ರಾಸಲೀಲೆ ಸಿಡಿ ಪ್ರಕರಣ: ಗೋಕಾಕನಲ್ಲಿ ಹೆಚ್ಚುತ್ತಿದೆ ಸಾಹುಕಾರ್ ಬೆಂಬಲಿಗರ ಕಿಚ್ಚು..!

By Suvarna NewsFirst Published Mar 6, 2021, 11:36 AM IST
Highlights

ಅಂಕಲಗಿ ಗ್ರಾಮ ಬಂದ್‌ಗೆ ಕರೆ ನೀಡಿದ ರಮೇಶ್ ಜಾರಕಿಹೊಳಿ‌ ಬೆಂಬಲಿಗರು| ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಅಂಕಲಗಿ ಗ್ರಾಮ| ಗೋಕಾಕ ನಗರದಾದ್ಯಂತ ಬಿಗಿ ಪೊಲೀಸ್ ಬಿಗಿ ಭದ್ರತೆ| ರಾಸಲೀಲೆ ಸಿಡಿ ಪ್ರಕರಣವನ್ನ ಸಿಐಡಿ ಅಥವಾ ಸಿಬಿಐ ತನಿಖೆಗೆ ವಹಿಸಲು ರಮೇಶ್‌ ಜಾರಕಿಹೊಳಿ ಬೆಂಬಲಿಗರ ಒತ್ತಾಯ| 

ಬೆಳಗಾವಿ(ಮಾ.06): ಮಾಜಿ ಸಚಿವ ರಮೇಶ ಜಾರಕಿಹೊಳಿ‌ ರಾಸಲೀಲೆ ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಗೋಕಾಕ ನಗರದಲ್ಲಿ ಸಾಹುಕಾರ್ ಬೆಂಬಲಿಗರ ಕಿಚ್ಚು ದಿನೇ ದಿನೆ ಹೆಚ್ಚಾಗುತ್ತಿದೆ. ಇಂದೂ(ಶನಿವಾರ) ಸಹ ಗೋಕಾಕ ವಿಧಾನಸಭಾ ಕ್ಷೇತ್ರದಲ್ಲಿ ರಮೇಶ್ ಬೆಂಬಲಿಗರು ಪ್ರತ್ಯೇಕ ಮೂರು ಕಡೆಗಳಲ್ಲಿ ಪ್ರತಿಭಟನೆ ನಡೆಸಿದ್ದಾರೆ.  

ಗೋಕಾಕ ತಾಲೂಕಿನ ಅಂಕಲಗಿ ಗ್ರಾಮ ಬಂದ್‌ಗೆ ರಮೇಶ್ ಜಾರಕಿಹೊಳಿ‌ ಬೆಂಬಲಿಗರು ಕರೆ ನೀಡಿದ್ದಾರೆ. ಇಂದು ಬೆಳಗ್ಗೆ 10 ಗಂಟೆ ಅಂಕಲಗಿ ಗ್ರಾಮದ ಬಸ್ ನಿಲ್ದಾಣ ಎದುರು ಪ್ರತಿಭಟನೆ ನಡೆಸಿದ್ದಾರೆ. ಅಂಕಲಗಿ ಗ್ರಾಮ ಬಂದ್ ಕುರಿತು ರಮೇಶ್ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. 

ಮತ್ತೊಂದೆಡೆ ಬೆಳಗ್ಗೆ 10 ಗಂಟೆಗೆ ಮಮದಾಪುರ ಕ್ರಾಸ್ ಬಳಿಯೂ ಧರಣಿ ನಡೆಸಲಾಗಿದೆ. ಯರಗಟ್ಟಿ - ಸಂಕೇಶ್ವರ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ.  ಇಂದು ಮಧ್ಯಾಹ್ನ 12 ಗಂಟೆಗೆ ಗೋಕಾಕ ನಗರದಲ್ಲಿ ಬೃಹತ್ ಪ್ರತಿಭಟ‌ನೆ ಕೂಡ ನಡೆಸಲು ರಮೇಶ್‌ ಬೆಂಬಲಿಗರು ನಿರ್ಧರಿಸಿದ್ದಾರೆ. ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಆರಂಭವಾವಗಿ ಬಸವೇಶ್ವರ ವೃತ್ತ ಮಾರ್ಗವಾಗಿ ತಹಶಿಲ್ದಾರ್ ಕಚೇರಿವರೆಗೂ ರ್ಯಾಲಿ ನಡೆಯಲಿದೆ. 

ಗೋಕಾಕ: ಮೂವರು ರಮೇಶ್‌ ಬೆಂಬಲಿಗರ ಆತ್ಮಹತ್ಯೆ ಯತ್ನ

ರಾಸಲೀಲೆ ಸಿಡಿ ಪ್ರಕರಣವನ್ನ ಸಿಐಡಿ ಅಥವಾ ಸಿಬಿಐ ತನಿಖೆಗೆ ವಹಿಸಲು ರಮೇಶ್‌ ಜಾರಕಿಹೊಳಿ ಬೆಂಬಲಿಗರು ಒತ್ತಾಯಿಸಲಿದ್ದಾರೆ. ಗೋಕಾಕ ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲು‌ ನಿರ್ಧರಿಸಲಾಗಿದೆ.
ತಹಶಿಲ್ದಾರ್‌ಗೆ ಮನವಿ ಸಲ್ಲಿಸಿ ಬಳಿಕ ಮತ್ತೆ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಯಲಿದೆ. ರಮೇಶ್ ಬೆಂಬಲಿಗರ ಪ್ರತಿಭಟನೆ ಹಿನ್ನೆಲೆಯಲ್ಲಿ ಗೋಕಾಕ ನಗರದಾದ್ಯಂತ ಬಿಗಿ ಪೊಲೀಸ್ ಬಿಗಿ ಭದ್ರತೆ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿಭಟನೆ ವೇಳೆ ಟಯರ್‌ಗೆ ಬೆಂಕಿ ಹಚ್ಚದಂತೆ ಕಟ್ಟೆಚ್ಚರ ವಹಿಸಲು ಪೊಲೀಸ್ ಅಧಿಕಾರಿಗಳಿಗೆ ಬೆಳಗಾವಿ ಎಸ್‌ಪಿ ಲಕ್ಷ್ಮಣ್ ನಿಂಬರಗಿ ಖಡಕ್ ಸೂಚನೆ ನೀಡಿದ್ದಾರೆ. 

ರಮೇಶ್‌ ಜಾರಕಿಹೊಳಿ ಅಭಿಮಾನಿಯೊಬ್ಬ ನಿನ್ನೆ ಬೆಂಕಿ ಹಚ್ಚಿದ್ದ ಟಯರ್ ಮೇಲೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದನು. ಈ ಹಿನ್ನೆಲೆಯಲ್ಲಿ ಟಯರ್‌ಗೆ ಬೆಂಕಿ ಹಚ್ಚದಂತೆ ನಿಗಾ ವಹಿಸಲು ಸೂಚನೆ ನೀಡಲಾಗಿದೆ. ಬೃಹತ್‌ ಪ್ರತಿಭಟನೆ ಇರುವ ಹಿನ್ನೆಲೆಯಲ್ಲಿ ಇಂದೂ ಸಹ ಗೋಕಾಕನಲ್ಲಿ ಸಾರಿಗೆ ಬಸ್ ಸಂಚಾರ ವ್ಯತ್ಯಯವಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ನಿನ್ನೆ ಪ್ರತಿಭಟನೆ ಇದ್ದ ಹಿನ್ನೆಲೆಯಲ್ಲಿ ದಿಢೀರ್‌ನೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. 
 

click me!