
ತುಮಕೂರು(ಆ.21): ಹಿಂದೂ ದೇವಾಲಯದ ಅರ್ಚಕರೊಬ್ಬರು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಎರಡು ದಿವಸದೊಳಗೆ ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಸೊಗಡು ಶಿವಣ್ಣ ನೇತೃತ್ವದಲ್ಲಿ ಪುನಃ ಹಿಂದೂ ಧರ್ಮಕ್ಕೆ ವಾಪಾಸ್ ಕರೆ ತಂದ ಘಟನೆ ನಡೆದಿದೆ.
ತುಮಕೂರು ತಾಲೂಕು ಊರ್ಡಿಗೆರೆ ಹೋಬಳಿ ಹಿರೇಹಳ್ಳಿ ಗ್ರಾಮದ ಓಂಕಾರೇಶ್ವರ ದೇವಾಲಯ ಅರ್ಚಕ ದಿ.ರೇಣುಕಾರಾಧ್ಯ ಎಂಬುವರ ಪುತ್ರ ಎಚ್.ಆರ್. ಚಂದ್ರಶೇಖರಯ್ಯ ಅಲಿಯಾಸ್ ಮಂಜಣ್ಣ ಎಂಬುವರು ಹಿಂದೂ ಧರ್ಮ ತ್ಯಜಿಸಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದರು. ಮತಾಂತರಗೊಂಡಿದ್ದ ಚಂದ್ರಶೇಖರಯ್ಯ ಅವರು ತಮ್ಮ ಹೆಸರನ್ನು ಮುಬಾರಕ್ ಪಾಷಾ ಎಂದು ಬದಲಾಯಿಸಿಕೊಂಡಿದ್ದು ವೈಯಕ್ತಿಕ ಕಾರಣದಿಂದ ತಮ್ಮ ಸ್ವಇಚ್ಛೆಯಿಂದ ಮತಾಂತರಗೊಂಡಿರುವುದಾಗಿ ಹೇಳಿಕೊಂಡಿದ್ದರು. ಈ ವಿಷಯ ಮಾಜಿ ಸಚಿವ ಸೊಗಡು ಶಿವಣ್ಣ ಅವರ ಗಮನಕ್ಕೆ ಬಂದ ಕೂಡಲೇ ಆತನನ್ನು ತಮ್ಮ ಕಚೇರಿಗೆ ಕರೆಸಿ ಬುದ್ದಿವಾದ ಹೇಳಿ ಪುನಃ ಹಿಂದೂ ಧರ್ಮಕ್ಕೆ ವಾಪಾಸ್ ಕರೆ ತಂದಿದ್ದಾರೆ.
Chitradurgaದಲ್ಲಿ ಇನ್ನೂ ನಿಲ್ಲದ ಬಲವಂತದ ಮತಾಂತರ!
ಶನಿವಾರ ಸಂಜೆ ತಮ್ಮ ಕಚೇರಿಯಲ್ಲಿ ಆತನಿಗೆ ಹಿಂದೂ ಧರ್ಮದ ಶ್ರೇಷ್ಠತೆ ಬಗ್ಗೆ ತಿಳಿ ಹೇಳಿ ಬುದ್ದಿವಾದ ಹೇಳಿದರು. ಬಳಿಕ ವ್ಯಾಸರಾಯ ಮಠದ ವಿದ್ಯಾಶ್ರೀಶ ತೀರ್ಥ ಶ್ರೀಪಾದಂಗಳವರ ಬಳಿ ಮಂತ್ರಾಕ್ಷತೆ ಕೊಡಿಸುವುದರೊಂದಿಗೆ ಮಾತೃ ಧರ್ಮಕ್ಕೆ ಕರೆ ತಂದರು.