ಸಾರಿಗೆ ಸಂಸ್ಥೆಯ 3 ಬಸ್‌ಗಳಲ್ಲಿ 81 ಆರೋಪಿಗಳ ರವಾನೆ| ಬೆಂಗಳೂರಲ್ಲೇ ಕೋವಿಡ್ ಟೆಸ್ಟ್, ಎಲ್ಲರ ವರದಿ ನೆಗೆಟಿವ್| ಬೆಂಗಳೂರಿನಿಂದ ಬಂದಿದ್ದ ಪೊಲೀಸ್ ಎಸ್ಕಾರ್ಟ್ ವಾಹನ ಸ್ಟಾರ್ಟ್ ಆಗದೇ ಪರದಾಡಿದ ಪೊಲೀಸ್ ಭದ್ರತಾ ಸಿಬ್ಬಂದಿ|
ಬಳ್ಳಾರಿ(ಆ.15): ಬೆಂಗಳೂರಿನ ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿಯಲ್ಲಿ ಮಂಗಳವಾರ ರಾತ್ರಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿರುವ 81 ಆರೋಪಿಗಳನ್ನು ಶುಕ್ರವಾರ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿದೆ.
ಸಿಸಿಬಿ ಹಾಗೂ ಕೆಎಸ್‌ಆರ್‌ಪಿ ಭದ್ರತೆಯೊಂದಿಗೆ ಗುರುವಾರ ರಾತ್ರಿ ಮೂರು ಕೆಎಸ್ಆರ್ಟಿಸಿ ಬಸ್‌ನಲ್ಲಿ ಬೆಂಗಳೂರಿನಿಂದ ಹೊರಟು ಶುಕ್ರವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಇಲ್ಲಿನ ಕೇಂದ್ರ ಕಾರಾಗೃಹ ತಲುಪಿದ ಆರೋಪಿಗಳನ್ನು ಜೈಲಿನ ನಿಯಮಗಳಂತೆ ದಾಖಲೆಗಳನ್ನು ಪರಿಶೀಲಿಸಿ, ಕಾರಾಗೃಹದೊಳಗೆ ಕಳಿಸಲಾಯಿತು. ಒಂದು ಬ್ಯಾರಕ್‌ನಲ್ಲಿ ಇಬ್ಬರಂತೆ ಎಲ್ಲ ಆರೋಪಿಗಳನ್ನು ಪ್ರತ್ಯೇಕ ಇರಿಸಲಾಗಿದೆ ಎಂದು ತಿಳಿದು ಬಂದಿದೆ.
ಹರಪನಹಳ್ಳಿ: ಯೂರಿಯಾ ಗೊಬ್ಬರಕ್ಕೆ ಮುಗಿಬಿದ್ದ ರೈತರು
ಆರೋಪಿಗಳನ್ನು 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕೊಡಲಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರಕರಣದ ಆರೋಪಿಗಳನ್ನು ಬಳ್ಳಾರಿ ಜೈಲಿಗೆ ಕಳುಹಿಸಿಕೊಡಲಾಗಿದೆ. ಬೆಂಗಳೂರಿನಲ್ಲಿಯೇ ಎಲ್ಲ ಆರೋಪಿಗಳಿಗೆ ಕೋವಿಡ್ ಪರೀಕ್ಷೆ ಮಾಡಿಸಿಯೇ ಕಳಿಸಿಕೊಡಲಾಗಿದೆ. ಬಳ್ಳಾರಿ ಜೈಲಿಗೆ ಬಂದ ಎಲ್ಲ ಆರೋಪಿಗಳ ಕೋವಿಡ್ ವರದಿ ನೆಗಟಿವ್ ಇದೆ ಎಂದು ಕೇಂದ್ರ ಕಾರಾಗೃಹದ ಅಧೀಕ್ಷಕ ಮಲ್ಲಿಕಾರ್ಜುನ ಸ್ವಾಮಿ ಕನ್ನಡಪ್ರಭಕ್ಕೆ ತಿಳಿಸಿದರು.
ಸ್ಟಾರ್ಟ್ ಆಗದ ಎಸ್ಕಾರ್ಟ್ ವಾಹನ:
ಬಳ್ಳಾರಿ ಜೈಲಿಗೆ ಕರೆದೊಯ್ಯುವ ಸಂದರ್ಭದಲ್ಲಿ ಭದ್ರತೆಗಾಗಿ ಬೆಂಗಳೂರಿನಿಂದ ಬಂದಿದ್ದ ಪೊಲೀಸ್ ಎಸ್ಕಾರ್ಟ್ ವಾಹನ ಸ್ಟಾರ್ಟ್ ಆಗದೇ ಪೊಲೀಸ್ ಭದ್ರತಾ ಸಿಬ್ಬಂದಿ ಪರದಾಡಿದ ಘಟನೆ ಇಲ್ಲಿನ ಕೇಂದ್ರ ಕಾರಾಗೃಹ ಮುಂಭಾಗದಲ್ಲಿ ಶುಕ್ರವಾರ ಜರುಗಿತು. 81 ಆರೋಪಿಗಳನ್ನು ಬಳ್ಳಾರಿ ಜೈಲಿಗೆ ಕರೆ ತರೆತಂದು ಹಿಂದುರುಗುವ ವೇಳೆ ಘಟನೆ ನಡೆದಿದ್ದು ಕೊನೆಗೆ ಪೊಲೀಸ್ ಸಿಬ್ಬಂದಿಯೇ ವಾಹನವನ್ನು ತಳ್ಳಿ ಸ್ಟಾರ್ಟ್ ಮಾಡಿದರು. ಇಂತಹ ಮಹತ್ವದ ಕಾರ್ಯಾಚರಣೆಗೆ ಸುಸ್ಥಿತಿಯಲ್ಲಿಲ್ಲದ ವಾಹನ ಕಳುಹಿಸಿದ್ದು ವ್ಯಾಪಕ ಟೀಕೆಗೆ ಕಾರಣವಾಗಿದೆ.