
ಬೆಂಗಳೂರು(ಮೇ.30): ಬಿಡಿಎಗೆ ಮೆತ್ತುಕೊಂಡಿರುವ ಭ್ರಷ್ಟಾಚಾರದ ಹಣೆಪಟ್ಟಿಯನ್ನು ಕಿತ್ತು ಹಾಕಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಆಸ್ಪದ ಕೊಡದೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕೆಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸೋಮವಾರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಪ್ರಾಧಿಕಾರದ ಯೋಜನೆಗಳು, ಕಾನೂನು ವ್ಯಾಜ್ಯಗಳು ಮತ್ತು ಸಮಸ್ಯೆಗಳ ಕುರಿತು ಚರ್ಚಿಸಿದರು.
ನಂತರ ಮಾತನಾಡಿದ ಅವರು, ಪ್ರಾಧಿಕಾರದಲ್ಲಿರುವ ಕಾನೂನು ವ್ಯಾಜ್ಯಗಳನ್ನು ಬಗೆಹರಿಸಬೇಕು. ಭೂಮಾಲೀಕರು ಮತ್ತು ರೈತರ ಸಮಸ್ಯೆಗಳನ್ನು ಇತ್ಯರ್ಥಗೊಳಿಸಿ ಬಡಾವಣೆಗಳ ರಚನೆ ಕಾರ್ಯವನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ನಿವೇಶನಗಳನ್ನು ಹಂಚಿಕೆ ಮಾಡುವ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕು ಎಂದು ಸೂಚಿಸಿದರು.
DK Shivakumar: 6 ತಿಂಗಳಲ್ಲಿ ಬಿಬಿಎಂಪಿ ಚುನಾವಣೆ: ಡಿಸಿಎಂ ಡಿಕೆಶಿ
ಯೋಜನೆಗೆ ಭೂಸ್ವಾಧೀನ ಪಡಿಸಿಕೊಳ್ಳುವ ಮೊದಲು ಸಮರ್ಪಕವಾಗಿ ಯೋಜನೆಯ ಕರಡು ರೂಪಿಸಬೇಕು. ಯಾವುದೇ ಕಾರಣಕ್ಕೂ ಡಿ ನೋಟಿಫಿಕೇಶನ್ ಮಾಡಬಾರದು. ಕೇವಲ ನೋಟಿಫಿಕೇಶನ್ ಹೊರಡಿಸಿದರೆ ಸಾಲದು, ಅದಕ್ಕೆ ತಕ್ಕಂತೆ ಕೆಲಸಗಳನ್ನು ಮಾಡಬೇಕು. ಜೊತೆಗೆ ಅಗತ್ಯವಿರುವ ಕಡೆಗಳಲ್ಲಿ ಪ್ರಾಧಿಕಾರವು ಮೇಲ್ಸೇತುವೆ ನಿರ್ಮಾಣ ಕೈಗೊಂಡು ಸಂಚಾರಿ ದಟ್ಟಣೆ ಕಡಿಮೆ ಮಾಡಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕು. ಅಗತ್ಯ ಸ್ಥಳಗಳಲ್ಲಿ ರಸ್ತೆ ಅಗಲೀಕರಣ ಮಾಡಲು ಕ್ರಮಕೈಗೊಳ್ಳಬೇಕೆಂದು ತಿಳಿಸಿದರು.
ಬಿಡಿಎ ಯೋಜನೆಗಳಿಗಾಗಿ ಜಮೀನು ಆಸ್ತಿ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡಬೇಕು. ಸಿಡಿಪಿ ಕೈಗೊಂಡ ಪ್ರಮುಖ ನಿರ್ಣಯಗಳನ್ನು ಶೀಘ್ರವಾಗಿ ಅನುಷ್ಠಾನಕ್ಕೆ ತರಬೇಕು. ಅನೇಕ ದಿನಗಳಿಂದ ನನೆಗುದಿಗೆ ಬಿದ್ದಿ ರುವ ಯೋಜನೆಗಳನ್ನು ಕೂಡಲೇ ಕೈಗೆತ್ತಿಕೊಳ್ಳಬೇಕು. 73.40 ಕಿ.ಮೀ ಉದ್ದದ ಪೆರಿಫೆರಲ್ ರಿಂಗ್ ರಸ್ತೆ ಯೋಜನೆಯನ್ನು ಶೀಘ್ರವೇ ಅನುಷ್ಠಾನಕ್ಕೆ ತರಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಭೆಯಲ್ಲಿ ಬಿಡಿಎ ಆಡಳಿತಾಧಿಕಾರಿ ರಾಕೇಶ್‌ಸಿಂಗ್, ಆಯುಕ್ತ ಕುಮಾರ್‌ನಾಯ್‌್ಕ ಸೇರಿದಂತೆ ಮತ್ತಿತರರ ಅಧಿಕಾರಿಗಳು ಉಪಸ್ಥಿತರಿದ್ದರು.