಮಾರ ಸಿಎಂ ಆದ ಮೊದಲ ಸಂಪುಟದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಯೋಜನೆ ಜಾರಿಗೊಳಿಸಿದ್ದಾರೆ. ಭಾರತ ಜೋಡೋ ಯುವ ಸಂಘಗಳಿಗೆ ಅನುದಾನ ಸೇರಿದಂತೆ 10 ಸಾವಿರ ಯುವ ಸಂಘಗಳ ಸ್ಥಾಪನೆಗೆ ಉತ್ತೇಜನ ನೀಡಲಾಗಿದೆ. ಈಚೆಗೆ ನಡೆದ ನೀತಿ ಆಯೋಗದ ಸಭೆಯಲ್ಲಿ ಮುಖ್ಯಮಂತ್ರಿ ಶಿವಕುಮಾರ್ ಪಾಲ್ಗೊಂಡು ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಹೇಳಿದ್ದಾರೆ. ಕೇಂದ್ರ ಸರ್ಕಾರದ ಮುಂದೆ 18 ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದಾರೆ ಎಂದು ಹೇಳಿದರು.

ಎಸ್‌ಐಆರ್‌ಗೆ ದಾಖಲೆ ಸಿದ್ಧ ಮಾಡಿಟ್ಟುಕೊಳ್ಳಿ

ವಿಧಾನಪರಿಷತ್ ಸದಸ್ಯ, ಎಸ್ಐಆರ್‌ ಉಸ್ತುವಾರಿ ಎಸ್.ಎಫ್. ಜಕ್ಕಪ್ಪನವರ ಮಾತನಾಡಿ, ಬೆಳಗಾವಿ ವಿಭಾಗದ 65 ವಿಧಾನಸಭಾ ಕ್ಷೇತ್ರಗಳ ಜವಾಬ್ದಾರಿ ತಮ್ಮ ಮೇಲೆ ವಹಿಸಲಾಗಿದ್ದು, ಎಲ್ಲ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದೇನೆ. ಕಾನೂನಿನ ವ್ಯಾಪ್ತಿಯಲ್ಲೇ ಕಾಂಗ್ರೆಸ್ ಕಾರ್ಯನಿರ್ವಹಿಸುತ್ತಿದ್ದರೂ, ಮತದಾನದಂತಹ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ. ಕೆಲ ಸಮುದಾಯಗಳ ಮತವನ್ನು ಕಸಿದುಕೊಳ್ಳುವ ಪ್ರಯತ್ನವನ್ನು ನಾವು ಖಂಡಿಸುತ್ತೇವೆ. ಆದ್ದರಿಂದ ಮತದಾರರು ಪಾಸ್‌ಪೋರ್ಟ್, ಆಸ್ತಿ ದಾಖಲೆ, ರಹವಾಸಿ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ, ಜನ್ಮದಿನಾಂಕ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ಬಿಎಲ್‌ಒಗಳು ಮನೆಗಳಿಗೆ ಭೇಟಿ ನೀಡಿದಾಗ ನಮೂನೆಗಳನ್ನು ಭರ್ತಿ ಮಾಡದಿದ್ದರೆ ಮತದಾನ ಹಕ್ಕಿನಿಂದ ವಂಚಿತರಾಗುತ್ತಾರೆ. ಇದು ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ. ಆದ್ದರಿಂದ ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕು ಎಂದು ಮನವಿ ಮಾಡಿದರು.

PREV
Read more Articles on
click me!

Recommended Stories

Udupi: ರೈಲು ನಿಲ್ದಾಣದಲ್ಲಿ ಅಪರಿಚಿತನಾಗಿ ಸಿಕ್ಕಿದ್ದ ಯುವಕ, 9 ತಿಂಗಳ ಬಳಿಕ ಕುಟುಂಬ ಸೇರಿದ್ದು ಹೇಗೆ?
ಕೊಲ್ಲೂರು ಮೂಕಾಂಬಿಕಾ ದರ್ಶನ ಪಡೆದ ಅನಂತ್ ಅಂಬಾನಿ, ವಿಶೇಷ ಪೂಜೆ ಸಲ್ಲಿಸಿದ ಉದ್ಯಮಿ