ರೈಲ್ವೆ ಅಭಿವೃದ್ಧಿ ಕಾಮಗಾರಿಗೆ ₹9000 ಕೋಟಿ, 2 ತಿಂಗಳೊಳಗಾಗಿ ಹೊಸ ಟೆಂಡರ್‌ ಆಹ್ವಾನ

Published : Oct 13, 2026, 08:03 AM IST
V Somanna

ಸಾರಾಂಶ

ಕೇಂದ್ರ ಸರ್ಕಾರವು ಕೊಂಕಣ ರೈಲ್ವೆ ಮತ್ತು ರಾಜ್ಯದ ಇತರ ರೈಲ್ವೆ ಯೋಜನೆಗಳ ಅಭಿವೃದ್ಧಿಗೆ ಬೃಹತ್ ಅನುದಾನ ಮಂಜೂರು ಮಾಡಿದೆ. ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಕಾಮಗಾರಿಯ ಹಳೆಯ ಟೆಂಡರ್ ರದ್ದುಪಡಿಸಿ, ಶೀಘ್ರದಲ್ಲೇ ಹೊಸ ಟೆಂಡರ್ ಕರೆಯಲಾಗುವುದು ಎಂದು ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ಶಿವಮೊಗ್ಗ : ಕೊಂಕಣ ರೈಲ್ವೆಯ ಮುಂದುವರಿದ ಅಭಿವೃದ್ಧಿ ಕಾಮಗಾರಿಗಳಿಗೆ 9000 ಕೋಟಿ ರು.ಗಳನ್ನು ಮಂಜೂರು ಮಾಡುವುದರ ಜೊತೆಗೆ ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಹಲವು ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಮೂಲಕ ರಾಜ್ಯದ ರೈಲ್ವೇ ಕ್ಷೇತ್ರದ ವಿಕಾಸಕ್ಕಾಗಿ ಕೇಂದ್ರ ಸರ್ಕಾರವು ಐತಿಹಾಸಿಕ ನಿರ್ಣಯ ಕೈಗೊಂಡಿದೆ ಎಂದು ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.

 52000 ಕೋಟಿ ರು. ವೆಚ್ಚದಲ್ಲಿ ಹಲವು ಯೋಜನೆ

ನಗರದ ಪ್ರವಾಸಿ ಮಂದಿರದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೊಳಪಡುವ ರೈಲ್ವೆ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಭಾಗದ ರೈಲ್ವೆ ಅಭಿವೃದ್ಧಿ ಕಾಮಗಾರಿಗಳು, ಮೂಲಸೌಕರ್ಯ ಯೋಜನೆಗಳು ಹಾಗೂ ಪ್ರಯಾಣಿಕರಿಗೆ ಒದಗಿಸಲಾಗುತ್ತಿರುವ ಸೌಲಭ್ಯಗಳ ಪ್ರಗತಿಯನ್ನು ಪರಿಶೀಲಿಸಿರುವುದಾಗಿ ತಿಳಿಸಿದ ಅವರು, ರಾಜ್ಯದಲ್ಲಿ 52000 ಕೋಟಿ ರು. ವೆಚ್ಚದಲ್ಲಿ ಹಲವು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.

ಶೃಂಗೇರಿ-ಶಿವಮೊಗ್ಗ ಹೊಸ ರೈಲು ಮಾರ್ಗದ ಪ್ರಸ್ತಾವನೆ

ಮುಂದಿನ 25 ರಿಂದ 30ವರ್ಷಗಳ ಅವಧಿಯ ದೂರದೃಷ್ಟಿಯನ್ನಿಟ್ಟುಕೊಂಡು ರೈಲ್ವೆ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ ಎಂದ ಅವರು, ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲ್ವೇ ಯೋಜನೆಯ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರ್ಪಡೆಗೊಳಿಸಿ, ಅಂದಿನ ಟಂಡರ್‌ನ್ನು ರದ್ದುಗೊಳಿಸಿ, ಮುಂದಿನ 2 ತಿಂಗಳೊಳಗಾಗಿ ಹೊಸ ಟೆಂಡರ್‌ ಆಹ್ವಾನಿಸಿ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ಹೆಚ್ಚಿಸುವುದಾಗಿ ತಿಳಿಸಿದರು. ಶಿವಮೊಗ್ಗ-ಬೀರೂರು ರೈಲ್ವೆ ಮಾರ್ಗದ ಡಬ್ಲಿಂಗ್‌ಗೆ ಈಗಾಗಲೇ ಸರ್ವೆ ಕಾರ್ಯ ನಡೆಯುತ್ತಿದೆ. ಶೃಂಗೇರಿ-ಶಿವಮೊಗ್ಗ ಹೊಸ ರೈಲು ಮಾರ್ಗದ ಪ್ರಸ್ತಾವನೆಯೂ ಪ್ರಗತಿಯಲ್ಲಿದೆ ಎಂದರು.

ಕೇಂದ್ರ ಸರ್ಕಾರವು ಹೊಸ ರೈಲ್ವೆ ಯೋಜನೆಗಳಿಗೆ, ವಿಸ್ತೃತ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡುತ್ತಿದೆ. ವಿಶೇಷವಾಗಿ ಮಂಗಳೂರು, ಉಡುಪಿ, ಶಿವಮೊಗ್ಗ ಭಾಗಗಳ ರೈಲ್ವೆ ಸಂಪರ್ಕ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ಬೇಡಿಕೆಗಳನ್ನು ಪರಿಶೀಲಿಸಲಾಗಿದೆ. 2018ರಲ್ಲಿ ಅನುಮೋದಿತಗೊಂಡಿದ್ದ ಶಿವಮೊಗ್ಗ-ಶೃಂಗೇರಿ-ಮಂಗಳೂರು ರೈಲ್ವೇ ಮಾರ್ಗಕ್ಕೆ 2025ರಲ್ಲಿಯೇ ಅಂತಿಮ ಹಂತದ ಸರ್ವೇ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.

SIRನಲ್ಲಿ ಏನು ಲೋಪವಾಗಿದೆ ಕಾಂಗ್ರೆಸ್‌ ಉತ್ತರಿಸಲಿ: ಸೋಮಣ್ಣ

ಶಿವಮೊಗ್ಗ: ಎಸ್ಐಆರ್‌ನಲ್ಲಿ ಏನು ಅಪಚಾರವಾಗಿದೆ. ಏನು ಲೋಪವಾಗಿದೆ ಎಂಬುದಕ್ಕೆ ಮೊದಲು ಕಾಂಗ್ರೆಸ್ ಉತ್ತರ ಕೊಡಲಿ‌ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು. ಸೋಮವಾರ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಯಾರು ಅನ್ಯಾಯ ಮಾಡಿದ್ದಾರೆ, ಕೇಂದ್ರ ಸರ್ಕಾರದಿಂದ ಆಗಿರುವ ಅನ್ಯಾಯವಾದ್ರೂ ಏನು ? ಬಾಂಗ್ಲಾದೇಶದ, ಬೇರೆ ದೇಶದ ಅಕ್ರಮ ನುಸುಳುಕೋರರನ್ನ ಸೇರಿಸಬೇಕಾ? ಬೇರೆ ದೇಶದವರನ್ನು ವೋಟರ್ ಲೀಸ್ಟ್‌ಗೆ ಹೆಸರು ಸೇರಿಸಬೇಕಾ? ಎಂದು ಪ್ರಶ್ನಿಸಿದರು.

ಕಾಮಾಲೆ ಕಣ್ಣಿನವರಿಗೆಲ್ಲಾ ಕಾಣೋದೆಲ್ಲಾ ಹಳದೀನೆ, ಹಾಗಾಗಿದೆ ಕಾಂಗ್ರೆಸ್‌ನವರ ಪರಿಸ್ಥಿತಿ.‌ ಬೆಂಗಳೂರಿನಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಿದವರಿಗೆ ಗೊತ್ತಿದೆ. 3-4 ಕಡೆ ವೋಟರ್ ಲಿಸ್ಟ್‌ನಲ್ಲಿ ಹೆಸರು ಸೇರಿಸುವ ಬದಲು. ಒಂದೇ ಕಡೆ ಇರಲಿ ಎಂದು ಎಸ್ಐಆರ್ ಜಾರಿಗೊಳಿಸಲಾಗಿದೆ.‌‌ ಮೋದಿ ಸರ್ಕಾರ ಒಂದು ಕಡೆ ಎಡವಿದೆ ಎಂಬುದು ತೋರಿಸಲಿ‌‌ ಎಂದು ಕುಟುಕಿದರು.

PREV
Read more Articles on
click me!

Recommended Stories

ವೈದ್ಯಕೀಯ ಸಚಿವರೇ ಇಲ್ಲಿ ನೋಡಿ! ರಾಯಚೂರು ಟ್ರಾಮಾ ಸೆಂಟರ್ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ರೋಗಿಯ ತಲೆತುಂಬಾ ರಾಶಿ ರಾಶಿ ಹುಳು!
ಅ. 16ರಿಂದ 19ರವರೆಗೆ ಬೆಂಗಳೂರು ಸೇರಿದಂತೆ ಪ್ರಮುಖ ಸ್ಥಳಗಳಿಗೆ 400 ಹೆಚ್ಚುವರಿ ಬಸ್