ತುಮಕೂರು: ಅವಾಂತರ ಸೃಸ್ಟಿಸ್ತಿದೆ ಸ್ಮಾರ್ಟ್ ಸಿಟಿ ಕಾಮಗಾರಿ, ಆಕ್ರೋಶ

By Kannadaprabha NewsFirst Published Sep 23, 2019, 6:17 PM IST
Highlights

ಸ್ಮಾರ್ಟ್‌ ಸಿಟಿಯಾಗಿ ತುಮಕೂರು ಅಭಿವೃದ್ಧಿಯಾಗುತ್ತಿದ್ದರೆ ಇನ್ನೊಂದೆಡೆ ಅವಾಂತರಗಳು ಸೃಷ್ಟಿಯಾಗ್ತಿವೆ. ಕಾಮಗಾರಿ ಗುತ್ತಿಗೆ ಪಡೆದವರು ಕಾಲಹರಣ ಮಾಡುತ್ತಿದ್ದು, ಕಾಮಗಾರಿಯಿಂದಾಗಿ ಜನರಿಗೆ ಹೆಚ್ಚು ಸಮಸ್ಯೆಯಾಗುತ್ತಿದೆ. ಚೇಂಬರ್‌ಗಳಿಗಾಗಿ ತೆಗೆದ ಹಳ್ಳಗಳಲ್ಲಿ ಮಣ್ಣು ಕುಸಿಯುತ್ತಿದ್ದು, ಇದರಿಂದ ಪ್ರತಿನಿತ್ಯ ಒಂದಲ್ಲಾ ಒಂದು ಕಡೆಗಳಲ್ಲಿ ಕಾರುಗಳು, ದ್ವಿಚಕ್ರ ವಾಹನಗಳು ರಸ್ತೆಯಲ್ಲಿ ಸಿಲುಕುತ್ತಿವೆ. ಈ ಬಗ್ಗೆ ಗಮನ ಹರಿಸುವವರು ಯಾರೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತುಮಕೂರು(ಸೆ.23): ನಗರದಲ್ಲಿ ಸ್ಮಾರ್ಟ್‌ ಸಿಟಿಯ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳಿಂದ ಅವಾಂತರಗಳು ಸೃಷ್ಟಿಯಾಗುತ್ತಿದ್ದು, ಇದರಿಂದ ನಾಗರಿಕರಿಗೆ ತೀವ್ರ ಸಮಸ್ಯೆಗಳು ಎದುರಾಗುತ್ತಿವೆ ಎಂದು 15ನೇ ವಾರ್ಡ್‌ನ ಮಹಾನಗರಪಾಲಿಕೆ ಸದಸ್ಯೆ ಗಿರಿಜಾ ಧನಿಯಾಕುಮಾರ್‌ ಆರೋಪಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ನಗರದಲ್ಲಿ ನಡೆಯುತ್ತಿರುವ ಗ್ಯಾಸ್‌ಪೈಪ್‌ ಲೈನ್‌, 24 ಗಂಟೆಗಳ ಕುಡಿಯುವ ನೀರಿನ ಯೋಜನೆ ಹಾಗೂ ಯುಟಿಲಿಟಿ ಚೇಂಬರ್‌ಗಳ ಕಾಮಗಾರಿಗಳು ಕಳಪೆಯಿಂದ ಕೂಡಿದ್ದು, ಇದರಿಂದ ಸ್ಥಳೀಯ ನಾಗರಿಕರಿಗೆ ತೊಂದರೆಗಳಾಗುತ್ತಿವೆ.

ಅಲ್ಲಲ್ಲಿ ಮಣ್ಣು ಕುಸಿತ:

ಚೇಂಬರ್‌ಗಳಿಗಾಗಿ ತೆಗೆದ ಹಳ್ಳಗಳಲ್ಲಿ ಮಣ್ಣು ಕುಸಿಯುತ್ತಿದ್ದು, ಇದರಿಂದ ಪ್ರತಿನಿತ್ಯ ಒಂದಲ್ಲಾ ಒಂದು ಕಡೆಗಳಲ್ಲಿ ಕಾರುಗಳು, ದ್ವಿಚಕ್ರ ವಾಹನಗಳು ರಸ್ತೆಯಲ್ಲಿ ಸಿಲುಕುತ್ತಿವೆ. ಈ ಬಗ್ಗೆ ಗಮನ ಹರಿಸುವವರು ಯಾರೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಮಗಾರಿ ಪ್ರಾರಂಭ ಮಾಡುವ ಮುನ್ನ ಕಾರ್ಯಾದೇಶ ಪತ್ರ ನೀಡಲಾಗುತ್ತದೆ. ಅದರಲ್ಲಿ ನಿರ್ದಿಷ್ಟಸಮಯ ನಿಗದಿ ಮಾಡಿರುತ್ತಾರೆ. ಆದರೆ, ಇಲ್ಲಿ ಯಾವುದೇ ಕಾರ್ಯಾದೇಶ ಪತ್ರ ತೋರಿಸದೆ, ಕೆಲಸವೂ ಸಂಪೂರ್ಣವಾಗಿ ಮಾಡದೆ ಅರ್ಧಂಬರ್ಧ ಮಾಡಿ ಬಿಡುತ್ತಿದ್ದಾರೆ. ಯಾವುದೇ ಕಾಮಗಾರಿ ಮಾಡಿದ ನಂತರ ಅದನ್ನು ಯಥಾಸ್ಥಿತಿಗೆ ತರಬೇಕು ಎಂದು ಕಾನೂನೇ ಇದೆ. ಆದರೆ ಇಲ್ಲಿ ಮಾಡುತ್ತಿರುವ ಕಾಮಗಾರಿಗಳಿಂದ ನಿತ್ಯ ನರಕ ಅನುಭವಿಸುವಂತಾಗಿದೆ ಎಂದರು.

ರಿಪೇರಿಯಿಲ್ಲ:

ಸ್ಮಾರ್ಟ್‌ ಸಿಟಿಯ ಅಧಿಕಾರಿಗಳು ಕಾಮಗಾರಿಗಳನ್ನು ಪರಿಶೀಲಿಸದೆ, ಕೇವಲ ಪತ್ರಿಕಾಗೋಷ್ಠಿಗಳನ್ನು ಮಾಡುತ್ತಿದ್ದಾರೆ ಹೊರತು, ನಿಜಕ್ಕೂ ಕಾಮಗಾರಿಗಳು ನಡೆಯುತ್ತಿರುವ ಪ್ರದೇಶಗಳ ಪರಿಸ್ಥಿತಿ ಹೇಗಿದೆ ಎಂದು ತಿಳಿದುಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ನಾವೇನಾದರೂ ಸ್ಥಳಕ್ಕೆ ತೆರಳಿ ವಿಚಾರಿಸಿದರೆ ನಮ್ಮ ಸಾಹೇಬರು ಹೇಳಿದ್ದಾರೆ. ನಾವು ಕೆಲಸ ಮಾಡುತ್ತಿದ್ದೇವೆ ಎನ್ನುತ್ತಾರೆ. ಅಲ್ಲದೆ ಕಾಮಗಾರಿ ವೇಳೆ ಒಡೆಯುವ ನೀರಿನ, ಒಳಚರಂಡಿ ಪೈಪುಗಳನ್ನು ಸರಿಪಡಿಸದೆ ಅದನ್ನು ರಬ್ಬರ್‌ಟ್ಯೂಬ್‌ ಮುಚ್ಚಿ ಬಿಟ್ಟುಬಿಡುತ್ತಾರೆ. ಇದು ಮುಂದೊಂದು ದಿನ ಸಮಸ್ಯೆ ಸೃಷ್ಟಿಮಾಡುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಸ್ಮಾರ್ಟಿ ಸಿಟಿಯವರಿಂದ ಕಿರಿಕಿರಿ

ಇತ್ತೀಚೆಗೆ ಸಾರ್ವಜನಿಕರು ಪಾಲಿಕೆ ಸದಸ್ಯರ ಮೇಲೆ ಆಕ್ರೋಶ ವ್ಯಕ್ತ ಪಡಿಸುತ್ತಿದ್ದು, ಈ ಬಗ್ಗೆ ಸ್ಮಾರ್ಟ್‌ ಸಿಟಿ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಬದಲಿಗೆ ಹಳ್ಳ ಬಿದ್ದಿರುವ ಕಡೆ ಮಣ್ಣು ಮುಚ್ಚಿಸಲು ಪ್ರಯತ್ನ ಮಾಡಿದರೆ ಸ್ಮಾರ್ಟ್‌ ಸಿಟಿಯವರು ನಿಮಗೂ ಇದಕ್ಕೂ ಏನು ಸಂಬಂಧ ಎಂದು ಗದರಿಸುವುದರ ಜೊತೆಗೆ ಪೊಲೀಸ್‌ ಇಲಾಖೆಗೆ ದೂರು ನೀಡಲು ಮುಂದಾಗಿದ್ದರು. ಹೀಗಿದ್ದಾಗ ಈ ಸಮಸ್ಯೆಗಳ ಬಗ್ಗೆ ಯಾರಿಗೆ ಕೇಳಬೇಕು ಎಂದು ಪ್ರಶ್ನಿಸಿದ್ದಾರೆ.

ಕಪ್ಪು ಪಟ್ಟಿಗೆ ಸೇರಿಸಿ

ಒಟ್ಟಾರೆಯಾಗಿ ಸ್ಮಾರ್ಟ್‌ ಸಿಟಿ ಕಾಮಗಾರಿಗಳನ್ನು ಮಾಡುವವರು ಉತ್ತಮ ಗುಣಮಟ್ಟದಲ್ಲಿ, ನಿರ್ದಿಷ್ಟಸಮಯದಲ್ಲಿ ಪೂರ್ಣ ಮಾಡಬೇಕು. ಅದನ್ನು ಹೊರತುಪಡಿಸಿ ಕಾಲ ವ್ಯಯ ಮಾಡುತ್ತಾ, ನಾಗರಿಕರಿಗೆ ಸಮಸ್ಯೆ ಉಂಟು ಮಾಡಬಾರದು ಎಚ್ಚರಿಸಿದ್ದಾರೆ. ಈ ರೀತಿಯಾಗಿ ಕಾಮಗಾರಿ ವಿಳಂಬ ಮಾಡುತ್ತಾ, ಸಮಸ್ಯೆ ಉಂಟು ಮಾಡುತ್ತಿರುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿದ್ದಾರೆ.

click me!