ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡಲು ಬಿಗಿ ಕ್ರಮ ಕೈಗೊಳ್ಳಿ: ಟಿಬಿಜೆ

By Kannadaprabha News  |  First Published Sep 15, 2023, 8:14 AM IST

ಶಿರಾ ನಗರದಲ್ಲಿ ಪೊಲೀಸ್ ಇಲಾಖೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ, ಯಾವುದೇ ರಾಜಕಾರಣಿಗಳ ಒತ್ತಡಕ್ಕೂ ಮಣಿಯದೇ ತಮ್ಮ ಕರ್ತವ್ಯ ಮಾಡಿ ಇದಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದು ಶಾಸಕ ಟಿ.ಬಿ. ಜಯಚಂದ್ರ ಅವರು ನಗರ ಪೊಲೀಸ್ ಇನ್ಸ್‌ಪೆಕ್ಟರ್ ಮಂಜೇಶ್ ಗೌಡ ಅವರಿಗೆ ಸೂಚನೆ ನೀಡಿದರು.


 ಶಿರಾ : ಶಿರಾ ನಗರದಲ್ಲಿ ಪೊಲೀಸ್ ಇಲಾಖೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ, ಯಾವುದೇ ರಾಜಕಾರಣಿಗಳ ಒತ್ತಡಕ್ಕೂ ಮಣಿಯದೇ ತಮ್ಮ ಕರ್ತವ್ಯ ಮಾಡಿ ಇದಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದು ಶಾಸಕ ಟಿ.ಬಿ. ಜಯಚಂದ್ರ ಅವರು ನಗರ ಪೊಲೀಸ್ ಇನ್ಸ್‌ಪೆಕ್ಟರ್ ಮಂಜೇಶ್ ಗೌಡ ಅವರಿಗೆ ಸೂಚನೆ ನೀಡಿದರು.

ಅವರು ನಗರಸಭೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ನಗರ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಆಯಕಟ್ಟಿನ ಸ್ಥಳಗಳಲ್ಲಿ ಜಾಮ್ ಉಂಟಾಗಿ ಅಪಘಾತಗಳು ಸಂಭವಿಸುತ್ತಿವೆ. ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿಯದೆ ಕಟ್ಟುನಿಟ್ಟಿನ ಕ್ರಮ ಜರುಗಿಸಿ ಸಮಸ್ಯೆ ಬಗೆಹರಿಸಿ ಎಂದು ತಿಳಿಸಿದರು.

Latest Videos

undefined

ಸಾಮಾನ್ಯ ಜನರಿಗೆ ನೀರಿನ ಸಂಪರ್ಕ ನೀಡಲು 5000 ರು. ಲಂಚ ಬೇಡಿಕೆ ಇಟ್ಟಿದ್ದಾರೆ ಎಂದು ನಗರಸಭೆ ಸದಸ್ಯ ರಂಗರಾಜು ಸಭೆಯಲ್ಲಿ ಆರೋಪಿಸಿದರು. ಸಂಬಂಧಪಟ್ಟ ಅಧಿಕಾರಿ ಇಲ್ಲವೆಂದು ವಾದಿಸಿದಾಗ ನನ್ನ ಹತ್ತಿರ ದಾಖಲೆಗಳಿವೆ ನೀಡಬೇಕಾ? ಎಂದು ಹೇಳಿದರು. ಇದಲ್ಲದೆ ವಾಣಿಜ್ಯ ಕಟ್ಟಡಗಳಿಗೆ ಅನಧಿಕೃತವಾಗಿ ನೀರಿನ ಸಂಪರ್ಕ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷೆ ಪೂಜಾ ಅವರು ಯಾವುದಾದರೂ ಅನಧಿಕೃತ ನೀರಿನ ಸಂಪರ್ಕವಿದ್ದರೆ ತಕ್ಷಣವೇ ಕಡಿತಗೊಳಿಸಿ ಎಂದು ಆದೇಶಿಸಿದರು.

10 ತಿಂಗಳ ಕಂದಾಯ ಪಾವತಿ ಮಾಡಿಸಿಕೊಳ್ಳದೆ ಖಾತೆಯನ್ನು ನೀಡಿರುತ್ತಾರೆ. ಬಗ್ಗೆ ಏನು ಕ್ರಮ ತೆಗೆದುಕೊಳ್ಳುತ್ತೀರಾ? ಎಂದು ನಗರಸಭೆ ಸದಸ್ಯೆ ಉಮಾ ವಿಜಯರಾಜ್ ದಾಖಲೆ ಸಮೇತ ಸಭೆಯಲ್ಲಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಶಾಸಕರು ಆಯುಕ್ತರಿಗೆ ಸಂಬಂಧಪಟ್ಟ ಅಧಿಕಾರಿಗೆ ಶೋಕಾಸ್ ನೋಟಿಸ್ ನೀಡಿ, ಅದಕ್ಕೆ 10 ದಿನಗಳೊಳಗೆ ಸಮಂಜಸ ಉತ್ತರ ಬರದಿದ್ದರೆ ಅಮಾನತ್ತಿನಲ್ಲಿ ಇಡೋಣ ಎಂದು ಹೇಳಿದಾಗ, ಸಭೆಯ ಮಧ್ಯದಲ್ಲಿ ಮಾತನಾಡಿದ ನಗರಸಭಾ ಸದಸ್ಯರೊಬ್ಬರು ಸದಸ್ಯರೇ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಕಂದಾಯ ಪಾವತಿಸದವರಿಗೂ ಕೂಡ ಖಾತೆ ನಕಲನ್ನು ಕೊಡಿಸುತ್ತಾರೆ. ಇದರಲ್ಲಿ ಅಧಿಕಾರಿಗಳ ತಪ್ಪೇನಿಲ್ಲ ಎಂದು ಹೇಳಿದರು.

ಅಧ್ಯಕ್ಷೆ ಪೂಜಾ ಪೆದ್ದರಾಜು ಮಾತನಾಡಿ ನಗರಸಭೆ ಸದಸ್ಯರಾದವರು ಈ ರೀತಿ ಮಾಡುವುದು ತಪ್ಪು. ಇದರಿಂದ ನಗರಸಭೆಯ ಆದಾಯಕ್ಕೆ ಧಕ್ಕೆಯಾಗುತ್ತದೆ ಇನ್ನು ಮುಂದೆ ಯಾವ ಅಧಿಕಾರಿಗಳು ಕೂಡ ಸದಸ್ಯರ ಒತ್ತಡಕ್ಕೆ ಮಣಿದು ಈ ಕೆಲಸ ಮಾಡಬಾರದೆಂದು ಎಚ್ಚರಿಸಿದರು.

ನಗರಸಭೆ ಅಂಗಡಿ ಮಳಿಗೆಗಳ ಬಾಕಿ ಬಾಡಿಗೆ ಹಣ ಆರು ಕೋಟಿ ವಸೂಲಾತಿಯ ಬಗ್ಗೆ ಸದಸ್ಯ ಅಜಯ್ ಪ್ರಶ್ನಿಸಿದರು. ಪ್ರಶ್ನೆಗೆ ಮಧ್ಯಪ್ರವೇಶಿಸಿ ಸದಸ್ಯ ಆರ್. ರಾಮು ಮೊದಲು ಅಂಗಡಿಯ ಅವಧಿ ಮೀರಿರುವುದರಿಂದ ಹರಾಜು ಪ್ರಕ್ರಿಯೆ ನಡೆಸಿ ನಂತರ ಕಾನೂನು ರೀತಿ ಅವರಿಂದ ಬರಬೇಕಾದ ಬಾಕಿ ಬಾಡಿಗೆ ಹಣ ವಸೂಲಿ ಮಾಡಿ ಎಂದು ಸಭೆಯಲ್ಲಿ ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷೆ ಪೂಜಾ ಜೆಡಿಎಸ್ ಅಧಿಕಾರದ ಅವಧಿಯಲ್ಲಿ ಏಕೆ ಈ ಬಗ್ಗೆ ಕ್ರಮ ತೆಗೆದುಕೊಂಡಿಲ್ಲ? ಎಂದು ಕೇಳಿದಾಗ, ಮಾಜಿ ಅಧ್ಯಕ್ಷ ಅಂಜಿನಪ್ಪ ನನ್ನ ಅಧಿಕಾರದ ಅವಧಿಯಲ್ಲಿ ಎರಡು ಕೋಟಿಗೂ ಹೆಚ್ಚು ಬಾಡಿಗೆ ಹಣ ವಸೂಲಾಗಿದೆ ಕಾಂಗ್ರೆಸ್ ಅವಧಿಯಲ್ಲಿ ಈ ಕೆಲಸ ಆಗಿದೆಯಾ? ಪರಿಶೀಲಿಸಿ ನೋಡಿ ಎಂದು ಮರು ಉತ್ತರ ನೀಡಿದರು.

ಶಾಸಕರು ಮಾತನಾಡಿ ಇದುವರೆಗೂ ಇಷ್ಟೊಂದು ಹಣ ಬಾಕಿ ಉಳಿಸಿಕೊಂಡಿರುವುದು ಅಧಿಕಾರಿಗಳ ತಪ್ಪು, ಬಾಡಿಗೆ ವಸೂಲಾತಿಗೆ ಶೀಘ್ರ ಕ್ರಮ ಜರುಗಿಸಿ ಎಂದರು.

ಸಭೆಯಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್ ಎಲ್ ರಂಗನಾಥ್, ಉಪಾಧ್ಯಕ್ಷೆ ಸಮ್ರಿನ್ ಖಾನಂ, ಪ್ರಭಾರ ಆಯುಕ್ತೆ ಪಲ್ಲವಿ, ನಗರ ಸಿಪಿಐ ಮಂಜೇಶ್ ಗೌಡ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕೆಂಚಣ್ಣ, ಸೂಡ ಅಧಿಕಾರಿ ರಮ್ಯ, ವ್ಯವಸ್ಥಾಪಕಿ ರಮ್ಯ, ಲೆಕ್ಕಿಗರಾದ ವಿಶ್ವೇಶ್ವರಯ್ಯ ಸೇರಿದಂತೆ ನಗರಸಭಾ ಸದಸ್ಯರು ಹಾಜರಿದ್ದರು.

14ಶಿರಾ2: ಶಿರಾ ನಗರದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಶಾಸಕ ಟಿ.ಬಿ. ಜಯಚಂದ್ರ, ನಗರಸಭೆ ಅಧ್ಯಕ್ಷೆ ಪೂಜಾ ಪೆದ್ದರಾಜು, ಉಪಾಧ್ಯಕ್ಷೆ ಸಮ್ರಿನ್ ಖಾನಂ, ಸ್ಥಾಯಿ ಸಮಿತಿ ಅಧ್ಯಕ್ಷೆ ಪಲ್ಲವಿ ಸೇರಿದಂತೆ ಹಲವರು ಹಾಜರಿದ್ದರು.

click me!