ಪ್ರಮುಖ ರಾಜಕೀಯ ನಾಯಕರಿಂದ ರಕ್ಷಿತಾರಣ್ಯ ಒತ್ತುವರಿ: ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ ರವಿಚಂಗಪ್ಪ

Published : Dec 28, 2023, 02:00 AM IST
ಪ್ರಮುಖ ರಾಜಕೀಯ ನಾಯಕರಿಂದ ರಕ್ಷಿತಾರಣ್ಯ ಒತ್ತುವರಿ: ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ ರವಿಚಂಗಪ್ಪ

ಸಾರಾಂಶ

ಮಾಜಿ ಸ್ಪೀಕರ್ ಮತ್ತು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರು ಸೇರಿದಂತೆ ಹಲವು ಪ್ರಮುಖರು ಸಂರಕ್ಷಿತಾ ಅರಣ್ಯವನ್ನೇ ಒತ್ತುವರಿ ಮಾಡಿದ್ದು ಅದನ್ನು ರಕ್ಷಿಸುವಂತೆ ಆಗ್ರಹಿಸಿ ಮಡಿಕೇರಿಯ ಸಾಮಾಜಿಕ ಹೋರಾಟಗಾರ ರವಿಚಂಗಪ್ಪ ಎಂಬುವರು ಸುಪ್ರೀಂ ಕೋರ್ಟ್ ಮೆಟ್ಟಿಲ್ಲೇರಿದ್ದಾರೆ. 

ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಡಿ.28): ಮಾಜಿ ಸ್ಪೀಕರ್ ಮತ್ತು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರು ಸೇರಿದಂತೆ ಹಲವು ಪ್ರಮುಖರು ಸಂರಕ್ಷಿತಾ ಅರಣ್ಯವನ್ನೇ ಒತ್ತುವರಿ ಮಾಡಿದ್ದು ಅದನ್ನು ರಕ್ಷಿಸುವಂತೆ ಆಗ್ರಹಿಸಿ ಮಡಿಕೇರಿಯ ಸಾಮಾಜಿಕ ಹೋರಾಟಗಾರ ರವಿಚಂಗಪ್ಪ ಎಂಬುವರು ಸುಪ್ರೀಂ ಕೋರ್ಟ್ ಮೆಟ್ಟಿಲ್ಲೇರಿದ್ದಾರೆ. ಹೌದು ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯ ಪೂರ್ವ ಸಂರಕ್ಷಿತಾ ಅರಣ್ಯ 282.55 ಎಕರೆ ಪ್ರದೇಶದಲ್ಲಿ ಸಾಕಷ್ಟು ಅರಣ್ಯವನ್ನು ಕೆಲವು ಪ್ರಮುಖ ರಾಜಕೀಯ ನಾಯಕರಿಂದಲೇ ಒತ್ತುವರಿಯಾಗಿದೆ ಎಂದು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಸುಪ್ರೀಂಕೋರ್ಟ್ ಇದೀಗ ಕೊಡಗು ಅರಣ್ಯ ಇಲಾಖೆಗೆ ಪೂರ್ವ ಸಂರಕ್ಷಿತಾರಣ್ಯ ಪ್ರದೇಶವನ್ನು ಪುನಃ ಸರ್ವೆ ಮಾಡಿ 4 ವಾರಗಳಲ್ಲಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ. 

ಸುಪ್ರೀಂ ಕೋರ್ಟ್ ಸೂಚಿಸುತ್ತಿದ್ದಂತೆ ಅರಣ್ಯ ಇಲಾಖೆ ಕಾರ್ಯಪ್ರವೃತವಾಗಿದ್ದು ಈ ಅರಣ್ಯ ಪ್ರದೇಶದ ಗಡಿಯನ್ನು ಸರ್ವೆ ಮಾಡಿ ಗಡಿ ಗುರುತ್ತಿಸುವ ಕೆಲಸ ಮಾಡುತ್ತಿದೆ. ಈ ವೇಳೆ ವಿರಾಜಪೇಟೆ ಮಾಜಿ ಶಾಸಕ, ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಹಾಗೂ ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹರೀಶ್ ಸೇರಿದಂತೆ ಪ್ರಮುಖರ ಮನೆಗಳ ಮುಂಭಾಗದಲ್ಲೂ ಅರಣ್ಯ ಇಲಾಖೆ ಸರ್ವೆ ಮಾಡಿ ಗುರುತ್ತು ಮಾಡಿ ಹೋಗಿದೆ. ಇನ್ನು ಸರ್ವೆ ಮಾಡುವ ಸಂದರ್ಭ ಇಲ್ಲಿನ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಅರಣ್ಯವನ್ನೇ ಒತ್ತುವರಿ ಮಾಡಿಕೊಂಡಿರುವವರಿಂದ ಅರಣ್ಯ ತೆರವು ಮಾಡಿಸಿ. ಅದುಬಿಟ್ಟು ಡಿನೋಟಿಫೈ ಆಗಿರುವ ಜಾಗಕ್ಕೆ ಬಂದು ಸರ್ವೆ ಮಾಡುವುದು ಏಕೆ ಎಂದು ಅಸಮಾಧಾನ ಹೊರಹಾಕಿದರು. 

ಶಾಸಕ ಬಸನಗೌಡ ಯತ್ನಾಳ ಮೂರನೇ ಟಿಪ್ಪು: ಸಚಿವ ಎಂ.ಬಿ.ಪಾಟೀಲ್‌

ಈ ಸಂದರ್ಭ ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹರೀಶ್ ಮಾತನಾಡಿ 1922 ರಲ್ಲಿಯೇ ಇದು ಡಿನೊಟಿಫೈ ಆಗಿ ಗ್ರಾಮ ಎಂದು ಈಗಾಗಲೇ ನಕ್ಷೆಯಲ್ಲಿ ಇದೆ. ಡಿನೋಟಿಫಿಕೇಷನ್ ಆಗಿರುವ 36 ಎಕರೆ ಪ್ರದೇಶದಲ್ಲಿ ಅರಣ್ಯವಿಲ್ಲ. ಆದ್ದರಿಂದಲೇ ರಾಜ್ಯ ಉಚ್ಛನ್ಯಾಯಾಲಯ ಪ್ರಕರಣವನ್ನು ವಜಾ ಮಾಡಿತ್ತು. ಇಷ್ಟಾದರೂ ರವಿಚಂಗಪ್ಪ ಅವರು ಉದ್ದೇಶ ಪೂರ್ವಕವಾಗಿ ವಿನಾಕಾರಣ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಆದರೆ ಈ ಹಿಂದಿನಂತೆ ಸರ್ವೆ ಮಾಡಿ ಅಧಿಕಾರಿಗಳು ಸುಪ್ರೀಂಗೆ ವರದಿ ನೀಡಲಿದ್ದಾರೆ. ಹೀಗಾಗಿ ನಮಗೆ ಯಾವುದೇ ಭಯವಿಲ್ಲ ಎಂದಿದ್ದಾರೆ. 

ಆದರೆ ರವಿಚಂಗಪ್ಪ ಅವರು ಮಾತ್ರ ಹೈಕೋರ್ಟಿನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನಮ್ಮ ವಕೀಲರು ಕೊನೆಯ ಹಂತದಲ್ಲಿ ನಿರಂತರವಾಗಿ 6 ಬಾರಿ ನ್ಯಾಯಾಲಯಕ್ಕೆ ಹಾಜರಾಗಲೇ ಇಲ್ಲ. ಇದರಿಂದಾಗಿ ನ್ಯಾಯಾಲಯ ಪ್ರಕರಣವನ್ನು ವಜಾಗೊಳಿಸಿತು. ಹೀಗಾಗಿ ಅನಿವಾರ್ಯವಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರಬೇಕಾಯಿತು. ನಾವು ಯಾರ ವಿರುದ್ಧವೂ ಉದ್ದೇಶ ಪೂರ್ವಕವಾಗಿ ನ್ಯಾಯಾಲಯದ ಮೆಟ್ಟಿಲೇರಿಲ್ಲ. ಪ್ರಕರಣದಲ್ಲಿ ಇರುವ ಯಾರೂ ನಮಗೆ ಸಂಬಂಧಿಸಿಲ್ಲ. ನಮಗೆ ಅರಣ್ಯ ಉಳಿಸಬೇಕಾಗಿರುವುದು ಅಷ್ಟೇ ನಮ್ಮ ಉದ್ದೇಶ ಎಂದಿದ್ದಾರೆ. 

ಸಿಎಂ ಸಿದ್ದರಾಮಯ್ಯರಿಂದ ಮುಸ್ಲಿಂ ತುಷ್ಟೀಕರಣ: ಎಂ.ಪಿ.ರೇಣುಕಾಚಾರ್ಯ ಆರೋಪ

ಹೆಸರನ್ನು ಹೇಳಲು ಇಚ್ಛಿಸದ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಈಗ ಮನೆಗಳನ್ನು ನಿರ್ಮಿಸಿಕೊಂಡಿರುವ ಪ್ರದೇಶದಲ್ಲಿ ಒಂದಷ್ಟು ಜಾಗ ಅರಣ್ಯದ ಭೂಮಿ ಇರುವ ಸಾಧ್ಯತೆ ಇದೆ. ಸರ್ವೆ ಮಾಡಲಾಗುತ್ತಿದ್ದು ನೈಜ ವರದಿಯನ್ನು ಕೋರ್ಟ್ ನಿರ್ದೇಶನದಂತೆ ವರದಿ ಸಲ್ಲಿಸುತ್ತೇವೆ ಎಂದಿದ್ದಾರೆ. ಒಟ್ಟಿನಲ್ಲಿ ಸಂರಕ್ಷಿತಾ ಅರಣ್ಯ ಪ್ರದೇಶ ನಿಜವಾಗಿಯೂ ಡಿನೋಟಿಫೈ ಆಗಿದೆಯಾ ಅಥವಾ ಡಿನೋಟಿಫೈ ಆಗಿರುವುದು ಸ್ವಲ್ಪವೇ ಜಾಗವಾಗಿದ್ದರೂ ಒಂದಷ್ಟು ಜಾಗವನ್ನು ಅತಿಕ್ರಮಣ ಮಾಡಿಕೊಳ್ಳಲಾಗಿದೆ ಎನ್ನುವುದು ಸುಪ್ರೀಂಕೋರ್ಟ್ ತೀರ್ಪಿನ ಬಳಿಕವೇ ಗೊತ್ತಾಗಬೇಕಾಗಿದೆ.

PREV
Read more Articles on
click me!

Recommended Stories

ಜಾಸ್ತಿ ಬೇಡ ಎರಡೇ ಮಕ್ಕಳನ್ನಷ್ಟೇ ಮಾಡಿಕೊಳ್ಳಿ: ನವದಂಪತಿಗಳಿಗೆ ಸಿಎಂ ಸಲಹೆ
ಇಂದು ಲೋಕಸಭೆಯಲ್ಲಿ ‘ವಂದೇ ಮಾತರಂ’ ಚರ್ಚೆ: ಮೋದಿ ಚಾಲನೆ