ಮಂಡ್ಯ(ನ.03): ನಟ ಪುನೀತ್ ರಾಜಕುಮಾರ್ (Puneeth Rajkumar) ಹಠಾತ್ ಸಾವಿನಿಂದ ಉಂಟಾಗಿರುವ ಭಯ ಮತ್ತು ಆತಂಕ ಜನಮಾನಸದಿಂದ ಇನ್ನೂ ದೂರವಾಗಿಲ್ಲ. ಹೃದ್ರೋಗ ತಪಾಸಣೆಗೆ (Heart Checkup) ಆಸ್ಪತ್ರೆಗೆ (Hospital) ಬರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಹೃದಯ ಆರೋಗ್ಯದ (Heart Health) ಬಗ್ಗೆ ಅನುಮಾನಗೊಂಡು ಜನರು ಪರೀಕ್ಷೆಗೆ ಮುಗಿ ಬೀಳುತ್ತಿದ್ದಾರೆ.
ಜಿಲ್ಲಾ ಆಸ್ಪತ್ರೆಯ ಇಸಿಜಿ (ECG) ವಿಭಾಗಕ್ಕೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಧಾವಿಸಿ ಬರುತ್ತಿದ್ದಾರೆ. ಜಿಲ್ಲೆಯ ಎಲ್ಲಾ ತಾಲೂಕುಗಳಿಂದ (Taluk) ಮಾತ್ರವಲ್ಲದೆ ರಾಮನಗರ (Ramanagara), ಚನ್ನಪಟ್ಟಣ (Channapattana), ಚಾಮರಾಜನಗರ (Chamarajanagar) ಜಿಲ್ಲೆಗಳಿಂದಲೂ ಆಗಮಿಸಿ ಜಿಲ್ಲಾಸ್ಪತ್ರೆಗೆ ಇಸಿಜಿ (ECG) ಪರೀಕ್ಷೆಗೆ ಒಳಗಾಗುತ್ತಿದ್ದಾರೆ.
ಈ ಮೊದಲು ಜಿಲ್ಲಾ ಆಸ್ಪತ್ರೆಯಲ್ಲಿ ನಿತ್ಯ 40ರಿಂದ 50 ಜನರಿಗೆ ಮಾತ್ರ ಇಸಿಜಿ (ECG) ಪರೀಕ್ಷೆ ಮಾಡಲಾಗುತ್ತಿತ್ತು. ಅವರೆಲ್ಲರೂ ಸಣ್ಣ ಪುಟ್ಟ ಹೃದಯ ರೋಗ ಸಮಸ್ಯೆಯಿಂದ ಬಳಲುತ್ತಿದ್ದವರೇ ಆಗಿದ್ದರು. ಆದರೆ, ಈಗ ಬರುತ್ತಿರುವವರಲ್ಲಿ ಬಹುತೇಕರು ಯುವಕರೇ (Youths) ಆಗಿದ್ದಾರೆ. ಎದೆ ನೋವು , ಎದೆ ಹಿಡಿದುಕೊಂಡಂತೆ ಆಗುತ್ತಿದೆ, ಎದೆ ಒತ್ತಿದಂತೆ ಆಗುತ್ತಿದೆ. ಹೀಗೆ ನಾನಾ ರೀತಿಯ ಸಮಸ್ಯೆಗಳನ್ನು ವೈದ್ಯರೆದುರು (Doctors) ತೆರೆದಿಡುತ್ತಾ ಹೃದಯ ಆರೋಗ್ಯವನ್ನು ಖಚಿತಪಡಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.
ಸದಾ ಹಸನ್ಮುಖಿಯಾಗಿ, ಸಂಪೂರ್ಣ ಆರೋಗ್ಯದಿಂದಿದ್ದು, ದೇಹವನ್ನು ಸದೃಢವಾಗಿಟ್ಟುಕೊಂಡಿದ್ದ ಪುನೀತ್ ರಾಜ್‌ಕುಮಾರ್ (Puneeth Rajkumar) ಹೃದಯ ಸ್ಥಂಭನಕ್ಕೆ ಒಳಗಾಗಿ ಸಾವನ್ನಪ್ಪಿದ್ದು ಎಲ್ಲರನ್ನೂ ಭಯಭೀತರನ್ನಾಗಿ ಮಾಡಿದೆ. ದೇಹವನ್ನು ಎಲ್ಲ ರೀತಿಯಲ್ಲೂ ಫಿಟ್ (Fit) ಆಗಿ ಇರಿಸಿಕೊಂಡಿದ್ದ ಪುನೀತ್‌ಗೆ ಸಾವು ಎದುರಾಗಿದ್ದೇ ಎಲ್ಲರನ್ನೂ ಅಚ್ಚರಿಗೊಳಪಡಿಸಿದೆ.
ಪುನೀತ್ ಸಾವಿನ ನಂತರದಲ್ಲಿ ಆಸ್ಪತ್ರೆಗೆ (Hospital) ಹೃದಯ ತಪಾಸಣೆಗೆ ಬರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಗ್ಯಾಸ್ಟಿಕ್ (Gastric) ತೊಂದರೆಯಿಂದ ಬಳಲುತ್ತಿರುವವರೂ ಅನಗತ್ಯವಾಗಿ ಭಯ-ಆತಂಕಕ್ಕೆ ಒಳಗಾಗುತ್ತಿದ್ದಾರೆ. ಮಂಗಳವಾರ ಜಿಲ್ಲಾಸ್ಪತ್ರೆಯಲ್ಲಿ (District Hospital) ಇಸಿಜಿ ಪರೀಕ್ಷೆಗೊಳಗಾದ ಬಹುತೇಕರಲ್ಲಿ ಯಾವ ಹೃದ್ರೋಗ ಸಮಸ್ಯೆಯೂ ಇರಲಿಲ್ಲ. ಗ್ಯಾಸ್ಟಿಕ್ ಸಮಸ್ಯೆ ಎದುರಾಗಿದ್ದವರಿಗೆ ಮಾತ್ರೆ ಚೀಟಿ ಬರೆದುಕೊಟ್ಟು ಕಳುಹಿಸಲಾಗುತ್ತಿತ್ತು. ಮೂರು ದಿನಗಳಿಂದ ಆಸ್ಪತ್ರೆಗೆ ಇಸಿಜಿ ಪರೀಕ್ಷೆಗೆ ಬರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಅನಗತ್ಯ ಭಯ-ಆತಂಕದಿಂದ ಪರೀಕ್ಷೆ ಬೇಡವೆಂದು ಹೇಳಿದರೆ ಸಾರ್ವಜನಿಕರು (Public) ಆಸ್ಪತ್ರೆ ಸಿಬ್ಬಂದಿ ವಿರುದ್ಧವೇ ಕೆರಳುತ್ತಿದ್ದಾರೆ. ಹಾಗಾಗಿ ಬಂದವರೆಲ್ಲರಿಗೂ ಇಸಿಜಿ (ECG) ಪರೀಕ್ಷೆ ಮಾಡಿಸಿ ಕಳುಹಿಸಲಾಗುತ್ತಿದೆ.
ಪುನೀತ್ ಸಾವಿನ ಬಳಿಕ ಹೃದಯ ಪರೀಕ್ಷೆ ಮಾಡಿಸಿಕೊಳ್ಳುವುದು ಸಮೂಹ ಸನ್ನಿಯಂತೆ ಎಲ್ಲೆಡೆ ಹರಡಿದೆ. ಯುವಕರು ಸುಮ್ಮನೆ ಭಯಪಡುವುದು, ಆತಂಕಕ್ಕೆ ಒಳಗಾಗುವುದು ಬೇಡ. ಗ್ಯಾಸ್ಟಿಕ್ ತೊಂದರೆ ಇದ್ದವರು ತಮಗೆ ಹೃದ್ರೋಗವಿದೆ ಎಂದು ಭಾವಿಸುವುದು ಸರಿಯಲ್ಲ. ನಿಯಮಿತ ವ್ಯಾಯಾಮದೊಂದಿಗೆ (exercise) ದೇಹಾರೋಗ್ಯವನ್ನು ಉತ್ತಮ ರೀತಿಯಲ್ಲಿಟ್ಟುಕೊಳ್ಳಿ. ಪೌಷ್ಠಿಕಾಂಶ ಆಹಾರ (Healthy Food) ಸೇವಿಸುವುದರೊಂದಿಗೆ ಹೃದಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು. ಭಯ-ಆತಂಕಪಡುವುದರಲ್ಲಿ ಅರ್ಥವಿಲ್ಲ.
ಡಾ.ಹರೀಶ್, ನಿರ್ದೇಶಕರು, ಮಿಮ್ಸ್
ಹೃದಯಾಘಾತಕ್ಕೆ ಕಾರಣವಾಗುವ ಕೆಲವು ರಿಸ್ಕ್ ಫ್ಯಾಕ್ಟರ್‍ಗಳು:
1 .ತಂಬಾಕು ಸೇವನೆ/ಧೂಮಪಾನ
2. ಅಧಿಕ ಕೊಲೆಸ್ಟರಾಲ್
3. ಅಧಿಕ ಎಲ್‍ಡಿಎಲ್ ಕೊಲೆಸ್ಟರಾಲ್
4. ಕಡಿಮೆ ಎಚ್‍ಡಿಎಲ್ ಕೊಲೆಸ್ಟರಾಲ್
5. ಅಧಿಕ ಬ್ಲಡ್ ಷುಗರ್/ಡಯಾಬಿಟಿಸ್
6. ಅಧಿಕ ರಕ್ತದೊತ್ತಡ
7. ಅಧಿಕ ತೂಕ
8 ದೈಹಿಕ ಶ್ರಮವಿಲ್ಲದ ಜೀವನ
9 ಐಷಾರಾಮಿ ಅಭ್ಯಾಸಗಳು/ಸೇಡೆಂಟರಿ ಲೈಫ್ ಸ್ಟೈಲ್
10 ಉದ್ವೇಗ ಮಾನಸಿಕ, ಉದ್ಯೋಗದ , ನಗರ ಜೀವನದ ಒತ್ತಡಗಳು ಮತ್ತು ಆಯಾಸ
11 ಸಂಸ್ಕರಿಸಿದ ಆಹಾರ/ಅತಿಯಾದ ಜಿಡ್ಡು ಪದಾರ್ಥ ಸೇವನೆ
12 ಪರಿಸರ ಮಾಲಿನ್ಯ
13 ಅನುವಂಶಿಯ ಅಂಶಗಳು