ಕಾವೇರಿ ನದಿ ನೀರು ವಿವಾದ ಪರಿಹಾರಕ್ಕೆ ಸಂಕಷ್ಟ ಸೂತ್ರ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡುವಂತೆ ಒತ್ತಾಯಿಸಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಸೋಮವಾರ ಜಿಲ್ಲಾಧಿಕಾರಿ ಅವಿನಾಶ್ ರವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ರಾಮನಗರ : ಕಾವೇರಿ ನದಿ ನೀರು ವಿವಾದ ಪರಿಹಾರಕ್ಕೆ ಸಂಕಷ್ಟ ಸೂತ್ರ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡುವಂತೆ ಒತ್ತಾಯಿಸಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಸೋಮವಾರ ಜಿಲ್ಲಾಧಿಕಾರಿ ಅವಿನಾಶ್ ರವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ನೀರಿನ ಹಂಚಿಕೆ ವಿಚಾರದಲ್ಲಿ ರಾಷ್ಟ್ರದ ಸರ್ವೋಚ್ಚ ನ್ಯಾಯಾಲಯದ ತೀರ್ಪು ನಮ್ಮ ಮುಂದೆ ಇದೆ. ಆದರೆ, ಅಭಾವದ ಕಾರಣ ಕಾವೇರಿ ಕೊಳ್ಳದಲ್ಲಿ ನೀರಿನ ಶೇಖರಣಾ ಪ್ರಮಾಣ ಕಡಿಮೆಯಾದಾಗ ಅನುಸರಿಸಬೇಕಾದ ಸಂಕಷ್ಟ ಮಾರ್ಗಸೂಚಿಗಳು ರಚನೆಯಾಗಿಲ್ಲ. ಇದು ಎರಡೂ ರಾಜ್ಯಗಳ ನಡುವೆ ವಿವಾದಕ್ಕೆ ಕಾರಣವಾಗಿದೆ. ವಿಶೇಷವಾಗಿ ಕರ್ನಾಟಕ ರಾಜ್ಯಕ್ಕೆ ಪದೇ ಪದೇ ಅನ್ಯಾಯವಾಗುತ್ತಿದೆ. ಈ ಸಮಸ್ಯೆಯ ಪರಿಹಾರಕ್ಕೆ ಸಂಕಷ್ಟ ಸೂತ್ರ ರಚನೆಗೆ ಪ್ರಾಮುಖ್ಯತೆ ನೀಡುವಂತೆ ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಕಾವೇರಿ ನದಿ ಜಲ ವಿವಾದವು ಅನೇಕ ದಶಕಗಳ ವಿವಾದದ ವಿಷಯವಾಗಿದೆ, ಕಾವೇರಿ ನದಿಯ ನೀರು ಮೈಸೂರು , ಮಂಡ್ಯ, ರಾಮನಗರ, ಬೆಂಗಳೂರು ಜಿಲ್ಲೆಗಳ ರೈತರು ಮತ್ತು ನಾಗರೀಕರು ಕುಡಿಯುವ ನೀರು ಮತ್ತು ವ್ಯವಸಾಯ ಆವಶ್ಯಕತೆಗಾಗಿ ಅವಲಂಬಿತರಾಗಿದ್ದಾರೆ.
ರಾಮನಗರ ಜಿಲ್ಲೆಯ ಮತ್ತು ನೆರೆಯ ಬೆಂಗಳೂರು ಮಹಾನಗರದ ನಾಗರೀಕರ ಕುಡಿಯುವ ನೀರು ಸಹ ಕಾವೇರಿ ಕೊಳ್ಳದಿಂದಲೇ ಲಭ್ಯವಾಗುತ್ತಿದೆ. ನಮ್ಮ ಕುಡಿಯುವ ನೀರಿನ ಅವಶ್ಯಕತೆಗಳಿಗೆ ಕಾವೇರಿ ನದಿ ನೀರಿಗಿಂತ ಉತ್ತಮ ಆಯ್ಕೆ ಬೇರೊಂದಿಲ್ಲ. ಆದರೆ, ಮಳೆಯ ಅಭಾವದ ಕಾರಣ ಪದೇ ಪದೇ ಎರಡೂ ರಾಜ್ಯಗಳ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತಿದೆ. ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ರಾಜ್ಯ ಸರ್ಕಾರ ಪಾಲಿಸಬೇಕಾದ ಅನಿವಾರ್ಯತೆಯಲ್ಲಿ ನಮ್ಮ ಕುಡಿಯುವ ನೀರಿಗೂ ಕೊರತೆಯಾಗುವ ಆತಂಕ ಕಾಡುತ್ತಿದೆ. ಇದೇ ವಿಚಾರದಲ್ಲಿ ಸದ್ಯ ಕರ್ನಾಟಕದಲ್ಲಿ ಅಸಮಾಧಾನ ಭುಗಿಲೆದ್ದಿದೆ. ಹೀಗಾಗಿ ತಕ್ಷಣ ಸಂಕಷ್ಟ ಸೂತ್ರಗಳನ್ನು ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಮನವಿ ಸಲ್ಲಿಸಿದರು.
ಕನಕಪುರ ತಾಲೂಕಿನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಸಮತೋಲನ ಜಲಾಶಯ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ ಉದ್ದೇಶಿಸಿದ್ದು, ಈ ಯೋಜನೆಗೂ ಶೀಘ್ರ ಅನುಮತಿ ದೊರಕಿಸಿಕೊಡುವಂತೆಯೂ ಕೇಂದ್ರ ಸರ್ಕಾರ ಮತ್ತು ಅದರ ಅಧೀನ ಇಲಾಖೆ, ಸಂಸ್ಥೆಗಳಿಗೂ ಸೂಚನೆ ಕೊಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಸೂರ್ಯ ಪ್ರಕಾಶ್ , ಪ್ರಧಾನ ಕಾರ್ಯದರ್ಶಿ ಟಿ.ಶಿವರಾಜ್ , ನಿರ್ದೇಶಕರಾದ ಅರುಣ್,ಶಿವಲಿಂಗಯ್ಯ, ಸುಧಾರಾಣಿ, ಗಂಗಾಧರ್, ಗಿರೀಶ್, ಮಂಜುನಾಥ್, ಅಫ್ರೋಜ್ ಖಾನ್, ರವಿಕಿರಣ್, ನರಸಿಂಗರಾವ್ ಮತ್ತಿತರರು ಹಾಜರಿದ್ದರು.
9ಕೆಆರ್ ಎಂಎನ್ 2.ಜೆಪಿಜಿ
ಕಾವೇರಿ ನದಿ ನೀರು ವಿವಾದ ಪರಿಹಾರಕ್ಕೆ ಸಂಕಷ್ಟ ಸೂತ್ರ ರಚಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಅವಿನಾಶ್ ಅವರಿಗೆ ಪತ್ರಕರ್ತರು ಮನವಿ ಸಲ್ಲಿಸಿದರು.