ಲಂಚ ಪಡೆಯುತ್ತಿದ್ದ ವೇಳೆ ಕಂದಾಯ ನಿರೀಕ್ಷಕ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಚಿಕ್ಕಮಗಳೂರು ತಾಲೂಕಿನಲ್ಲಿ ನಡೆದಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಫೆ.25): ಪೌತಿ ಖಾತೆ ಮಾಡಿಕೊಡಲು ಲಂಚದ ಬೇಡಿಕೆ ಮುಂದಿಟ್ಟು ಹಣ ಪಡೆಯುತ್ತಿದ್ದ ವೇಳೆ ಕಂದಾಯ ನಿರೀಕ್ಷಕ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಚಿಕ್ಕಮಗಳೂರು ತಾಲ್ಲೂಕು ವ್ಯಾಪ್ತಿಯಲ್ಲಿ ನಡೆದಿದೆ.
ಚಿಕ್ಕಮಗಳೂರಿನ ಶಾಂತಿನಗರದ ಮಹಿಳೆಯೊಬ್ಬರು ತನ್ನ ತಂದೆಯ ಹೆಸರಿನಿಂದ ತನ್ನ ಹೆಸರಿಗೆ ಖಾತೆ ಮಾಡಿಕೊಡಲು ಲಂಚ ಬೇಡಿಕೆಯನ್ನು ಕಂದಾಯ ನಿರೀಕ್ಷಕ ಇಟ್ಟಿದ್ದರು.ಚಿಕ್ಕಮಗಳೂರು ತಾಲ್ಲೂಕು ವ್ಯಾಪ್ತಿಯ ಅವತಿ ಹೋಬಳಿ ಅರೆನೂರಿನಲ್ಲಿದ್ದ ಸುಮಾರು ಎರಡು ಎಕರೆ ಜಮೀನನ್ನು ತನ್ನ ಹೆಸರಿಗೆ ಖಾತೆ ಮಾಡಿ ಕೊಡುವಂತೆ ನಾಡಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಅವತಿ ಹೋಬಳಿ ಕಂದಾಯ ನಿರೀಕ್ಷಕ ಮಂಜುನಾಥ್ ಆರಂಭದಲ್ಲಿ 10,000 ರೂಗಳನ್ನು ಲಂಚದ ರೂಪದಲ್ಲಿ ಪಡೆದಿದ್ದು ನಂತರ 50,000 ರೂಗಳಿಗೆ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ.
CHIKKAMAGALURU: ಅಸ್ಸಾಂ ಕಾರ್ಮಿಕರಿಂದ ಸ್ಥಳೀಯ ಕಾರ್ಮಿಕರ ಮೇಲೆ ಹಲ್ಲೆ, ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ
ಈ ಬಗ್ಗೆ ಧ್ವನಿಮುದ್ರಿಕೆ ಸಹಿತ ಲೋಕಾಯುಕ್ತಕ್ಕೆ ಮಹಿಳೆ ದೂರು ಕೊಟ್ಟಿದ್ದು, ಮಂಜುನಾಥ್ ಇಂದು 10 ಸಾವಿರ ರೂಗಳನ್ನು ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಲೋಕಾಯುಕ್ತ ಡಿ ವೈ ಎಸ್ ಪಿ ತಿರುಮಲೇಶ್ ಹಾಗೂ ಪೊಲೀಸ್ ಇನ್ಸ್ ಪೆಕ್ಟರ್ ಗಳಾದ ಅನಿಲ್ ರಾಥೋಡ್, ಸಚಿನ್ ಕುಮಾರ್ ನೇತೃತ್ವದಲ್ಲಿ ಈ ದಾಳಿ ನಡೆದಿದೆ.ಆರೋಪಿಯನ್ನು ಬಂಧಿಸಿದ್ದು ಕಾನೂನಿನ ಪ್ರಕ್ರಿಯೆಗಳನ್ನು ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.