
ಶಿವರಾಜ್ ವಿಶ್ವನಾಥ್
ಬೆಂಗಳೂರು ಅ.03: ಪಶ್ಚಿಮ ಘಟ್ಟ ನದಿಗಳಾದ ಬೇಡ್ತಿ-ಅಘನಾಶಿನಿ ನದಿ ತಿರುವು ಯೋಜನೆ ವಿರೋಧಿಸಿ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅ.10ರಂದು ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ.
ದಕ್ಷಿಣ ಭಾರತದ ಜಲಮೂಲ ಹಾಗೂ ಜೀವ ವೈವಿದ್ಯ ಭಂಡಾರ, ಅಮೂಲ್ಯ ಪಶ್ಚಿಮಘಟ್ಟ ಶ್ರೇಣಿಯುದ್ದಕ್ಕೂ ಕರ್ನಾಟಕದಲ್ಲಿ ಅನೇಕ ಬೃಹತ್ ಯೋಜನೆಗಳು ಪ್ರಸ್ತಾಪವಾಗುತ್ತಿವೆ. ಶರಾವತಿ ಕಣಿವೆಯಲ್ಲಿ ಭೂಗತ ಜಲವಿದ್ಯುತ್ ಯೋಜನೆಗೆ ಸಿದ್ಧತೆ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಹರಿಯುವ ಬೇಡ್ತಿ (ಗಂಗಾವಳಿ) ಹಾಗೂ ಅಘನಾಶಿನಿ ನದಿಗಳನ್ನು ತಿರುಗಿಸಿ ಪೂರ್ವದ ಬಯಲುನಾಡಿನ ಜಿಲ್ಲೆಗಳಿಗೆ ಕೊಂಡೊಯ್ಯುವ ನದಿ ತಿರುವು ಯೋಜನೆಗಳು ಜನ ಜೀವನ, ಭವಿಷ್ಯದ ಸುರಕ್ಷತೆ, ಪರಿಸರ, ಮೀನುಗಾರಿಕೆ ಹಾಗೂ ಕೃಷಿ ಮೇಲೆ ಘೋರ ದುಷ್ಪರಿಣಾಮ ಬೀರಲಿವೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಅಲ್ಲದೆ, ಬೇಡ್ತಿ- ವರದಾ, ಅಘನಾಶಿನಿ-ವೇದಾವತಿ ನದಿ ಜೋಡಣೆ ಯೋಜನೆಗಳು ಜನಜೀವನ, ಪರಿಸರ ಹಾಗೂ ಭವಿಷ್ಯಕ್ಕೆ ಗಂಭೀರ ಅಪಾಯ ತರಲಿವೆ, ಬೇಡ್ತಿ-ಅಘನಾಶಿನಿ ನದಿಗಳಲ್ಲಿ ಜುಲೈ-ಸೆಪ್ಟೆಂಬರ್ ತಿಂಗಳಲ್ಲಿ ಮಾತ್ರ ಮಳೆ ನೀರಿನ ಪ್ರವಾಹವಿದ್ದು, ಉಳಿದ ಒಂಬತ್ತು ತಿಂಗಳು ಹರಿವು ಕಡಿಮೆ, ಹೆಚ್ಚುವರಿ ನೀರಿದೆ ಎಂಬ ಲೆಕ್ಕವೇ ತಪ್ಪು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಯೋಜನೆಗಳಿಂದ ಭೂಕುಸಿತ, ಕರಾವಳಿ ಪರಿಸರ ನಾಶ, ಕರಾವಳಿ ಒಳಪ್ರದೇಶಗಳಿಗೆ ಉಪ್ಪು ನೀರು ನುಗ್ಗುವುದು, ಮಣ್ಣು, ಪೋಷಕಾಂಶ ಸಾಗಣೆಯು ನಾಶವಾಗುವುದು, ಹೆಚ್ಚಲಿರುವ ಧೂಳು ಸೇರಿದಂತೆ ಹಲವು ದುಷ್ಪರಿಣಾಮ ಬೀರಲಿವೆ ಎಂದು ತಿಳಿಸಿದ್ದಾರೆ.
ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ನದಿ ತಿರುವು ವಿರೋಧಿ ಆಯೋಜಿಸಿರುವ ಪ್ರತಿಭಟನಾ ಧರಣಿಯಲ್ಲಿ ನ್ಯಾಯಮೂರ್ತಿಗಳಾದ ಸಂತೋಷ್ ಹೆಗಡೆ, ಸಿ.ಎಂ.ಜೋಷಿ, ಪರಿಸರ ತಜ್ಞ ಯಲ್ಲಪ್ಪರೆಡ್ಡಿ, ಅಂಕೋಲಾ ಕಡಲಜೀವಿ ತಜ್ಞ ಡಾ.ವಿ.ಎನ್.ನಾಯಕ್, ಬಸವರಾಜ ಪಾಟೀಲ್, ಅಖಿಲ ಕರ್ನಾಟಕ ಹವ್ಯಕ ಮಹಾಸಭಾ ಅಧ್ಯಕ್ಷ ಡಾ.ಗಿರಿಧರ ಕಜೆ, ಚಕ್ರವರ್ತಿ ಸೂಲಿಬೆಲೆ, ತೇಜಸ್ವಿನಿ ಅನಂತಕುಮಾರ್, ಡಾ.ಶ್ರೀನಿವಾಸ ರೆಡ್ಡಿ, ನಟ ರಾಮಕೃಷ್ಣ, ಉತ್ತರಕನ್ನಡದ ಶಾಸಕರು, ಸಂಸದರು ಸೇರಿ ಹಲವು ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶಿಸರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.