ಕ್ವಿಂಟಲ್‌ ಕೊಬ್ಬರಿ .19 ಸಾವಿರ ನಿಗದಿಗೆ ಆಗ್ರಹಿಸಿ ಪ್ರತಿಭಟನೆ

By Kannadaprabha News  |  First Published Jan 29, 2023, 5:53 AM IST

ಕ್ವಿಂಟಲ್‌ ಕೊಬ್ಬರಿಗೆ 19 ಸಾವಿರ ರು.ಬೆಲೆಯನ್ನು ನಿಗದಿಪಡಿಸಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಜ.30ರ ಸೋಮವಾರ ಬೆಳಗ್ಗೆ 10.30ಕ್ಕೆ ನಗರದ ಎಪಿಎಂಸಿ ರೈತ ಭವನದಿಂದ ಉಪವಿಭಾಗಾಧಿಕಾರಿಗಳ ಕಚೇರಿವರೆಗೆ ಬೃಹತ್‌ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಿ. ಯೋಗೇಶ್ವರಸ್ವಾಮಿ ತಿಳಿಸಿದರು


 ತಿಪಟೂರು :  ಕ್ವಿಂಟಲ್‌ ಕೊಬ್ಬರಿಗೆ 19 ಸಾವಿರ ರು.ಬೆಲೆಯನ್ನು ನಿಗದಿಪಡಿಸಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಜ.30ರ ಸೋಮವಾರ ಬೆಳಗ್ಗೆ 10.30ಕ್ಕೆ ನಗರದ ಎಪಿಎಂಸಿ ರೈತ ಭವನದಿಂದ ಉಪವಿಭಾಗಾಧಿಕಾರಿಗಳ ಕಚೇರಿವರೆಗೆ ಬೃಹತ್‌ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಿ. ಯೋಗೇಶ್ವರಸ್ವಾಮಿ ತಿಳಿಸಿದರು.

ನಗರದ ಎಪಿಎಂಸಿ ರೈತ ಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

Latest Videos

undefined

ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಬಸ್ತಿಹಳ್ಳಿ ರಾಜಣ್ಣ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಪೋರೇಟ್‌ ಪರವಾಗಿದ್ದು ರೈತ ವಿರೋಧಿ ಕಾನೂನುಗಳನ್ನು ಜಾರಿ ಮಾಡುತ್ತಾ ರೈತರನ್ನು ಸಜೀವವಾಗಿ ಕೊಲ್ಲುತ್ತಿವೆ. ರೈತರ ತೀವ್ರ ಪ್ರತಿಭಟನೆಗೆ ಮಣಿದು ಕೇಂದ್ರ ಸರ್ಕಾರ ತನ್ನ ಕರಾಳ ಕಾಯ್ದೆಗಳನ್ನು ಹಿಂಪಡೆದಿದ್ದರೂ ರಾಜ್ಯ ಸರ್ಕಾರ ತನ್ನ ಹಠಮಾರಿತನದಿಂದ ಕರಾಳ ಕೃಷಿ ಕಾಯ್ದೆಗಳನ್ನು ಮುಂದುವರಿಸಿರುವ ಪರಿಣಾಮ ಕೊಬ್ಬರಿ ಬೆಲೆಯೂ ತೀವ್ರ ಕುಸಿತಕ್ಕೆ ಕಾರಣವಾಗಿದೆ. ಕ್ವಿಂಟಲ್‌ ಕೊಬ್ಬರಿ ಬೆಲೆ 17 ಸಾವಿರದಿಂದ 10 ಸಾವಿರಕ್ಕೆ ಇಳಿದಿರುವುದು ರೈತರ ಬದುಕು ದುಸ್ತರವಾಗಿದೆ. ಕೊಬ್ಬರಿಗೆ ಬೆಂಬಲ ನೀಡುತ್ತೇವೆಂದು ರೈತರ ಮೂಗಿಗೆ ತುಪ್ಪ ಸವರು ಕೆಲಸ ಮಾಡಿದ್ದು ಬಿಟ್ಟರೆ ಸರ್ಕಾರಗಳು ಕೊಟ್ಟಮಾತನ್ನು ಹುಸಿಗೊಳಿಸುತ್ತಿವೆ. ಇದರಿಂದ ರೈತನ ಬದುಕು ಅತಂತ್ರ ಸ್ಥಿತಿಗೆ ತಲುಪಿದ್ದು ಕೂಡಲೇ ಕೊಬ್ಬರಿ ಬೆಲೆಯನ್ನು ಹೆಚ್ಚಿಸಬೇಕು. ಇಲ್ಲವಾದಲ್ಲಿ ಹೋರಾಟ ತೀವ್ರ ಸ್ವರೂಪ ಪಡೆಯಲಿದ್ದು ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ ಅವರು ಪ್ರತಿಭಟನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ರೈತರಿಗೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ತಿಮ್ಲಾಪುರ ದೇವರಾಜು, ಚನ್ನಬಸವಣ್ಣ, ಗಡಬನಹಳ್ಳಿ ತಿಮ್ಮೇಗೌಡ, ಪೊ›. ಜಯನಂದಯ್ಯ, ಮನೋಹರ್‌ಪಾಟೀಲ್‌, ಬೈರಾಪರ ಸ್ವಾಮಿ, ಯೋಗಾನಂದಸ್ವಾಮಿ ಮತ್ತಿತರರಿದ್ದರು.

ರೈತನ ಜೀವನ ನಡೆಸಲು ಕಷ್ಟಕರ

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರ ಬಗ್ಗೆ ವಿರೋಧಿ ಧೋರಣೆ ಅನುಸರಿಸುತ್ತಿದ್ದು ಕೊಬ್ಬರಿ ಧಾರಣೆ ದಿನದಿಂದ ದಿನಕ್ಕೆ ಕುಸಿಯುತ್ತಿದ್ದರೂ ರೈತರಿಗೆ ಬೆಂಬಲ ಬೆಲೆ ಕೊಡುವಲ್ಲಿ ವಿಫಲವಾಗಿವೆ. ಕೊಬ್ಬರಿಯನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ರೈತನಿಗೆ ಜೀವನ ನಡೆಸಲು ಕಷ್ಟಕರವಾಗುತ್ತಿದೆ. ಅಲ್ಲದೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು ಜನ ಸಾಮಾನ್ಯರ ಬದುಕು ಮೂರಾಬಟ್ಟೆಯಾಗಿದೆ. ಇಷ್ಟೆಲ್ಲಾ ಕಷ್ಟಗಳನ್ನು ರೈತ ಅನುಭವಿಸುತ್ತಿದ್ದರು ಕಿಂಚಿತ್ತೂ ಕಾಳಜಿ ಇಲ್ಲದಂತಾಗಿದೆ. ರೈತರ ಹೆಸರೇಳಿಕೊಂಡು ಅಧಿಕಾರ ಗದ್ದುಗೆ ಹಿಡಿದು ಈಗ ಅವರ ಕಷ್ಟಕ್ಕೆ ಸ್ಪಂದಿಸದಿರುವುದು ನೋವಿನ ಸಂಗತಿ. ನಮ್ಮ ಸಂಘ ರೈತಪರವಾಗಿದ್ದು ಕ್ವಿಂಟಲ್‌ ಕೊಬ್ಬರಿಗೆ 19ಸಾವಿರ ರು. ಬೆಲೆ ನಿಗದಿಪಡಿಸುವಂತೆ ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತಿದ್ದು ತಿಪಟೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ ತಾಲೂಕುಗಳಿಂದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.

click me!