ಟ್ರಾಫಿಕ್‌ನಲ್ಲಿ ಆ್ಯಂಬುಲೆನ್ಸ್ ನಿಂತರೂ ಸುಮ್ಮನಿದ್ರಾ ಪೊಲೀಸರು? ಮಾನವೀಯತೆ ಮರೆತ ಆರಕ್ಷರು!

By Kannadaprabha NewsFirst Published Mar 4, 2020, 12:26 PM IST
Highlights

ಟ್ರಾಫಿಕ್‌ನಲ್ಲಿ ಸಿಲುಕಿದ್ದ ಆ್ಯಂಬುಲೆನ್ಸ್| ಟ್ರಾಫಿಕ್‌ನಲ್ಲಿ ಸಿಲುಕಿದ್ದ ಆ್ಯಂಬುಲೆನ್ಸ್ ವಾಹನಕ್ಕೆ ದಾರಿ ಮಾಡಿಕೊಡ ಪೊಲೀಸರು| ಬೆಳಗಾವಿಯಲ್ಲಿ ನಡೆದ ಘಟನೆ| ಪೊಲೀಸರ ವರ್ತನೆಗೆ ಸಾರ್ವಜನಿಕರ ಆಕ್ರೋಶ|

ಬೆಳಗಾವಿ(ಮಾ.04): ಅಪಘಾತ ಅಥವಾ ಅನಾರೋಗ್ಯಕ್ಕಿಡಾದ ವ್ಯಕ್ತಿಗಳನ್ನು ಕರೆದುಕೊಂಡು ಬರುವ ಆ್ಯಂಬುಲೆನ್ಸ್‌ಗಳಿಗೆ ಮೊದಲು ಆದ್ಯತೆ ನೀಡಬೇಕು. ಇಲ್ಲವಾದಲ್ಲಿ ವಾಹನ ಚಾಲಕರ ಲೈಸನ್ಸ್ ರದ್ದು ಸೇರಿದಂತೆ ಹಲವು ಕ್ರಮದ ಎಚ್ಚರಿಕೆಗಳನ್ನು ಕೈಗೊಳ್ಳುವ ಬಗ್ಗೆ ಸರ್ಕಾರ ಮತ್ತು ಗೃಹ ಸಚಿವರು ಮೇಲಿಂದ ಮೇಲೆ ಸೂಚನೆ ನೀಡುತ್ತಲೇ ಬಂದಿದ್ದಾರೆ. ಆದರೆ ಬೆಳಗಾವಿ ಸಂಚಾರಿ ಪೊಲೀಸರಿಗೆ ರಾಜ್ಯದಲ್ಲಿನ ಕಾನೂನುಗಳು ಯಾವುದೇ ಅನ್ವಯವಾಗುವುದಿಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ. 

ನಗರದ ಚನ್ನಮ್ಮ ವೃತ್ತದಲ್ಲಿ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಸಂಗೊಳ್ಳಿ ರಾಯಣ್ಣ ವೃತ್ತದ ಕಡೆಯಿಂದ ರೋಗಿಯನ್ನು ಕರೆದುಕೊಂಡು ಬರುತ್ತಿದ್ದ ಆ್ಯಂಬುಲೆನ್ಸ್ ಕೆಲ ಸಮಯ ಟ್ರಾಫಿಕ್‌ನಲ್ಲಿ ಸಿಲುಕಿದೆ. ಇದೇ ಸಮಯದಲ್ಲಿ ಚನ್ನಮ್ಮ ವೃತ್ತದ ಕನ್ನಡ ಸಾಹಿತ್ಯ ಭವನದ ಬಳಿ ಕಬ್ಬು ಸಾಗಾಟ ಮಾಡುವ ಟ್ರ್ಯಾಕ್ಟರ್ ಅನ್ನು ತಡೆದು ಪರಿಶೀಲನೆ ಕಾರ್ಯದಲ್ಲಿ ಸಂಚಾರಿ ಪೊಲೀಸ್ ಸಿಬ್ಬಂದಿ ತೊಡಗಿದ್ದರು. ಆದರೆ ಪಕ್ಕದಲ್ಲಿಯೇ ಸದ್ದು ಮಾಡುತ್ತಾ ಕೆಲವು ಸಮಯ ಟ್ರಾಫಿಕ್‌ನಲ್ಲಿ ಸಿಲುಕಿದ್ದ ಆ್ಯಂಬುಲೆನ್ಸ್ ವಾಹನಕ್ಕೆ ದಾರಿ ಮಾಡಿಕೊಡುವ ಪ್ರಯತ್ನ ಮಾಡದಿರುವುದು ಇಲಾಖೆಯನ್ನು ಮುಜುಗರಕ್ಕೀಡು ಮಾಡುವುದರ ಜತೆಗೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಟ್ರ್ಯಾಕ್ಟರ್ ಚಾಲಕ ಸಂಚಾರಿ ಪೊಲೀಸರ ಬಳಿ ಮನವಿ ಮಾಡಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಓರ್ವ ಸಂಚಾರಿ ಪೇದೆ ಹಾಗೂ ಇನ್ನೋರ್ವ ಹಿರಿಯ ಅಧಿಕಾರಿ ಪಕ್ಕದಲ್ಲಿಯೇ ಟ್ರಾಫಿಕ್‌ನಲ್ಲಿ ಸಿಲುಕಿದ್ದ ಆ್ಯಂಬುಲೆನ್ಸ್ ಸೈರನ್ ಸದ್ದು ಮಾಡುತ್ತಾ ನಿಂತಿತ್ತು. ಆದರೆ ಸಂಚಾರಿ ಪೊಲೀಸರಿಗೆ ಇದು ಕಾಣಿಸಲಿಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕರದ್ದು. ಸಾಹಿತ್ಯ ಭವನ ಆವರಣದಲ್ಲಿ ಹಾಗೂ ಚನ್ನಮ್ಮ ವೃತ್ತದಲ್ಲಿ ನಿಂತಿದ್ದ ಸಾರ್ವಜನಿಕರು ಸಂಚಾರಿ ಪೊಲೀಸರ ವರ್ತನೆಯಿಂದ ಹಿಡಿಶಾಪ ಹಾಕುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. 

ಈ ಕಾರ್ಯವನ್ನು ಮಾಧ್ಯಮದವರು ಫೋಟೊ ತೆಗೆಯುವುದನ್ನು ಗಮನಿಸಿ, ನಂತರ ಟ್ರ್ಯಾಕ್ಟರ್ ಚಾಲಕನನ್ನು ಬೇರೆ ಕಡೆಗೆ ಕರೆದುಕೊಂಡು ಹೋದರೆ ಹೊರತು, ಆ್ಯಂಬುಲೆನ್ಸ್‌ಗೆ ದಾರಿ ಮಾಡಿ ಕೊಡುವ ಮೂಲಕ ಮಾನವೀಯತೆ ಕಾರ್ಯಕ್ಕೆ ಮುಂದಾಗಲಿಲ್ಲ.
 

click me!