ಇಬ್ಬರು ಯುವಕರ ಮೇಲೆ ಗೂಂಡಾಗಿರಿ ನಡೆಸಿದ್ದ ಆರೋಪಿ| ಹೆಡ್ ಕಾನ್‌ಸ್ಟೇಬಲ್‌ಗೆ ಡ್ರ್ಯಾಗರ್‌ನಿಂದ ಹಲ್ಲೆ| ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಆರೋಪಿಗೆ ಪೊಲೀಸರ ಸೂಚನೆ| ಪೊಲೀಸರ ಮಾತಿಗೆ ಬಗ್ಗದೆ ಹೋದಾಗ ಆರೋಪಿ ಎಡಗಾಲಿಗೆ ಗುಂಡು|
ಬೆಂಗಳೂರು(ಸೆ.18): ಇತ್ತೀಚಿಗೆ ಕುಡಿದ ಮತ್ತಿನಲ್ಲಿ ಇಬ್ಬರು ಯುವಕರ ಮೇಲೆ ಗೂಂಡಾಗಿರಿ ನಡೆಸಿದ್ದ ಕಿಡಿಗೇಡಿಯೊಬ್ಬನಿಗೆ ಡಿ.ಜೆ.ಹಳ್ಳಿ ಠಾಣೆ ಪೊಲೀಸರು ಗುಂಡು ಹೊಡೆದು ಗುರುವಾರ ಮುಂಜಾನೆ ಅಮಲಿಳಿಸಿದ್ದಾರೆ.
ಪೀಣ್ಯ ನಿವಾಸಿ ಪ್ರೇಮ್ ಕುಮಾರ್ ಎಂಬಾತನಿಗೆ ಗುಂಡೇಟು ಬಿದ್ದಿದ್ದು, ಎಲ್.ಆರ್. ಬಂಡೆ ಸಮೀಪ ಈ ದಾಳಿ ನಡೆದಿದೆ. ಘಟನೆಯಲ್ಲಿ ಹೆಡ್ ಕಾನ್‌ಸ್ಟೇಬಲ್ ರಂಗನಾಥ್ ಅವರಿಗೆ ಸಹ ಪೆಟ್ಟಾಗಿದೆ. ಕೆಲ ದಿನಗಳ ಹಿಂದೆ ಕೆಎಚ್‌ಬಿ ಮುಖ್ಯರಸ್ತೆಯಲ್ಲಿ ಯುವಕರ ಮೇಲೆ ಆರೋಪಿ ಹಲ್ಲೆ ನಡೆಸಿದ್ದ. ಈ ಪ್ರಕರಣ ಸಂಬಂಧ ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾಗ ಗುಂಡು ಹಾರಿಸಲಾಯಿತು ಎಂದು ಪೂರ್ವ ವಿಭಾಗದ ಡಿಸಿಪಿ ಡಾ.ಎಸ್.ಡಿ.ಶರಣಪ್ಪ ತಿಳಿಸಿದ್ದಾರೆ.
ಏನಿದು ಘಟನೆ?
ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಪ್ರೇಮ್, ಪೀಣ್ಯದಲ್ಲಿ ನೆಲೆಸಿದ್ದ. ಈ ಮೊದಲು ಡಿ.ಜೆ.ಹಳ್ಳಿಯಲ್ಲಿ ಆತ ವಾಸವಾಗಿದ್ದ. ಕೆಎಚ್‌ಬಿ ಮುಖ್ಯರಸ್ತೆಯಲ್ಲಿರುವ ವಿನುತ ಬಾರ್‌ನಲ್ಲಿ ಮದ್ಯ ಸೇವನೆಗೆ ಗೆಳೆಯರ ಜತೆ ಆತ ಹೋಗಿದ್ದ. ಆ ವೇಳೆ ಅದೇ ಬಾರ್‌ನಲ್ಲಿ ದೀಪಕ್ ಮತ್ತು ಕಪಿಲ್ ಸಹ ಮದ್ಯ ಸೇವಿಸುತ್ತಿದ್ದರು. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ಮಧ್ಯೆ ಗಲಾಟೆಯಾಗಿದೆ. ಇದರಿಂದ ರೊಚ್ಚಿಗೆದ್ದ ಪ್ರೇಮ್ ಕುಮಾರ್ ತಂಡವು, ಬಾರ್‌ನಿಂದ ಹೊರ ಬಂದ ದೀಪಕ್ ಮತ್ತು ಕಪಿಲ್ ಮೇಲೆ ಏಕಾಏಕಿ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು.
ಡ್ರಗ್ಸ್ ದಂಧೆಕೋರನಿಗೆ ಪೊಲೀಸರ ಗುಂಡೇಟು
ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಡಿ.ಜೆ.ಹಳ್ಳಿ ಠಾಣೆ ಪೊಲೀಸರು, ಹಲ್ಲೆಕೋರರಿಗೆ ಹುಡುಕಾಟ ನಡೆಸಿದ್ದರು. ಆಗ ಬುಧವಾರ ರಾತ್ರಿ ಶಿವನನ್ನು ಬಂಧಿಸಿದ ಪೊಲೀಸರು, ವಿಚಾರಣೆಗೊಳಪಡಿಸಿದಾಗ ಪ್ರೇಮ್‌ಕುಮಾರ್ ಬಗ್ಗೆ ಮಾಹಿತಿ ಸಿಕ್ಕಿತು. ಅಂತೆಯೇ ಪಿಎಸ್‌ಐ ನಾಗದೇವ್, ಹೆಡ್ ಕಾನ್‌ಸ್ಟೇಬಲ್ ರಂಗನಾಥ್ ಮತ್ತಿರರು, ಎಲ್.ಆರ್.ಬಂಡೆ ಬಳಿ ಪ್ರೇಮ್‌ನನ್ನು ಬಂಧಿಸಲು ಮುಂಜಾನೆ 5 ಗಂಟೆ ಸುಮಾರಿಗೆ ತೆರಳಿದೆ. ತನ್ನನ್ನು ಬಂಧಿಸಲು ಮುಂದಾದ ತನಿಖಾ ತಂಡದ ವಿರುದ್ಧ ಆರೋಪಿ ತಿರುಗಿ ಬಿದ್ದಿದ್ದಾನೆ.
ಈ ಹಂತದಲ್ಲಿ ಹೆಡ್ ಕಾನ್‌ಸ್ಟೇಬಲ್ ಅವರಿಗೆ ಡ್ರ್ಯಾಗರ್‌ನಿಂದ ಹಲ್ಲೆಯಾಗಿದೆ. ಆಗ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಆರೋಪಿಗೆ ಪಿಎಸ್‌ಐ ನಾಗದೇವ್ ಸೂಚಿಸಿದ್ದಾರೆ. ಈ ಮಾತಿಗೆ ಬಗ್ಗದೆ ಹೋದಾಗ ಆರೋಪಿ ಎಡಗಾಲಿಗೆ ಗುಂಡು ಹೊಡೆದಿದ್ದಾರೆ ಎಂದು ಡಿಸಿಪಿ ವಿವರಿಸಿದ್ದಾರೆ.