ಲಾಭಗಳಿಕೆಯ ಜತೆಗೆ ಉದ್ಯೋಗಿಗಳ ರಕ್ಷಣೆಗೆ ಆದ್ಯತೆ ನೀಡಿ : ಎಟಿಎಂಎ ಫೌಂಡೇಷನ್‌ ನಿರ್ದೇಶಕ ಸಿ.ಕೆ. ಸುರೇಶ್

By Kannadaprabha NewsFirst Published Dec 23, 2023, 10:21 AM IST
Highlights

ಸಂಸ್ಥೆಗಳು ಲಾಭಗಳಿಕೆಯ ಜೊತೆಗೆ, ತನ್ನ ಉದ್ಯೋಗಿಗಳ ಮತ್ತು ಭೂಮಿಯ ರಕ್ಷಣೆ ಗಮನದಲ್ಲಿ ಇಟ್ಟುಕೊಳ್ಳಬೇಕು ಮತ್ತು ಈ ಪ್ರಕ್ರಿಯೆಯಲ್ಲಿ ಮಾನವ ಸಂಪನ್ಮೂಲ ನಿರ್ವಹಣೆಯು ಅವಿಭಾಜ್ಯ ಅಂಗವಾಗಬೇಕು ಎಂದು ಎಟಿಎಂಎ ಫೌಂಡೇಷನ್‌ ಸ್ಥಾಪಕ ಮತ್ತು ನಿರ್ದೇಶಕ ಸಿ.ಕೆ. ಸುರೇಶ್ ತಿಳಿಸಿದರು.

 ಮೈಸೂರು :  ಸಂಸ್ಥೆಗಳು ಲಾಭಗಳಿಕೆಯ ಜೊತೆಗೆ, ತನ್ನ ಉದ್ಯೋಗಿಗಳ ಮತ್ತು ಭೂಮಿಯ ರಕ್ಷಣೆ ಗಮನದಲ್ಲಿ ಇಟ್ಟುಕೊಳ್ಳಬೇಕು ಮತ್ತು ಈ ಪ್ರಕ್ರಿಯೆಯಲ್ಲಿ ಮಾನವ ಸಂಪನ್ಮೂಲ ನಿರ್ವಹಣೆಯು ಅವಿಭಾಜ್ಯ ಅಂಗವಾಗಬೇಕು ಎಂದು ಎಟಿಎಂಎ ಫೌಂಡೇಷನ್‌ ಸ್ಥಾಪಕ ಮತ್ತು ನಿರ್ದೇಶಕ ಸಿ.ಕೆ. ಸುರೇಶ್ ತಿಳಿಸಿದರು.

ನಗರದ ಎಸ್ಡಿಎಂ, ಐಎಂಡಿ ಮತ್ತು ಬೆಂಗಳೂರಿನ ಚೇಂಬರ್‌ ಆಫ್‌ .ಇಂಡಸ್ಟ್ರಿ ಆ್ಯಂಡ್‌ ಕಾಮರ್ಸ್ ಸಹಯೋಗದಲ್ಲಿ ಆಯೋಜಿಸಿರುವ ಸಾಂಸ್ಥಿಕ ಸುಸ್ಥಿರತೆಗಾಗಿ ಸಂಪನ್ಮೂಲ ಕುರಿತ ಹನ್ನೊಂದನೇ ಅಂತಾರಾಷ್ಟ್ರೀಯ ಸಮ್ಮೇಳನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸಾಂಸ್ಥಿಕ ಸುಸ್ಥಿರತೆಯನ್ನು ನಿಜವಾದ ಅರ್ಥದಲ್ಲಿ ತಲುಪಲು, ಪ್ರಪಂಚದ ಮನಸ್ಥಿತಿಯ ಬದಲಾವಣೆಯ ಅವಶ್ಯಕತೆ ಇದೆ ಎಂದರು.

ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯ ನಿಯಮಾವಳಿ ಅಳವಡಿಸಿಕೊಳ್ಳುವ ಮೂಲಕ ಸುಸ್ಥಿರತೆ ಸಾಧಿಸಲು ಸಾಧ್ಯವೇ ಹೊರತು, ಕೇವಲ ಚಟುವಟಿಕೆಗಳಿಂದ ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಸುಸ್ಥಿರತೆ ಸಾಧಿಸುವುದು ಈಗಿನ ಗುರಿಯಾಗಿರಬೇಕು. ಆ ಧ್ಯೇಯವನ್ನು ಮುಂದಿನ ಸಮಯಕ್ಕೆ ತಳ್ಳುವಂತಾಗಬಾರದು. ಸಾಂಸ್ಥಿಕ ಜೀವತಂತುವಿಗೆ ಸುಸ್ಥಿರತೆ ಸೇರಿಸುವಲ್ಲಿ ಮಾನವ ಸಂಪನ್ಮೂಲವು ಅವಿಭಾಜ್ಯ ಅಂಗವಾಗಿದೆ. ಪ್ರತಿಭಾ ನಿರ್ವಹಣೆ, ಉದ್ಯೋಗಿಗಳನ್ನು ತೊಡಗಿಸುವುದು ಮತ್ತು ಸಾಂಸ್ಥಿಕ ಸಂಸ್ಕೃತಿ ಇವುಗಳನ್ನು ಸುಸ್ಥಿರತೆಯ ಉದ್ದೇಶದೊಂದಿಗೆ ಹೊಂದಿಸುವ ಮೂಲಕ ದೀರ್ಘಕಾಲೀನ ಪರಿಸರ, ಸಾಮಾಜಿಕ ಮತ್ತು ಆರ್ಥಿಕ ಸುಸ್ಥಿರತೆಯನ್ನು ಸಾಧಿಸಬಹುದು. ಡಿಜಿಟಲ್ ರೂಪಾಂತರವನ್ನು ಈಗಾಗಲೇ ಆರಂಭಿಸಿರುವ, ಉತ್ತಮ ನಾಯಕತ್ವವನ್ನು ಹೊಂದಿರುವ, ನಾಯಕತ್ವಕ್ಕೆ ಪ್ರಾಮುಖ್ಯತೆ ನೀಡಿರುವ, ಹಿರಿಯ ಉದ್ಯೋಗಿಗಳಿಂದ ಉತ್ತಮ ಬೆಂಬಲ ಹೊಂದಿರುವ ಮಾನವ ಸಂಪನ್ಮೂಲ ವಿಭಾಗವು ಸಂಸ್ಥೆಗಳ ಅಭಿವೃದ್ಧಿ ಮತ್ತು ಬದಲಾವಣೆಗೆ ಕಾರಣವಾಗುತ್ತದೆ ಎಂದರು.

ಎಸ್.ಡಿ.ಎಂ.ಐ.ಎಂ.ಡಿ ನಿರ್ದೇಶಕ ಡಾ.ಎಸ್.ಎನ್. ಪ್ರಸಾದ್ ಸಮ್ಮೇಳನಕ್ಕೆ ಆಗಮಿಸುವವರನ್ನು ಸ್ವಾಗತಿಸಿ, ಮಾನವ ಸಂಪನ್ಮೂಲ ನಿರ್ವಹಣೆಯ ನಿಯಮಾವಳಿ ಮಾಡುವ ಮುನ್ನ ಸಂಸ್ಥೆಗಳು ಎಲ್ಲಾ ಉದ್ಯೋಗಿಗಳ ಆಸಕ್ತಿ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಅವರು ಹೇಳಿದರು.

ಸಮ್ಮೇಳನದ ಮುಖ್ಯಸ್ಥ ಡಾ. ಮೌಸುಮಿ ಸೇನ್ ಗುಪ್ತ ಅವರು ಸಮ್ಮೇಳನದ ಉದ್ದೇಶಗಳ ಬಗ್ಗೆ ಮಾತನಾಡಿ, ಆಡಳಿತ, ನಾವೀನ್ಯತೆ ಮತ್ತು ಸಹಾನುಭೂತಿಯೊಂದಿಗೆ ಸಾಂಸ್ಥಿಕ ಸುಸ್ಥಿರತೆ ಬೆಳೆಸುವಲ್ಲಿ ಮಾನವ ಸಂಪನ್ಮೂಲ ನಿರ್ವಹಣೆಯ ಪಾತ್ರದ ಕುರಿತು ತಿಳಿಸಿಕೊಟ್ಟರು.

ಎರಡು ದಿನಗಳ ಈ ಸಮ್ಮೇಳನದಲ್ಲಿ, 125ಕ್ಕೂ ಹೆಚ್ಚು ಮಂದಿ ಭಾಗವಹಿಸುತ್ತಿದ್ದಾರೆ. ಪ್ರತಿಭಾ ನಿರ್ವಹಣೆ, ಕಾರ್ಪೊರೇಟ್ ಸುಸ್ಥಿರತೆ, ಭಾವನಾತ್ಮಕ ಬುದ್ಧಿವಂತಿಕೆ, ಒತ್ತಡ ನಿರ್ವಹಣೆ, ಮಾನವ ಸಂಪನ್ಮೂಲ ವಿಶ್ಲೇಷಣೆ, ಮಾನವ ಸಂಪನ್ಮೂಲ ಆಡಳಿತ, ಜಾಗತಿಕ ಮಾನವ ಸಂಪನ್ಮೂಲ ನಿರ್ವಹಣೆ, ಬದಲಾವಣೆಯ ನಿರ್ವಹಣೆ, ಕಾರ್ಯಕ್ಷೇತ್ರ- ಜೀವನ ಸಮತೋಲನ, ಮೌಲ್ಯಯುತ ನಾಯಕತ್ವ, ವೈವಿಧ್ಯ ನಿರ್ವಹಣೆ ಮತ್ತು ಹಸಿರು ಮಾನವ ಸಂಪನ್ಮೂಲ ನಿರ್ವಹಣೆ - ಈ ವಿಷಯಗಳ ಕುರಿತು ಲೇಖನ ಪ್ರಸ್ತುತಪಡಿಸಿ ಚರ್ಚಿಸುವರು.

click me!