
ಬೆಳಗಾವಿ: ತೀವ್ರ ಸ್ವರೂಪ ಪಡೆದುಕೊಂಡಿದ್ದ ಕಬ್ಬು ದರ ವಿವಾದಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಮಧ್ಯಸ್ಥಿಕೆಯಲ್ಲಿ ತಾತ್ಕಾಲಿಕ ಪರಿಹಾರ ಸೂತ್ರ ಸಿಕ್ಕಿದೆ. ರೈತರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ನಡುವೆ ನಡೆದ ಸುದೀರ್ಘ ಮಾತುಕತೆ ಸೋಮವಾರ ಮಧ್ಯರಾತ್ರಿ ಯಶಸ್ವಿಯಾಗಿ ಅಂತ್ಯಗೊಂಡಿದ್ದು, ಇನ್ನೆರಡು ದಿನಗಳಲ್ಲಿ ಅಂತಿಮ ತೀರ್ಮಾನ ಪ್ರಕಟಿಸಲು ರೈತರು ಮತ್ತು ಕಾರ್ಖಾನೆಗಳ ಮಾಲೀಕರು ಒಪ್ಪಿಕೊಂಡಿದ್ದಾರೆ.
ಕೇಂದ್ರ ಸರ್ಕಾರ ಸಕ್ಕರೆಯ ಕನಿಷ್ಠ ಮಾರಾಟ ಬೆಲೆ (ಎಂಎಸ್ಪಿ) ನಿಗದಿಪಡಿಸಿದ ಬಳಿಕ, ಅದರ ಆಧಾರದ ಮೇಲೆ ಕಾರ್ಖಾನೆಗಳು ರೈತರಿಗೆ ನೀಡಬೇಕಾದ ಕಬ್ಬಿನ ದರ ನಿಗದಿ ಮಾಡುವ ಕುರಿತು ಸಿಎಂ ಸಂಧಾನ ಸಭೆಯಲ್ಲಿ ಒಮ್ಮತ ಮೂಡಿದೆ. ಸಕ್ಕರೆಯ ಎಂಎಸ್ಪಿ ಹೆಚ್ಚಳಕ್ಕೆ ಕೇಂದ್ರದ ಮೇಲೆ ಒತ್ತಡ ಹೇರಲು ಹಾಗೂ ಈ ಕುರಿತು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರೊಂದಿಗೆ ಚರ್ಚಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.
ಸೋಮವಾರ ಬೆಳಗ್ಗೆ ಸುವರ್ಣ ವಿಧಾನಸೌಧದಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರ ಜೊತೆ ಆರಂಭವಾದ ಮಾತುಕತೆ, ಬಳಿಕ ಸರ್ಕಿಟ್ ಹೌಸ್ನಲ್ಲೂ ಮುಂದುವರಿಯಿತು. ಸುಮಾರು 10 ತಾಸು, ಐದು ಸುತ್ತು ನಡೆದ ಮಾತುಕತೆಯಲ್ಲಿ 9 ಸಚಿವರು, 70ಕ್ಕೂ ಹೆಚ್ಚು ಶಾಸಕರು, 80 ಕಾರ್ಖಾನೆಗಳ ಪೈಕಿ 79 ಕಾರ್ಖಾನೆಗಳ ಪ್ರತಿನಿಧಿಗಳು ಹಾಗೂ ರೈತ ಮುಖಂಡರು ಭಾಗವಹಿಸಿದ್ದರು. ರೈತರು ಮತ್ತು ಕಾರ್ಖಾನೆ ಮಾಲೀಕರು ತಮ್ಮ ಬೇಡಿಕೆಗಳ ಮೇಲೆ ಪಟ್ಟು ಹಿಡಿದಿದ್ದರೂ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲೇಬೇಕೆಂಬ ನಿಲುವಿನಿಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಸತತ ಮಾತುಕತೆ ನಡೆಸಿದರು. ಸುವರ್ಣ ವಿಧಾನಸೌಧದ ಸಭೆಯ ಬಳಿಕವೂ ಮಾತುಕತೆ ನಿಲ್ಲಿಸದೆ ಸರ್ಕಿಟ್ ಹೌಸ್ನಲ್ಲಿ ಮತ್ತೆರಡು ಸುತ್ತಿನ ಚರ್ಚೆ ನಡೆಸಿ ಸಂಧಾನ ಸೂತ್ರ ರೂಪಿಸಿದರು.
ಸಭೆ ಬಳಿಕ ಮಾತನಾಡಿದ ಮುಖ್ಯಮಂತ್ರಿ, ರೈತರು ಹಾಗೂ ಕಾರ್ಖಾನೆ ಮಾಲೀಕರು ಒಪ್ಪಂದದ ಹತ್ತಿರ ಬಂದಿದ್ದಾರೆ. ರೈತರು ಎರಡು ದಿನ ಕಾಲಾವಕಾಶ ಕೇಳಿದ್ದು, ತಮ್ಮಲ್ಲೇ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ರೈತರು ಉಳಿಯಬೇಕು, ಕಾರ್ಖಾನೆಗಳೂ ಉಳಿಯಬೇಕು. ರೈತರ ಬದುಕು ಸರ್ಕಾರಕ್ಕೆ ಮುಖ್ಯ. ಕೇಂದ್ರ ಸಚಿವರು ನೀಡಿದ ಭರವಸೆಯ ಮೇಲೆ ರೈತರಿಗೆ ವಿಶ್ವಾಸವಿದೆ. ಕೇಂದ್ರದೊಂದಿಗೆ ನಾವೂ ಮಾತುಕತೆ ನಡೆಸುತ್ತೇವೆ. ಸರ್ಕಾರ ರೈತರ ಪರವಾಗಿ ನಿಲ್ಲಲಿದೆ ಎಂದು ತಿಳಿಸಿದರು.
ದರ ನಿಗದಿ ಪ್ರಕ್ರಿಯೆ ಸಂಪೂರ್ಣ ಇತ್ಯರ್ಥವಾಗುವವರೆಗೆ ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸದಿರಲು ರೈತರು ಮತ್ತು ಕಾರ್ಖಾನೆಗಳ ಮಾಲೀಕರು ಒಮ್ಮತಕ್ಕೆ ಬಂದಿದ್ದಾರೆ. ಸಭೆಯ ನಿರ್ಧಾರಗಳನ್ನು ಪ್ರತಿಭಟನಾ ನಿರತ ರೈತರಿಗೆ ಮುಖಂಡರು ವಿವರಿಸಲಿದ್ದು, ಎರಡು ದಿನಗಳ ಬಳಿಕ ಬೆಳಗಾವಿಯಲ್ಲಿ ಸರ್ಕಾರದ ಪ್ರತಿನಿಧಿಗಳ ಸಮ್ಮುಖದಲ್ಲಿ ಮತ್ತೊಮ್ಮೆ ಸಭೆ ನಡೆಯಲಿದ್ದು, ಅಲ್ಲಿ ಅಂತಿಮ ತೀರ್ಮಾನ ಪ್ರಕಟವಾಗಲಿದೆ ಎಂದು ಹೇಳಿದರು.
ಸಭೆಯಲ್ಲಿ ಸಚಿವರಾದ ಸತೀಶ್ ಜಾರಕಿಹೊಳಿ, ಲಕ್ಷ್ಮಣ ಸವದಿ, ಸಂತೋಷ್ ಲಾಡ್, ಶಾಸಕರಾದ ಯಶವಂತರಾಯಗೌಡ ಪಾಟೀಲ, ಎನ್.ಎಚ್. ಕೋನರಡ್ಡಿ, ರೈತ ಮುಖಂಡರಾದ ಬಡಗಲಪುರ ನಾಗೇಂದ್ರ, ಚೂನಪ್ಪ ಪೂಜಾರಿ, ಕುರಬೂರು ಶಾಂತಕುಮಾರ್, ಚುಕ್ಕಿ ನಂಜುಂಡಸ್ವಾಮಿ, ಕಾರ್ಖಾನೆ ಮಾಲೀಕರಾದ ಸಂಗಮೇಶ್ವರ ನಿರಾಣಿ, ಯೋಗೀಶ್ ಪಾಟೀಲ, ಚನ್ನರಾಜ ಹಟ್ಟಿಹೊಳಿ, ವಿವೇಕ್ ಹೆಬ್ಬಾರ್, ಸಿಎಂ ಆರ್ಥಿಕ ಸಲಹೆಗಾರ ಎಲ್.ಅತೀಕ್, ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮತ್ತಿತರರು ಉಪಸ್ಥಿತರಿದ್ದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಮಧ್ಯಸ್ಥಿಕೆಯಲ್ಲಿ ಸತತ 10 ಗಂಟೆ, 5 ಸುತ್ತು ನಡೆದ ಸಭೆಯಲ್ಲಿ ಕಬ್ಬು ದರ ವಿವಾದಕ್ಕೆ ತಾತ್ಕಾಲಿಕ ಪರಿಹಾರ ಸೂತ್ರ ಸಿಕ್ಕಿದೆ. ಕೇಂದ್ರ ಸರ್ಕಾರ ಸಕ್ಕರೆಯ ಕನಿಷ್ಠ ಮಾರಾಟ ಬೆಲೆ (ಎಂಎಸ್ಪಿ) ನಿಗದಿಪಡಿಸಿದ ಬಳಿಕ, ಅದರ ಆಧಾರದ ಮೇಲೆ ಕಾರ್ಖಾನೆಗಳು ರೈತರಿಗೆ ನೀಡಬೇಕಾದ ಕಬ್ಬಿನ ದರ ನಿಗದಿ ಮಾಡುವ ಕುರಿತ ಸಭೆಯಲ್ಲಿ ಒಮ್ಮತ ಮೂಡಿದೆ. ಸಕ್ಕರೆಯ ಎಂಎಸ್ಪಿ ಹೆಚ್ಚಳಕ್ಕೆ ಕೇಂದ್ರದ ಮೇಲೆ ಒತ್ತಡ ಹೇರಲು ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರೊಂದಿಗೆ ಈ ಬಗ್ಗೆ ಚರ್ಚಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಇದಕ್ಕಾಗಿ ಇನ್ನೆರಡು ದಿನಗಳಲ್ಲಿ ಅಂತಿಮ ತೀರ್ಮಾನ ಪ್ರಕಟಿಸಲು ರೈತರು ಮತ್ತು ಕಾರ್ಖಾನೆಗಳ ಮಾಲೀಕರು ಒಪ್ಪಿಕೊಂಡಿದ್ದಾರೆ.
ಮಾತುಕತೆ ಸುಖಾಂತ್ಯ
ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ನಡುವಿನ ದರ ವಿವಾದ ಬಗೆಹರಿಸಲು ಸೋಮವಾರ ಮಧ್ಯರಾತ್ರಿವರೆಗೂ ನಡೆಸಿದ ನಿರಂತರ ಪ್ರಯತ್ನ ಯಶಸ್ವಿಯಾಗಿದ್ದು, ಎರಡೂ ಕಡೆಯವರು ಸಹಮತದ ಮೂಲಕ ಸಮಸ್ಯೆಗೆ ಅಂತ್ಯ ಹಾಡಲು ಒಪ್ಪಿದ್ದಾರೆ. ಇನ್ನೆರಡು ದಿನಗಳಲ್ಲಿ ಈ ಕುರಿತು ಅಂತಿಮ ತೀರ್ಮಾನ ಪ್ರಕಟವಾಗಲಿದೆ.
- ಡಿ.ಕೆ.ಶಿವಕುಮಾರ್, ಸಿಎಂ
ಸುಖಾಂತ್ಯ ಆಗಿಲ್ಲ
ಕಬ್ಬು ದರ ನಿಗದಿ ಕುರಿತಂತೆ ಸರ್ಕಾರದೊಂದಿಗೆ ನಡೆದ ಮಾತುಕತೆ ಸದ್ಯಕ್ಕೆ ಅಂತ್ಯಗೊಂಡಿದ್ದರೂ, ರೈತರ ಹೋರಾಟ ಸುಖಾಂತ್ಯ ಕಂಡಿಲ್ಲ. ರೈತರು ಪ್ರತಿ ಕೆ.ಜಿ. ಸಕ್ಕರೆಗೆ ₹50 ಕನಿಷ್ಠ ಮಾರಾಟ ಬೆಲೆ ನಿಗದಿ ಮಾಡಿ, ಕಬ್ಬಿಗೆ ಟನ್ಗೆ ₹4,000 ನೀಡಬೇಕು ಎಂದು ಒತ್ತಾಯಿಸಿದ್ದಾರೆ. ದರ ನಿಗದಿಗೆ ಕಾರ್ಖಾನೆ ಮಾಲೀಕರು 2 ದಿನ ಅವಕಾಶ ಕೇಳಿದ್ದು, ಅಲ್ಲಿವರೆಗೆ ಪ್ರತಿಭಟನೆ ಮುಂದುವರಿಯಲಿದೆ.
- ಚೂನಪ್ಪ ಪೂಜೇರಿ, ರೈತ ಮುಖಂಡ