ತಾಳಿ ಕಟ್ಟುವ ಶುಭ ವೇಳೆ ಹಾರ್ಟ್ ಅಟ್ಯಾಕ್‌; ಅಪ್ಪನ ಸಾವಿನಿಂದ ಸೂತಕದ ಮನೆಯಾದ ಮದುವೆ ಮಂಟಪ!

Published : Nov 30, 2025, 06:39 PM IST
Raichur News

ಸಾರಾಂಶ

ರಾಯಚೂರಿನ ಸಿಂಧನೂರಿನಲ್ಲಿ, ಮಗನ ಮದುವೆಯ ಸಂಭ್ರಮದಲ್ಲಿದ್ದ ತಂದೆ ಶರಣಯ್ಯಸ್ವಾಮಿ (55) ಅವರು ಮಾಂಗಲ್ಯ ಧಾರಣೆಗೆ ಕೆಲವೇ ಗಂಟೆಗಳಿರುವಾಗ ಹೃದಯಾಘಾತದಿಂದ ನಿಧನರಾದರು. ಈ ದುರಂತದಿಂದಾಗಿ, ಅದ್ದೂರಿಯಾಗಿ ನಡೆಯಬೇಕಿದ್ದ ಮದುವೆ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದ್ದು, ಇಡೀ ಕುಟುಂಬ ಶೋಕದಲ್ಲಿ ಮುಳುಗಿದೆ.

ರಾಯಚೂರು (ನ.30): ಮನೆಯಲ್ಲಿ ಮಗನ ಮದುವೆಯ ಸಂಭ್ರಮದಲ್ಲಿ ಲವಲವಿಕೆಯಿಂದ ಓಡಾಡಿಕೊಂಡಿದ್ದ ಅಪ್ಪನಿಗೆ, ಮಾಂಗಲ್ಯ ಧಾರಣೆಗೆ ಕೆಲವೇ ಗಂಟೆಗಳಿರುವಾಗ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ. ಈ ದುರಂತದಿಂದ ಇಡೀ ಮದುವೆಯ ಮನೆಯು ಕ್ಷಣಾರ್ಧದಲ್ಲಿ ಸೂತಕದ ವಾತಾವರಣಕ್ಕೆ ಜಾರಿದೆ.

ಈ ಹೃದಯ ವಿದ್ರಾವಕ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ನಗರದಲ್ಲಿ ನಡೆದಿದೆ. ಮೃತಪಟ್ಟವರನ್ನು ಸಿಂಧನೂರು ನಗರದ ಗಂಗಾ ನಗರ ನಿವಾಸಿ, ಶರಣಯ್ಯಸ್ವಾಮಿ (55) ಎಂದು ಗುರುತಿಸಲಾಗಿದೆ. ಅವರ ಮಗನ ಮದುವೆಯು ಇಂದು (ನ.30) ಸಿಂಧನೂರು ನಗರದ ಜೈನ್ ಕಲ್ಯಾಣ ಮಂಟಪದಲ್ಲಿ ಅದ್ದೂರಿಯಾಗಿ ನೆರವೇರಬೇಕಿತ್ತು.

ಮಾಂಗಲ್ಯ ಧಾರಣೆ ಮುನ್ನವೇ ದುರಂತ

ಮದುವೆಯ ಸಂಭ್ರಮದಲ್ಲಿ ಕುಟುಂಬದವರು ಮತ್ತು ಸಂಬಂಧಿಕರು ನೆರೆದಿದ್ದರು. ಇಂದು ಮುಂಜಾನೆ 5 ಗಂಟೆಗೆ ಶುಭ ಲಗ್ನದಲ್ಲಿ ವಧುವರರಿಗೆ ಮಾಂಗಲ್ಯ ಧಾರಣೆಯ ಮುಹೂರ್ತವನ್ನು ನಿಶ್ಚಯಿಸಲಾಗಿತ್ತು. ಕಳೆದ ಎರಡು-ಮೂರು ದಿನಗಳಿಂದ ಶರಣಯ್ಯಸ್ವಾಮಿ ಅವರು ತಮ್ಮ ಮಗನ ಮದುವೆಯ ಎಲ್ಲ ಕೆಲಸಗಳನ್ನು ಸಂತೋಷದಿಂದಲೇ ನಿಭಾಯಿಸುತ್ತಿದ್ದರು. ಆದರೆ, ಮಾಂಗಲ್ಯ ಧಾರಣೆಗೆ ಕೆಲವೇ ಗಂಟೆಗಳಿರುವಾಗ, ನಸುಕಿನ ಜಾವದಲ್ಲಿ ವರನ ತಂದೆ ಶರಣಯ್ಯಸ್ವಾಮಿಯವರಿಗೆ ತೀವ್ರ ಹೃದಯಾಘಾತ ಸಂಭವಿಸಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದರೂ, ಅಷ್ಟರಲ್ಲಾಗಲೇ ಅವರು ಕೊನೆಯುಸಿರೆಳೆದಿದ್ದರು ಎನ್ನಲಾಗಿದೆ.

ಮದುವೆ ಕಾರ್ಯಕ್ರಮ ರದ್ದು

ಒಂದೆಡೆ ಮದುವೆಯ ಸಂಭ್ರಮದ ಸಡಗರ, ಮತ್ತೊಂದೆಡೆ ಮನೆಯ ಯಜಮಾನನ ಅಕಾಲಿಕ ಸಾವು ಈ ಪರಿಸ್ಥಿತಿಯನ್ನು ಎದುರಿಸಲಾಗದೆ ಕುಟುಂಬ ಸದಸ್ಯರು ಆಘಾತಕ್ಕೆ ಒಳಗಾಗಿದ್ದಾರೆ. ತಂದೆಯ ದಿಢೀರ್ ನಿಧನದ ಹಿನ್ನೆಲೆಯಲ್ಲಿ, ಜೈನ್ ಕಲ್ಯಾಣ ಮಂಟಪದಲ್ಲಿ ನೆರವೇರಬೇಕಿದ್ದ ಮದುವೆ ಕಾರ್ಯಕ್ರಮವನ್ನು ತಕ್ಷಣವೇ ರದ್ದುಗೊಳಿಸಲಾಗಿದೆ. ಮದುವೆಗೆಂದು ದೂರದ ಊರುಗಳಿಂದ ಬಂದಿದ್ದ ಸಂಬಂಧಿಕರು, ಸ್ನೇಹಿತರು ಈ ದಾರುಣ ಘಟನೆಯಿಂದ ತೀವ್ರ ದುಃಖಿತರಾಗಿದ್ದಾರೆ.

ಮಗನ ಮದುವೆಯನ್ನು ಕಣ್ತುಂಬಿಕೊಳ್ಳುವ ಅವರ ಆಸೆ ಈಡೇರದೆಯೇ ಶರಣಯ್ಯಸ್ವಾಮಿ ಅವರು ಇಹಲೋಕ ತ್ಯಜಿಸಿದ್ದು, ಗಂಗಾ ನಗರದಲ್ಲಿ ಸೂತಕದ ಛಾಯೆ ಮೂಡಿದೆ.

PREV
Read more Articles on
click me!

Recommended Stories

Namma Metro Update: ಕೆಂಗೇರಿ ಮೆಟ್ರೋ ದುರಂತ; ಮೃತರ ಗುರುತು ಪತ್ತೆ, ಸಂಚಾರ ಸಹಜ ಸ್ಥಿತಿಗೆ!
ಕೆಂಗೇರಿ ಮೆಟ್ರೋ ನಿಲ್ದಾಣದಲ್ಲಿ ಟ್ರ್ಯಾಕ್‌ಗೆ ಹಾರಿ ವ್ಯಕ್ತಿ ಆತ್ಮ೧ಹತ್ಯೆ; ನೇರಳೆ ಮಾರ್ಗದಲ್ಲಿ ರೈಲು ಸಂಚಾರಕ್ಕೆ ವ್ಯತ್ಯಯ!