ಕ್ಷುಲ್ಲಕ ಕಾರಣಕ್ಕಾಗಿ ಪಿಎಸ್‌ಐ ಸೇರಿ 5 ಮಂದಿ ಪೊಲೀಸರು ಲಾಠಿ ಹಾಗೂ ಬೂಟ್ ಕಾಲಿನಿಂದ ಯುವಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ತಾಲೂಕಿನ ವೈ.ಎನ್. ಹೊಸಕೋಟೆ ಠಾಣೆಯಲ್ಲಿ ಶನಿವಾರ ತಡರಾತ್ರಿ ನಡೆದಿದೆ.
ಪಾವಗಡ : ಕ್ಷುಲ್ಲಕ ಕಾರಣಕ್ಕಾಗಿ ಪಿಎಸ್‌ಐ ಸೇರಿ 5 ಮಂದಿ ಪೊಲೀಸರು ಲಾಠಿ ಹಾಗೂ ಬೂಟ್ ಕಾಲಿನಿಂದ ಯುವಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ತಾಲೂಕಿನ ವೈ.ಎನ್. ಹೊಸಕೋಟೆ ಠಾಣೆಯಲ್ಲಿ ಶನಿವಾರ ತಡರಾತ್ರಿ ನಡೆದಿದೆ.
ಹಲ್ಲೆಯ ಪರಿಣಾಮ ಐದು ಮಂದಿ ಯುವಕರಿಗೆ ತೀವ್ರ ಗಾಯಗಳಾಗಿದ್ದು ಅವರನ್ನು ಪಾವಗಡ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಾ.31ರಂದು ಸ್ನೇಹಿತನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ತಾಲೂಕಿನ ಕೆ.ರಾಮಪುರ ಗ್ರಾಮದ 5 ಯುವಕರು ಸಮೀಪದ ದೊಡ್ಡಹಳ್ಳಿಗೆ ತೆರಳಿ ಅಲ್ಲಿನ ಬೇಕರಿಯೊಂದರಲ್ಲಿ ಕೇಕ್ ಖರೀದಿಸಿ ವಾಪಸ್ ಬರುವಾಗ, ದೊಡ್ಡಹಳ್ಳಿಯಲ್ಲಿ ಹಾರ್ನ್ ಮಾಡಿದರೂ ರಸ್ತೆಯಲ್ಲಿದ್ದ ಇಬ್ಬರು ವ್ಯಕ್ತಿಗಳು ಪಕ್ಕಕ್ಕೆ ತೆರಳದ ಕಾರಣ ಬೈಕ್‌ನಲ್ಲಿದ್ದ ಯುವಕರು ಮತ್ತು ರಸ್ತೆಯ ಮೇಲೆ ನಿಂತಿದ್ದ ವ್ಯಕ್ತಿಗಳ ಮಧ್ಯೆ ವಾಗ್ವಾದ ನಡೆದಿದೆ.
ವಾಗ್ವಾದ ವಿಕೋಪಕ್ಕೆ ಹೋಗಿ ಕೈಕೈ ಮಿಲಾಯಿಸುವ ಹಂತ ತಲುಪಿದೆ. ಆಗ ಸ್ಥಳೀಯ ಗ್ರಾಮಸ್ಥರು ಮಧ್ಯ ಪ್ರವೇಶಿಸಿ ಗಲಾಟೆ ಬಿಡಿಸಿದ್ದಾರೆ. ಈ ಸಂಬಂಧ ಹಲ್ಲೆಗೊಳಗಾದ ವ್ಯಕ್ತಿಯೊಬ್ಬ 5 ಮಂದಿ ವಿರುದ್ಧ ವೈ.ಎನ್.ಹೊಸಕೋಟೆ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದಾನೆ. ಮಾಹಿತಿ ಪಡೆದ ಪೊಲೀಸರು ಘಟನೆಯಲ್ಲಿ ಭಾಗಿಯಾದ ಯುವಕರನ್ನು ಠಾಣೆಗೆ ಬರುವಂತೆ ಕರೆ ಮಾಡಿದ್ದಾರೆ. ಪೊಲೀಸರ ಕರೆ ಮೇರೆಗೆ ಏ 1ರಂದು ಮಧ್ಯಾಹ್ನ ಠಾಣೆಗೆ ಆಗಮಿಸಿದ್ದು, ಸಂಜೆವರೆಗೆ ಠಾಣೆ ಬಳಿ ಯುವಕರು ಕಾದಿದ್ದಾರೆ. ರಾತ್ರಿ 7 ಗಂಟೆಗೆ ಠಾಣೆಗೆ ಆಗಮಿಸಿದ್ದ ಪಿಎಸ್‌ಐ ಅರ್ಜುನ್‌ಗೌಡ ವಿಚಾರಣೆ ನಡೆಸಿ ವಾಪಸ್ ಹೋಗಿದ್ದಾರೆ.
ಮತ್ತೆ ರಾತ್ರಿ 11ಗಂಟೆಗೆ ಠಾಣೆಗೆ ಆಗಮಿಸಿದ್ದಾರೆ. ಈ ವೇಳೆ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಕೈಗೆತ್ತಿಕೊಂಡಾಗ ಮಾತಿಗೆ ಮಾತು ಬೆಳೆದು 5 ಮಂದಿ ಯುವಕರ ಮೇಲೆ ಲಾಠಿ ಹಾಗೂ ಮನಸ್ಸೋ ಇಚ್ಛೆ ಬೂಟ್‌ನಿಂದ ಒದ್ದ ಪರಿಣಾಮ ಕೈಕಾಲು ಹಾಗೂ ದೇಹದ ಹಲವು ಭಾಗಗಳಿಗೆ ಗಂಭೀರ ಗಾಯಗಳಾಗಿದೆ. ತೀವ್ರವಾಗಿ ಗಾಯಗೊಂಡಿರುವ ಅನಿಲ್ ಎಂಬಾತನನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೈಕಾಲು ಹಾಗೂ ಮಂಡಿಗೆ ಬಲವಾದ ಪೆಟ್ಟು ಬಿದ್ದ ಮಾರುತಿ, ಮಂಜುನಾಥ್, ಗುಣಶೇಖರ್, ಚಿರಂಜೀವಿಯನ್ನು ಪಾವಗಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಎಸ್ಪಿಗೆ ದೂರು ಸಲ್ಲಿಸುವೆ: ಸುರೇಶ್‌ಬಾಬು
ಕ್ಷುಲ್ಲಕ ಕಾರಣದ ಹಿನ್ನೆಲೆಯಲ್ಲಿ 5 ಮಂದಿ ಯುವಕರನ್ನು ಠಾಣೆಗೆ ಕರೆಸಿಕೊಂಡ ಪಿಎಸ್‌ಐ ಅರ್ಜುನ್‌ಗೌಡ ಶುಕ್ರವಾರ ತಡರಾತ್ರಿ ಸುಮಾರು 11ರಿಂದ 12 ಗಂಟೆವರೆಗೆ ಯುವಕರ ಮೇಲೆ ಹಲ್ಲೆ ನಡೆಸಿದ್ದು ಯಾವ ತಪ್ಪಿಗಾಗಿ ಇವರು ಈ ರೀತಿಯ ಶಿಕ್ಷೆ ಕೊಟ್ಟರೂ ಗೊತ್ತಿಲ್ಲ. ಕೆ.ರಾಮಪುರ ಗ್ರಾಮದ 15ಕ್ಕೂ ಹೆಚ್ಚು ಮಂದಿ ಇದ್ದೇವೆ. ಪೊಲೀಸರ ಏಟಿಗೆ ತಡೆಯದೇ ಯುವಕರು ಕಿರುಚಾಡಿಕೊಂಡರೂ ಬಿಡದೇ ಹೊಡೆಯುತ್ತಿದ್ದಾರೆ. ಈ ಪೈಕಿ ಐಟಿಐ ವ್ಯಾಸಂಗ ಮಾಡುತ್ತಿದ್ದ ಗುಣಶೇಖರ್ ಹಾಗೂ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಚಿರಂಜೀವಿಗೆ ಗಂಭೀರ ಗಾಯಗಳಾಗಿದೆ. ಇವರಿಗೆ ಏನಾದರೂ ಹೆಚ್ಚು ಕಡಿಮೆ ಆದರೆ ಇದಕ್ಕೆಲ್ಲಾ ಪಿಎಸ್‌ಐ ಅರ್ಜುನ್‌ಗೌಡ ಕಾರಣ. ಘಟನೆಯ ಸಂಪೂರ್ಣ ಮಾಹಿತಿ ಹಾಗೂ ಗಾಯಾಳುಗಳ ಸ್ಥಿತಿ ಬಗ್ಗೆ ಸರ್ಕಾರಿ ವೈದ್ಯರಿಂದ ಮೆಡಿಕಲ್ ಸರ್ಟಿಫೀಕೆಟ್ ಪಡೆದಿದ್ದೇವೆ. ಘಟನೆ ಕುರಿತು ಪ್ರಕರಣ ದಾಖಲಾಗಿಲ್ಲ. ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಹಾಗೂ ನ್ಯಾಯಾಲಯದ ಮೊರೆ ಹೋಗುವುದಾಗಿ ಕೆ.ರಾಮಪುರ ಸುರೇಶ್ ಬಾಬು ಮತ್ತಿತರ ಯುವಕರು ತಿಳಿಸಿದ್ದಾರೆ.
ಬಲವಾದ ಕಾರಣವೇ ಇಲ್ಲದಿದ್ದರೂ ಯುವಕರ ಮೇಲೆ ಪೊಲೀಸರು ಮಾರಣಾಂತಿಕ ಹಲ್ಲೆ ಮಾಡಿರುವುದು ಪಿತೂರಿಯಿಂದ ಕೂಡಿದೆ. ನ್ಯಾಯಾಲಯ ಹಾಗೂ ಕಾನೂನು ಬಿಗಿ ಇದ್ದರೂ ಕೂಡ ಪೊಲೀಸರ ದೌರ್ಜನ್ಯ ಮುಂದುವರಿಯುತ್ತಿದೆ. ಇದಕ್ಕೆ ಮೇಲಧಿಕಾರಿಗಳು ಕಡಿವಾಣ ಹಾಕಬೇಕು. ಹಲ್ಲೆಗೊಳಗಾದ ಯುವಕರ ಸ್ಥಿತಿ ಗಂಭೀರವಾಗಿದ್ದು, ಇದಕ್ಕೆ ಯಾರು ಹೊಣೆ.
ಕಾವಲಗೆರೆ ರಾಮಾಂಜಿನಪ್ಪ ತಾಲೂಕು ಜೆಡಿಎಸ್ ಮುಖಂಡ