ಕೊಪ್ಪಳ: ವೈದ್ಯರ ನಿರ್ಲಕ್ಷ್ಯದಿಂದ ಆಸ್ಪತ್ರೆ ಬಾಗಿಲಲ್ಲೇ ಮಹಿಳೆಯ ಹೆರಿಗೆ..!

By Kannadaprabha NewsFirst Published Mar 3, 2021, 10:50 AM IST
Highlights

ಕೊಪ್ಪಳ ಜಿಲ್ಲೆಯ ಕನಕಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಘಟನೆ| ವೈದ್ಯರು, ಸಿಬ್ಬಂದಿ ವಿರುದ್ಧ ಸಾರ್ವಜನಿಕರ ಆಕ್ರೋಶ| ಬಯಲಲ್ಲೇ ಹೆರಿಗೆಯಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಯುವಕ| ಆಸ್ಪತ್ರೆಗೆ ದಿಢೀರ್‌ ಭೇಟಿ ನೀಡಿ ತಾಯಿ- ಮಗುವಿನ ಆರೋಗ್ಯ ವಿಚಾರಿಸಿದ ಜಿಲ್ಲಾ ಆರೋಗ್ಯಾಧಿಕಾರಿ| 

ಕನಕಗಿರಿ(ಮಾ.03): ವೈದ್ಯರು ಹಾಗೂ ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ಬಯಲಲ್ಲೇ ಹೆರಿಗೆಯಾಗಿರುವ ಘಟನೆ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಬಾಗಿಲ ಬಳಿ ಮಂಗಳವಾರ ಬೆಳ್ಳಂಬೆಳಗ್ಗೆ ನಡೆದಿದೆ.

ತಾಲೂಕಿನ ಗೌರಿಪುರ ಗ್ರಾಮದ ನಿವಾಸಿ ಬೃಂದಾ ಎಂಬವರು ಮಂಗಳವಾರ ಬೆಳಗಿನ ಜಾವ 5.45 ಗಂಟೆಗೆ ಹೆರಿಗೆಗೆಂದು ಕನಕಗಿರಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಂದಿದ್ದರು. ತುಂಬು ಗರ್ಭಿಣಿಯಾದ ಬೃಂದಾ ಅವರನ್ನು ಆಸ್ಪತ್ರೆ ಒಳಗೆ ಕರೆದುಕೊಳ್ಳದೇ ವೈದ್ಯರು, ಶುಶ್ರೂಕಿಯರು ನಿರ್ಲಕ್ಷ್ಯ ತೋರಿದ್ದಾರೆ. ಬದಲಾಗಿ 108 ವಾಹನದಲ್ಲಿ ಗಂಗಾವತಿಗೆ ಕಳುಹಿಸಿ ಕೊಡುವುದಾಗಿ ತಿಳಿಸಿ ಬಾಗಿಲು ಹಾಕಿ ಹೋದ ನರ್ಸ್‌ ಮರಳಿ ಬರಲೇ ಇಲ್ಲ. ಹೆರಿಗೆಯಾಗುವ ಸಂದರ್ಭವನ್ನು ಗಮನಿಸಿದ ಆಶಾ ಕಾರ್ಯಕರ್ತೆ ಆಸ್ಪತ್ರೆಯೊಳಗೆ ಮಲಗಿರುವ ನರ್ಸ್‌ ಹಾಗೂ ವೈದ್ಯರನ್ನು ಜೋರು ಧ್ವನಿಯಿಂದ ಕೂಗಿದರೂ ಎದ್ದು ಬರಲೇ ಇಲ್ಲ. ಅನಿವಾರ್ಯವಾಗಿ ಆಶಾ ಕಾರ್ಯಕರ್ತೆ ಅಕ್ಕಪಕ್ಕದವರ ಸಹಾಯ ಪಡೆದು ಮಹಿಳೆಯ ಹೆರಿಗೆ ಮಾಡಿಸಿದ್ದಾರೆ. ಬೃಂದಾ ಹೆಣ್ಣುಮಗುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಗು ಆರೋಗ್ಯದಿಂದ ಇದ್ದಾರೆ.

ಯುವಕನೊರ್ವ ಸಾಮಾಜಿಕ ಜಾಲತಾಣಗಳಲ್ಲಿ ಬಯಲಲ್ಲೇ ಹೆರಿಗೆಯಾಗಿರುವ ವಿಡಿಯೋವನ್ನು ಹರಿಬಿಡುತಿದ್ದಂತೆ ವಿವಿಧ ಸಂಘಟನೆಯವರು ಆಸ್ಪತ್ರೆಗೆ ದಿಢೀರ್‌ ದೌಡಾಯಿಸಿ ವೈದ್ಯರಿಗೆ ತರಾಟೆಗೆ ತೆಗೆದುಕೊಂಡಾಗ ಬಾಗಿಲ ಬಳಿ ಕೂತಿದ್ದ ಬೃಂದಾ ಅವರನ್ನು ಆಸ್ಪತ್ರೆಯ ಸಿಬ್ಬಂದಿ ಶಸ್ತ್ರಚಿಕಿತ್ಸಾ ಕೊಠಡಿಗೆ ಕರೆದೊಯ್ದರು.

ಕೊಪ್ಪಳ: ಪಂಚಮಸಾಲಿ ಮುಖಂಡರು- ಸಚಿವ ನಿರಾಣಿ ಮಧ್ಯೆ ಮಾತಿನ ಚಕಮಕಿ

ಡಿಎಚ್‌ಒ ಭೇಟಿ:

ಸುದ್ದಿ ತಿಳಿದ ಜಿಲ್ಲಾ ಆರೋಗ್ಯಾಧಿಕಾರಿ ಅಲಕಾನಂದಾ ಅವರು ಆಸ್ಪತ್ರೆಗೆ ದಿಢೀರ್‌ ಭೇಟಿ ನೀಡಿ ತಾಯಿ- ಮಗುವಿನ ಆರೋಗ್ಯ ವಿಚಾರಿಸಿದರು. ನಂತರ ವಿವಿಧ ಸಂಘಟನೆಗಳ ಪ್ರಮುಖರ ಜತೆ ಸಭೆ ನಡೆಸಿ ಆಸ್ಪತ್ರೆಯಲ್ಲಿರುವ ಸಮಸ್ಯೆಗಳ ಬಗ್ಗೆ ದೂರುಗಳನ್ನು ಆಲಿಸಿದರು. ಬಳಿಕ ಸಿಬ್ಬಂದಿ ಜತೆಯೂ ಗಂಟೆಗೂ ಹೆಚ್ಚು ಸಮಯ ಸಭೆ ನಡೆಸಿ, ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದರೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಖಡಕ್‌ ಸೂಚನೆ ನೀಡಿದರು.

ಜಿಲ್ಲಾ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಭಾಗ್ಯವತಿ ಬೋಲಾ, ಪಿಎಲ್‌ಡಿ ಬ್ಯಾಂಕ್‌ ನಿರ್ದೆಶಕ ರಮೇಶ ನಾಯಕ, ಪಪಂ ಅಧ್ಯಕ್ಷ ರವೀಂದ್ರ ಸಜ್ಜನ್‌, ಸದಸ್ಯರಾದ ಹುಲುಗಪ್ಪ ವಾಲೇಕಾರ್‌, ಸುಭಾಷ ಕಂದಕೂರು, ಪಾಷಸಾಬ ಮುಲ್ಲಾರ, ಸಂಘಟಕರಾದ ಪಾಮಣ್ಣ ಅರಳಿಗನೂರು, ನೀಲಕಂಠ ಬಡಿಗೇರ, ರಾಜೇಶ ಚಿನ್ನೂರು, ಬಸವರಾಜ ಕೋರಿ, ಶರಣಪ್ಪ ಪಲ್ಲವಿ, ಅನಿಲ ಬಿಜ್ಜಳ ಸೇರಿದಂತೆ ಇತರರು ಇದ್ದರು.

ಘಟನೆಯ ಬಗ್ಗೆ ನಮ್ಮ ಇಲಾಖೆಯವರ ತಪ್ಪಿದೆ. ಅದನ್ನು ಸಮರ್ಥಿಸಿಕೊಳ್ಳುವ ಅಗತ್ಯವಿಲ್ಲ. ಘಟನೆ ಕುರಿತಂತೆ ನಿರ್ಲಕ್ಷ್ಯ ವಹಿಸಿ ತಪ್ಪೆಸಗಿರುವ ವೈದ್ಯ, ಸ್ಟಾಫ್‌ ನರ್ಸ್‌ ಹಾಗೂ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಅಲಕಾನಂದಾ ತಿಳಿಸಿದ್ದಾರೆ. 
 

click me!