
ಮುನಿರಾಬಾದ್(ಜು.25): ತುಂಗಭದ್ರಾ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಒಳಹರಿವು ಹೆಚ್ಚುತ್ತಲೇ ಇರುವುದರಿಂದ ಯಾವುದೇ ಕ್ಷಣದಲ್ಲಿ ತುಂಗಭದ್ರಾ ಜಲಾಶಯ ಭರ್ತಿಯಾಗುವ ಸಾಧ್ಯತೆ ಇದೆ.
ಶನಿವಾರ ಮಧ್ಯಾಹ್ನದ ವೇಳೆ 1 ಲಕ್ಷ ಕ್ಯುಸೆಕ್ ನೀರು ಹರಿದು ಬರುತ್ತಿರುವುದು ಸಂಜೆಯ ವೇಳೆಗೆ 1.40 ಲಕ್ಷ ಕ್ಯುಸೆಕ್‌ಗೂ ಅಧಿಕವಾಗುತ್ತಲೇ ಇದೆ. ಇದು ರಾತ್ರಿ ಮುಗಿದು ಬೆಳಗಾಗುವುದರೊಳಗೆ 2 ಲಕ್ಷ ಕ್ಯುಸೆಕ್ ದಾಟುವ ಸಾಧ್ಯತೆ ಇರುವುದರಿಂದ ಯಾವುದೇ ಸಂದರ್ಭದಲ್ಲಿ ಜಲಾಶಯ ಭರ್ತಿಯಾಗಬಹುದು.
ಜಲಾಶಯಕ್ಕೆ ಶನಿವಾರ ಬೆಳಗ್ಗೆ 75,000 ಕ್ಯುಸೆಕ್ ನೀರು ಹರಿದು ಬಂದಿದ್ದು, ಮಧ್ಯಾಹ್ನ 3 ಗಂಟೆಗೆ ಒಳಹರಿವಿನ ಪ್ರಮಾಣ 1.15 ಲಕ್ಷ ಕ್ಯುಸೆಕ್‌ಗೆ ತಲುಪಿತು. ಸಂಜೆ 6 ಗಂಟೆಗೆ ಇದು 1.40 ಲಕ್ಷ ಕ್ಯುಸೆಕ್‌ಗೆ ಏರಿಕೆಯಾಯಿತು. ಈ ಏರಿಕೆಯ ಪ್ರಮಾಣವನ್ನು ಅಂದಾಜಿಸಿ, ಭಾನುವಾರ ಬೆಳಗ್ಗೆ 2 ಲಕ್ಷ ಕ್ಯುಸೆಕ್‌ಗೂ ಅಧಿಕ ಒಳಹರಿವು ಆಗುವ ಸಾಧ್ಯತೆ ಇದೆ. ಹಾಗೊಂದು ವೇಳೆ ಇದನ್ನು ಮೀರಿಯೂ ಜಲಾಶಯಕ್ಕೆ ಒಳಹರಿವು ಹರಿದು ಬಂದಿದ್ದೇ ಆದರೆ ಭಾನುವಾರ ಸಂಜೆಯ ವೇಳೆಗೆ ಭರ್ತಿಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಕಾಡಾ ಅಧಿಕಾರಿಗಳು.
ಈಗ ಹರಿದು ಬರುತ್ತಿರುವ ನೀರಿನ ಲೆಕ್ಕಚಾರದಲ್ಲಿ ಹೇಳುವುದಾದರೇ ಜಲಾಶಯವು ಭರ್ತಿಯಾಗಲು ಇನ್ನು 3-4 ದಿನ ಬೇಕಾಗುತ್ತದೆ. ಆದರೆ, ಜಲಾನಯನ ಪ್ರದೇಶದಲ್ಲಿ ಬಿದ್ದ ಮಳೆಯ ಲೆಕ್ಕಚಾರದಲ್ಲಿ ಒಳಹರಿವು 24 ಗಂಟೆಯೊಳಗಾಗಿ ದಾಖಲೆ ಪ್ರಮಾಣದಲ್ಲಿ ಬರುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ.
4 ಜಿಲ್ಲೆಗಳ ಜೀವನಾಡಿ ತುಂಗಭದ್ರಾ ಜಲಾಶಯದ ಒಳಹರಿವು ಹೆಚ್ಚಳ: ನದಿಗೆ ನೀರು
ಜಲಾಶಯದಲ್ಲಿ ಈಗ ಸುಮಾರು 72 ಟಿಎಂಸಿ ನೀರು ಇದ್ದು, ಭರ್ತಿಯಾಗಲು 29 ಟಿಎಂಸಿ ನೀರು ಬೇಕಾಗುತ್ತದೆ. ಅಂದರೆ 3.45 ಲಕ್ಷ ಕ್ಯುಸೆಕ್ ನೀರಿನ ಒಳಹರಿವಿನ ಅಗತ್ಯವಿದೆ. ಕಳೆದ ವರ್ಷ ಇದೇ ದಿನದಂದು ಜಲಾಶಯದಲ್ಲಿ ಕೇವಲ 36 ಟಿ.ಎಂ.ಸಿ. ನೀರು ಶೇಖರಣೆಯಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜಲಾಶಯದಲ್ಲಿ ದುಪ್ಪಟ್ಟು ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ ಹಾಗೂ ಜಲಾಶಯವು ಭರ್ತಿಯಾಗುವತ್ತ ಸಾಗಿದೆ.
ನದಿ ಪಾತ್ರದ ಜನರಿಗೆ ಎಚ್ಚರಿಕೆ
ತುಂಗಭದ್ರಾ ಜಲಾಶಯವು ಶೀಘ್ರದಲ್ಲಿ ಭರ್ತಿಯಾಗಲಿದ್ದು, ಜಲಾಶಯದ ಗೇಟುಗಳ ಮೂಲಕ ಯಾವುದೇ ಕ್ಷಣದಲ್ಲಿ ನದಿಗೆ ನೀರನ್ನು ಹರಿಸಲಾಗುವುದು. ಈ ಹಿನ್ನೆಲೆಯಲ್ಲಿ ನದಿಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ನೀರಾವರಿ ಇಲಾಖೆಯ ಅಧಿಕಾರಿಗಳು ಎಚ್ಚರಿಕೆಯನ್ನು ನೀಡಿದ್ದಾರೆ.
ತುಂಗಭದ್ರಾ ನದಿ ಕೊಪ್ಪಳ, ರಾಯಚೂರು ಜಿಲ್ಲೆಯುದ್ದಕ್ಕೂ ಹರಿದಿದ್ದು, ಈ ನದಿಯುದ್ದಕ್ಕೂ ಸಾರ್ವಜನಿಕರು ಎಚ್ಚರಿಕೆಯನ್ನು ವಹಿಸುವಂತೆ ಸೂಚಿಸಿದ್ದಾರೆ. ಜಾನುವಾರುಗಳನ್ನು ನದಿಯ ಪಾತ್ರಕ್ಕೆ ಬಿಡಬಾರದು ಮತ್ತು ನದಿಯಲ್ಲಿ ಸ್ನಾನ ಮಾಡುವ ಸಾಹಸ ಮಾಡಬಾರದು. ಕ್ರಸ್ಟ್ ಗೇಟ್ ತೆರೆಯುತ್ತಿದ್ದಂತೆ ನದಿಗೆ ಏಕಾಏಕಿ ನೀರು ಹರಿದು ಬಂದು, ಪ್ರವಾಹ ಬರುವ ಸಾಧ್ಯತೆ ಇರುವುದರಿಂದ ಜನರು ಸುರಕ್ಷತೆಯನ್ನು ಅನುಸರಿಸಬೇಕು ಎಂದು ಮನವಿ ಮಾಡಿದೆ ಜಿಲ್ಲಾಡಳಿತ.
ಸಹಾಯವಾಣಿ ಪ್ರಾರಂಭ
ಜಿಲ್ಲೆಯಲ್ಲಿ ಮಳೆ ಬೀಳುವ ಸಾಧ್ಯತೆಯ ಜೊತೆಗೆ ನದಿಕೊಳ್ಳಗಳ ಪ್ರವಾಹ ಬರುವುದರಿಂದ ಮುನ್ನೆಚ್ಚರಿಕೆಯನ್ನು ವಹಿಸಿರುವ ಜಿಲ್ಲಾಡಳಿತ ಸಹಾಯವಾಣಿಯನ್ನು ದಿನದ 24 ಗಂಟೆಯೂ ಪ್ರಾರಂಭಿಸಿದೆ. ಸಾರ್ವಜನಿಕರು ಪ್ರವಾಹಕ್ಕೆ ಸಿಲುಕುವುದು ಸೇರಿದಂತೆ ಮಳೆಯಿಂದ ತೊಂದರೆಗೆ ಒಳಗಾದಲ್ಲಿ ಸಹಾಯವಾಣಿಗೆ ಮಾಹಿತಿ ನೀಡಿ, ಆಸರೆಯನ್ನು ಪಡೆಯಬಹುದಾಗಿದೆ. ಕೊಪ್ಪಳ 08539-225001,220381, ಕುಷ್ಟಗಿ 08536-267031, ಗಂಗಾವತಿ 08533-230292, ಕನಕಗಿರಿ 7406563856, ಕಾರಟಗಿ 08533-275106, ಯಲಬುರ್ಗಾ 08534-220130, ಕುಕನೂರ-8050303495 ಸಂಖ್ಯೆಗೆ ಸಂಪರ್ಕಿಸಬಹುದು.