ಬೆಳಗಾವಿ: ಎಸ್ಸೆಸ್ಸೆಂ ಬಂಧನಕ್ಕಾಗಿ ಸುವರ್ಣಸೌಧ ಮೆಟ್ಟಿಲು ಮೇಲೆ ರೇಣು ಧರಣಿ

By Kannadaprabha News  |  First Published Dec 27, 2022, 12:45 PM IST

ಎರಡು ಬಸ್‌ಗಳಲ್ಲಿ ದಾವಣಗೆರೆ ಜಿಲ್ಲೆಯಿಂದ ಬಂದಿದ್ದ ಕಾರ್ಯಕರ್ತರು, ಶಾಸಕ ರೇಣುಕಾಚಾರ್ಯ ನೇತೃತ್ವದಲ್ಲಿ ಮಲ್ಲಿಕಾರ್ಜುನ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ‘ಪ್ರಾಣಿಗಳನ್ನು ಹತ್ಯೆ ಮಾಡಿರುವ ಮಲ್ಲಿಕಾರ್ಜುನ ಅವರನ್ನು ಕೂಡಲೇ ಬಂಧಿಸಬೇಕು’ ಎಂದು ಫಲಕಗಳನ್ನು ಪ್ರದರ್ಶಿಸಿದರು. 


ಸುವರ್ಣಸೌಧ(ಡಿ.27): ವನ್ಯಮೃಗಗಳನ್ನು ತಮ್ಮ ಫಾರಂ ಹೌಸ್‌ನಲ್ಲಿ ಕೂಡಿಟ್ಟುಕೊಂಡ ಆರೋಪ ಹೊತ್ತಿರುವ ಕಾಂಗ್ರೆಸ್ಸಿನ ಮಾಜಿ ಶಾಸಕ ಎಸ್‌.ಎಸ್‌.ಮಲ್ಲಿಕಾರ್ಜುನ ಬಂಧನಕ್ಕೆ ಆಗ್ರಹಿಸಿ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಸುವರ್ಣಸೌಧದ ಪಶ್ಚಿಮ ಭಾಗದ ಪ್ರವೇಶ ದ್ವಾರದ ಮೆಟ್ಟಿಲುಗಳ ಮೇಲೆ ಸೋಮವಾರ ದಿಢೀರ್‌ ಪ್ರತಿಭಟನೆ ನಡೆಸಿದರು. 

ಎರಡು ಬಸ್‌ಗಳಲ್ಲಿ ದಾವಣಗೆರೆ ಜಿಲ್ಲೆಯಿಂದ ಬಂದಿದ್ದ ಕಾರ್ಯಕರ್ತರು, ಶಾಸಕ ರೇಣುಕಾಚಾರ್ಯ ನೇತೃತ್ವದಲ್ಲಿ ಮಲ್ಲಿಕಾರ್ಜುನ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ‘ಪ್ರಾಣಿಗಳನ್ನು ಹತ್ಯೆ ಮಾಡಿರುವ ಮಲ್ಲಿಕಾರ್ಜುನ ಅವರನ್ನು ಕೂಡಲೇ ಬಂಧಿಸಬೇಕು’ ಎಂದು ಫಲಕಗಳನ್ನು ಪ್ರದರ್ಶಿಸಿ ಆಗ್ರಹಿಸಿದರು. ಈ ಅನಿರೀಕ್ಷಿತ ಪ್ರತಿಭಟನೆಯಿಂದ ಕಕ್ಕಾಬಿಕ್ಕಿಯಾದ ಪೊಲೀಸರು, ಪ್ರತಿಭಟನಾಕಾರರು ಸುವರ್ಣಸೌಧ ಪ್ರವೇಶಿಸದಂತೆ ತಡೆದರು. . ತಕ್ಷಣ ಎಚ್ಚೆತ್ತ ಹಿರಿಯ ಅಧಿಕಾರಿಗಳು ಹೆಚ್ಚಿನ ಪೊಲೀಸರನ್ನು ಕರೆಸಿಕೊಂಡು ಪ್ರತಿಭಟನಾಕಾರರನ್ನು ಹೊರಹಾಕಿದರು.

Tap to resize

Latest Videos

BELAGAVI WINTER SESSION: ‘ಶೇ.40 ಕಮಿಷನ್‌’ ಚರ್ಚೆಗೆ ಸಭಾಧ್ಯಕ್ಷ ಕಾಗೇರಿ ಅನುಮತಿ

ಈ ವೇಳೆ ಸ್ಥಳದಲ್ಲೇ ಇದ್ದ ಬೆಳಗಾವಿ ನಗರ ಪೊಲೀಸ್‌ ಆಯುಕ್ತ ಡಾ.ಬೋರಲಿಂಗಯ್ಯ ಖುದ್ದು ಪ್ರತಿಭಟನಾಕಾರರನ್ನು ಚದುರಿಸಲು ಮುಂದಾದರು. ಈ ದಿಢೀರ್‌ ಪ್ರತಿಭಟನೆಯಿಂದ ಸುವರ್ಣಸೌಧದ ಪಶ್ಚಿಮ ಮೆಟ್ಟಿಲುಗಳ ಬಳಿ ಕೆಲ ಕಾಲ ಹೈಡ್ರಾಮಾ ಜರುಗಿತು. ತಕ್ಷಣ ಎಚ್ಚೆತ್ತ ಹಿರಿಯ ಅಧಿಕಾರಿಗಳು ಹೆಚ್ಚಿನ ಪೊಲೀಸರನ್ನು ಕರೆಸಿಕೊಂಡು ಪ್ರತಿಭಟನಾಕಾರರನ್ನು ಹೊರಹಾಕಿದರು. ಪಶ್ಚಿಮ ಭಾಗದ ಮೆಟ್ಟಿಲುಗಳ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿ ಭದ್ರತೆ ಹೆಚ್ಚಿಸಲಾಯಿತು. ಶಾಸಕ ರೇಣುಕಾಚಾರ್ಯ ನೇತೃತ್ವದಲ್ಲಿ ಕೆಲ ಕಾಲ ನಡೆದ ಈ ಹೈಡ್ರಾಮಾ ಅಂತ್ಯಗೊಂಡ ಕೆಲ ನಿಮಿಷಗಳ ಬಳಿಕ ಇದೇ ಪಶ್ಚಿಮ ಭಾಗದ ಮೆಟ್ಟಿಲುಗಳ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸುವರ್ಣಸೌಧ ಪ್ರವೇಶಿಸಿದರು.

ಒಳಗೆ ಬಿಟ್ಟಿದ್ದು ಯಾರು?:

ಸುವರ್ಣಸೌಧದ ಆವರಣದಲ್ಲಿ ಪ್ರತಿಭಟನೆ, ಧರಣಿ, ಮುಷ್ಕರ ನಡೆಸದಂತೆ ನಿರ್ಬಂಧಿಸಲಾಗಿದೆ. ಆದರೂ ದಾವಣಗೆರೆ ಜಿಲ್ಲೆಯಿಂದ ಬಂದಿದ್ದ ಎರಡು ಬಸ್‌ಗಳಷ್ಟುಬಿಜೆಪಿ ಕಾರ್ಯಕರ್ತರನ್ನು ಸುವರ್ಣಸೌಧದ ಪಶ್ಚಿಮ ಮೆಟ್ಟಿಲುಗಳ ಬಳಿ ಪ್ರತಿಭಟನೆ ನಡೆಸಲು ಅವಕಾಶ ನೀಡಿದವರು ಯಾರು ಎಂಬ ಪ್ರಶ್ನೆ ಎದುರಾಯಿತು. ಶಾಸಕ ರೇಣುಕಾಚಾರ್ಯ ಅವರು ಕಾನೂನು ಉಲ್ಲಂಘಿಸಿ ಪ್ರತಿಭಟನೆ ಮಾಡಿದ್ದಾರೆ. ಬಿಜೆಪಿಗೆ ಒಂದು ಕಾನೂನು ಇತರೆ ಪಕ್ಷಗಳಿಗೆ ಮತ್ತೊಂದು ಕಾನೂನು ಇದೆಯೇ ಎಂದು ಸುವರ್ಣಸೌಧದ ಪಡಸಾಲೆಯಲ್ಲಿ ಚರ್ಚೆಯಾಯಿತು.

ಗೃಹ ಸಚಿವರಿಗೆ ಮನವಿ

ಮಾಜಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಅವರು ದಾವಣಗೆರೆಯ ತಮ್ಮ ಫಾಮ್‌ರ್‍ಹೌಸ್‌ನಲ್ಲಿ ಅಕ್ರಮವಾಗಿ ವನ್ಯಜೀವಿ ಪ್ರಾಣಿಗಳನ್ನು ಸಂಗ್ರಹಿಸಿ ಇರಿಸಿಕೊಂಡಿದ್ದರ ಬಗ್ಗೆ ವರದಿಯಾಗಿದೆ. ಹೀಗಾಗಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಶಾಸಕ ರೇಣುಕಾಚಾರ್ಯ ನೇತೃತ್ವದಲ್ಲಿ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಈ ಪ್ರಕರಣದಲ್ಲಿ ಮಲ್ಲಿಕಾರ್ಜುನ ವಿರುದ್ಧ ಯಾವುದೇ ವಿಳಂಬವಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು. ಇದಕ್ಕೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದರು.

click me!