ನಿಷೇಧ ಮಧ್ಯೆ ದೇವಾಲಯದ ದ್ವಾರದ ಬಾಗಿಲು ಮುರಿದು ಅವಧೂತ ಶುಕಮುನಿ ಸ್ವಾಮಿಗಳ ಪಲ್ಲಕ್ಕಿ ಉತ್ಸವ| ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ದೋಟಿಹಾಳದಲ್ಲಿ ಘಟನೆ| ಪರಿಸ್ಥಿತಿ ನಿಯಂತ್ರಿಸಲು ಲಾಠಿ ಪ್ರಹಾರ| ಪೊಲೀಸ್ ಜೀಪ್ ಮೇಲೆ ಕಲ್ಲು ತೂರಾಟ, ಹಾನಿ, ಪರಿಸ್ಥಿತಿ ಉದ್ವಿಗ್ನ|
ದೋಟಿಹಾಳ(ಆ.21): ಕೋವಿಡ್-19 ಹಿನ್ನೆಲೆಯಲ್ಲಿ ತಹಶೀಲ್ದಾರ್ ನಿಷೇಧಿಸಿದ್ದರೂ ದೇವಾಲಯದ ದ್ವಾರದ ಬಾಗಿಲು ಮುರಿದು ಅವಧೂತ ಶುಕಮುನಿ ಸ್ವಾಮಿಗಳ ಪಲ್ಲಕ್ಕಿ ಉತ್ಸವ ನಡೆಸಿದ್ದ ಭಕ್ತರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ ಘಟನೆ ಗುರುವಾರ ಸಂಜೆ ನಡೆದಿದೆ.
ಮುಜರಾಯಿ ಇಲಾಖೆಗೆ ಸೇರಿದ ದೋಟಿಹಾಳದ ಅವಧೂತ ಶುಕಮುನಿ ಸ್ವಾಮಿಯ ಆರಾಧನಾ ಮಹೋತ್ಸವದ ಹಿನ್ನೆಲೆಯಲ್ಲಿ ಗುರುವಾರ ಪಲ್ಲಕ್ಕಿ ಉತ್ಸವ ನಡೆಯಬೇಕಾಗಿತ್ತು. ಆದರೆ ತಹಶೀಲ್ದಾರ್ ಎಂ. ಸಿದ್ದೇಶ್ ಅವರು ಕೋವಿಡ್-19 ಹಿನ್ನೆಲೆಯಲ್ಲಿ ಮಾರ್ಗದರ್ಶಿ ಸೂಚನೆಯಂತೆ ಪಲ್ಲಕ್ಕಿ ಉತ್ಸವ ನಿಷೇಧಿಸಿ ಆದೇಶಿಸಿದ್ದರು. ಅಲ್ಲದೇ ಸಾಂಕೇತಿಕವಾಗಿ ಮಠದ ಆವರಣದಲ್ಲೇ ಒಂದು ಸುತ್ತು ಪಲ್ಲಕ್ಕಿ ಉತ್ಸವ ನಡೆಸುವಂತೆ ಸೂಚಿಸಿದ್ದರು.
ಕೊಪ್ಪಳ ಸಂಸದ ಸಂಗಣ್ಣ ಕರಡಿಗೂ ಕೊರೋನಾ ಸೋಂಕು
ಅದರಂತೆ ಆರಂಭದಲ್ಲಿ ಪಲ್ಲಕ್ಕಿಯನ್ನು ಹೆಗಲ ಮೇಲೆ ಹೊತ್ತು ಸ್ಥಳದಲ್ಲಿಯೇ ಸುತ್ತು ಹಾಕಲಾಗುತ್ತಿತ್ತು. ಹುಚ್ಚೆದ್ದ ಭಕ್ತರು ಗರಗರನೆ ಪಲ್ಲಕ್ಕಿ ತಿರುಗಿಸುತ್ತ ಗೇಟಿಗೆ ಪದೇ ಪದೇ ಹಾಯಿಸಿದ್ದರಿಂದ ಮುಖ್ಯ ದ್ವಾರದ ಗೇಟ್ ಮುರಿದೇ ಹೋಯಿತು. ಇದೇ ಸಂದರ್ಭಕ್ಕಾಗಿ ಕಾಯುತ್ತಿದ್ದ ಜನರು ದೇವಾಲಯದ ಆವರಣದ ಹೊರಗೆ ಪಲ್ಲಕ್ಕಿ ಒಯ್ದರು. ಊರಲ್ಲೆಲ್ಲ ಪಲ್ಲಕ್ಕಿ ಒಯ್ಯಲು ಮುಂದಾದರು.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಎಂ. ಸಿದ್ದೇಶ, ಸಿಪಿಐ ಚಂದ್ರಶೇಖರ ಘಟನೆಯ ಮಾಹಿತಿ ಪಡೆದುಕೊಂಡು ಜನರಿಗೆ ತಿಳಿ ಹೇಳುವ ಪ್ರಯತ್ನ ಮಾಡಿದರು. ಆದರೂ ಕೇಳದೇ ಪಲ್ಲಕ್ಕಿ ಉತ್ಸವಕ್ಕೆ ಮುಂದಾದ ಭಕ್ತರ ಮೇಲೆ ಲಘು ಲಾಠಿ ಪ್ರಹಾರ ಮಾಡಿ ಚದುರಿಸಲಾಯಿತು. ಈ ಸಂದರ್ಭದಲ್ಲಿ ಕಲ್ಲು ತೂರಾಟ ಸಹ ನಡೆದು, ಪೊಲೀಸ್ ವಾಹನದ ಮೇಲೂ ಕಲ್ಲು ಎಸೆಯಲಾಗಿದ್ದು, ಪೊಲೀಸ್ ಜೀಪ್ ಜಖಂಗೊಂಡಿದೆ.
ಶುಕಮುನಿ ಸ್ವಾಮಿಯ ಆರಾಧನಾ ಮಹೋತ್ಸವವನ್ನು ಸಾಂಕೇತಿಕವಾಗಿ ಮಠದ ಆವರಣದಲ್ಲಿ ಆಚರಿಸಲು ನಿರ್ಧರಿಸಿ ಈ ಕುರಿತಂತೆ ದೇವಸ್ಥಾನದ ಕಮಿಟಿ ಅಧ್ಯಕ್ಷರಾದ ತಹಸೀಲ್ದಾರ್ ಎಂ. ಸಿದ್ದೇಶ ಗ್ರಾಮದಲ್ಲಿ ಡಂಗುರ ಸಾರಿದ್ದರು. ನಿರ್ಧಾರವನ್ನು ಧಿಕ್ಕರಿಸಿದ ಸಾರ್ವಜನಿಕರ ನಡೆ ಹಲವಾರು ಪ್ರಶ್ನೆಗಳಿಗೆ ಕಾರಣವಾಗಿದೆ. ಗ್ರಾಮದಲ್ಲಿ ಭಾರಿ ಬಿಗುವಿನ ವಾತಾವರಣ ಏರ್ಪಟ್ಟಿದ್ದು ಪೊಲೀಸರು ಬೀಡುಬಿಟ್ಟಿದ್ದಾರೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ.
ಈ ಗಲಾಟೆಯ ನಡುವೆ ಪಲ್ಲಕ್ಕಿಯನ್ನು ಕೆಸೂರಿನ ರಸ್ತೆಯ ಮೇಲೆಯೇ ಬಿಟ್ಟು ಹೋಗಿದ್ದರಿಂದ ಅದು ಮಳೆಯಲ್ಲಿಯೇ ಇರುವಂತೆ ಆಗಿದೆ. ಗೇಟ್ ಮುರಿದು ಗದ್ದಲ ಎಬ್ಬಿಸಿದ 30 ಜನರನ್ನು ವಶಕ್ಕೆ ಪಡೆದಿರುವ ಪೊಲೀಸರು ಗ್ರಾಮದಲ್ಲಿಯೇ ಕೋಣೆಯಲ್ಲಿ ಅವರನ್ನು ಇಟ್ಟಿದ್ದಾರೆ.