'20ರ ನಂತರ ಕೇಂದ್ರದಿಂದ 3 ತಿಂಗಳ ಪಡಿತರ'

By Kannadaprabha NewsFirst Published Apr 8, 2020, 3:31 PM IST
Highlights

ಇನ್ನೆರಡು ದಿನಗಳಲ್ಲಿ ರಾಜ್ಯದ ಬಿಪಿಎಲ್‌ ಕಾರ್ಡ್‌ದಾರರಿಗೆ 2 ತಿಂಗಳ ಪಡಿತರ ವಿತರಣೆ ಸಂಪೂರ್ಣಗೊಳ್ಳಲಿದ್ದು. ಈ ತಿಂಗಳ 20 ರ ನಂತರ ಕೇಂದ್ರ ಸರ್ಕಾರವು ನೀಡಲಿರುವ 3 ತಿಂಗಳ ಪಡಿತರ ವಿತರಣೆ ಯಾಗಲಿದೆ ಎಂದು ಆಹಾರ ಸಚಿವ ಕೆ.ಗೋಪಾಲಯ್ಯ ಹೇಳಿದ್ದಾರೆ.

ಕೋಲಾರ(ಏ.08): ಇನ್ನೆರಡು ದಿನಗಳಲ್ಲಿ ರಾಜ್ಯದ ಬಿಪಿಎಲ್‌ ಕಾರ್ಡ್‌ದಾರರಿಗೆ 2 ತಿಂಗಳ ಪಡಿತರ ವಿತರಣೆ ಸಂಪೂರ್ಣಗೊಳ್ಳಲಿದ್ದು. ಈ ತಿಂಗಳ 20 ರ ನಂತರ ಕೇಂದ್ರ ಸರ್ಕಾರವು ನೀಡಲಿರುವ 3 ತಿಂಗಳ ಪಡಿತರ ವಿತರಣೆ ಯಾಗಲಿದೆ ಎಂದು ಆಹಾರ ಸಚಿವ ಕೆ.ಗೋಪಾಲಯ್ಯ ಹೇಳಿದರು.

ಅವರು ಮಾಲೂರು ತಾಲೂಕಿನ ದ್ಯಾಪಸಂದ್ರ ರಸ್ತೆಯಲ್ಲಿರುವ ಅದಾನಿ ಒಡೆತನದ ಸರ್ಕಾರಿ ಆಹಾರ ಗೋದಾಮಗೆ ಮಂಗಳವಾರದಂದು ದಿಢೀರ್‌ ಭೇಟಿ ನೀಡಿ ಗೋಧಿ ಸಂಗ್ರಹದ ಮಾಹಿತಿ ಪಡೆದ ನಂತರ ಪತ್ರಕರ್ತರೂಡನೆ ಮಾತನಾಡೀದ ಅವರು, ರಾಜ್ಯವು ಸಂಕಷ್ಟಸ್ಥಿತಿಯಲ್ಲಿದ್ದು, ಬಡವರ ಕಾರ್ಮಿಕ ವರ್ಗ ತೀವ್ರ ತೊಂದರೆಗೆ ಒಳಗಾಗಿದೆ. ಈ ಸಂದರ್ಭದಲ್ಲಿ ಮುಖ್ಯ ಮಂತ್ರಿ ಯಡಿಯೊರಪ್ಪ ಅವರು ಬಡವರ ಸಂಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ 2 ತಿಂಗಳ ಪಡಿತರ ವಿತರಿಸಲು ಸೂಚಿಸಿದ್ದಾರೆ ಎಂದರು.

20ರ ನಂತರ 3 ತಿಂಗಳ ಪಡಿತರ

ಈ ತಿಂಗಳ 20 ರ ನಂತರ ಕೇಂದ್ರ ಸರ್ಕಾರವು 3 ತಿಂಗಳ ಪಡಿತರವನ್ನು ನೀಡಲು ತೀರ್ಮಾನಿಸಿದ್ದುಘಿ,ಅದಕ್ಕೆ ರಾಜ್ಯದಲ್ಲಿ ಚಾಲನೆ ನೀಡಲಾಗುವುದು. ಕಳೆದ ತಿಂಗಳಿಂದ ಕೂರೋನಾ ದಿಂದ ಆದ ಲಾಕ್‌ ಡೌನ್‌ ನಿಂದ ಬಡವರು, ಕಾರ್ಮಿಕರು ದಿನದ ಊಟಕ್ಕೆ ತೊಂದರೆ ಯಾಗುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯದ ಬಡವರು ಹಸಿವಿನಿಂದ ತೊಂದರೆಗೆ ಒಳಗಾಗಬಾರದೆಂದು ಪ್ರತಿ ಕುಟುಂಬದ ಪ್ರತಿ ಸದಸ್ಯರಿಗೆ ತಲಾ 10 ಕೆ.ಜಿ.ಅಕ್ಕಿ 4 ಕೆ.ಜಿ.ಗೋಧಿ ವಿತರಿಸಲಾಗುತ್ತಿದೆ ಎಂದರು.

ಹರ್ಷ ತಂದ ವರ್ಷಧಾರೆ ಬಿತ್ತನೆ ಕಾರ್ಯ ಆರಂಭ

ಪಡಿತರ ಕೇಂದ್ರಗಳಲ್ಲಿ ಒಟಿಪಿ ಇಲ್ಲದಿದ್ದರೂ ಆಹಾರ ವಿತರಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಆ ವಿಷಯವನ್ನು ಆದೇಶವಾಗಿ ಎಲ್ಲ ಪಡಿತರ ಕೇಂದ್ರಗಳಿಗೂ ಮಾಹಿತಿ ತಲುಪಿಸಲಾಗಿದೆ.ಬೆಂಗಳೂರು, ತುಮಕೂರು, ಚಿತ್ರದುರ್ಗ ಸೇರಿದಂತೆ ರಾಜ್ಯದ ಹತ್ತು ಜಿಲ್ಲೆಗಳಿಗೆ ಈ ಗೋದಾಮಿನಿಂದ ಗೋಧಿ ವಿತರಣೆಯಾಗುತ್ತಿದ್ದು, ಕಳಪೆ ಗೋಧಿ ವಿತರಣೆಯಾಗದಂತೆ ಎಚ್ಚರ ವಹಿಸಲು ಖುದ್ದು ಗೋದಾಮಿಗೆ ಭೇಟಿ ನೀಡಿರುವುದಾಗಿ ತಿಳಿಸಿದರು.

ಒಂದು ಕೆಜಿ ತೊಗರಿಬೇಳೆ ವಿತರಣೆ

ಇಲ್ಲಿ ಒಟ್ಟು 8.300 ಮೆಟ್ರಿಕ್‌ ಟನ್‌ ಗೋಧಿ ಶುಚಿಗೊಂಡು ಮೂಟೆಗಳಲ್ಲಿ ವಿತರಣೆಯಾಗಬೇಕಾಗಿದೆ. ಈಗಾಗಲೇ 5,300 ಮೆಟ್ರಿಕ್‌ ಟನ್‌ ಗೋಧಿ ವಿತರಣೆಗೆ ಸಿದ್ಧವಾಗಿದ್ದು, ನಾಳೆ ಸಂಜೆಯೊಳಗೆ ಎಲ್ಲ 10 ಜಿಲ್ಲಾ ಕೇಂದ್ರಗಳಿಗೆ ತಲುಪಲಿದೆ. ಇಲಾಖೆಯ ಪ್ರತಿ ಅಧಿಕಾರಿಯೂ ಹಗಲು ರಾತ್ರಿ ಶ್ರಮಿಸುತ್ತಿದ್ದು, ಮುಂದಿನ ವಾರದೊಳಗೆ ರಾಜ್ಯದ ಎಲ್ಲ ಬಿಪಿಎಲ್‌ ಕಾರ್ಡ್‌ದಾರರಿಗೆ 2 ತಿಂಗಳ ಆಹಾರ ವಿತರಣೆಯಾಗಲಿದೆ. ಈ ತಿಂಗಳ 20 ರ ನಂತರ ಬಿಪಿಎಲ್‌ ಕಾರ್ಡ್‌ದಾರರಿಗೆ ಕೇಂದ್ರ ಸರ್ಕಾರ ನೀಡಲಿರುವ 3 ತಿಂಗಳ ಪಡಿತರ ನೀಡಲಾಗುವುದು. ಕೇಂದ್ರ ಸರ್ಕಾರದ ಪಡಿತರ ಜತೆಯಲ್ಲಿ ರಾಜ್ಯ ಸರ್ಕಾರವು ಒಂದು ಕೆ.ಜಿ.ತೊಗರಿ ಬೇಳೆ ನೀಡಲಿದೆ ಎಂದರು.

ಹಣ ಪಡೆದರೆ ಕಠಿಣ ಕ್ರಮ

ನಂತರ ಪಟ್ಟಣದ ಪಡಿತರ ಸೂಸೈಟಿಗೆ ಭೇಟಿ ನೀಡಿ ಆಹಾರ ವಿತರಣೆಯನ್ನು ವೀಕ್ಷಿಸಿದ ಸಚಿವರು ಪಡಿತರ ನೀಡುವಾಗ ಕಾರ್ಡ್‌ದಾರರಿಂದ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಇಲಾಖೆ ಅಧಿಕಾರಿಗಳಿಗಾಗಿ ಸೂಚಿಸಲಾಗಿದೆ. ಇಂತಹ ಸಂಕಷ್ಟಕಾಲದಲ್ಲೂ ಬಡವರಿಂದ ಹಣ ವಸೂಲಿ ಮಾಡುತ್ತಿರುವ ಅಂಗಡಿ ಮಾಲೀಕರಿಗೆ ಮಾನವೀಯತೆ ಇಲ್ಲವೇ. ಅಂತವರ ವಿರುದ್ಧ ದೂರು ಇದ್ದಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಇಲಾಖೆ ಹೆಚ್ಚುವರಿ ಸಹಾಯಕ ಕಾರ‍್ಯದರ್ಶಿ ಮಂಜುಳಾ ,ಆಹಾರ ಇಲಾಖೆ ಆಯುಕ್ತೆ ಶಮಲ ಇಕ್ಬಾಲ್‌ ,ತಹಸೀಲ್ದಾರ್‌ ಮಂಜುನಾಥ್‌,ಜಿಲ್ಲಾ ಆಹಾರ ನಿರ್ದೇಶಕ ವ್ಯವಸ್ಥಾಪಕ ಶಿವಣ್ಣ,ಮುಖ್ಯಾಧಿಕಾರಿ ಪ್ರಸಾದ್‌, ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ ಇದ್ದರು.

click me!