Prakash Raj: ಸತ್ಯ ಹೇಳಿದ್ರೆ ಚಿನ್ನಯ್ಯನಿಗೆ ತಬ್ಬಿಕೊಳ್ತೆನೆ ಅಂತಾ ಹೇಳಿದ್ದು ನಿಜ, ಆದರೆ..

Published : Jun 17, 2026, 12:52 PM IST
Prakash Raj Dharmasthala Controversy and Chinnaiah

ಸಾರಾಂಶ

ಧರ್ಮಸ್ಥಳ ಕ್ಷೇತ್ರದ ವಿರುದ್ಧದ ಷಡ್ಯಂತ್ರದಲ್ಲಿ ತಮ್ಮ ಹೆಸರು ತಳುಕು ಹಾಕಿದ್ದಕ್ಕೆ ನಟ ಪ್ರಕಾಶ್ ರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮಗೆ ಬಂದ ಫೋನ್ ಕರೆಯ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದಾಗಿ ಸ್ಪಷ್ಟಪಡಿಸಿದ ಅವರು, ತಮ್ಮ ಹೋರಾಟ ಸೌಜನ್ಯ ಸಾವಿನ ನ್ಯಾಯಕ್ಕಾಗಿ ಮಾತ್ರ ಎಂದಿದ್ದಾರೆ.

ಬೆಂಗಳೂರು (ಜೂ.17): 'ನಾನು ಸದಾ ದೇಶದಲ್ಲಿ ನಡೆಯುವ ಅನ್ಯಾಯಗಳ ವಿರುದ್ಧ ಪ್ರಶ್ನೆ ಮಾಡುತ್ತೇನೆ. ಆದರೆ ಬಿಜೆಪಿ ವಿರುದ್ಧ ಮಾತನಾಡುತ್ತೇನೆ ಎಂಬ ಒಂದೇ ಕಾರಣಕ್ಕೆ, ಧರ್ಮಸ್ಥಳ ಕ್ಷೇತ್ರದ ವಿರುದ್ಧದ ಷಡ್ಯಂತ್ರದ ಕೇಸಿನಲ್ಲಿ ನನ್ನ ಹೆಸರನ್ನು ಯಾಕೆ ತಳುಕು ಹಾಕಲಾಗುತ್ತಿದೆ?' ಎಂದು ನಟ ಪ್ರಕಾಶ್ ರಾಜ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಚಿನ್ನಯ್ಯನಿಗೆ ನಾನು, 'ನೀನು ನನ್ನ ಮುಂದೆ ಹೇಳಿದ ಸತ್ಯವನ್ನು ಎಸ್‌ಐಟಿ ಮುಂದೆ ಹೋಗಿ ಹೇಳು. ಸತ್ಯ ಹೇಳಿದರೆ ಊರೇ ಕೊಂಡಾಡುತ್ತೆ. ನಾನು ನಿನ್ನ ತಬ್ಬಿಕೊಳ್ತಿನೀ ಅಂತ ಹೇಳಿದ್ದೆ' ಎಂದೂ ತಿಳಿಸಿದ್ದಾರೆ/

ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಕಾಶ್ ರಾಜ್ ಅವರು ತಮಗೆ ಹಾಗೂ ಈ ಪ್ರಕರಣದ ಪ್ರಮುಖ ವ್ಯಕ್ತಿ ಎನ್ನಲಾದ ಚಿನ್ನಯ್ಯನಿಗೆ ಇರುವ ಲಿಂಕ್ ಏನು ಎಂಬುದನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

‘ಮಾರಿಕೊಂಡ ಮಾಧ್ಯಮಗಳು’ ಪದದ ಬಳಕೆಗೆ ಸ್ಪಷ್ಟನೆ

ಸುದ್ದಿಗೋಷ್ಠಿಯ ಆರಂಭದಲ್ಲೇ ಮಾಧ್ಯಮಗಳ ಆಹ್ವಾನ ಪತ್ರಿಕೆಯ ವಿವಾದಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಸಾಮಾಜಿಕ ಜಾಲತಾಣಗಳಲ್ಲಿ ಪ್ರೆಸ್ ಮೀಟ್ ಬಗ್ಗೆ ಪೋಸ್ಟ್ ಹಾಕಿದಾಗ 'ಮಾರಿಕೊಂಡ ಮಾಧ್ಯಮಗಳು' ಎಂಬ ಪದ ಬಳಕೆಯಾಗಿದ್ದು ನಿಜ. ಆದರೆ, ಪ್ರೆಸ್ ಕ್ಲಬ್‌ಗೆ ಅಧಿಕೃತವಾಗಿ ಕಳುಹಿಸಿದ ಇನ್ವಿಟೇಶನ್‌ನಲ್ಲಿ ನಾನು ಆ ಪದ ಬಳಸಿಲ್ಲ. ಅಲ್ಲಿ ನಾನು ಮಾಧ್ಯಮದವರನ್ನು ನಮ್ಮ ಬಂಧುಗಳು, ಆತ್ಮೀಯರು ಎಂದೇ ಕರೆದಿದ್ದೇನೆ. ನನಗೆ ಕೆಲವು ಗಂಭೀರ ಪ್ರಶ್ನೆಗಳಿಗೆ ಉತ್ತರ ಕೊಡಬೇಕಿದ್ದ ಕಾರಣ ಈ ಸುದ್ದಿಗೋಷ್ಠಿ ಕರೆದಿದ್ದೇನೆ ಎಂದರು.

ಚಿನ್ನಯ್ಯ ಮತ್ತು ಗಿರೀಶ್ ಮಟ್ಟಣ್ಣನವರ್ ಲಿಂಕ್ ಬಿಚ್ಚಿಟ್ಟ ನಟ!

"ಮಾಧ್ಯಮಗಳಲ್ಲಿ ಚಿನ್ನಯ್ಯ ಎಂಬಾತ ನನ್ನ ಹೆಸರು ಹೇಳಿದ್ದಾನೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಆತ ನನ್ನ ಹೆಸರು ಹೇಳಿದ್ದಾನೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ಗಿರೀಶ್ ಮಟ್ಟಣ್ಣನವರ್ ಹೇಳಿದಂತೆ ಕೇಳಿ ಚಿನ್ನಯ್ಯ ಮಾತನಾಡಿದ್ದಾನೆ. ಈ ಪ್ರಕರಣದಲ್ಲಿ 200 ಕೋಟಿ ರೂಪಾಯಿ ಹಗರಣ, ಪೇಮೆಂಟ್ ವ್ಯವಹಾರ ನಡೆದಿದೆ ಎಂದು ಚಿನ್ನಯ್ಯ ಹೇಳಿದ್ದಾನಂತೆ. ಕೆಲವು ಮಾಧ್ಯಮಗಳಂತೂ ಈ ಷಡ್ಯಂತ್ರದಲ್ಲಿ ಪ್ರಕಾಶ್ ರಾಜ್ ಕೈವಾಡ ಇದೆ ಎಂದು ಅವರೇ ಸ್ವತಃ ಡಿಕ್ಲೇರ್ ಮಾಡಿಬಿಟ್ಟಿದ್ದಾರೆ. ಆದರೆ ನಾನು ಇದುವರೆಗೂ ಚಿನ್ನಯ್ಯ ಅಥವಾ ಮಟ್ಟಣ್ಣನವರ್ ಸೇರಿ ಯಾರನ್ನೂ ಖುದ್ದಾಗಿ ಭೇಟಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

‘ಮಾಸ್ಕ್ ಮ್ಯಾನ್’ ಕಾಲ್ ಮತ್ತು ತಮಿಳು ಆಡಿಯೋ ರಹಸ್ಯ!

ಪ್ರಕರಣದ ಹಿನ್ನೆಲೆಯನ್ನು ಸಂಪೂರ್ಣವಾಗಿ ವಿವರಿಸಿದ ಪ್ರಕಾಶ್ ರಾಜ್, ಆಗ ಹಿರಿಯ ಪೊಲೀಸ್ ಅಧಿಕಾರಿ ಮೊಹಾಂತಿ ಅವರು ಇನ್ನೂ ಚಾರ್ಜ್ ತಗೊಂಡಿರಲಿಲ್ಲ. ಆ ಸಮಯದಲ್ಲಿ ನನಗೆ ಗಿರೀಶ್ ಮಟ್ಟಣ್ಣನವರ್ ಕಡೆಯಿಂದ ಒಂದು ಫೋನ್ ಬಂತು. 'ಮಾಸ್ಕ್ ಮ್ಯಾನ್' (ಚಿನ್ನಯ್ಯ) ನಿಮ್ಮ ಹತ್ತಿರ ಮಾತನಾಡಬೇಕಂತೆ ಎಂದರು. ನಾನು ಫೋನ್ ಕೊಡು ಎಂದಾಗ ಆತ ತಮಿಳಿನಲ್ಲಿ ಮಾತನಾಡಲು ಶುರು ಮಾಡಿದ. ಫೋನ್‌ನಲ್ಲಿ ಆತ, 'ಅಣ್ಣ ನನಗೆ ಬಹಳ ವಿಷಯ ಗೊತ್ತು! ನಾನು ನಿಮ್ಮನ್ನು ಭೇಟಿ ಆಗಬೇಕು ಮತ್ತು ಸಾಕಷ್ಟು ವಿಚಾರಗಳನ್ನು ಹೇಳಿಕೊಳ್ಳಬೇಕು. ನನಗೆ ಭಯ ಆಗ್ತಾ ಇದೆ, ನಿಮ್ಮ ಸಪೋರ್ಟ್ ಬೇಕು' ಎಂದು ಅಳಲು ತೋಡಿಕೊಂಡಿದ್ದ.

ಆಗ ನಾನು ಅವನಿಗೆ ಫೋನ್‌ನಲ್ಲಿ ಮಾತನಾಡಬೇಡ, ನಿನ್ನ ವಾಯ್ಸ್ ರೆಕಾರ್ಡ್ ಮಾಡಿ ಕಳುಹಿಸು ಅಂದೆ. ಅವನು ವಾಯ್ಸ್ ರೆಕಾರ್ಡ್ ಮಾಡಿ ಕಳಿಸಿದ ತಕ್ಷಣ, ನಾನು ಪೊಲೀಸ್ ಅಧಿಕಾರಿ ಮೊಹಾಂತಿ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದೆ ಮತ್ತು ಆ ವಾಯ್ಸ್ ಮೆಸೇಜ್ ಅನ್ನು ಪೊಲೀಸರಿಗೆ ಕಳಿಸಿಕೊಟ್ಟೆ. ನಾನೊಬ್ಬ ಜವಾಬ್ದಾರಿಯುತ ನಾಗರಿಕನಾಗಿ ನನಗೆ ಬಂದ ಮಾಹಿತಿಯನ್ನು ನೇರವಾಗಿ ಪೊಲೀಸರಿಗೆ ತಲುಪಿಸುವ ಕೆಲಸ ಮಾಡಿದ್ದೇನೆಯೇ ಹೊರತು ಬೇರೇನೂ ಮಾಡಿಲ್ಲ ಎಂದು ತಿಳಿಸಿದ್ದಾರೆ.

‘ಚಿನ್ನಯ್ಯ ಉಲ್ಟಾ ಹೊಡೆಯುತ್ತಿದ್ದಾನೆ’ ಎಂದು ಪೊಲೀಸರೇ ಹೇಳಿದ್ದರು!

ಇದಾದ ನಂತರ ಕೆಲ ದಿನಗಳ ಬಳಿಕ ನಾನು ಮೊಹಾಂತಿ ಅವರಲ್ಲಿ ಅಪ್‌ಡೇಟ್ ಕೇಳಿದಾಗ, ಅವರು ಚಿನ್ನಯ್ಯನಿಂದ ಅಂತರ ಕಾಯ್ದುಕೊಳ್ಳುವಂತೆ ಹೇಳಿದರು. ಚಿನ್ನಯ್ಯ ನನ್ನ ಬಳಿ ಬಂದು 'ನನಗೆ ಭಯವಾಗುತ್ತಿದೆ, ಆದರೆ ಎಸ್‌ಐಟಿ (SIT) ರಚನೆ ಆಗಿದೆ' ಎಂದಿದ್ದ. ಆಗ ನಾನು ಅವನಿಗೆ ಧೈರ್ಯ ತುಂಬಿ, 'ನೀನು ನನ್ನ ಮುಂದೆ ಹೇಳಿದ ಸತ್ಯವನ್ನು ಎಸ್‌ಐಟಿ ಮುಂದೆಯೇ ಹೋಗಿ ಹೇಳು. ಸತ್ಯ ಹೇಳಿದರೆ ಇಡೀ ಊರೇ ನಿನ್ನನ್ನು ಕೊಂಡಾಡುತ್ತೆ, ನಾನೇ ನಿನ್ನನ್ನು ಬಂದು ತಬ್ಬಿಕೊಳ್ಳುತ್ತೇನೆ' ಎಂದು ಹೇಳಿದ್ದೆ. ಆದರೆ, ಸ್ವಲ್ಪ ದಿನಗಳ ಬಳಿಕ ಮೊಹಾಂತಿ ಅವರೇ ನನಗೆ ಕರೆ ಮಾಡಿ, 'ಚಿನ್ನಯ್ಯ ಉಲ್ಟಾ ಹೊಡೆಯುತ್ತಿದ್ದಾನೆ, ಆತ ಸುಳ್ಳು ಮಾಹಿತಿ ನೀಡುತ್ತಿದ್ದಾನೆ, ಅವನಿಂದ ದೂರ ಇರಿ' ಎಂದು ಎಚ್ಚರಿಸಿದ್ದರು. ಹಾಗಾಗಿ ನಾನು ಅವನಿಂದ ತಕ್ಷಣ ದೂರ ಆದೆ' ಎಂದಿದ್ದಾರೆ.

200 ಕೋಟಿ ತರಲು ನಾನೇನು ಧರ್ಮಸ್ಥಳದ ವಿರೋಧಿಯೇ?

ಧರ್ಮಸ್ಥಳಕ್ಕೆ ಅಪಪ್ರಚಾರ ಮಾಡಲು ಪ್ರಕಾಶ್ ರಾಜ್ 200 ಕೋಟಿ ಡೀಲ್ ಮಾಡಿದ್ದಾರೆ ಅಂತ ಬಿಂಬಿಸಲಾಗುತ್ತಿದೆ. ಅಷ್ಟಕ್ಕೂ 200 ಕೋಟಿ ರೂಪಾಯಿ ಹಣವನ್ನು ನಾನೆಲ್ಲಿಂದ ತರಲಿ? ಪರಮ ಪವಿತ್ರ ಧರ್ಮಸ್ಥಳದ ಮೇಲೆ ನಾನು ಯಾಕೆ ಅಪಪ್ರಚಾರ ಮಾಡಲಿ? ವಿಷಯವನ್ನು ತಿರುಚಿ ನನಗೆ ಧರ್ಮಸ್ಥಳದ ಮೇಲೆ ಪ್ರೀತಿ ಇಲ್ಲ, ನಾನು ಧರ್ಮ ವಿರೋಧಿ ಅಂತೆಲ್ಲಾ ಯಾಕೆ ಬಣ್ಣ ಬಳಿಯುತ್ತಿದ್ದೀರಾ? ನನ್ನ ಹೆಂಡತಿ ಪ್ರತಿದಿನ ದೇವರ ಪೂಜೆ ಮಾಡುತ್ತಾಳೆ, ನಾನು ಅವಳ ಭಾವನೆಗಳನ್ನು ಗೌರವಿಸುತ್ತೇನೆ. ದೇಶದಲ್ಲಿ ಪ್ರಧಾನಿಯನ್ನೇ ಪ್ರಶ್ನಿಸಿದರೂ ಈ ರೀತಿ ವಿಷಯ ತಿರುಚಬಾರದು ಎಂದು ಹೇಳಿದ್ದಾರೆ.

ವೀರೇಂದ್ರ ಹೆಗ್ಗಡೆ ಅದ್ಭುತ ಮನುಷ್ಯ; ನನ್ನ ಹೋರಾಟ ಸೌಜನ್ಯ ಸಾವಿನ ವಿರುದ್ಧ!

ನಾನು ನನ್ನ ಜೀವನದಲ್ಲಿ ಒಂದೇ ಒಂದು ಬಾರಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿದ್ದೆ. ಅವರು ಅತ್ಯಂತ ಅದ್ಭುತವಾದ ಮತ್ತು ಶ್ರೇಷ್ಠ ಮನುಷ್ಯ. ಈ ಪ್ರಕರಣದಲ್ಲಿ 200 ಕೋಟಿ ರೂಪಾಯಿ ವ್ಯವಹಾರ, ಧರ್ಮ, ಷಡ್ಯಂತ್ರ ಎಂಬ ಕಟ್ಟುಕಥೆಗಳನ್ನು ಎಳೆದು ತರುವುದು ಸರಿಯಲ್ಲ. ನಾನು ಯಾವುದೇ ಎಂಎಲ್‌ಎ ಅಥವಾ ಎಂಪಿ ಆಗಬೇಕಿಲ್ಲ. ಧರ್ಮಸ್ಥಳದಲ್ಲಿ ಸತ್ತಿರುವ ಹೆಣ್ಣು ಮಕ್ಕಳ ಮೇಲೆ ನಿಮಗೇಕೆ ಕನಿಕರ ಇಲ್ಲ? ಅಲ್ಲಿ ಮೃತಪಟ್ಟ ಹೆಣ್ಣು ಮಕ್ಕಳು ನಮ್ಮವರಲ್ವಾ? ಸೌಜನ್ಯ ಹೇಗೆ ಸತ್ತಳು ಮತ್ತು ಅಲ್ಲಿ ಉಳಿದ ಹೆಣ್ಣು ಮಕ್ಕಳ ಸಾವುಗಳು ಹೇಗೆ ಸಂಭವಿಸಿದವು ಎಂದು ಪ್ರಶ್ನಿಸುವುದು ತಪ್ಪಾ? ನಾನು ಆ ಸಾವುಗಳ ನ್ಯಾಯಕ್ಕಾಗಿ ಪ್ರಶ್ನೆ ಮಾಡಿದ್ದೇನೆಯೇ ಹೊರತು ಕ್ಷೇತ್ರದ ವಿರುದ್ಧ ಷಡ್ಯಂತ್ರ ಮಾಡಿಲ್ಲ" ಎಂದು ಪ್ರಕಾಶ್ ರಾಜ್ ಸ್ಪಷ್ಟಪಡಿಸಿದ್ದಾರೆ.

 

PREV
Read more Articles on
click me!

Recommended Stories

Mandya: ಹೆಂಡತಿಗೆ ಮೆಸೇಜ್ ಮಾಡುತ್ತಿದ್ದಕ್ಕೆ ಸ್ನೇಹಿತನನ್ನ ಸ್ಥಳಕ್ಕೆ ಕರೆಸಿಕೊಂಡ ಪತಿ ಮುಂದೇನಾಯ್ತು ನೋಡಿ!
ನೂತನ ನೊಯ್ಡಾ ಏರ್‌ಪೋರ್ಟ್‌ನಿಂದ ಸೇವೆ ಆರಂಭಿಸಿದ ಆಕಾಶ ಏರ್, ಬೆಂಗಳೂರಿಗೆ ನೇರ ವಿಮಾನ ಸಂಪರ್ಕ!