
ಬೆಂಗಳೂರು (ನ.07) ಕಾಂಗ್ರೆಸ್ ಯುವ ಮುಖಂಡರಿಗೆ ಯುವ ರಾಜ ರಾಹುಲ್ ಗಾಂಧಿ ಆರ್ಡರ್ ಭಯ ಶುರುವಾಗಿದೆ. ಕಳೆದೆರಡು ದಿನದಿಂದ ಒಬ್ಬರ ಹಿಂದೆ ಒಬ್ಬರು ಮುಖಂಡರು ಕಾಂಗ್ರೆಸ್ ಪಕ್ಷದಿಂದ ಅಮಾನತುಗೊಳ್ಳುತ್ತಿದ್ದಾರೆ. ವಿವರಣೆ, ಸ್ಪಷ್ಟನೆ, ಕಾರಣ ಯಾವುದು ಕೇಳದೆ ಕಾಂಗ್ರೆಸ್ ಪದಾಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗುತ್ತಿದೆ. ನವೆಂಬರ್ 1 ರಂದು ದೆಹಲಿಯಲ್ಲಿ ರಾಹುಲ್ ಗಾಂಧಿ ಆಯೋಜಿಸಿದ ವೋಟ್ ಚೋರಿ ಪ್ರತಿಭಟನಾ ರ್ಯಾಲಿ ಈ ಅಮಾನತ್ತಿಗೆ ಕಾರಣವಾಗಿದೆ.
ನವೆಂಬರ್ 1ರಂದು ದೆಹಲಿಯಲ್ಲಿ ಬೃಹತ್ ರ್ಯಾಲಿ ಆಯೋಜಿಸಲಾಗಿತ್ತು. ರಾಹುಲ್ ಗಾಂಧಿ ನೇತೃತ್ವದಲ್ಲಿ ವಿಪಕ್ಷಗಳು ಈ ರ್ಯಾಲಿ ಆಯೋಜಿಸಿತ್ತು. ದೇಶದ ಮೂಲೆ ಮೂಲೆಗಳಿಂದ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಆದರೆ ಕೆಲ ಮುಖಂಡರು, ಪದಾಧಿಕಾರಿಗಳು ಈ ಪ್ರತಿಭಟನೆಗೆ ಗೈರಾಗಿದ್ದರು. ಗೈರಾದ ಪದಾಧಿಕಾರಿಗಳು, ಮುಖಂಡರನ್ನು ಹುಡುಕಿ ಹುಡುಕಿ ಅಮಾನತು ಮಾಡಲಾಗುತ್ತಿದೆ. ಈ ಪೈಕಿ ಕರ್ನಾಟಕದ ನಾಲ್ವರು ಪದಾಧಿಕಾರಿಗಳು ಅಮಾನತ್ತಾಗಿದ್ದಾರೆ.
ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷರ ಸೂಚನೆ ಮೇರೆಗೆ ಪ್ರತಿಭಟನೆಗೆ ಗೈರಾದ ಕಾಂಗ್ರೆಸ್ ಮುಖಂಡರನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗದೆ. ಇದರ ಭಾಗವಾಗಿ ಸಚಿವ ರುದ್ರಪ್ಪ ಲಮಾಣಿ ಪುತ್ರ, ಹಾವೇರಿ ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ದರ್ಶನ್ ಕುಮಾರ್ ಸಸ್ಪೆಂಡ್ ಆಗಿದ್ದಾರೆ. ಇನ್ನು ಯೂತ್ ಕಾಂಗ್ರೆಸ್ ಕಾರ್ಯದರ್ಶಿಗಳಾದ ಅಬ್ದುಲ್ ಅಜೀಜ್, ಸೂರಜ್, ಪವನ್ ಸಾಲಿಯಾನ್ ಸೇರಿ ಅಭಿಷೇಕ್ ನಾಲ್ವರು ಸಸ್ಪೆಂಡ್ ಆಗಿದ್ದಾರೆ.
ರಾಹುಲ್ ಗಾಂಧಿ ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಳ್ಳದ ಯೂತ್ ಕಾಂಗ್ರೆಸ್ ಮುಖಂಡರು, ಪದಾಧಿಕಾರಿಗಳಿಗೆ ಸಸ್ಪೆಂಡ್ ಬಿಸಿ ತಟ್ಟುತ್ತಿದೆ. ದೇಶಾದ್ಯಂತ ಈಗಾಗಲೇ 200ಕ್ಕೂ ಹೆಚ್ಚು ಪದಾಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ. ಈ ಪೈಕಿ ಮಧ್ಯಪ್ರದೇಶದಲ್ಲಿ ಅತೀ ಹೆಚ್ಚು ಕಾಂಗ್ರೆಸ್ ಮುಖಂಡರು ಅಮಾನತ್ತಾಗಿದ್ದಾರೆ.
ನವೆಂಬರ್ 1ರಂದು ಆಯೋಜಿಸಿದ ರ್ಯಾಲಿ ಅತ್ಯಂತ ಯಶಸ್ವಿಯಾಗಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ. ಈ ಯಶಸ್ವಿ ಪ್ರತಿಭಟನೆ ಬೆನ್ನಲ್ಲೇ ಇದೀಗ ಮತ್ತೊಂದು ಸುತ್ತಿನ ಶಕ್ತಿ ಪ್ರದರ್ಶನಕ್ಕೆ ಕಾಂಗ್ರೆಸ್ ಮುಂದಾಗಿದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ದೆಹಲಿಯಲ್ಲಿ ಮತ್ತೊದು ಹೋರಾಟ ನಡೆಯಲಿದೆ. ನವೆಂಬರ್ 26ರಂದು ಸಂವಿಧಾನ್ ಬಚಾವೋ ಪ್ರತಿಭಟನೆ ನಡೆಯಲಿದೆ. ಸತತವಾಗಿ ಬಿಜೆಪಿ ವಿರುದ್ದ ಬೀದಿ ಹೋರಾಟಕ್ಕೆ ಕಾಂಗ್ರೆಸ್ ಪ್ಲಾನ್ ಮಾಡಿಕೊಂಡಿದೆ. ಈ ಮೂಲಕ ಮೋದಿ ಸರ್ಕಾರಕ್ಕೆ ಪ್ರತಿಭಟನೆ ಬಿಸಿ ಮುಟ್ಟಿಸಲು ರಾಹುಲ್ ಗಾಂಧಿ ತಯಾರಿ ನಡೆಸಿದ್ದಾರೆ. ಇಷ್ಟೇ ಅಲ್ಲ ಮೋದಿ ಸರ್ಕಾರಕ್ಕೆ ಹೆಜ್ಜೆ ಹೆಜ್ಜೆಗೂ ಸಿಂಹ ಸ್ವಪ್ನವಾಗಿ ಕಾಡಲು ಸಜ್ಜಾಗಿದ್ದಾರೆ.