ಕೊಪ್ಪಳ: ಭುಗಿಲೆದ್ದ ಮಾಜಿ ಸಚಿವ ತಂಗಡಗಿ ಸಹೋದರನ ನಿವೇಶನ ವಿವಾದ

By Kannadaprabha News  |  First Published Nov 12, 2020, 11:55 AM IST

ಕಾರಟಗಿಯಲ್ಲಿ ನಾಗರಾಜ್‌ ತಂಗಡಗಿ ಒತ್ತುವರಿ ಮಾಡಿ ಬಂಗಲೆ ನಿರ್ಮಾಣ: ಆರೋಪ|ಸರ್ವೆ ನಡೆಸುತ್ತಿದ್ದ ಅಧಿಕಾರಿಗಳು ನಡೆಗೆ ಸ್ಥಳೀಯರ ಆಕ್ಷೇಪ| ಪುನರ್‌ ಸರ್ವೆ ಮಾಡಿದ ಅಧಿಕಾರಿಗಳು| 


ಕಾರಟಗಿ(ನ.12): ಮಾಜಿ ಸಚಿವ ಹಾಗೂ ಕೊಪ್ಪಳ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಶಿವರಾಜ್‌ ತಂಗಡಗಿ ಅವರ ಸಹೋದರನ ನಿವೇಶನಕ್ಕೆ ಸಂಬಂಧಿಸಿದ ವಿವಾದ ಹಿನ್ನೆಲೆ ಮತ್ತೆ ಭುಗಿಲೆದ್ದಿದೆ. ಸಚಿವರ ಸಹೋದರ ನಾಗರಾಜ ತಂಗಡಗಿ ಒತ್ತುವರಿ ಮಾಡಿಕೊಂಡು ಭವ್ಯ ಬಂಗಲೆ ನಿರ್ಮಿಸಿದ್ದಾರೆ ಎಂಬ ಆರೋಪ ಕುರಿತಂತೆ ಸ್ಥಳ ಪರಿಶೀಲನೆ ನಡೆಸಿ, ಸರ್ವೆ ಮಾಡುವಂತೆ ಜಿಲ್ಲಾಡಳಿತ ಆದೇಶ ನೀಡಿದೆ.

ಜಿಲ್ಲಾಧಿಕಾರಿ ಕಿಶೋರ್‌ ಸುರಳ್ಕರ್‌ ಅವರು ಸರ್ವೇ ನಂ. 321ರ ಭೂಮಿಯನ್ನು ಸರ್ವೆ ಮಾಡಿ ವರದಿ ನೀಡುವಂತೆ ನೀಡಿದ್ದ ಆದೇಶದ ಮೇರೆಗೆ ಗಂಗಾವತಿಯ ಭೂ ದಾಖಲೆಗಳ ಸಹಾಯಕ ನಿರ್ದೇಶಕ ಮತ್ತು ಅವರ ತಂಡ, ಕಾರಟಗಿ ತಹಸೀಲ್ದಾರ್‌ ಶಿವಶರಣಪ್ಪ ಕಟ್ಟೊಳ್ಳಿ ಮತ್ತು ಕಂದಾಯ ಅಧಿಕಾರಿಗಳ ತಂಡ ಹಾಗೂ ಕಾರಟಗಿ ಇಬ್ಬರು ಪಿಎಸ್‌ಐ, ಪೇದೆಗಳು ಮತ್ತು ಎರಡು ವ್ಯಾನ್‌ ಪೊಲೀಸರ ತಂಡದೊಂದಿಗೆ ಬುಧವಾರ ಪಟ್ಟಣದ ನವಲಿ ರಸ್ತೆಯಲ್ಲಿನ ಭೂಮಿಯನ್ನು ಪುನರ್‌ ಸರ್ವೆ ಮಾಡುವ ಕೆಲಸ ನಡೆಸಿದೆ.

Tap to resize

Latest Videos

ಅಧಿಕಾರಿಗಳ ತಂಡ ಪೊಲೀಸರ ಸಹಾಯದೊಂದಿಗೆ ಮನೆಗಳ ನಿರ್ಮಾಣಗೊಂಡ ಪ್ರದೇಶ ಸೇರಿದಂತೆ ಖಾಲಿ ಜಾಗ, ಭೂಮಿಗಳನ್ನು ಅಳತೆ ಮಾಡಲು ಪ್ರಾರಂಭವಾಗುತ್ತಿದ್ದಂತೆ ಆ ಪ್ರದೇಶದಲ್ಲಿನ ನಿವಾಸಿಗಳು ಪ್ರಾರಂಭದಲ್ಲಿ ಆತಂಕಕ್ಕೊಳಗಾದರು. ಗಾಬರಿಗೊಳಲಾದರು.

ಬಿಜೆಪಿಯಿಂದ ದ್ವೇಷ ರಾಜಕಾರಣ, ನಾವು ಕೈಗೆ ಬಳೆ ತೊಟ್ಟುಕೊಂಡಿಲ್ಲ ಎಂದ ತಂಗಡಗಿ

ಆಕ್ಷೇಪ:

ಅಧಿಕಾರಿಗಳ ತಂಡ ಸರ್ವೆ ಮಾಡುತ್ತಿದ್ದ ಮಾಹಿತಿ ತಿಳಿದ ಕೆಲವ ನಿವಾಸಿಗಳು, ಖಾಲಿ ಜಾಗದ ಮಾಲೀಕರು, ಎನ್‌ಎ ಮಾಡಿಸಿಕೊಂಡವರು ಸ್ಥಳಕ್ಕೆ ಆಗಮಿಸಿ ಅಧಿಕಾರಿಗಳ ಈ ನಡೆಯ ಕುರಿತು ಆಕ್ಷೇಪವೆತ್ತಿದರು. ಸರ್ವೆ ನಂ. 322ರ ಭೂಮಿಯಲ್ಲಿ ಸುಮಾರು 40ಕ್ಕೂ ಹೆಚ್ಚು ಜನರಿಗೆ ಸೇರಿದ ಆಸ್ತಿಗಳಿದ್ದು, ಈ ಪೈಕಿ ಬಹುತೇಕರಿಗೆ ಸರ್ವೆ ಮಾಡುವ ನೋಟಿಸ್‌ ಜಾರಿಯಾಗಿಲ್ಲ. ಭೂ ಕಾಯ್ದೆ ಪ್ರಕಾರ ಸರ್ವೆ ಮಾಡುವ ಮುನ್ನ ಕನಿಷ್ಠ 7 ದಿನಗಳ ಮುಂಚೆ ನೋಟಿಸ್‌ ವಿತರಿಸಬೇಕು. ಆದರೆ ಈ ಕೆಲಸವನ್ನು ಇಲ್ಲಿ ಮಾಡಿಲ್ಲ ಎಂದು ನಿವಾಸಿಗಳು, ಆಸ್ತಿ ಮಾಲೀಕರು ಕಂದಾಯ ಮತ್ತು ಭೂ ದಾಖಲೆಗಳ ಅಧಿಕಾರಿಗಳಿಗೆ ಆಕ್ಷೇಪ ವ್ಯಕ್ತಪಡಿಸಿ ಸರ್ವೆ ಮಾಡಲು ಅಡ್ಡಿಪಡಿಸಿದರು.

ಒಂದು ಹಂತದಲ್ಲಿ ಉದ್ಯಮಿ ಜಿ. ಯಂಕನಗೌಡ, ಸುರೇಂದ್ರಗೌಡ, ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ದೊಡ್ಡಪ್ಪ ದೇಸಾಯಿ ಅವರು ಅಧಿಕಾರಿಗಳಿಗೆ ನಮ್ಮ ಜಾಗ ಸರ್ವೆ ಮಾಡುವ ಕಾರಣ ತಿಳಿಸಿ, ನೋಟಿಸ್‌ ಎಲ್ಲಿ, ಯಾವ ರೂಪದಲ್ಲಿ ನೋಟಿಸ್‌ ಜಾರಿ ಮಾಡಿದ್ದಿರಾ ಎಂದು ಪ್ರಶ್ನಿಸಿದರು. ಇದೆಲ್ಲ ಎನ್‌ಎ ಮಾಡಿದ ಭೂಮಿ. ನಿಮಗೆ ಈ ಭೂಮಿಯನ್ನು ಸರ್ವೆ ಮಾಡುವ ಅಧಿಕಾರವಿಲ್ಲ ಎಂದು ಅಧಿಕಾರಿಗಳ ನಡೆಯ ಕುರಿತು ಪ್ರಶ್ನಿಸಿ ಆಕ್ಷೇಪ ವ್ಯಕ್ತಪಡಿಸಿದರು.

ಅಧಿಕಾರಿಗಳ ಸಾರ್ವಜನಿಕರಿಗೆ ಸೂಕ್ತ ಉತ್ತರ ನೀಡಲು ತಡವರಿಸಿದರು. ಅಸಲಿಗೆ ಇಲ್ಲಿ ಯಾವುದೋ ರಾಜಕೀಯ ಬೆರೆತು ವಿವಾದಕ್ಕೀಡು ಮಾಡಲಾಗುತ್ತಿದೆ. ಅಧಿಕಾರಿಗಳು ಒತ್ತಡಕ್ಕೆ ಬಿದ್ದು ಪುನರ್‌ ಸರ್ವೆ ಮಾಡಲು ಮುಂದಾಗಿದ್ದು ಸ್ಪಷ್ಟವಾಗಿ ಕಾಣುತ್ತದೆ ಎಂದು ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ದೊಡ್ಡಪ್ಪ ದೇಸಾಯಿ ಅಧಿಕಾರಿಗಳನ್ನು ತೀವ್ರ ತರಾಟೆ ತೆಗೆದುಕೊಂಡರು. ಅಧಿಕಾರಿಗಳು ಗೊಂದಲಕ್ಕೆ ಸಿಲುಕಿ ಆಕ್ಷೇಪಿತರ ಭೂಮಿಯನ್ನು ಬಿಟ್ಟು ಬೇರೆ ಬೇರೆ, ರಸ್ತೆ ಸೇರಿದಂತೆ ಒಟ್ಟು ಮೂರು ಸ್ಥಳಗಳನ್ನು ಸರ್ವೆ ಮಾಡಿದರು. ಕಾರಟಗಿ ಪಿಎಸ್‌ಐ ಅವಿನಾಶ ಕಾಂಬಳೆ, ಮಲ್ಲಪ್ಪ ಅವರು ಬಂದೋಬಸ್ತ್‌ ಏರ್ಪಡಿಸಿದ್ದರು.

ವಿವಾದ ಹಿನ್ನೆಲೆ

2013ರಲ್ಲಿ ಶಿವರಾಜ ತಂಗಡಗಿ ಸಚಿವರಾಗಿದ್ದ ಅವಧಿಯಲ್ಲಿ ಅವರಿಗೆ ಸೇರಿದ್ದ ನಿವೇಶನ ವಿವಾದ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈಗ ಅದೇ ವಿವಾದ ಮತ್ತೆ ಗರಿಗೆದರಿದೆ. ಕಾರಟಗಿ ಪಟ್ಟಣದ ಸರ್ವೆ ನಂ. 322/1/2 ರ 38 ಗುಂಟೆಯಲ್ಲಿ ಮಾಜಿ ಸಚಿವ ಶಿವರಾಜ ತಂಗಡಗಿ ಸಹೋದರ ನಾಗರಾಜ ತಂಗಡಗಿ ಹೆಸರಿನಲ್ಲಿ ನಿವೇಶನ ನಿರ್ಮಾಣ ಮಾಡಲಾಗಿದೆ. ಆ ನಿವೇಶನ ಅಕ್ರಮವಾಗಿ ಅತಿಕ್ರಮಿಸಿಕೊಂಡು ಭವ್ಯ ಬಂಗಲೆ ನಿರ್ಮಾಣ ಮಾಡಲಾಗಿದೆ ಎಂದು ಎಪಿಎಂಸಿ ಸದಸ್ಯ ರಾಮ್‌ಮೋಹನ್‌ ಆರೋಪ ಮಾಡಿ ತಂಗಡಗಿ ವಿರುದ್ದ ಆಗಿನ ಜಿಲ್ಲಾಧಿಕಾರಿ ಬಳಿ ದಾವೆ ಹೂಡಿದ್ದರು.

ಆಗಿನ ಜಿಲ್ಲಾಧಿಕಾರಿಯಾಗಿದ್ದ ತುಳಸಿ ಮದ್ದಿನೇನಿ ನಿವೇಶನ ತಂಗಡಗಿ ಕುಟುಂಬಕ್ಕೆ ಸೇರಿದ್ದಲ್ಲ ಎಂದು ಆದೇಶ ಕೂಡ ನೀಡಿದ್ದರು. ಜಿಲ್ಲಾಧಿಕಾರಿ ಆದೇಶದ ವಿರುದ್ಧ ತಂಗಡಗಿ ಕುಟುಂಬ ಧಾರವಾಡ ಹೈಕೋರ್ಟ್‌ಗೆ ಮೊರೆ ಹೋಗಿತ್ತು. ಈಗ ಹೈಕೋರ್ಟ್‌ ನಿವೇಶನ ಇತ್ಯರ್ಥವನ್ನು ಕೊಪ್ಪಳ ಜಿಲ್ಲಾಧಿಕಾರಿಗೆ ವರ್ಗಾಯಿಸಿ ಹೈಕೋರ್ಟ್‌ ಅದೇಶ ನೀಡಿತ್ತು.

ಈಗಿನ ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ್‌ ಕಿಶೋರ್‌ ಸೂರಳ್ಕರ್‌ ಅವರು ನಿವೇಶನ ಜಮೀನನ್ನು ಪರಿಶೀಲಿಸಿ ವರದಿ ನೀಡುವಂತೆ ಡಿಡಿಎಲ್‌ಆರ್‌ಗೆ ಆದೇಶ ನೀಡಿದ್ದಾರೆ. ಈಗ ತಂಗಡಗಿ ನಿವೇಶನದ ವಿವಾದ ಬಿಜೆಪಿ ಸರ್ಕಾರ ಬಂದ ಮೇಲೆ ಮತ್ತೆ ಗರಿಗೆದರಿದೆ.
 

click me!