
ಬೆಂಗಳೂರು [ಆ.19]: ಜೈನ ಪ್ರಾರ್ಥನಾ ಮಂದಿರದ ಬಳಿ ಹಿಂದಿ ಭಾಷೆಯಲ್ಲಿ ಹಾಕಲಾಗಿದ್ದ ಬ್ಯಾನರ್ ಹರಿದು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡಪರ ಸಂಘಟನೆಯ ಆರು ಮಂದಿಯನ್ನು ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಕರ್ನಾಟಕ ರಣಧೀರ ಪಡೆಯ ರಾಜ್ಯಾಧ್ಯಕ್ಷ ಬಿ.ಹರೀಶ್‌ಕುಮಾರ್, ಪದಾಧಿಕಾರಿಗಳಾದ ಮಂಜು, ಚಂದ್ರಶೇಖರ್, ಕರ್ನಾಟಕ ರಕ್ಷಣಾ ವೇದಿಕೆಯ ಅಂಜನಪ್ಪ, ರಕ್ಷಣಾ ಸೇನೆಯ ರಮೇಶ್‌ಗೌಡ ಹಾಗೂ ಕರುನಾಡ ಸೇವಕರು ವೇದಿಕೆಯ ಮಾದೇಶ್‌ಗೌಡ ಬಂಧಿತರು. ಕನ್ನಡಪರ ಸಂಘಟನೆಗಳ ಕಾರ್ಯಕರ್ತರನ್ನು ಬಂಧಿಸಿರುವುದಕ್ಕೆ ಇದೀಗ ಆಕ್ರೋಶ ವ್ಯಕ್ತವಾದರೆ, ಹಿಂದಿ ಬ್ಯಾನರ್ ಕಿತ್ತು ಹಾಕಿದ್ದಕ್ಕೆ ಜೈನ ಸಮುದಾಯದವರು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಖಂಡಿಸಿದ್ದಾರೆ.
ಬ್ಯಾನರ್ ಹರಿದಿರುವುದನ್ನು ಖಂಡಿಸಿ ಕರ್ನಾಟಕ ಬಂದ್ ಮಾಡಬೇಕು ಎಂದು ಜೈನ ಸಮುದಾಯದ ಯುವಕರು ಸಾಮಾಜಿಕ ತಾಣದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಕನ್ನಡ ಸಂಘಟನೆಗಳು ಇದುವರೆಗೂ ಪರಭಾಷಿಕರ ವಿರುದ್ಧ ಮುಂಬೈ ಮಾದರಿ ಹೋರಾಟ ಕೈಗೆತ್ತಿಕೊಂಡಿಲ್ಲ. ಕರ್ನಾಟಕದಲ್ಲಿರುವ ಪರಭಾಷಿಕರಿಗೆ ಕನ್ನಡವನ್ನು ಗೌರವದಿಂದ ಕಾಣಬೇಕು ಎನ್ನುವ ಕನಿಷ್ಠ ಜ್ಞಾನವೂ ಇಲ್ಲ. ಪರಿಸ್ಥಿತಿ ಹಿಗೆ ಮುಂದುವರಿದರೆ ಮುಂಬೈ ಮಾದರಿ ಹೋರಾಟ ಕೈಗೆತ್ತಿಕೊಳ್ಳಬೇಕಾಗುತ್ತದೆ ಎಂದು ಕರ್ನಾಟಕ ನವ ನಿರ್ಮಾಣ ಸೇನೆ ಎಚ್ಚರಿಕೆ ನೀಡಿದೆ.
ಇನ್‌ಫೆಂಟ್ರಿ ರಸ್ತೆಯ ಬಳಿ ಮಾರವಾಡಿಗಳ ಗಣೇಶ ಬಾಗ್ ಪ್ರಾರ್ಥನಾ ಮಂದಿರ ಇದೆ. ಪ್ರಾರ್ಥನಾ ಮಂದಿರಲ್ಲಿ ಚಾತುರ್ಮಾಸ ಆಚರಣೆ ನಡೆಯುತ್ತಿತ್ತು. ಇದಕ್ಕೆ ಸಂಬಂಧಪಟ್ಟಂತೆ ಹಿಂದಿ ಭಾಷೆಯಲ್ಲಿ ಬ್ಯಾನರ್ ಕಟ್ಟಲಾಗಿತ್ತು. ಸಾರ್ವಜನಿಕ ಪ್ರದೇಶದಲ್ಲಿ ಹಿಂದಿ ಭಾಷೆಯಲ್ಲಿ ಬ್ಯಾನರ್ ಕಟ್ಟಿದ್ದರಿಂದ ಆಕ್ರೋಶಗೊಂಡ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಬ್ಯಾನರ್ ಹರಿದು ಆಕ್ರೋಶ ವ್ಯಕ್ತಪಡಿಸಿದ್ದರು. ಬ್ಯಾನರ್ ಕಿತ್ತು ಹಾಕಿ, ಗಣೇಶ್ ಬಾಗ್ ಮುಂಭಾಗ ಭದ್ರತಾ ಸಿಬ್ಬಂದಿಗೆ ಕನ್ನಡ ಭಾಷೆಯ ಮಹತ್ವ ಹೇಳುತ್ತಿರುವ ವಿಡಿಯೋ ವೈರಲ್ ಆಗಿತ್ತು. ‘ಕನ್ನಡವಿದ್ದರೆ ಶಾಂತಿ-ಇಲ್ಲದಿದ್ದರೆ ಕ್ರಾಂತಿ’ ಎಂದು ಈ ಮೂಲಕ ಎಚ್ಚರಿಕೆ ನೀಡಲಾಗಿತ್ತು.
ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ಬ್ಯಾನರ್ ಹರಿದು ಹಾಕಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕನ್ನಡಪರ ಸಂಘಟನೆಗಳ ಆರು ಮಂದಿ ಕಾರ್ಯಕರ್ತರನ್ನು ಕೋಮು ಸೌಹರ್ದತೆಗೆ ಧಕ್ಕೆ ತರುವ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಆರು ಮಂದಿಯನ್ನು ಭಾನುವಾರ ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದು, ಕಾರ್ಯಕರ್ತರನ್ನು ಜೈಲಿಗೆ ಕಳುಹಿಸಲಾಗಿದೆ.
ವಿಷಯ ತಿಳಿದ ಬಿಜೆಪಿ ವಿಧಾನ ಪರಿಷತ್ ಸದಸ್ಯ ಲೆಹರ್ ಸಿಂಗ್ ಭಾನುವಾರ ಮಧ್ಯಾಹ್ನ ಗಣೇಶ್ ಭಾಗ್‌ಗೆ ಭೇಟಿ ನೀಡಿದ್ದರು. ಈ ವೇಳೆ ಪ್ರತಿಕ್ರಿಯಿಸಿದ ಲೇಹರ್‌ಸಿಂಗ್, ಬ್ಯಾನರ್ ಹರಿದವರ ವಿರುದ್ಧ ಪೊಲೀಸರು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಕನ್ನಡಿಗರು ಬಾರದ್ದಕ್ಕೆ ಹಿಂದಿ ಬ್ಯಾನರ್
ಘಟನೆ ಬಗ್ಗೆ ‘ಗುರು ಆನಂದ ಚಾತುರ್ಮಾಸ’ ಸಮಿತಿಯ ಕಾರ್ಯದರ್ಶಿ ಫ್ಯಾನ್‌ಚಂದ್ ಜೈನ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಜೈನ ಸಮುದಾಯಕ್ಕಾಗಿ ನಡೆಸುವ ಕಾರ್ಯಕ್ರಮ ಆಗಿರುವುದರಿಂದ ಬೇರೆಯವರಿಗೆ ಪ್ರವೇಶ ಇರುವುದಿಲ್ಲ. ಈಗಾಗಿ ಕನ್ನಡದಲ್ಲಿ ಬ್ಯಾನರ್ ಹಾಕಿರಲಿಲ್ಲ ಎಂದು ಹೇಳಿದ್ದಾರೆ.
ನಾವು ಹಿಂದೆಯೂ ಹಿಂದಿ ಭಾಷೆಯಲ್ಲಿಯೇ ಬ್ಯಾನರ್ ಹಾಕಿದ್ದೇವೆ, ಎಂದೂ ಕೂಡ ಇಂತಹ ಅನುಭವ ಆಗಿಲ್ಲ. ಶುಕ್ರವಾರ ಮಾತ್ರ ಕೆಲ ಕಾರ್ಯಕರ್ತರು ಬ್ಯಾನರ್ ಹರಿದಿದ್ದಾರೆ. ನಾವು ಕನ್ನಡ ವಿರೋಧಿಗಳಲ್ಲ. ಚಾತುರ್ಮಾಸಕ್ಕೆ ಕನ್ನಡಿಗರು ಬಾರದ ಕಾರಣ ಹಿಂದಿಯಲ್ಲಿ ಬ್ಯಾನರ್ ಹಾಕಲಾಗಿತ್ತು ಎಂದು ಹೇಳಿದ್ದಾರೆ.