ವಾಡಿಕೆಗಿಂತ ಶೇ. 32 ಹೆಚ್ಚು ಮಳೆ, ಆದರೂ ಜಲಕ್ಷಾಮದ ಭೀತಿ; ಬರಿದಾಗುತ್ತಿರುವ ಗಂಗಾವಳಿ

Published : Feb 21, 2026, 10:01 AM IST
Gangavali

ಸಾರಾಂಶ

ಈ ಬಾರಿ ಮುಂಗಾರಿನಲ್ಲಿ ವಾಡಿಕೆಗಿಂತ ಶೇ. 32ರಷ್ಟು ಅಧಿಕ ಮಳೆಯಾದರೂ, ಅಂಕೋಲಾ ತಾಲೂಕಿನಲ್ಲಿ ಬೇಸಿಗೆ ಆರಂಭದಲ್ಲೇ ಜಲಕ್ಷಾಮದ ಆತಂಕ ಎದುರಾಗಿದೆ. ಹೆಚ್ಚುತ್ತಿರುವ ಉಷ್ಣಾಂಶದಿಂದಾಗಿ ಜೀವನದಿ ಗಂಗಾವಳಿಯ ನೀರಿನ ಮಟ್ಟ ಗಣನೀಯವಾಗಿ ಕುಸಿದಿದ್ದು, ಕೃಷಿ ಹಾಗೂ ವನ್ಯಜೀವಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ರಾಘು ಕಾಕರಮಠ

ಅಂಕೋಲಾ: ತಾಲೂಕಿನಲ್ಲಿ ಈ ಬಾರಿ ಮುಂಗಾರಿನ ಹಂಗಾಮಿನಲ್ಲಿ ವಾಡಿಕೆಗಿಂತ ಶೇ. 32ರಷ್ಟು ಅಧಿಕ ಮಳೆಯಾದರೂ, ಬೇಸಿಗೆ ಆರಂಭವಾಗುತ್ತಿದ್ದಂತೆ ಭೂಮಿಯ ಒಡಲು ಬರಿದಾಗುತ್ತಿದ್ದು, ಜಲಕ್ಷಾಮದ ಆತಂಕ ತಲೆದೋರಿದೆ. ಹೆಚ್ಚುವರಿ ಮಳೆ ಕಂಡು ಬರಗಾಲ ದೂರವಾಯಿತೆಂದು ಸಂತಸಪಟ್ಟ ಜನತೆಗೆ, ಈಗ ಹೆಚ್ಚುತ್ತಿರುವ ಉಷ್ಣತೆ ಮತ್ತು ಕುಸಿಯುತ್ತಿರುವ ನೀರಿನ ಒರತೆ ಆತಂಕ ಮೂಡಿಸಿದೆ.

ತಾಲೂಕಿನಲ್ಲಿ ವಾಡಿಕೆಯಾಗಿ 3405.5 ಮಿ.ಮೀ. ಮಳೆಯಾಗಬೇಕಿತ್ತು. ಆದರೆ 4486.50 ಮಿ.ಮೀ. ಮಳೆ ಬಿದ್ದಿದ್ದು, 1081 ಮೀ.ಮೀ. (ಶೇ. 32) ಹೆಚ್ಚುವರಿ ಮಳೆಯಾಗಿದೆ. ಈ ವರ್ಷ ಬರಗಾಲ ದೂರ ಎಂದು ಜನರ ಲೆಕ್ಕಾಚಾರವಾಗಿತ್ತು. ಆದರೆ ಅಪಾರ ಉಷ್ಣತೆಯು ಜೀವಜಲವನ್ನು ಬರಿದಾಗಿಸುವಂತೆ ಮಾಡಿದೆ.

ಬರಿದಾಗುತ್ತಿರುವ ಗಂಗಾವಳಿ

ತಾಲೂಕಿನ ಜೀವನದಿ ಗಂಗಾವಳಿಯಲ್ಲಿ ಗಣನೀಯವಾಗಿ ನೀರಿನ ಮಟ್ಟ ಕುಸಿಯುತ್ತಿದೆ. ಕಳೆದ ವರ್ಷದ ಈ ವೇಳೆಗೆ ಗಂಗಾವಳಿಯ ಒಡಲಲ್ಲಿ 2.15 ಮೀ. ನೀರು ಇತ್ತು. ಈ ವರ್ಷ ನೀರಿನ ಮಟ್ಟ 1.55 ಮೀ.ಗೆ ಬಂದು ನಿಂತಿದೆ ಎಂದು ನೀರು ಸರಬರಾಜು ಇಲಾಖೆಯೆ ಅಧಿಕೃತವಾಗಿ ಸರ್ಕಾರಕ್ಕೆ ಮಾಹಿತಿ ನೀಡಿದೆ. ಗಂಗಾವಳಿ ನದಿಗೆ ಜೋಡಣೆಯಾಗುವ ಉಪನದಿಗಳಲ್ಲಿಯೂ ನೀರಿನ ಒರತೆ ಕ್ಷೀಣಿಸಿದೆ. ಫೆಬ್ರವರಿ ಅಂತ್ಯದ ತನಕವೂ ಸಮೃದ್ಧಿಯಾಗಿ ಹರಿಯ ಬೇಕಿದ್ದ ಹಳ್ಳಗಳು ಈಗಲೇ ಬತ್ತುತ್ತ ಬಂದಿದೆ. ನೀರನ್ನು ಹಿಡಿದಿಟ್ಟುಕೊಳ್ಳಲು ಪೂರಕವಾಗಿರುವ ಉಪನದಿಗಳಲ್ಲೇ ಒರತೆ ಕ್ಷೀಣಿಸಿರುವ ಪರಿಣಾಮ ರೈತಾಪಿ ವರ್ಗದಲ್ಲಿ ಆತಂಕ ಸೃಷ್ಟಿಸಿದೆ.

ಕೃಷಿ-ವನ್ಯಜೀವ ಸಂಕುಲಕ್ಕೂ ಸಮಸ್ಯೆ

ಜಲಮೂಲಗಳು ಬತ್ತಿರುವ ಪರಿಣಾಮ ಕೃಷಿಯ ಜತೆಗೆ ವನ್ಯಜೀವಿ ಸಂಕುಲದ ಮೇಲೂ ಪರಿಣಾಮ ಬೀರುತ್ತಿದೆ. ಕುಡಿಯುವ ನೀರಿಗೂ ತುಟಾಗ್ರತೆ ಎದುರಾಗುವ ಕಾಲ ಸನ್ನಿಹಿತವಾಗುತ್ತಿದೆ. ಕಾಡುಪ್ರಾಣಿಗಳು ಬಾಯಾರಿಕೆಗೆ ನಾಡಿಗೆ ಬರುವ ಸಾಧ್ಯತೆಯೂ ಹೆಚ್ಚಿದೆ. ನೀರನ್ನು ಹಿಡಿದಿಟ್ಟುಕೊಳ್ಳುವ ಉದ್ದೇಶಕ್ಕೆ ಈಗಾಗಲೇ ಅಣೆಕಟ್ಟುಗಳನ್ನು ನಿರ್ಮಿಸಿದ್ದು, ಅವುಗಳಿಗೆ ಕಿಂಡಿ ಹಲಗೆ ಜೋಡಣೆ ಕಾರ್ಯವೂ ನಡೆದಿದೆ. ನೀರಿನ ಒರತೆ ಕ್ಷೀಣಿಸಿದ ಪರಿಣಾಮ ಶೇಖರಣೆಯಾದ ನೀರು ಕೆಲವೇ ದಿನಗಳಲ್ಲಿ ಬರಿದಾಗುವ ಸಾಧ್ಯತೆ ಇದೆ.

ಉಷ್ಣಾಂಶ ಹೆಚ್ಚಳ-ಕುಸಿದ ನೀರಿನ ಒರತೆ

ಈ ಬಾರಿ ಅಧಿಕ ಮಳೆಯಾಗಿದೆ. ಆದರೆ ಅವಧಿಗೆ ಮುನ್ನವೇ ನೀರಿನ ಒರತೆ ಕುಸಿಯಲು ಹೆಚ್ಚುತ್ತಿರುವ ಉಷ್ಣಾಂಶವೇ ಮುಖ್ಯ ಕಾರಣ. ಸಾಮಾನ್ಯವಾಗಿ ಏಪ್ರಿಲ್-ಮೇ ತಿಂಗಳಲ್ಲಿ 31-32 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರುತ್ತಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಮಧ್ಯಾಹ್ನದ ತಾಪಮಾನ 32 ಡಿಗ್ರಿ ದಾಟುತ್ತಿದ್ದು, ಭೂಮಿಯ ಉಷ್ಣಾಂಶವೂ ಹೆಚ್ಚಳವಾಗಿದೆ. ಇದರಿಂದಾಗಿ ಭೂಮಿಯಲ್ಲಿನ ತೇವಾಂಶ ಮತ್ತು ನೀರಿನ ಅಂಶ ವೇಗವಾಗಿ ಆವಿಯಾಗುತ್ತಿದೆ. ಈ ಬಾರಿ ಅವಧಿಗೆ ಮುನ್ನ ಮಳೆಯಾಗದೇ ಹೋದರೆ ಜಲಕ್ಷಾಮ ತಲೆದೋರುವ ಸಾಧ್ಯತೆ ಹೆಚ್ಚಿದೆ ಎಂದು ಪರಿಸರ ತಜ್ಞರ ಅಭಿಪ್ರಾಯವು ಆಗಿದೆ.

ನೀರು ಶೇಖರಣೆಗೆ ತುರ್ತು ಕ್ರಮ

ಕಳೆದ ವರ್ಷಕ್ಕಿಂತ ಗಂಗಾವಳಿಯ ನೀರು ಶೇಖರಣಾ ಪ್ರದೇಶದಲ್ಲಿ ನೀರು ಕಡಿಮೆಯಾಗಿದೆ. ಆದರೆ ನೀರಿನ ಒಳಹರಿವು ಇದೆ. ನೀರನ್ನು ಇನ್ನಷ್ಟು ಶೇಖರಣೆ ಮಾಡುವ ಉದ್ದೇಶದಿಂದ ಮರಳು ಚೀಲ ಒಡ್ಡು ನಿರ್ಮಾಣ ಕಾಮಗಾರಿಯನ್ನು ವೇಗದಿಂದ ನಡೆಸಲಾಗುತ್ತಿದೆ. ಈ ಕಾಮಗಾರಿ ಒಂದು ವಾರದಲ್ಲಿ ಮುಗಿಯಬಹುದು. ಕಾಮಗಾರಿ ಮುಗಿದ ಮೇಲೆ ನೀರು ಶೇಖರಣೆ ಹೆಚ್ಚಬಹುದು ಎಂಬ ಆಶಾಭಾವನೆ ಇದೆ ಎಂದು ಕಾರವಾರ ಜಲಮಂಡಳಿ ಅಭಿಷೇಕ ಎಂಜಿನಿಯರ್ ಹೇಳಿದರು.

ವಾಡಿಕೆ ಮಳೆಗಿಂತ ಶೇ. 30ರಷ್ಟು ಹೆಚ್ಚುವರಿ ಮಳೆಯಾಗಿದೆ. ತಾಲೂಕಿನ ಗುಡ್ಡಗಾಡು ಪ್ರದೇಶದಲ್ಲಿ ಝರಿ ನೀರು ಇರುವುದರಿಂದ ನೀರಿಗೆ ಸಮಸ್ಯೆ ಇಲ್ಲ. ಆದರೆ ಇತರ ಪ್ರದೇಶದಲ್ಲಿ ಅಪಾರ ಉಷ್ಣತೆ ಹಾಗೂ ಸಮುದ್ರಕ್ಕೆ ನೀರು ಪೋಲಾಗುತ್ತಿರುವುದರಿಂದ ನೀರಿನ ಅಭಾವಕ್ಕೂ ಕಾರಣವಾಗಬಹುದು ಎಂದು ಅಂಕೋಲಾ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀಧರ ನಾಯ್ಕ ಹೇಳಿದರು.

PREV
Read more Articles on
click me!

Recommended Stories

ಮೋದಿ ವಿರೋಧಿಸುವ ಭರದಲ್ಲಿ ಕಾಂಗ್ರೆಸ್ ದೇಶ ವಿರೋಧಿ ನಡೆ: ಪ್ರಲ್ಹಾದ್ ಜೋಶಿ ಕಿಡಿ
Bengaluru: ಇಸ್ರೋ ಮಾಜಿ ನೌಕರನಿಂದ ಪತ್ನಿಯ ಹ*ತ್ಯೆ, ತಾಯಿ ಚಿತೆಗೆ ಬೆಂಕಿಯಿಡಲೂ ಅಮೆರಿಕದಿಂದ ಬರದ ಒಬ್ಬಳೇ ಮಗಳು!