ತಪ್ಪದೇ ಇ-ಶ್ರಮ್‌ ಪೋರ್ಟಲ್‌ನಲ್ಲಿ ನೋಂದಾಯಿಸಿ

By Kannadaprabha NewsFirst Published Jan 8, 2023, 6:37 AM IST
Highlights

ಅಸಂಘಟಿತ ಕಾರ್ಮಿಕರು ತಪ್ಪದೇ ಇ-ಶ್ರಮ್‌ ಪೋರ್ಟಲ್‌ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕೆಂದು ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್‌ ಕರೆ ನೀಡಿದರು.

 ತುಮಕೂರು (ಕ.0 8 ):  ಅಸಂಘಟಿತ ಕಾರ್ಮಿಕರು ತಪ್ಪದೇ ಇ-ಶ್ರಮ್‌ ಪೋರ್ಟಲ್‌ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕೆಂದು ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್‌ ಕರೆ ನೀಡಿದರು.

ಕಾರ್ಮಿಕ ಇಲಾಖೆ,ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಹಾಗೂ ರಾಜ್ಯ ಅಸಂಘಟಿತ ಸಾಮಾಜಿಕ ಭದ್ರತಾ ಮಂಡಳಿಯ ಸಹಯೋಗದಲ್ಲಿ ಬೆಳ್ಳಾವಿ ಹೋಬಳಿ ಕುವೆಂಪು ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಕಟ್ಟಡ ಕಾರ್ಮಿಕರಿಗೆ ವಿವಿಧ ಯೋಜನೆ ಸೌಲಭ್ಯಗಳ ವಿತರಣೆ ಹಾಗೂ ಇ-ಶ್ರಮ್‌ ನೋಂದಣಿ ಪ್ರಚಾರ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು.

ಅಸಂಘಟಿತ ಕಾರ್ಮಿಕರು ಇ - ಶ್ರಮ್‌ ಪೋರ್ಟಲ್‌ಗೆ ಹೆಸರು ನೋಂದಾಯಿಸುವುದರೊಂದಿಗೆ. ಈವರೆಗೂ ನೋಂದಾಯಿಸಿಕೊಳ್ಳದೇ ಇರುವ ಕಾರ್ಮಿಕರಿಗೂ ನೋಂದಾಯಿಸಿಕೊಳ್ಳುವ ಬಗ್ಗೆ ಮಾಹಿತಿ ತಿಳಿಸಬೇಕು. ಕಟ್ಟಡ ಕಾರ್ಮಿಕರ ಮುಖಂಡರು ತಮ್ಮ ವ್ಯಾಪ್ತಿಯಲ್ಲಿರುವ ಕಾರ್ಮಿಕರಿಗೆ ಇ-ಶ್ರಮ್‌ ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಸುವ ಬಗ್ಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕನಾದ ನಂತರ ನುಡಿದಂತೆ ನಡೆದು ಪ್ರಾಮಾಣಿಕವಾಗಿ ಜನಸೇವೆ ಮಾಡಿರುವ ಬಗ್ಗೆ ತೃಪ್ತಿ ಇದೆ. ಗ್ರಾಮದ ಸುಮಾರು 50 ವರ್ಷಗಳ ಕನಸಾಗಿದ್ದ ಚೆನ್ನೇನಹಳ್ಳಿ ಗೊಲ್ಲರಹಟ್ಟಿ-ರಂಗನಪಾಳ್ಯ-ದೊಡ್ಡವೀರನಹಳ್ಳಿ ಸಂಪರ್ಕ ರಸ್ತೆ ನಿರ್ಮಾಣಕ್ಕಾಗಿ 1.25ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಅದೇ ರೀತಿ 30ಲಕ್ಷ ರು. ವೆಚ್ಚದಲ್ಲಿ ಕರ್ಲುಪಾಳ್ಯ ಗ್ರಾಮ, 40ಲಕ್ಷ ರು. ವೆಚ್ಚದಲ್ಲಿ ಬೆಳ್ಳಾವಿ ರಾಜಬೀದಿ ಸೇರಿದಂತೆ ಬೆಳ್ಳಾವಿ ಹೋಬಳಿಯ ವಿವಿಧ ರಸ್ತೆ ನಿರ್ಮಾಣಕ್ಕಾಗಿ ತಲಾ 6ಲಕ್ಷ ರು.ನಂತೆ ಒಟ್ಟು 24 ಲಕ್ಷ ರೂ.ಗಳನ್ನು ವೆಚ್ಚ ಮಾಡಲಾಗುತ್ತಿದೆ. ಮುಂಬರುವ ಮಾಚ್‌ರ್‍ ಮಾಹೆಯಲ್ಲಿ ವಸಂತನರಸಾಪುರದಲ್ಲಿ ಸ್ವಂತ ಗಾರ್ಮೆಂಟ್‌ ಅನ್ನು ತೆರೆಯಲು ಉದ್ದೇಶಿಸಿದ್ದೇನೆ. ಇದರಿಂದ ಬೆಳ್ಳಾವಿ ಭಾಗದ 7-8 ಸಾವಿರ ಮಂದಿಗೆ ಉದ್ಯೋಗ ದೊರೆಯಲಿದೆ. ಗಾರ್ಮೆಂಟ್‌ನಲ್ಲಿ ಉದ್ಯೋಗಕ್ಕಾಗಿ ಅರ್ಜಿ ಆಹ್ವಾನಿಸಿದಾಗ ಅರ್ಹ ಅಭ್ಯರ್ಥಿಗಳು ಸಲ್ಲಿಸಬೇಕೆಂದು ಮನವಿ ಮಾಡಿದರು.

ಜಿಲ್ಲಾ ಕಾರ್ಮಿಕ ಅಧಿಕಾರಿ ಹೆಚ್‌.ಎನ್‌. ರಮೇಶ್‌ ಮಾತನಾಡಿ, ಕೇಂದ್ರ ಸರ್ಕಾರವು ಅಸಂಘಟಿತ ಕಾರ್ಮಿಕರ ದತ್ತಾಂಶ ಸಂಗ್ರಹಿಸಲು ವಿಶೇಷವಾಗಿ ಇ-ಶ್ರಮ್‌ ಪೋರ್ಟಲ್‌ ಅನ್ನು ಅಭಿವೃದ್ಧಿಪಡಿಸಿದೆ. ಅಸಂಘಟಿತ ಕಾರ್ಮಿಕರು ಈ ಪೋರ್ಟಲ್‌ನ ಸದುಪಯೋಗ ಪಡೆಯಬೇಕು. 15,000 ರು.ಗಳಿಗಿಂತ ಕಡಿಮೆ ವೇತನ, ಇಎಸ್‌ಐ/ಪಿಎಫ್‌ ವ್ಯಾಪ್ತಿಗೊಳಪಡದ, ಆದಾಯ ತೆರಿಗೆ ಪಾವತಿಸದೇ ಇರುವ ಫಲಾನುಭವಿಗಳನ್ನು ಅಸಂಘಟಿತ ಕಾರ್ಮಿಕರ ವ್ಯಾಪ್ತಿಗೊಳಪಡುತ್ತಾರೆ. ಗಾರೆ ಕೆಲಸ, ಬಡಗಿ, ನೇಕಾರಿಕೆ, ಹೊಲಿಗೆ, ಕುಂಬಾರಿಕೆ, ಬೀಡಿ ಕಟ್ಟುವುದು ಸೇರಿದಂತೆ ಹಲವಾರು ಅಸಂಘಟಿತ ಕಾರ್ಮಿಕರಿಗೆ ಭದ್ರತಾ ಸೌಲಭ್ಯ, ವೈದ್ಯಕೀಯ, ಶೈಕ್ಷಣಿಕ ಸೌಲಭ್ಯಗಳು ಇರುವುದಿಲ್ಲ. ಇಂತಹವರಿಗೆ ಇ-ಶ್ರಮ್‌ ಯೋಜನೆಯಡಿ ವೈದ್ಯಕೀಯ ಶೈಕ್ಷಣಿಕ ಸೌಲಭ್ಯದೊಂದಿಗೆ ಮಹಿಳೆಯರಿಗೆ ಹೆರಿಗೆ ಸೌಲಭ್ಯ, ಅಪಘಾತ ಸಂಭವಿಸಿದರೆ ಪರಿಹಾರ, 60 ವರ್ಷ ಮೇಲ್ಪಟ್ಟವರಿಗೆ ಪಿಂಚಣಿ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿ ವತಿಯಿಂದ ಒದಗಿಸುತ್ತಾ ಬರಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಅಧ್ಯಯನಕ್ಕೆ ಅನುಕೂಲವಾಗುವಂತಹ ಸಾಮಗ್ರಿಗಳ ಕಿಟ್‌ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಬೆಳ್ಳಾವಿ ಗ್ರಾ.ಪಂ ಸದಸ್ಯರು ಕುವೆಂಪು ಶಾಲೆಯ ಪ್ರಾಂಶುಪಾಲ ಸಿದ್ದಲಿಂಗಯ್ಯ, ಜೆ.ಡಿ.ಎಸ್‌.ಪಕ್ಷದ ಮುಖಂಡರಾದ ಕೆಂಪನರಸಣ್ಣ, ರವಿ, ಮಹೇಶ್‌, ಬಾಬು, ಮಲ್ಲಿಕಾರ್ಜುನ, ದಾಸ್‌, ಅಂಜನಮೂರ್ತಿ, ವಿಜಯೇಂದ್ರ, ಅನಿಲ್‌, ಚಂದ್ರು, ಲಿಂಗರಾಜು, ವಿನಯ್‌ ಸೇರಿದಂತೆ ವಸಂತಮ್ಮ, ಪುಟ್ಟಕ್ಕ ಮತ್ತಿತರರು ಇದ್ದರು.

click me!