ಕಸ್ತೂರಿ ರಂಗನ್ ವರದಿ ತಿರಸ್ಕರಿಸಿ ಕೇಂದ್ರಕ್ಕೆ ನಿರ್ಣಯ ಕಳುಹಿಸಲು ಸಿದ್ಧತೆ; ಅರಣ್ಯ ಸಚಿವ ರಾಮಲಿಂಗಾರೆಡ್ಡಿ

Published : Aug 29, 2026, 07:59 AM IST
Ramalinga Reddy

ಸಾರಾಂಶ

ಕೊಡಗಿನಲ್ಲಿ ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಸಭೆ ನಡೆಸಿದರು. ಆನೆ ಕಾರಿಡಾರ್ ಅಭಿವೃದ್ಧಿ, ರೈಲ್ವೆ ಬ್ಯಾರಿಕೇಡ್ ವಿಸ್ತರಣೆ ಹಾಗೂ ಕಸ್ತೂರಿ ರಂಗನ್ ವರದಿ ತಿರಸ್ಕರಿಸುವ ನಿರ್ಣಯವನ್ನು ಕೇಂದ್ರಕ್ಕೆ ಕಳುಹಿಸುವ ಬಗ್ಗೆ ಚರ್ಚಿಸಲಾಯಿತು. ಭೂಮಿ ಸಮಸ್ಯೆಗಳ ಪರಿಹಾರದ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪಿಸಲಾಯಿತು.

ಕೊಡಗು: ವಿಧಾನಸಭೆ, ವಿಧಾನ ಪರಿಷತ್ನಲ್ಲಿ ಕೊಡಗಿನ ಶಾಸಕರು ಹಲವು ಸಮಸ್ಯೆಗಳನ್ನು ಪ್ರಸ್ತಾಪಿಸಿದ್ದರು. ಅದರಲ್ಲಿ ಮುಖ್ಯವಾಗಿ ಮಾನವ–ವನ್ಯಜೀವಿ ಸಂಘರ್ಷ ನಿಯಂತ್ರಣಕ್ಕೆ ಸಮಗ್ರ ಕ್ರಮ ಕೈಗೊಳ್ಳಲು ಚರ್ಚೆಸಲಾಗಿತ್ತು. ಹೀಗಾಗಿ ಇಂದು ಸಭೆ ನಡೆಸಿ ಆನೆ–ಹುಲಿ ಹಾವಳಿ ತಡೆಗೆ ಆನೆ ಕಾರಿಡಾರ್ಗಳ ಅಭಿವೃದ್ಧಿಗೆ ಒತ್ತು ನೀಡಲು ನಿರ್ಧರಿಸಲಾಗಿದೆ ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಕೊಡಗಿನ ಸಂಘರ್ಷಕ್ಕೆ ಮುಕ್ತಿ? ಸಚಿವರ ಸಭೆಯ ಮಹತ್ವದ ನಿರ್ಧಾರ

ಕೊಡಗು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ವಿವಿಧ ಸಂಘಟನೆಗಳ ಮುಖಂಡರು, ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಚರ್ಚಿಸಿ ಸಲಹೆ ಪಡೆದು ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು. ಈಗಿರುವ ಎರಡು ಸಾಲಿನ ರೈಲ್ವೆ ಬ್ಯಾರಿಕೇಡ್ನ್ನು ಮೂರು ಸಾಲಿಗೆ ವಿಸ್ತರಿಸುವ ಸಲಹೆ ಬಂದಿದೆ. ಆನೆ ಕಂದಕಗಳಿಗೆ ಮಣ್ಣು ತುಂಬಿಕೊಂಡಿರುವುದರಿಂದ ಹಳೆಯ ಟ್ರೆಂಚ್ಗಳನ್ನು ದುರಸ್ಥಿ ಮಾಡಲು ಸೂಚನೆ ನೀಡಿದ್ದೇನೆ.

ವನ್ಯಜೀವಿ ಮಾನವ ಸಂಘರ್ಷ ತಪ್ಪಿಸಲು ಸಲಹೆ ಸಂಗ್ರಹಿಸಿದ ಅರಣ್ಯ ಸಚಿವ ರಾಮಲಿಂಗರೆಡ್ಡಿ

ನಾಗರಹೊಳೆ ಭಾಗದಿಂದ ಹುಲಿಗಳು ಜನವಸತಿ ಪ್ರದೇಶಕ್ಕೆ ಬಾರದಂತೆ ಮುನ್ನೆಚ್ಚರಿಕೆ ಕ್ರಮವಹಿಸಲು ಸೂಚಿಸಿದ್ದೇನೆ. ವನ್ಯಜೀವಿ ದಾಳಿಯ ಪರಿಹಾರ ಮೊತ್ತ ಹೆಚ್ಚಿಸುವ ಸಲಹೆ ಸಭೆಯಲ್ಲಿ ಬಂದಿದೆ ಎಂದಿದ್ದಾರೆ. ಅಲ್ಲದೆ ಕಾಡಾನೆಗಳ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ಕೊಡುತ್ತಿರುವ ಪರಿಹಾರದ ಮೊತ್ತವು ಸರಿಯಾಗಿ ದೊರೆಯುವಂತೆ ಮಾಡಲು ಸಲಹೆ ಇದೆ. ಇದನ್ನು ಕೂಡ ಪರಿಶೀಲನೆ ಮಾಡಲಾಗುವುದು ಎಂದಿದ್ದಾರೆ.

ಕಸ್ತೂರಿ ರಂಗನ್ ವರದಿ ತಿರಸ್ಕರಿಸಿ ಕೇಂದ್ರಕ್ಕೆ ನಿರ್ಣಯ ಕಳುಹಿಸಲು ಸಿದ್ಧತೆ

ಮರ ತೆರವಿಗೆ ಅನುಮತಿ ನೀಡುವಲ್ಲಿ ಅರಣ್ಯ ಇಲಾಖೆ ವಿಳಂಬ ಮಾಡುತ್ತಿದೆ ಎನ್ನುವ ದೂರುಗಳು ಕೇಳಿ ಬಂದಿವೆ. ಅದನ್ನು ಸರಿಪಡಿಸಲಾಗುವುದು ಎಂದಿದ್ದಾರೆ. ಬಂದ ಅರ್ಜಿಗಳನ್ನು ತ್ವರಿತವಾಗಿ ಪರಿಶೀಲಿಸಿ ಅನುಮತಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದಿದ್ದಾರೆ.

ಅರಣ್ಯ ಹಕ್ಕು ಕಾಯ್ದೆಯಲ್ಲಿ ಪರಿಶಿಷ್ಟ ಪಂಗಡ ಹಾಗೂ ಅರ್ಹರಿಗೆ ಸಮಾನ ಅವಕಾಶ ನೀಡುವ ಕುರಿತು ಚರ್ಚೆ ನಡೆಯಿತು. ಜೊತೆಗೆ ಸೆಕ್ಷನ್ C, D ಜಮೀನು ವಿವಾದಗಳ ಕುರಿತು ಚರ್ಚೆ ನಡೆದಿದೆ. ಅರಣ್ಯ ಹಕ್ಕು ಕಾಯ್ದೆ ಹಾಗೂ ಕಂದಾಯ–ಅರಣ್ಯ ಭೂಮಿ ಸಮಸ್ಯೆ ಬಗ್ಗೆಯೂ ಚರ್ಚೆಯಾಗಿದೆ. ಹಾರಂಗಿ ಜಲಾಶಯದಿಂದ ಸ್ಥಳಾಂತರಗೊಂಡ ರೈತರ ಭೂಮಿ–ದಾಖಲೆ ಸಮಸ್ಯೆ ಪರಿಹಾರಕ್ಕೆ ಕ್ರಮವಹಿಸಲಾಗುವುದು ಎಂದಿದ್ದಾರೆ. ಈ ವಿಚಾರವನ್ನು ಕಂದಾಯ ಸಚಿವರು ಹಾಗೂ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುತ್ತೇನೆ ಎಂದಿದ್ದಾರೆ. ಹಾರಂಗಿ, ಹಾತೂರು, ಯಡವನಾಡು ಸೇರಿದಂತೆ ಕಂದಾಯ ಗ್ರಾಮಗಳ ಭೂಮಿ ಸಮಸ್ಯೆಯನ್ನು ಜನರು ಗಮನಕ್ಕೆ ತಂದಿದ್ದಾರೆ. ಅದರ ಬಗ್ಗೆ ಪರಿಶೀಲನೆ ಮಾಡುವುದು ಎಂದಿದ್ದಾರೆ.

ಕಸ್ತೂರಿ ರಂಗನ್ ವರದಿಯನ್ನು ರಾಜ್ಯದಲ್ಲಿ ತಿರಸ್ಕರಿಸುವ ನಿರ್ಣಯವನ್ನು ಮತ್ತೊಮ್ಮೆ ಕೇಂದ್ರಕ್ಕೆ ಕಳುಹಿಸಲು ಸರ್ಕಾರ ನಿರ್ಧರಿಸಿದೆ ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ಮುಂದಿನ ಹಂತದಲ್ಲಿ ಬೆಂಗಳೂರಿನಲ್ಲಿ ಅಧಿಕಾರಿಗಳೊಂದಿಗೆ ಹಾಗೂ ಪಶ್ಚಿಮಘಟ್ಟಗಳ ವ್ಯಾಪ್ತಿಯ ಶಾಸಕರ ಸಭೆಯನ್ನು ಮುಂದಿನ ಹಂತದ ನಡೆಸಲಾಗುವುದು. ಕಂದಾಯ ಹಾಗೂ ಅರಣ್ಯ ಅಧಿಕಾರಿಗಳೊಂದಿಗೆ ಸಮಗ್ರ ಸಭೆ ನಡೆಸಲು ನಿರ್ಧಾರ ಮಾಡಲಾಗಿದೆ ಎಂದಿದ್ದಾರೆ. ಕೊಡಗಿನ ಸಮಸ್ಯೆಗಳಿಗೆ ಸಾಧ್ಯವಾದಷ್ಟು ಪರಿಹಾರ ಕಂಡುಕೊಳ್ಳಲು ಪ್ರಯತ್ನ ಮಾಡಲಾಗುವುದು ಮಡಿಕೇರಿಯಲ್ಲಿ ಅರಣ್ಯ ಸಚಿವ ರಾಮಲಿಂಗ ರೆಡ್ಡಿ ಹೇಳಿದರು. ಹಿಂದಿನ ಸರ್ಕಾರದ ನಿರ್ಣಯದಂತೆ ನಮ್ಮ ಸರ್ಕಾರವೂ ಕಸ್ತೂರಿ ರಂಗನ್ ವರದಿಗೆ ವಿರೋಧ ವ್ಯಕ್ತಪಡಿಸಲಿದೆ ಎಂದಿದ್ದಾರೆ. (ವರದಿ: ರವಿ ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು) 

PREV
Read more Articles on
click me!

Recommended Stories

KPSC Scam: 200 ಕೋಟಿ ಪಡೆದು ಸಾಹುಕಾರನ ಅಧ್ಯಕ್ಷ ಮಾಡಿದ್ದು ಯಾರು? ಶಿವಶಂಕರಪ್ಪ ಮನೆಯಲ್ಲಿ ಯಾರ ಫೋಟೋ ಇವೆ? ಹೆಚ್‌ಡಿಕೆಗೆ ಪ್ರಿಯಾಂಕ್ ಸವಾಲ್!
ಕರ್ನಾಟಕ ಕರಾವಳಿಯ ಹೆಬ್ಬಾಗಿಲು ಮಂಗಳೂರು, ಈಗ ರೈಲ್ವೆ ಅಭಿವೃದ್ಧಿಗೆ ಸೂಕ್ತ ಸಮಯ