ಕಾನೂನಿನ್ವಯ ಪೌರಕಾರ್ಮಿಕರಿಗೆ ನ್ಯಾಯ ಒದಗಿಸಿ

By Kannadaprabha NewsFirst Published Dec 17, 2022, 5:06 AM IST
Highlights

ಜಿಲ್ಲಾಧಿಕಾರಿಗಳು ಹಾಗೂ ನಗರಾಭಿವೃದ್ಧಿ ಇಲಾಖೆ ಅಗತ್ಯ ಕ್ರಮ ಕೈಗೊಂಡು, ಪೌರಕಾರ್ಮಿಕರಿಗೆ ಕಾನೂನಿನ ಅನ್ವಯ ನ್ಯಾಯ ಒದಗಿಸುವಂತೆ ತುಮಕೂರು ಜಿಲ್ಲಾ ಪೌರಕಾರ್ಮಿಕರ ಸಂಘ(ಸಿಐಟಿಯು) ಅಧ್ಯಕ್ಷ ಸೈಯದ್‌ ಮುಜೀವ್‌ ಮನವಿ ಮಾಡಿದ್ದಾರೆ.

 ತುಮಕೂರು(ಡಿ.17): ಇಪ್ಪತ್ತು ವರ್ಷಗಳ ನಿರಂತರ ಹೋರಾಟದ ಫಲವಾಗಿ ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯ ತುಮಕೂರು ಮಹಾನಗರ ಪಾಲಿಕೆಯಲ್ಲಿ ದಿನಗೂಲಿ ಆಧಾರದಲ್ಲಿ ದುಡಿಯುತ್ತಿದ್ದ 250 ಪೌರಕಾರ್ಮಿಕರ ಸೇವೆಯನ್ನು ಕಾಯಂಗೊಳಿಸುವಂತೆ ಆದೇಶ ನೀಡಿದ್ದು, ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಹಾಗೂ ನಗರಾಭಿವೃದ್ಧಿ ಇಲಾಖೆ ಅಗತ್ಯ ಕ್ರಮ ಕೈಗೊಂಡು, ಪೌರಕಾರ್ಮಿಕರಿಗೆ ಕಾನೂನಿನ ಅನ್ವಯ ನ್ಯಾಯ ಒದಗಿಸುವಂತೆ ತುಮಕೂರು ಜಿಲ್ಲಾ ಪೌರಕಾರ್ಮಿಕರ ಸಂಘ(ಸಿಐಟಿಯು) ಅಧ್ಯಕ್ಷ ಸೈಯದ್‌ ಮುಜೀವ್‌ ಮನವಿ ಮಾಡಿದ್ದಾರೆ.

ನಗರದ ಚಳವಳಿ ಕೇಂದ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೌರ ಕಾರ್ಮಿಕರ ಗಟ್ಟಿಯಾದ ಹೋರಾಟ ಮತ್ತು ಅದರ ಪರವಾಗಿ ನಿಂತ ಎಲ್ಲರ ಸಹಕಾರದಿಂದ ಕಾನೂನು ಹೋರಾಟ ತಾರ್ಕಿಕ ಅಂತ್ಯ ಕಂಡಿದೆ. ಅಧಿಕಾರಿಗಳು ಇದನ್ನು ಮತ್ತಷ್ಟು ಬೆಳೆಸದೆ, ಈ ನೆಲದ ಕಾನೂನಿಗೆ (Law) ಗೌರವ ನೀಡಿ, ನ್ಯಾಯಾಲಯದ ಆದೇಶದ ಅನ್ವಯ ಪರಿಶಿಷ್ಟಜಾತಿಗೆ ಸೇರಿದ 250 ಜನ ಪೌರಕಾರ್ಮಿಕರನ್ನು ಕಾಯಂಗೊಳಿಸಬೇಕೆಂಬುದು ರ ಸಂಘದ ಕೋರಿಕೆಯಾಗಿದೆ ಎಂದರು.

Tumakur) ನಗರಸಭೆಗೆ 2002ರಲ್ಲಿ ಸುಮಾರು 250 ಜನ ಪೌರಕಾರ್ಮಿಕರು ದಿನಗೂಲಿ ಆಧಾರದಲ್ಲಿ ನೇಮಕಗೊಂಡಿದ್ದು, ಆನಂತರ ಗುತ್ತಿಗೆ, ನೇರ ನೇಮಕಾತಿ ಹೀಗೆ ದುಡಿಯುತ್ತಾ ಬಂದಿದ್ದು, ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ಕಾಯಂಗೊಳಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಸರ್ಕಾರ ಸದರಿ ಮನವಿಯನ್ನು ಪರಿಶೀಲಿಸುವಂತೆ ಕೈಗಾರಿಕಾ ನ್ಯಾಯಾಧೀಕರಣಕ್ಕೆ ವಹಿಸಿತ್ತು. ಕೈಗಾರಿಕಾ ನ್ಯಾಯಾಧೀಕರಣವೂ 2006ರಲ್ಲಿ ನೌಕರರನ್ನು ಕಾಯಂ ಮಾಡಲು ಬರುವುದಿಲ್ಲ ಎಂಬ ಆದೇಶ ನೀಡಿದ್ದು, ಇದರ ವಿರುದ್ಧ 2009ರಲ್ಲಿ ಹೈಕೋರ್ಚ್‌ಗೆ ಪೌರಕಾರ್ಮಿಕರು ಮೇಲ್ಮನವಿ ಸಲ್ಲಿಸಿದ್ದು, ನ್ಯಾಯಾಲಯವೂ ಪುನರ್‌ ಪರಿಶೀಲಿಸುವಂತೆ ಕೈಗಾರಿಕಾ ನ್ಯಾಯಾಧೀಕರಣಕ್ಕೆ ಕಡತವನ್ನು ಹಿಂದಿರುಗಿಸಿತ್ತು.

ಸದರಿ ವಿಚಾರವಾಗಿ ಎರಡು ಕಡೆಯ ವಾದ, ವಿವಾದಗಳನ್ನು ಆಲಿಸಿದ ಕೈಗಾರಿಕಾ ನ್ಯಾಯಾಧೀಕರವೂ 2017ರ ಸೆಪ್ಟಂಬರ್‌ 26ರಂದು ತೀರ್ಪು ನೀಡಿ, ದಿನಗೂಲಿ ಆಧಾರದಲ್ಲಿ ನೇಮಕವಾಗಿ ದುಡಿಯುತಿರುವ ಪೌರಕಾರ್ಮಿಕರು, ಕಾಯಂ ಸ್ವರೂಪದ ಕಾರ್ಯವನ್ನು ನಿರ್ವಹಿಸುತ್ತಿದ್ದು, ಬಹಳ ಸುಧೀರ್ಘ ಅವಧಿಯವರೆಗೆ ಕಸ ಎತ್ತುವ ಕೆಲಸ ಮಾಡುತ್ತಿರುವುದರಿಂದ ಅವರ ಸೇವೆಯನ್ನು ಕಾಯಂಗೊಳಿಸುವಂತೆ ಆದೇಶ ನೀಡಿದ್ದರು. ಸದರಿ ಆದೇಶದ ವಿರುದ್ಧ ತುಮಕೂರು ಮಹಾನಗರಪಾಲಿಕೆ 2018ರ ಅಕ್ಟೋಬರ್‌ 1ರಂದು ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದರು.

ಸದರಿ ವಿಚಾರವಾಗಿ ವಾದ, ವಿವಾದ ಆಲಿಸಿದ ನ್ಯಾಯಾಲಯ, ಕಾಯಂ ಪೌರಕಾರ್ಮಿಕರು ಮಾಡುವ ಕೆಲಸಕ್ಕೂ, ದಿನಗೂಲಿ ಪೌರಕಾರ್ಮಿಕರು ಮಾಡುವ ಕೆಲಸಕ್ಕೂ ಯಾವುದೇ ವ್ಯತ್ಯಾಸವಿಲ್ಲದ ಕಾರಣ, ಬಹಳ ಸುದೀರ್ಘ ಅವಧಿಯಿಂದಲೂ ಅವರು ಕಸ ಎತ್ತುವ ಕೆಲಸ ಮಾಡುತ್ತಿರುವುದರಿಂದ ಅವರನ್ನು ಕಾಯಂಗೊಳಿಸಬೇಕೆಂಬ ಕೈಗಾರಿಕಾ ನ್ಯಾಯಾಧೀಕರಣದ ತೀರ್ಪು ಸಮಂಜಸವಾಗಿದೆ. ಹಾಗಾಗಿ ನಗರಪಾಲಿಕೆ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿ, ಮುಂದಿನ ಮೂರು ತಿಂಗಳಲ್ಲಿ ಸದರಿ ನೌಕರರ ಸೇವೆಯನ್ನು ಕಾಯಂಗೊಳಿಸುವಂತೆ ಆದೇಶ ಮಾಡಿದೆ. ಇದರ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳಿಗೆ ವಹಿಸಿದೆ ಎಂದು ಸೈಯದ್‌ ಮುಜೀಬ್‌ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪೌರಕಾರ್ಮಿಕರ ಸಂಘದ ಎನ್‌.ಕೆ.ಸುಬ್ರಮಣ್ಯ, ನರಸಿಂಹಮೂರ್ತಿ, ನಾಗರಾಜು, ವೆಂಕಟೇಶ್‌,ಗೋಪಿ, ಕೆಂಪಣ್ಣ ಮತ್ತಿತರರು ಉಪಸ್ಥಿತರಿದ್ದರು.

ನ್ಯಾಯಾಲಯದಲ್ಲಿ ಕಾಯಂ ಅರ್ಜಿ ಸಲ್ಲಿಸಿ ಕಾನೂನು ಹೋರಾಟ ನಡೆಸುತ್ತಿದ್ದ 250 ನೌಕರರಲ್ಲಿ 36 ಜನರು ಈಗಾಗಲೇ ಮರಣ ಹೊಂದಿದ್ದಾರೆ. ಸುಮಾರು 42 ಜನರು ನೇರ ನೇಮಕಾತಿಯಲ್ಲಿ ಸೇರ್ಪಡೆಗೊಂಡಿದ್ದು, 172 ಜನ ಮಾತ್ರ ದಿನಗೂಲಿ ನೌಕರರಾಗಿ ಇಂದಿಗೂ ದುಡಿಯುತ್ತಿದ್ದು, ಇವರ ಸೇವೆಯನ್ನು ನ್ಯಾಯಾಲಯದ ಆದೇಶದ ಅನ್ವಯ ಕಾಯಂಗೊಳಿಸುವಂತೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಕೇಳಿಕೊಳ್ಳಲಾಗಿದೆ. ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಅಜಯ್‌ ನಾಗಭೂಷಣ್‌ ಅವರಿಗೂ ಮನವಿ ಸಲ್ಲಿಸಲಾಗುವುದು.

ಸೈಯದ್‌ ಮುಜೀವ್‌ ಅಧ್ಯಕ್ಷ, ತುಮಕೂರು ಜಿಲ್ಲಾ ಪೌರಕಾರ್ಮಿಕರ ಸಂಘ

ಪೋಟೋ: ತುಮಕೂರು ನಗರದ ಚಳವಳಿ ಕೇಂದ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್‌ ಮುಜೀವ್‌ ಮಾತನಾಡಿದರು.

click me!