'ರಾಯಚೂರು-ಯಾದಗಿರಿ ಜಿಲ್ಲೆಗಳ ಅಭಿವೃದ್ಧಿಗೆ ಯೋಜನೆ ಸಿದ್ಧಪಡಿಸಿ'

By Web Desk  |  First Published Oct 5, 2019, 11:37 AM IST

ಕೃಷಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಆಗಬೇಕಾಗಿರುವ ಅಭಿವೃದ್ಧಿಗಳ ಬಗ್ಗೆ ಇಲಾಖೆವಾರು ಮಾಹಿತಿ ಕಲೆಹಾಕಬೇಕು| ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಗೂ ಇತರೆ ಮೂಲೆಗಳಿಂದ ಅವುಗಳ ಅಭಿವೃದ್ಧಿಗೆ ಅಗತ್ಯವಾದಂತಹ ಅಂಶಗಳನ್ನು ಗುರುತಿಸಬೇಕು| 


ರಾಯಚೂರು(ಅ.5): ಹಿಂದುಳಿದ ಜಿಲ್ಲೆಗಳಾದ ರಾಯಚೂರು ಮತ್ತು ಯಾದಗಿರಿಯಲ್ಲಿ ಆಯ್ದ ಐದಾರು ಕ್ಷೇತ್ರಗಳಲ್ಲಿ ಸಮಗ್ರ-ಸುಸ್ಥಿರ ಅಭಿವೃದ್ಧಿ ಕಾಣಲು ಅಗತ್ಯವಾದ ಹಾಗೂ ಬೇಡಿಕೆಗೆ ಅನುಗುಣವಾದ ಯೋಜನೆಗಳನ್ನು ಎಲ್ಲ ರೀತಿಯಿಂದ ಚರ್ಚಿಸಿ ವರದಿ ಸಿದ್ಧಪಡಿಸಿ ನೀಡಬೇಕೆಂದು ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ ತಿಳಿಸಿದ್ದಾರೆ. 

ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆಡಳಿತ ಭವನದ ಸಭಾಂಗಣದಲ್ಲಿ ಮಹತ್ವಾಕಾಂಕ್ಷಿ ಜಿಲ್ಲೆಗಳ ಸುಸ್ಥಿರ ಅಭಿವೃದ್ಧಿ ಕುರಿತು ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಕಾರ್ಯಾಗಾರಕ್ಕೆ ಚಾಲನಾ ಪೂರ್ವದ ಸಭೆಯಲ್ಲಿ ಉಭಯ ಜಿಲ್ಲೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಶುಕ್ರವಾರ ಮಾತನಾಡಿದರು.

Latest Videos

undefined

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕೃಷಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಆಗಬೇಕಾಗಿರುವ ಅಭಿವೃದ್ಧಿಗಳ ಬಗ್ಗೆ ಇಲಾಖೆವಾರು ಮಾಹಿತಿ ಕಲೆಹಾಕಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಗೂ ಇತರೆ ಮೂಲೆಗಳಿಂದ ಅವುಗಳ ಅಭಿವೃದ್ಧಿಗೆ ಅಗತ್ಯವಾದಂತಹ ಅಂಶಗಳನ್ನು ಗುರುತಿಸಬೇಕು. ಎರಡು ದಿನಗಳ ಕಾರ್ಯಾಗಾರದಲ್ಲಿ ನಾಲ್ಕು ವಿಭಾಗಗಳಲ್ಲಿ ಸೆಮಿನಾರ್‌ಗಳನ್ನು ನಡೆಸಿ ಸಂಬಂಧಿಸಿದ ಇಲಾಖೆಗಳ ತಜ್ಞರು, ಅಧಿಕಾರಿ ಸಿಬ್ಬಂದಿ ವರ್ಗದವರು ಅಭಿವೃದ್ಧಿಗೆ ಪೂರಕವಾದ ಅಂಶಗಳನ್ನು ಚರ್ಚಿಸಿ ಏನನ್ನು ಮಾಡಿದರೆ ಸುಸ್ಥಿರತೆಯನ್ನು ಸಾಧಿಸಬಹುದು ಎನ್ನುವುದರ ಕುರಿತು ಸಮಾಲೋಚನೆ ನಡೆಸಿ ವರದಿ ನೀಡಿದಲ್ಲಿ ಅದನ್ನು ಸಂಗ್ರಹಿಸಿ ಮುಂದಿನ ಯೋಜನೆಗಳನ್ನು ರೂಪಿಸಬಹುದು ಎಂದು ಹೇಳಿದರು.

ಸರ್ಕಾರಗಳು ಈ ಎರಡೂ ಜಿಲ್ಲೆಗಳ ಅಭಿವೃದ್ಧಿಗೆ ಅನೇಕ ಯೋಜನೆ ಜಾರಿ ಮಾಡಿದರೂ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧಿಸಿಲ್ಲ. ಅದಕ್ಕಾಗಿ ನೀತಿ ಆಯೋಗವು ಮಹತ್ವಾಕಾಂಕ್ಷಿ ಜಿಲ್ಲೆಗಳ ಯೋಜನೆಯಡಿ ರಾಜ್ಯದಲ್ಲಿ ರಾಯಚೂರು-ಯಾದಗಿರಿಯನ್ನು ಆಯ್ಕೆ ಮಾಡಿಕೊಂಡು ಅವುಗಳ ಸುಸ್ಥಿತ ಸುಧಾರಣೆಗೆ ಏನು ಮಾಡಬೇಕು ಎನ್ನುವುದರ ಮುಂದಿನ ಯೋಜನೆಗಳು ಮತ್ತು ಹಿನ್ನಡೆಗೆ ಕಾರಣವಾದ ಅಂಶಗಳನ್ನು ಪತ್ತೆಹಚ್ಚಿ ದೂರದೃಷ್ಠಿಯ ಯೋಜನೆಗಳನ್ನು ರೂಪಿಸುವ ಜವಾಬ್ದಾರಿ ನಮ್ಮಮೇಲಿದೆ ಎಂದು ಹೇಳಿದ್ದಾರೆ.

ಕಲಬುರಗಿ ಸಂಸದ ಡಾ.ಉಮೇಶ ಜಾದವ್‌ ಮಾತನಾಡಿ, ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಜಿಲ್ಲೆಗಳ ಯೋಜನೆಯಡಿ ಆಯ್ಕೆಯಾಗಿರುವ ರಾಯಚೂರು ಮತ್ತು ಯಾದಗಿರಿಯ ಶಿಕ್ಷಣ, ಆರೋಗ್ಯ, ಕೃಷಿ, ತೋಟಗಾರಿಕೆ, ಕೌಶಾಲ್ಯಾಭಿವೃದ್ಧಿ ಸೇರಿದಂತೆ ನಿಗಪಡಿಸಲಾದ ವಿವಿಧ ಸೂಚ್ಯಂಕಗಳ ಗಮನಾರ್ಹ ಪ್ರಗತಿಗೆ ಈ ರೀತಿಯ ಕಾರ್ಯಾಗಾರಗಳು ಅತ್ಯುಪಯುಕ್ತವಾಗಿವೆ ಎಂದು ಹೇಳಿದರು.

ಸಭೆಯಲ್ಲಿ ರಾಯಚೂರು ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೇ, ಯಾದಗಿರಿ ಜಿಪಂ ಅಧ್ಯಕ್ಷ ರಾಜಶೇಖರ ಪಾಟೀಲ್‌, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿ.ಕುಮಾರ ನಾಯಕ, ಪ್ರಾದೇಶಿಕ ಆಯುಕ್ತ ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಸುಬೋದ್‌ ಯಾದವ್‌, ರಾಯಚೂರು ಜಿಲ್ಲಾಧಿಕಾರಿ ಆರ್‌. ವೆಂಕಟೇಶ ಕುಮಾರ್‌, ಯಾದಗಿರಿ ಜಿಲ್ಲಾಧಿಕಾರಿ ಕೂರ್ಮರಾವ್‌, ರಾಯಚೂರು ಜಿಪಂ ಸಿಇಒ ಲಕ್ಷ್ಮೇಕಾಂತ ರೆಡ್ಡಿ, ಯಾದಗಿರಿ ಜಿಪಂ ಸಿಇಒ ಶಿಲ್ಪಾ ಶರ್ಮಾ, ಕೃಷಿ ವಿವಿ ಕುಲಪತಿ ಡಾ. ಕೆ.ವಿ. ಕಟ್ಟಿಮನಿ, ಎನ್‌ಆರ್‌ಎಲ್‌ಎಂನ ಮಿಷನ್‌ ಡೈರೆಕ್ಟರ್‌ ಡಾ. ಬಿ.ಆರ್‌. ಮಮತಾ, ಯುಎನ್‌ಡಿಪಿ ಜೈಮಾಂತಪ್ಪ, ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ಪ್ರಾಧ್ಯಾಪಕ ಕ್ರಿಸ್ತನ್‌ ಕಾಂತರಾಜ್‌ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
 

click me!