ಏರ್​ಪೋರ್ಟ್​ ಮಾದರಿಯಲ್ಲಿ ರೈಲ್ವೆ ನಿಲ್ದಾಣ ಅಭಿವೃದ್ಧಿ: ಕೇಂದ್ರ ಸಚಿವ ಅಂಗಡಿ

By Web DeskFirst Published Oct 3, 2019, 7:27 AM IST
Highlights

ವಿಮಾನ ನಿಲ್ದಾಣದ ಮಾದರಿಯಲ್ಲಿ ರೈಲ್ವೆ ನಿಲ್ದಾಣಗಳ ಅಭಿವೃದ್ಧಿ ಪಡಿಸಲಾಗುವುದು ಎಂದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ| ರೈಲು ನಿಲ್ದಾಣಗಳಲ್ಲಿ ಸಮರ್ಪಕ ಮೂಲಸೌಲಭ್ಯ ಕಲ್ಪಿಸುವುದೇ ಮುಖ್ಯ ಉದ್ದೇಶ| ರೈಲು ನಿಲ್ದಾಣಗಳನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿರುವಂತೆ ಮೂಲಸೌಲಭ್ಯ ಕಲ್ಪಿಸಿ ಅಭಿವೃದ್ಧಿ ಪಡಿಸುವುದು ನಮ್ಮ ಗುರಿ| ಮೈಸೂರಿನ ನಿಲ್ದಾಣ ಸ್ವಚ್ಛತೆ ಉತ್ತಮವಾಗಿದೆ| ಅದೇ ರೀತಿ ಹುಬ್ಬಳ್ಳಿಯಲ್ಲೂ ಸ್ವಚ್ಛತೆಗೆ ಆದ್ಯತೆ ನೀಡಬೇಕು| 

ಹುಬ್ಬಳ್ಳಿ(ಅ.3): ವಿಮಾನ ನಿಲ್ದಾಣದ ಮಾದರಿಯಲ್ಲಿ ದೇಶದ ಎಲ್ಲ ರೈಲ್ವೆ ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಭರವಸೆ ನೀಡಿದ್ದಾರೆ.

ಇಲ್ಲಿನ ರೈಲ್ವೆ ನಿಲ್ದಾಣಕ್ಕೆ ಎರಡನೇ ಪ್ರವೇಶ ದ್ವಾರ, ಗೂಡ್ಸ್‌ ರೈಲುಗಳಿಗಾಗಿ ಬೈಪಾಸ್‌ ಮಾರ್ಗ, ಧಾರವಾಡ ರೈಲು ನಿಲ್ದಾಣದಲ್ಲಿ ನಿರ್ಮಿಸಲಾಗಿರುವ 100 ಅಡಿ ಎತ್ತರದ ರಾಷ್ಟ್ರಧ್ವಜ ಕಂಬವನ್ನು ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರೈಲು ನಿಲ್ದಾಣಗಳಲ್ಲಿ ಸಮರ್ಪಕ ಮೂಲಸೌಲಭ್ಯ ಕಲ್ಪಿಸುವುದೇ ಮುಖ್ಯ ಉದ್ದೇಶ. ರೈಲು ನಿಲ್ದಾಣಗಳನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿರುವಂತೆ ಮೂಲಸೌಲಭ್ಯ ಕಲ್ಪಿಸಿ ಅಭಿವೃದ್ಧಿ ಪಡಿಸುವುದು ನಮ್ಮ ಗುರಿಯಾಗಿದೆ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಇನ್ನು ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಸ್ವಚ್ಛತೆಯ ಕೊರತೆ ಎದ್ದು ಕಾಣುತ್ತಿದೆ. ಈ ಬಗ್ಗೆ ಈಗಾಗಲೇ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಮೈಸೂರಲ್ಲಿನ ನಿಲ್ದಾಣ ಸ್ವಚ್ಛತೆ ಉತ್ತಮವಾಗಿದೆ. ಅದೇ ರೀತಿ ಹುಬ್ಬಳ್ಳಿಯಲ್ಲೂ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಹುಬ್ಬಳ್ಳಿ ವ್ಯಾಪಾರಿ ಕೇಂದ್ರಕ್ಕೆ ಹೆಸರಾದ ನಗರ. ಈ ರೈಲು ನಿಲ್ದಾಣವನ್ನು ರಿಮಾಡೆಲಿಂಗ್‌ ಮಾಡಿ ಇಡೀ ರಾಜ್ಯಕ್ಕೆ ಮಾದರಿಯನ್ನಾಗಿ ಮಾಡುವ ಉದ್ದೇಶವಿದೆ. ಇದಕ್ಕಾಗಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಸದ್ಯ ವಾರಕ್ಕೆ ಎರಡು ಬಾರಿ ಮಾತ್ರ ವಾರಾಣಸಿಗೆ ಇಲ್ಲಿಂದ ರೈಲು ಸಂಚರಿಸುತ್ತಿದೆ. ಅದನ್ನು ವಾರಕ್ಕೆ ನಾಲ್ಕು ದಿನಕ್ಕೆ ಹೆಚ್ಚಿಸಬೇಕು ಎಂಬ ಬೇಡಿಕೆ ಇದೆ. ಈ ನಿಟ್ಟಿನಲ್ಲಿ ರೈಲ್ವೆ ಮಂಡಳಿಯೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು.ರೈಲ್ವೆ ಇಲಾಖೆಯಲ್ಲಿ ಸುರಕ್ಷತೆ, ಸಮಯ ಪರಿಪಾಲನೆ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ ಎಂದರು.

ಚಾರಿಯಟ್‌ ಶೀಘ್ರ ಆರಂಭ:

ಸದ್ಯ ಗೋಲ್ಡನ್‌ ಚಾರಿಯಟ್‌ ಟ್ರೈನ್‌ ಸಂಚರಿಸುತ್ತಿಲ್ಲ. ಅದನ್ನು ಕೆಎಸ್‌ಟಿಡಿಸಿಯಿಂದ ಐಆರ್‌ಟಿಸಿಗೆ ಪಡೆದುಕೊಂಡು ಶೀಘ್ರದಲ್ಲೇ ಮತ್ತೆ ಪ್ರಾರಂಭಿಸುತ್ತೇವೆ. ಈ ಬಗ್ಗೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಹುಬ್ಬಳ್ಳಿಯಿಂದ ಮಂಗಳೂರಿಗೆ ರೈಲು ಸಂಪರ್ಕ ಇಲ್ಲ. ಆ ಕೆಲಸವಾಗಬೇಕಿದೆ. ಈ ನಿಟ್ಟಿನಲ್ಲಿ ರೈಲ್ವೆ ಸಚಿವರು ಗಮನ ಹರಿಸಬೇಕು ಎಂದು ತಿಳಿಸಿದರು.

ವಾರಾಣಸಿ ರೈಲು ವಾರಕ್ಕೆ ನಾಲ್ಕು ದಿನ ಓಡಾಡುವಂತೆ ಮಾಡಬೇಕು. ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಇನ್ನೆರಡು ಪ್ಲಾಟ್‌ಫಾರಂ ಅಗತ್ಯವಿದೆ. ಅವುಗಳನ್ನು ಮಾಡಬೇಕು ಎಂದು ಮನವಿ ಮಾಡಿದರು.
ಮಹಾಪ್ರಬಂಧಕ ಅಜಯ್‌ಕುಮಾರ ಸಿಂಗ್‌ ಮಾತನಾಡಿ, ಎರಡನೇ ಪ್ರವೇಶದ್ವಾರವನ್ನು 3.35 ಕೋಟಿ ವೆಚ್ಚದಲ್ಲಿ ಮಾಡಲಾಗಿದೆ. ಇಲ್ಲಿ ಮೂರು ಟಿಕೆಟ್‌ ಕೌಂಟರ್‌ ಮಾಡಲಾಗಿದೆ. ದ್ವಾರದ ಎದುರಿಗೆ ಕಿತ್ತೂರು ರಾಣಿ ಚೆನ್ನಮ್ಮನ ಪುತ್ಥಳಿ ಅಳವಡಿಸಲಾಗಿದೆ. ಇದರೊಂದಿಗೆ ಕುಸುಗಲ್‌, ಕೇಶ್ವಾಪುರ, ಆರ್‌ಜಿಎಸ್‌ ಮತ್ತಿತರರ ಭಾಗಗಳಿಂದ ಬರುವವರಿಗೆ ಈ ಎರಡನೆಯ ಪ್ರವೇಶದ್ವಾರ ಅನುಕೂಲವಾಗಲಿದೆ ಎಂದರು.

ಇನ್ನು ಹೊಸಪೇಟೆ ಗೋವಾಕ್ಕೆ ತೆರಳುತ್ತಿದ್ದ ಗೂಡ್ಸ್‌ ರೈಲುಗಳು ರೈಲ್ವೆ ನಿಲ್ದಾಣಕ್ಕೆ ಬಂದು ಹೋಗಬೇಕಿತ್ತು. ಇದರಿಂದ ನಿಲ್ದಾಣದಲ್ಲಿ ಪ್ರಯಾಣಿಕರ ರೈಲುಗಳಿಗೆ ಸಮಸ್ಯೆಯಾಗುತ್ತಿತ್ತು. ಇದನ್ನು ತಪ್ಪಿಸುವ ಉದ್ದೇಶದಿಂದ ಬೈಪಾಸ್‌ ಮಾರ್ಗ ಮಾಡಲಾಗಿದೆ. ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಬಾರದೇ ನೇರವಾಗಿ ಅಮರಗೋಳ ನಿಲ್ದಾಣಕ್ಕೆ ತೆರಳಬಹುದಾಗಿದೆ. ಇದರಿಂದ ಇಲ್ಲಿನ ನಿಲ್ದಾಣದಲ್ಲಿ ಆಗುತ್ತಿದ್ದ ದಟ್ಟಣೆಯನ್ನು ತಡೆಗಟ್ಟಬಹುದಾಗಿದೆ. ಪ್ರಯಾಣಿಕರ ರೈಲುಗಳು ಯಾವುದೇ ಅಡೆತಡೆಯಿಲ್ಲದೇ ಸಂಚರಿಸಬಹುದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌, ಅಧಿಕಾರಿಗಳಾದ ಮುರಳೀಕೃಷ್ಣ ಸೇರಿದಂತೆ ಹಲವರಿದ್ದರು.
 

click me!