ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೀಡಾದ ಸಂಪರ್ಕ ಸೇತುವೆಗಳ ನಿರ್ಮಾಣ ವಿಳಂಬವಾಗುತ್ತಿರುವ ಕಾರಣ ತಾತ್ಕಾಲಿಕ ಸೇತುವೆ ನಿರ್ಮಾಣ ವಿಚಾರ ಇದೀಗ ರಾಜಕೀಯ ಹಗ್ಗಜಗ್ಗಾಟಕ್ಕೆ ವಸ್ತುವಾಗುತ್ತಿದೆ.
ಎಂ.ಅಫ್ರೋಜ್ ಖಾನ್
ರಾಮನಗರ (ನ.28): ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೀಡಾದ ಸಂಪರ್ಕ ಸೇತುವೆಗಳ ನಿರ್ಮಾಣ ವಿಳಂಬವಾಗುತ್ತಿರುವ ಕಾರಣ ತಾತ್ಕಾಲಿಕ ಸೇತುವೆ ನಿರ್ಮಾಣ ವಿಚಾರ ಇದೀಗ ರಾಜಕೀಯ ಹಗ್ಗಜಗ್ಗಾಟಕ್ಕೆ ವಸ್ತುವಾಗುತ್ತಿದೆ. ಹೀಗಾಗಿ ಗ್ರಾಮಸ್ಥರೇ ಸಂಚಾರಕ್ಕಾಗಿ ಪರ್ಯಾಯ ಮಾರ್ಗ ಕಂಡುಕೊಳ್ಳುತ್ತಿದ್ದಾರೆ. ಕಳೆದ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಮಹಾ ಮಳೆಯಿಂದ ಬೆಳೆ ಹಾನಿ ಮಾತ್ರವಲ್ಲದೆ ಸರ್ಕಾರಿ ಕಟ್ಟಡ, ರಸ್ತೆಗಳು ಹಾನಿಗೀಡಾಗಿದ್ದವು. ಅತೀ ಹೆಚ್ಚಿನ ಪ್ರಮಾಣದಲ್ಲಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆಗಳು ಮುರಿದು ಕೊಚ್ಚಿ ಹೋಗಿವೆ.
ರಾಮನಗರ, ಚನ್ನಪಟ್ಟಣ ಹಾಗೂ ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚಿನ ಸೇತುವೆಗಳು ಹಾನಿಗೊಂಡಿವೆ. ಗ್ರಾಮಗಳ ನಡುವೆ ಸಂಪರ್ಕ ಕಲ್ಪಿಸುತ್ತಿದ್ದ ಈ ಸೇತುವೆಗಳು ಮುರಿದಿರುವುದರಿಂದ ಜನರ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಹತ್ತಾರು ಕಿಲೋ ಮೀಟರ್ ಸುತ್ತಾಡಿ ಗ್ರಾಮ ತಲುಪುವಂತಾಗಿದೆ. ಮಳೆಯಿಂದ ನದಿ ಪಾತ್ರದಲ್ಲಿ ಪ್ರವಾಹ ಹೆಚ್ಚಾಗಿ ಸುಮಾರು 15ಕ್ಕೂ ಹೆಚ್ಚು ಸಂಪರ್ಕ ಸೇತುವೆಗಳಿಗೆ ಹಾನಿಯಾಗಿದೆ. ಎರಡು ಗ್ರಾಮಗಳ ನಡುವೆ ಸಂಪರ್ಕ ಕಲ್ಪಿಸುವ ಒಂದು ಸೇತುವೆ ನಿರ್ಮಾಣಕ್ಕೆ ಸುಮಾರು 12 ರಿಂದ 15 ಕೋಟಿ ರುಪಾಯಿ ವೆಚ್ಚ ತಗಲುತ್ತದೆ. ಸರ್ಕಾರದಿಂದ ಏಕಕಾಲಕ್ಕೆ ಇಷ್ಟೊಂದು ಹಣ ಬಿಡುಗಡೆಯಾಗುವುದು ಅನುಮಾನ.
Ramanagara: ಹಾಟ್ ಏರ್ ಬಲೂನಿನ ಪರೀಕ್ಷಾರ್ಥ ಹಾರಾಟ ಯಶಸ್ವಿ
ಹೀಗಾಗಿ ಸ್ಥಳೀಯ ಶಾಸಕರು ಜನರ ಅನುಕೂಲಕ್ಕಾಗಿ ಶಾಶ್ವತ ಸೇತುವೆ ನಿರ್ಮಾಣದ ಬದಲು ತಾತ್ಕಾಲಿಕ ಸೇತುವೆ ನಿರ್ಮಾಣಕ್ಕೆ ಕ್ರಮ ವಹಿಸುತ್ತಿದ್ದಾರೆ. ಈ ತಾತ್ಕಾಲಿಕ ಸೇತುವೆ ನಿರ್ಮಾಣಕ್ಕೂ ಲಕ್ಷಾಂತರ ರುಪಾಯಿ ವೆಚ್ಚ ತಗಲುತ್ತದೆ. ಇದರಿಂದ ಸುಮ್ಮನೆ ಹಣ ಪೋಲಾಗುತ್ತದೆ ಎಂಬ ಕಾರಣಕ್ಕೆ ವಿಪಕ್ಷಗಳ ನಾಯಕರು ತಾತ್ಕಾಲಿಕ ಸೇತುವೆ ಬದಲಿಗೆ ಶಾಶ್ವತ ಸೇತುವೆ ನಿರ್ಮಾಣ ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ. ಇದೀಗ ತಾತ್ಕಾಲಿಕ ಸೇತುವೆ ವಿಚಾರವೂ ರಾಜಕೀಯ ಜಿದ್ದಾಜಿದ್ದಿಗೆ ಆಹಾರವಾಗಿದೆ.
ಅವೈಜ್ಞಾನಿಕವಾಗಿ ತಾತ್ಕಾಲಿಕ ಸೇತುವೆ ನಿರ್ಮಾಣ: ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹೊಸ ಸೇತುವೆ ಅಥವಾ ತಾತ್ಕಾಲಿಕ ಸೇತುವೆ ನಿರ್ಮಾಣಕ್ಕೆ ಒಲವು ತೋರುತ್ತಿಲ್ಲ. ಈ ಕಾರಣದಿಂದಾಗಿ ಗ್ರಾಮಸ್ಥರೇ ಸಂಚಾರಕ್ಕಾಗಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಅವೈಜ್ಞಾನಿಕ ಕ್ರಮಗಳನ್ನು ಅನುಸರಿಸುತ್ತಿದ್ದಾರೆ. ಇದರಿಂದಾಗುವ ಅನಾಹುತದ ಬಗ್ಗೆ ಯಾರಿಗೂ ಅರಿವಿಲ್ಲದಂತಾಗಿದೆ. ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಕಡಿಮೆಯಾಗಿರುವ ಕಾರಣ ಮಂಚನಬೆಲೆ ಸೇತುವೆ ಬಳಿ ವಾಹನ ಸವಾರರು ನದಿಯಲ್ಲಿ ಇಳಿದು ಮಂಡಿ ಉದ್ದ ಹರಿಯುತ್ತಿರುವ ನೀರಿನಲ್ಲಿಯೇ ದ್ವಿಚಕ್ರ ವಾಹನ ತಳ್ಳಿಕೊಂಡು ದಡ ಸೇರುತ್ತಿದ್ದಾರೆ. ಬಿಡದಿ - ಬಾನಂದೂರು ರಸ್ತೆಯಲ್ಲಿನ ಸಂಪರ್ಕ ಸೇತುವೆಯನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಲಾಗಿದೆ.
ಸುಗ್ಗನಹಳ್ಳಿ ಗ್ರಾಮದ ಅರ್ಕಾವತಿ ಸೇತುವೆ ನಿರ್ಮಾಣಕ್ಕೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗದ ಹಿನ್ನೆ್ನಲೆಯಲ್ಲಿ ಇಲ್ಲಿನ ಗ್ರಾಮಸ್ಥರು ಸರ್ಕಾರದ ನೆರವಿಲ್ಲದೆ ತಮ್ಮ ಸ್ವಂತ ವೆಚ್ಚದಲ್ಲಿ ಸುಗ್ಗನಹಳ್ಳಿ ಗ್ರಾಮದ ಅರ್ಕಾವತಿ ನದಿಗೆ ತಾತ್ಕಾಲಿಕ ಸೇತುವೆಯನ್ನು ನಿರ್ಮಿಸಿದ್ದಾರೆ. ಕಸಬಾ ಹೋಬಳಿ ಪ್ರದೇಶದ ಸುತ್ತಮುತ್ತಲ ಹಳ್ಳಿಗಳ ಗ್ರಾಮಸ್ಥರಿಗೆ ಸೇತುವೆ ಇಲ್ಲದೆ ತುಂಬಾ ತೊಂದರೆಯಾಗಿತ್ತು. ಮಕ್ಕಳು ಶಾಲೆಗೆ ನದಿ ದಾಟಿಯೇ ಹೋಗಬೇಕಿತ್ತು. ಪ್ರತಿನಿತ್ಯ ಓಡಾಟಕ್ಕೆ ಅದರಲ್ಲೂ ಮಳೆಯ ಸಮಯದಲ್ಲಂತೂ ನದಿ ದಾಟುವುದು ದುಸ್ಸಾಹಸವೇ ಆಗಿತ್ತು. ಹಾಗಾಗಿ ಸೇತುವೆ ನಿರ್ಮಾಣ ಅಗತ್ಯವಾಗಿದ್ದರಿಂದ ಗ್ರಾಮದ ಯುವಕರೇ ನಿರ್ಮಿಸಿಕೊಂಡಿದ್ದಾರೆ. ಇನ್ನಾದರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಶಾಶ್ವತ ಸೇತುವೆ ನಿರ್ಮಾಣಕ್ಕೆ ಕ್ರಮ ವಹಿಸಬೇಕಾಗಿದೆ.
ಹಾನಿಗೊಂಡ ಸೇತುವೆಗಳು ಎಷ್ಟು?: ಮಂಚನಬೆಲೆ ಜಲಾಶಯದಿಂದ ಹರಿಯುವ ನೀರು ಅರ್ಕಾವತಿ ನದಿ ಮಾರ್ಗವಾಗಿ ಮಾಗಡಿ, ರಾಮನಗರ ಹಾಗೂ ಕನಕಪುರ ತಾಲೂಕಿನಲ್ಲಿ ಹರಿದು ಪಕ್ಕದ ತಮಿಳುನಾಡಿಗೆ ಸೇರಲಿದೆ. ಜಿಲ್ಲೆಯ ಮೂರು ತಾಲೂಕುಗಳ ವ್ಯಾಪ್ತಿಯಲ್ಲಿ ನೂರಾರು ಸೇತುವೆಗಳನ್ನು ಅರ್ಕಾವತಿ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಲಾಗಿದೆ. ಮಳೆ ಅಬ್ಬರಕ್ಕೆ ಅರ್ಕಾವತಿ ಮತ್ತು ಕಣ್ವ ನದಿಗಳು ಮೈದುಂಬಿ ಹರಿದ ಪರಿಣಾಮ 15ಕ್ಕೂ ಹೆಚ್ಚು ಸೇತುವೆಗಳು ಬಿರುಕು ಬಿಟ್ಟಿವೆ. ಇದರಲ್ಲಿ ಬಹುತೇಕ ಸೇತುವೆಗಳು ನೀರು ಪಾಲಾಗಿದ್ದರೆ, ಕೆಲವು ಶಿಥಿಲಗೊಂಡಿವೆ. ಇದು ಕಳಪೆ ಕಾಮಗಾರಿಗೂ ಸಾಕ್ಷಿಯಾಗಿವೆ.
ಚನ್ನಪಟ್ಟಣ ತಾಲೂಕಿನ ಬಾಣಗಹಳ್ಳಿ - ಕೊಂಡಾಪುರ ನಡುವೆ ಕಣ್ವ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಕಿರಿ ಸೇತುವೆ ಕೊಚ್ಚಿ ಹೋಗಿದೆ. ಈ ಸೇತುವೆಯನ್ನು ಕೇವಲ ವರ್ಷದ ಹಿಂದಷ್ಟೇ 36 ಲಕ್ಷ ರುಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಆದರೆ, ವರ್ಷದಲ್ಲಿಯೇ ಸೇತುವೆ ನೀರು ಪಾಲಾಗಿದೆ. ಮಂಚನಬೆಲೆ ಜಲಾಶಯ ಬಳಿಯ ಮಂಚನಬೆಲೆ ಸೇತುವೆ, ಸುಗ್ಗನಹಳ್ಳಿ , ಹರೀಸಂದ್ರ ಸೇರಿದಂತೆ ಪ್ರಮುಖ ಗ್ರಾಮಗಳ ನಡುವೆ ಸಂಪರ್ಕ ಕಲ್ಪಿಸುವ ಸೇತುವೆಗಳು ಮುರಿದು ಬಿದ್ದಿವೆ.
Ramanagara: ಪಶುಪಾಲನಾ ಸೇವಾ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ
ಗ್ರಾಮಗಳ ಸಂಪರ್ಕ ಸೇತುವೆ ಕುಸಿದಿರುವುದರಿಂದ ಪ್ರತಿನಿತ್ಯ ಜನರ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಸೇತುವೆ ನಿರ್ಮಿಸಿಕೊಡಿ ಎಂದು ಸಂಬಂಧಪಟ್ಟವರಿಗೆ ಮನವಿ ಮಾಡಿದರು ಮತ್ತು ಸರ್ಕಾರಕ್ಕೆ ಅರ್ಜಿ ಸಲ್ಲಿಸಿದರೂ ಯಾವ ಪ್ರಯೋಜನವೂ ಆಗಲಿಲ್ಲ. ಜನಪ್ರತಿನಿಧಿಗಳು ಕಣ್ಮುಚ್ಚಿ ಕುಳಿತರೆ ಜನರ ಕಷ್ಟಗಳಿಗೆ ಪರಿಹಾರ ಸಿಗಲು ಹೇಗೆ ಸಾಧ್ಯ. ಶಾಶ್ವತವಾದ ಸೇತುವೆ ನಿರ್ಮಾಣ ಆಗಬೇಕಾಗಿದೆ. ಅದು ಯಾವಾಗ ಎಂಬುದು ತಿಳಿಯದು. ಹಾಗಾಗಿ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಿಕೊಳ್ಳಲಾಗಿದೆ.
- ಸುಗ್ಗನಹಳ್ಳಿ ಗ್ರಾಮದ ಯುವಕರು