ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಶುಕ್ರವಾರ ಪೊಳಲಿ ದೇವಸ್ಥಾನಕ್ಕೆ ಭೇಟಿಯಾದಾಗ ಪ್ರತಿಭಾವಂತ ವಿದ್ಯಾರ್ಥಿಯೊಬ್ಬನನ್ನು ಭೇಟಿ ಮಾಡಿದ್ದು, ಈ ವಿಚಾರವನ್ನು ಅವರು ತಮ್ಮ ಫೇಸ್‌ಬುಕ್ ಪುಟದಲ್ಲಿ ಪ್ರಕಟಿಸಿದ್ದಾರೆ.
ಮಂಗಳೂರು(ಜು.11): ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಶುಕ್ರವಾರ ಪೊಳಲಿ ದೇವಸ್ಥಾನಕ್ಕೆ ಭೇಟಿಯಾದಾಗ ಪ್ರತಿಭಾವಂತ ವಿದ್ಯಾರ್ಥಿಯೊಬ್ಬನನ್ನು ಭೇಟಿ ಮಾಡಿದ್ದು, ಈ ವಿಚಾರವನ್ನು ಅವರು ತಮ್ಮ ಫೇಸ್‌ಬುಕ್ ಪುಟದಲ್ಲಿ ಪ್ರಕಟಿಸಿದ್ದಾರೆ.
ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಕಾಲಿನಲ್ಲೇ ಬರೆದು ರಾಜ್ಯದ ಗಮನ ಸೆಳೆದಿದ್ದ ಬಂಟ್ವಾಳ ಎಸ್‌ವಿಎಸ್ ಪ್ರೌಢಶಾಲೆಯ ವಿಕಚನಚೇತನ (ಕೈಗಳಿಲ್ಲದ ಬಾಲಕ) ವಿದ್ಯಾರ್ಥಿ ಕೌಶಿಕ್‌ನನ್ನು ಶಿಕ್ಷಣ ಸಚಿವ ಭೇಟಿಯಾದರು. ‘ಹೇ ಪುಟ್ಟಾಹೇಗಿದ್ದೀಯಾ..?’ ಎಂದು ಮಾತುಕತೆ ಆರಂಭಿಸಿದ ಅವರು, ಕೌಶಿಕ್.. ನೀನೇ ನಮಗೆ ಸ್ಫೂರ್ತಿ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಆತನ ಪಠ್ಯೇತರ ಚಟುವಟಿಕೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಯಾವ ಪರೀಕ್ಷೆ ಹೇಗಿತ್ತು ಎಂಬ ಮಾಹಿತಿ ಕೇಳಿದರು. ನಿನ್ನ ಸಾಧನೆಯ ಕುರಿತು ಅದೇ ದಿನ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದೆ ಎಂದರು. ಕೊನೆಗೆ ತಮ್ಮ ಆಪ್ತ ಕಾರ್ಯದರ್ಶಿಯನ್ನು ಕರೆದು ಫೋಟೋ ತೆಗೆಸಿಕೊಂಡರು. ಈ ವೇಳೆ ಕೌಶಿಕ್ ಸಚಿವರ ಹೆಸರನ್ನು ಬರೆದು ಅವರಿಗೆ ತೋರಿಸಿದ.
ಈ ವಿಷಯವನ್ನು ಫೇಸ್‌ಬುಕ್‌ನಲ್ಲಿ ಬರೆದಿರುವ ಸಚಿವರು, ನನ್ನೆದುರಿಗೆ ಈ ಪ್ರತಿಭಾವಂತ ಬಾಲಕ ತನ್ನ ಕಾಲಿನಲ್ಲಿ ಪೆನ್ ಹಿಡಿದುಕಂಡು ಬರೆದ ಆ ದೃಶ್ಯ ಮರೆಯಲಾರದಂತಹದ್ದು.
ಅದೇ ಸಮಯಕ್ಕೆ ಪೊಳಲಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಈಗ ಒಂಬತ್ತನೆಯ ತರಗತಿಗೆ ತೇರ್ಗಡೆಯಾಗಿರುವ ಸಮ್ಯತಾ‰ ಆಚಾರ್ಯ ತಾನು ಬರೆದಿದ್ದ ನನ್ನ ಈ ಚಿತ್ರವನ್ನು ನೀಡಿದಳು. ಅವಳ ಮುಗ್ಧತೆಯಿಂದ ಕೂಡಿದ ಈ ಪ್ರತಿಭೆಗೆ ನಾನು ಅಭಿನಂದಿಸಿದೆ ಎಂದು ಅವರು ಹೇಳಿದ್ದಾರೆ.
ಸಚಿವರು ಸಂಜೆ ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿ ದರ್ಶನ ಪಡೆದು ಬಳಿಕ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿದರು. ಕೋವಿಡ್ 19 ಹಿನ್ನೆಲೆಯಲ್ಲಿ ತಮ್ಮ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯಡಿ ಅಗತ್ಯವಿರುವ ಸದಸ್ಯರಿಗೆ ಆರ್ಥಿಕ ಸಹಾಯ ನೀಡುವ ವಿಧಾನ ಕುರಿತು ತಮ್ಮ ಚಿಂತನೆ ಹಂಚಿಕೊಂಡರು.