* ಪೊಲೀಸ್ ಸಿಬ್ಬಂದಿಗಾಗಿ ಬಂದೂಕು ತರಬೇತಿ ಶಿಬಿರ
* ಕಾನ್ಸಟೇಬಲ್ ಚೇತನ್ ಗುತ್ತಿಗೆ ಸೀಳಿಕೊಂಡು ಹೊರ ಬಂದ ಗುಂಡು
* ಈ ಸಂಬಂಧ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ದಾವಣಗೆರೆ(ಆ.24): ರೈಫಲ್ ಸ್ವಚ್ಛಗೊಳಿಸುತ್ತಿದ್ದಾಗ ಆಕಸ್ಮಿಕವಾಗಿ ಸಿಡಿದ ಪೊಲೀಸ್ ಕಾನ್ಸಟೇಬಲ್ ಕುತ್ತಿಗೆಗೆ ತಗುಲಿ ಸಾವನ್ನಪ್ಪಿದ ಘಟನೆ ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಶಸ್ತ್ರಾಗಾರದಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದೆ.
ನಗರದ ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆಯ ಎಪಿಸಿ ಚೇತನ್(28) ಮೃತ ದುರ್ದೈವಿ. ದಾವಣಗೆರೆ ತಾಲೂಕಿನ ಹುಣಸೇಕಟ್ಟೆ ಗ್ರಾಮದ ಬಳಿ ಪೊಲೀಸ್ ಸಿಬ್ಬಂದಿಗಾಗಿ ಬಂದೂಕು ತರಬೇತಿ ಶಿಬಿರ ನಡೆದಿತ್ತು. ತರಬೇತಿ ನಂತರ ಮರಳಿದ ಸಿಬ್ಬಂದಿ ಶಸ್ತ್ರಾಗಾರದಲ್ಲಿ ಬಂದೂಕುಗಳನ್ನು ಇಟ್ಟು ಮರಳಿದ್ದರು. ಆಗ ಬಂದೂಕು ಸ್ವಚ್ಛಗೊಳಿಸುವ ಕಾರ್ಯವೂ ಸಾಗಿತ್ತು. ಅದೇ ವೇಳೆ ರೈಫಲ್‌ನ ನಳಿಕೆಯನ್ನು ಸ್ವಚ್ಛಗೊಳಿಸುತ್ತಿದ್ದ ವೇಳೆ ಟ್ರಿಗರ್‌ಗೆ ಬೆರಳುಗಳು ತಗುಲಿದ್ದರಿಂದ ಗುಂಡು ಸಿಡಿದು, ಕಾನ್ಸಟೇಬಲ್ ಚೇತನ್ ಗುತ್ತಿಗೆ ಸೀಳಿಕೊಂಡು ಹೊರ ಬಂದಿದೆ ಎಂದು ಪ್ರಾಥಮಿಕ ಮಾಹಿತಿಗಳಿಂದ ತಿಳಿದು ಬಂದಿದೆ.
undefined
ಕ್ಷುಲ್ಲಕ ಕಾರಣಕ್ಕೆ ಪತ್ನಿ ಹತ್ಯೆ ಮಾಡಿ ಚಿಕ್ಕಬಾಣಾವರ ಕೆರೆಗೆ ಎಸೆದ!
ತೀವ್ರವಾಗಿ ಗಾಯಗೊಂಡ ಚೇತನ್‌ರನ್ನು ತಕ್ಷಣವೇ ಸಿಟಿ ಸೆಂಟ್ರಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ತೀವ್ರ ರಕ್ತಸ್ರಾವವಾಗಿದ್ದ ಕಾನ್ಸಟೇಬಲ್ ಚೇತನ್ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲೇ ಸಾವನ್ನಪ್ಪಿದರು ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಪೂರ್ವ ವಲಯದ ಪೊಲೀಸ್ ಮಹಾ ನಿರೀಕ್ಷಕ ರವಿ, ಎಸ್ಪಿ ಸಿ.ಬಿ.ರಿಷ್ಯಂತ್ ಭೇಟಿ ನೀಡಿ ಪರಿಶೀಲಿಸಿದರು. ಘಟನೆ ಕುರಿತಂತೆ ಇಲಾಖೆ ತನಿಖೆ ನಡೆಸುವಂತೆ ಐಜಿಪಿ ರವಿ ಆದೇಶಿಸಿದ್ದಾರೆ.2ನೇ ಮಗುವಿನ ನಿರೀಕ್ಷೆ: ಮೂಲತಃ ಚನ್ನಗಿರಿ ತಾ. ಮಲಹಾಳು ಗ್ರಾಮದ ಚೇತನ್ 2012ರಲ್ಲಿ ಪೊಲೀಸ್ ಇಲಾಖೆ ನೌಕರಿಗೆ ಸೇರಿದ್ದರು. ಪತ್ನಿ, ಗಂಡು ಮಗು ಹಾಗೂ ಪಾಲಕರನ್ನು ಹೊಂದಿರುವ ಚೇತನ್ 2ನೇ ಮಗುವಿನ ನಿರೀಕ್ಷೆಯಲ್ಲಿದ್ದ ವೇಳೆಯೇ ದುರಂತ ಸಂಭವಿಸಿದೆ. ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಸಾಗಿದೆ.