
ಹಾಸನ(ಏ.17): ಮದ್ಯ ಕಳವು ಮಾಡಲು ಹೋದ ವ್ಯಕ್ತಿಯೊಬ್ಬ ಮದ್ಯದ ಬಾಟಲಿಗಳನ್ನು ಕಂಡು ಅಲ್ಲೇ ಘಟಘಟನೆ ಕುಡಿದು ಗಡದ್ ನಿದ್ರೆಗೆ ಜಾರಿ ಸಿಕ್ಕಿ ಬಿದ್ದ ಘಟನೆ ನಗರದ ಸಂತೆ ಪೇಟೆಯಲ್ಲಿ ನಡೆದಿದೆ.
"
ಬುಧವಾರ ಮಧ್ಯರಾತ್ರಿ ಕಳ್ಳತನ ಮಾಡಲು ಬಾರ್‌ಗೆ ನುಸುಳಿ ತನ್ನಾಸೆಯನ್ನು ಬಾರ್‌ನಿಂದ ದೂರ ಹೋಗುವವರೆಗಾದರೂ ತಡೆಯಲಾಗದೇ ಕಂಠ ಪೂರ್ತಿ ಕುಡಿದು ಅಲ್ಲೆ ನಿದ್ರೆ ಮಾಡಿ ಗುರುವಾರ ಬೆಳಗ್ಗೆ ನಗರದ ವಲ್ಲಭಾಯಿ ರಸ್ತೆಯ ವಾಸಿಯಾದ ರೌಡಿ ಶೀಟರ್ ರೋಹಿತ್ ಅಲಿಯಾಸ್ ಕೋಕಿ ಎಂಬಾತ ಬಂಧಿತ ಆರೋಪಿಯಾಗಿದ್ದಾನೆ.
ರೋಹಿತ್ ಪ್ರಿಯದರ್ಶಿನಿ ರಾತ್ರಿ ಬಾರ್‌ನ ಹೆಂಚು ತೆಗೆದು ಮದ್ಯವನ್ನು ಕಳವು ಮಾಡುವ ಸಲುವಾಗಿ ಒಳಕ್ಕೆ ಹೋದ. ಆದರೆ ಮದ್ಯದ ಬಾಟಲಿ ಕಂಡಾಕ್ಷಣ ಆತ ಕಂಠಪೂರ್ತಿ ಮದ್ಯ ಸೇವಿಸಿದ್ದಾನೆ. ನಂತರ ಮದ್ಯದ ಎರಡು ಬಾಕ್ಸ್ಗಳನ್ನು ಹೊತ್ತೊಯ್ಯಲು ಪ್ರಯತ್ನಿಸಿದ್ದಾನೆ. ಭರ್ಜರಿಯಾಗಿ ಕುಡಿದಿದ್ದರಿಂದ ಅದು ಸಾಧ್ಯವಾಗಿಲ್ಲ. ಆದರೆ ಮದ್ಯದ ನಶೆ ಏರಿದ್ದ ಕಾರಣ ನಿದ್ದೆಗೆ ಜಾರಿ ಹೋಗಿದ್ದಾನೆ. ಆತ ಕಣ್ಣು ಬಿಟ್ಟು ನೋಡುವಷ್ಟರಲ್ಲಿ ಬೆಳಗ್ಗೆ ಆಗಿದ್ದು, ಬಾರ್ ಮಾಲೀಕನಿಗೆ ಸಿಕ್ಕಿ ಬಿದ್ದಿದ್ದಾನೆ.
ಕೊರೋನಾಗೆ ನೂರರಲ್ಲಿ ಇಬ್ಬರು ಸತ್ತರೆ, ಕುಡಿತದ ಹಿಂತೆಗೆತಕ್ಕೆ ಒಬ್ಬರು ಸಾಯಬಹುದು!
ಆರೋಪಿಯ ವಿರುದ್ಧ ನಗರದ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.